ಪ್ರಭಾಸ್ ನೋಡಿ ಕಲಿಯಿರಿ; ಕೇರಳದ ಸಿನಿಮಾ ನಟರಿಗೆ ಸಚಿವರ ತರಾಟೆ

ತೆಲುಗು ನಟ ಪ್ರಭಾಸ್‌ ಕೇರಳ ಪ್ರವಾಹ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಇದನ್ನು ಉದಾಹರಿಸಿರುವ ಕೇರಳದ ಸಚಿವರೊಬ್ಬರು ಮಾಲಿವುಡ್‌ ನಟರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಜನರಿಗಾಗಿ ಅವರು ದೊಡ್ಡ ಮೊತ್ತದ ಹಣದ ನೆರವು ನೀಡಬೇಕೆನ್ನುವುದು ಅವರ ವಾದ

ಕೇರಳ ಪ್ರವಾಹದ ಹಿನ್ನೆಲೆಯಲ್ಲಿ ಅಲ್ಲಿನ ಸಿನಿಮಾ ಕಲಾವಿದರ ಹಣಸಹಾಯದ ಬಗ್ಗೆ ಚರ್ಚೆ ಶುರುವಾಗಿದೆ. ನಟರು ದೊಡ್ಡ ಮೊತ್ತದ ಹಣ ನೀಡುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳು ಹರಿದಾಡಿದ್ದವು. ಇದೀಗ ಕೇರಳ ಪ್ರವಾಸೋಧ್ಯಮ ಸಚಿವರು ನೇರವಾಗಿ ಆರೋಪಿಸಿದ್ದಾರೆ. ಕೇರಳ ಮೂಲದವರೇ ಆದ ನಟಿ ಶೀಲಾ ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ತೆಲುಗು ನಟ ಪ್ರಭಾಸ್‌ (1 ಕೋಟಿ), ತಮಿಳಿನ ರಾಘವ ಲಾರೆನ್ಸ್‌ (1 ಕೋಟಿ), ಸಂಗೀತ ಸಂಯೋಜಕ ಎ ಆರ್ ರೆಹಮಾನ್‌ (1 ಕೋಟಿ) ಅವರ ಉದಾರ ದೇಣಿಗೆ ಉದಾಹರಿಸಿರುವ ಸಚಿವರು ಮಾಲಿವುಡ್‌ ನಟರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸುರೇಂದ್ರನ್‌, “ನಮ್ಮಲ್ಲೂ ಸೂಪರ್‌ಸ್ಟಾರ್‌ಗಳಿದ್ದಾರೆ. ಚಿತ್ರವೊಂದಕ್ಕೆ ಅವರು ಮೂರ್ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಆದರೆ ಅವರು ತೆಲುಗು ನಟ ಪ್ರಭಾಸ್‌ ಅವರಿಂದ ಪಾಠ ಕಲಿಯಬೇಕಿದೆ. ನೇರವಾಗಿ ತಮಗೆ ಸಂಬಂಧಿಸದ ಕೇರಳ ನಾಡಿಗೆ ಅವರು ಒಂದು ಕೋಟಿ ರೂ ಪರಿಹಾರ ನೀಡಿದ್ದಾರೆ” ಎಂದಿದ್ದಾರೆ. “ನಾಲ್ಕು ಕೋಟಿ ರೂಪಾಯಿ ಬೆಲೆಯ ಕಾರಿನಲ್ಲಿ ಓಡಾಡುವ ನಮ್ಮ ನಟರು ಎಷ್ಟು ಪರಿಹಾರ ಕೊಟ್ಟಿದ್ದಾರೆ!?” ಎಂದು ನಟಿ ಶೀಲಾ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಕೇರಳ ಚಿತ್ರರಂಗದಲ್ಲಿ ನಟ ಮೋಹನ್ ಲಾಲ್‌ 25 ಲಕ್ಷ ರೂಪಾಯಿ ಪರಿಹಾರ ನಿಧಿ ನೀಡಿದ್ದಾರೆ. ಮುಮ್ಮೂಟಿ ಮತ್ತು ಅವರ ತಾರಾ ಪುತ್ರ ದುಲ್ಕರ್ ಸಲ್ಮಾನ್‌ ಇಬ್ಬರಿಂದ ಸೇರಿ 25 ಲಕ್ಷ ರೂಪಾಯಿ ಸಂದಾಯವಾಗಿದೆ. ನಟ ನಿವಿನ್‌ ಪೌಲ್‌ 25 ಲಕ್ಷ ಕೊಟ್ಟಿದ್ದರೆ, ದಿ ಅಸೋಸಿಯೇಷನ್ ಆಫ್‌ ಮಲಯಾಳಂ ಮೂವೀ ಆರ್ಟಿಸ್ಟ್ಸ್‌’ (AMMA)‌ ಕಡೆಯಿಂದ 50 ಲಕ್ಷ ರೂಪಾಯಿ ಪರಿಹಾರ ನಿಧಿಗೆ ಹೋಗಿದೆ. “ಎಲ್ಲರೂ ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಹಲವು ನಟರು ಸಂತ್ರಸ್ತರಿಗಾಗಿ ಹಗಲಿರುಳೆನ್ನದೆ ಕೆಲಸ ಮಾಡಿದ್ದಾರೆ. ಕೆಲವರು ತಾವು ನೀಡಿದ ಸಹಾಯದ ಬಗ್ಗೆ ಹೇಳಿಕೊಳ್ಳುತ್ತಿಲ್ಲ” ಎನ್ನುತ್ತಾರೆ ನಟ ನಿವಿನ್ ಪೌಲ್‌.

ದಕ್ಷಿಣದ ತೆಲುಗು ಮತ್ತು ತಮಿಳು ಚಿತ್ರರಂಗಗಳ ಹಲವರು ಕೇರಳ ಪರಿಹಾರ ನಿಧಿಗೆ ಹಣ ಸಹಾಯ ನೀಡಿದ್ದಾರೆ. ಮಲಯಾಳಂ ನಟರಿಗೂ ಮುನ್ನ ತಮಿಳು ನಟ ಸೂರ್ಯ ಸಂತ್ರಸ್ತರಿಗೆ 25 ಲಕ್ಷ ಪರಿಹಾರ ನಿಧಿ ಘೋಷಿಸಿದ್ದರು. ತಮಿಳು ನಟ, ರಾಜಕೀಯ ನಾಯಕ ವಿಜಯಕಾಂತ್ (1 ಕೋಟಿ ರೂ.,), ನಟ ಚಿರಂಜೀವಿ (25 ಲಕ್ಷ ರೂ.,), ಅಲ್ಲು ಅರ್ಜುನ್‌ (25 ಲಕ್ಷ ರೂ.,), ಕಮಲ ಹಾಸನ್‌ (25 ಲಕ್ಷ ರೂ.,), ವಿಜಯ್‌ (70 ಲಕ್ಷ ರೂ.,) ಸೇರಿದಂತೆ ರಜನೀಕಾಂತ್‌, ಧನುಷ್‌, ವಿಕ್ರಂ, ಕಾರ್ತಿ, ವಿಜಯ್‌ ಸೇತುಪತಿ ಮತ್ತಿತರರು ದೊಡ್ಡ ಮೊತ್ತದ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More