‘ಮಣಿಕರ್ಣಿಕಾ’ ಹಿಂದಿ ಸಿನಿಮಾ ವಿವಾದ; ಮರುಚಿತ್ರೀಕರಣಕ್ಕೆ ನಿರ್ಧಾರ

ಕಂಗನಾ ರನಾವತ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ಮಣಿಕರ್ಣಿಕಾ’ ಹಿಂದಿ ಸಿನಿಮಾ ವಿವಾದಕ್ಕೆ ತೆರೆ ಬಿದ್ದಿದೆ. ನಟ ಸೋನು ಸೂದ್‌ ಚಿತ್ರದಿಂದ ಹೊರನಡೆದಿದ್ದಾರೆ. ಸೋನು ನಟಿಸಿದ್ದ ಸನ್ನಿವೇಶಗಳನ್ನು ಮತ್ತೆ ಚಿತ್ರಿಸಲು ನಿರ್ಧರಿಸಿದ್ದು, ಸಿನಿಮಾ ಸ್ಥಗಿತಗೊಳ್ಳುವುದಿಲ್ಲ ಎಂದಿದ್ದಾರೆ ನಿರ್ಮಾಪಕರು.

ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕುರಿತ ಐತಿಹಾಸಿಕ ‘ಮಣಿಕರ್ಣಿಕಾ’ ಚಿತ್ರದಿಂದ ನಟ ಸೋನು ಸೂದ್ ಹೊರನಡೆದಿದ್ದಾರೆ. ಅವರ ಮನವೊಲಿಸುವ ನಿರ್ಮಾಪಕರ ಪ್ರಯತ್ನಗಳು ವಿಫಲವಾಗಿದೆ. ಸೋನು ನಟಿಸಿದ್ದ ಸನ್ನಿವೇಶಗಳನ್ನು ಮತ್ತೆ ಚಿತ್ರಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ಕಂಗನಾ ರನಾವತ್‌‌ ವಿವಾದದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಸೋನು ನಟಿಸುತ್ತಿದ್ದ ಪಾತ್ರದಲ್ಲಿ ಜೀಶಾನ್‌ ಆಯುಬ್‌ ನಟಿಸುವುದು ಖಚಿತವಾಗಿದೆ.

ಕ್ರಿಷ್‌ ನಿರ್ದೇಶನದ ‘ಮಣಿಕರ್ಣಿಕಾ’ ಸಿನಿಮಾ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಗೌಪ್ಯವಾಗಿಯೇ ಚಿತ್ರೀಕರಣ ನಡೆದಿತ್ತು. ಕ್ಲ್ಯಾಪ್‌ಬೋರ್ಡ್‌ ಮೇಲೆ ನಿರ್ದೇಶಕರ ಹೆಸರು ‘ಕಂಗನಾ ರನಾವತ್‌’ ಎಂದಿರುವ ಫೋಟೋ ಹೊರಬೀಳುತ್ತಿದ್ದಂತೆ ಚಿತ್ರದ ಕುರಿತಾಗಿ ಸುದ್ದಿಯಾಯ್ತು. ಈ ಫೋಟೋ ಹೊರಬಿದ್ದ ಮರುದಿನವೇ ಸೋನು ಸೂದ್ ಚಿತ್ರತಂಡದಿಂದ ಹೊರನಡೆದಿದ್ದರು. ನಿರ್ಮಾಪಕರು ಈ ಬಗ್ಗೆ ವಿವರಣೆ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ಸಿನಿಮಾ ಸ್ಥಗಿತಗೊಳ್ಳುವುದಿಲ್ಲ ಎಂದಿದ್ದಾರೆ.

ಕ್ಲ್ಯಾಪ್‌ಬೋರ್ಡ್‌ನಲ್ಲಿ ನಿರ್ದೇಶಕರು ಕಂಗನಾ ರನಾವತ್‌ ಎಂದಿದೆ, ಚಿತ್ರವನ್ನು ಕಂಗನಾ ನಿರ್ದೇಶಿಸುತ್ತಿದ್ದಾರೆಯೇ? ಇದಕ್ಕೆ ವಿವರಣೆ ಕೊಡುವ ನಿರ್ಮಾಪಕ ಕಮಲ್ ಜೈನ್‌, “ಕೊನೆಯ ಹಂತದ ಚಿತ್ರೀಕರಣ ಮುಗಿದ ನಂತರ ಚಿತ್ರಕ್ಕೆ ಕೆಲವು ಪ್ರಮುಖ ಸನ್ನಿವೇಶಗಳನ್ನು ಸೇರ್ಪಡೆಗೊಳಿಸಬೇಕೆಂದು ನಿರ್ಧರಿಸಲಾಯ್ತು. ಕಂಗನಾ ಕೂಡ ಒಪ್ಪಿ ಚಿತ್ರಕ್ಕೆ ಡೇಟ್ಸ್ ಕೊಟ್ಟರು. ಆದರೆ ಆ ವೇಳೆಗೆ ನಿರ್ದೇಶಕ ಕ್ರಿಷ್‌ ಬೇರೆ ಸಿನಿಮಾದ ಚಿತ್ರೀರಣದಲ್ಲಿದ್ದರು. ಈ ಸನ್ನಿವೇಶಗಳನ್ನು ಚಿತ್ರಿಸಲು ಕಂಗನಾ ಅವರೇ ಸೂಕ್ತ ಆಯ್ಕೆ ಎಂದು ನಾವೇ ನಿರ್ಧರಿಸಿದೆವು” ಎನ್ನುತ್ತಾರೆ.

ಇದನ್ನೂ ಓದಿ : ಟ್ರೈಲರ್ | ಆರ್‌ಜಿವಿ ನಿರ್ಮಾಣದಲ್ಲಿ ಧನಂಜಯ್‌ ನಟಿಸುತ್ತಿರುವ ‘ಭೈರವಗೀತ’

ಚಿತ್ರದ ಸನ್ನಿವೇಶಗಳನ್ನು ಕಂಗನಾ ನಿರ್ದೇಶಿಸುವ ಸಂಗತಿ ತಿಳಿಯುವಂತೆ ನಟ ಸೋನು ಸೂದ್‌ಗೆ ಇರುಸುಮುರುಸಾಗಿದೆ. ಇಷ್ಟವಿಲ್ಲದೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರು ಚಿತ್ರಕಥೆ ಹೇಗಿದೆಯೋ ಹಾಗೆಯೇ ಚಿತ್ರಿಸಬೇಕೆನ್ನುವ ಷರತ್ತು ಹಾಕಿದ್ದಾರೆ. ಇದು ಕಂಗನಾಗೆ ಸರಿಬಂದಿಲ್ಲ. ಮಾತಿಗೆ ಮಾತು ಬೆಳೆದು ಚಿತ್ರೀಕರಣ ಸ್ಥಗಿತಗೊಂಡಿದೆ. ನಿರ್ಮಾಪಕರ ಮಧ್ಯಸ್ಥಿಕೆಯಲ್ಲೂ ಸೋನು ಮತ್ತು ಕಂಗನಾ ಒಮ್ಮತಕ್ಕೆ ಬಂದಿಲ್ಲ. ಇನ್ನೊಂದು ಮೂಲದ ಪ್ರಕಾರ ಸನ್ನಿವೇಶವೊಂದರಲ್ಲಿ ಸೋನು ಕೆಲವು ದೃಶ್ಯಗಳನ್ನು ಸೇರಿಸಲು ಒತ್ತಾಯ ಮಾಡಿದ್ದರು ಎನ್ನಲಾಗುತ್ತದೆ. ಆದರೆ ನಿರ್ಮಾಪಕರು ಇದನ್ನು ಚರ್ಚಿಸಲು ಸಿದ್ಧರಿಲ್ಲ.

“ಕಂಗನಾ ಮತ್ತು ಸೋನು ಮಧ್ಯೆಯ ಜಗಳದ ಬಗ್ಗೆ ನಮಗೆ ಖೇದವಿದೆ. ಚಿತ್ರಕಥೆ ವಿಚಾರಕ್ಕೆ ಇಬ್ಬರ ಮದ್ಯೆ ವೈಮನಸ್ಸು ತಲೆದೋರಿದೆ. ನಿರ್ಮಾಪಕರ ಬೇಡಿಕೆಗೆ ಮಣಿಯದೆ ಅಂತಿಮವಾಗಿ ಸೋನು ಚಿತ್ರತಂಡದಿಂದ ಹೊರನಡೆದಿದ್ದಾರೆ” ಎಂದು ಚಿತ್ರತಂಡದ ಮೂಲಗಳು ಹೇಳುತ್ತವೆ. ಇನ್ನು ಚಿತ್ರದ ಬಹುಪಾಲು ಸನ್ನಿವೇಶಗಳನ್ನು ಈಗ ಮರುಚಿತ್ರಿಸಬೇಕಿದೆ. ಸೋನು ನಿರ್ವಹಿಸಿದ್ದ ಪಾತ್ರದಲ್ಲಿ ಜೀಶಾನ್‌ ಆಯುಬ್‌ ಕಾಣಿಸಿಕೊಳ್ಳಲಿದ್ದಾರೆ. ಜೀ ಸ್ಟುಡಿಯೋ ನಿರ್ಮಿಸುತ್ತಿರುವ ಚಿತ್ರ ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದೆ. 2019, ಜನವರಿ 25ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More