ಟೀಸರ್‌‌ | ಟ್ರೆಂಡ್ ಆಗಿವೆ ‘ಕವಲುದಾರಿ’, ‘ಟೆರರಿಸ್ಟ್’‌, ‘ಕೋಟಿಗೊಬ್ಬ3’ ವಿಡಿಯೋ

ಸದ್ಯ ಮೂರು ಕನ್ನಡ ಸಿನಿಮಾಗಳ ಟೀಸರ್‌ಗಳು ಟ್ರೆಂಡ್ ಆಗಿವೆ. ಪುನೀತ್ ರಾಜಕುಮಾರ್‌ ಚೊಚ್ಚಲ ನಿರ್ಮಾಣದ ‘ಕವಲುದಾರಿ’, ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಮತ್ತು ರಾಗಿಣಿ ದ್ವಿವೇದಿ ನಟನೆಯ ‘ದಿ ಟೆರರಿಸ್ಟ್‌’ ಟೀಸರ್‌ಗಳು ವಿಭಿನ್ನ ಕಥಾವಸ್ತುವಿನಿಂದಾಗಿ ಗಮನ ಸೆಳೆಯುತ್ತಿವೆ.

ಸುದೀಪ್‌ ಹುಟ್ಟುಹಬ್ಬದ ಅಂಗವಾಗಿ ‘ಕೋಟಿಗೊಬ್ಬ 3’ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಟೀಸರ್‌ನಲ್ಲಿ ಅವರು ದರೋಡೆಕೋರನಾಗಿ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕೇನು ತಿರುವುಗಳಿರುತ್ತವೆ ಎನ್ನುವ ಬಗ್ಗೆ ಕುತೂಹಲ ಮೂಡಿಸಿದೆ. ಚಿತ್ರಕ್ಕೆ ಸೆರ್ಬಿಯಾದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಶಿವಕಾರ್ತೀಕ್‌ ನಿರ್ದೇಶನದ ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್‌ ನಾಯಕಿಯಾಗಿ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ.

ಬಾಲಿವುಡ್‌ ನಟ ಅಫ್ತಾಬ್ ಶಿವ್‌ ದಾಸಾನಿ ಇಂಟರ್‌ಪೋಲ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೂ ಇದು ಮೊದಲ ಕನ್ನಡ ಸಿನಿಮಾ. ನವಾಬ್‌ ಷಾ, ಶ್ರದ್ಧಾ, ರವಿಶಂಕರ್‌, ರಂಗಾಯಣ ರಘು ಚಿತ್ರದ ಇತರೆ ಪ್ರಮುಖ ಕಲಾವಿದರು. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ, ಶೇಖರ್‌ ಚಂದ್ರ ಛಾಯಾಗ್ರಹಣವಿದೆ.

ಕವಲುದಾರಿ | ಹೇಮಂತ್ ರಾವ್ ನಿರ್ದೇಶನದ ‘ಕವಲು ದಾರಿ’ ಟೀಸರ್‌ ಥ್ರಿಲ್ಲರ್‌ ಕಥಾವಸ್ತುವಿನಿಂದಾಗಿ ಗಮನ ಸೆಳೆದಿದೆ. ಪುನೀತ್ ರಾಜಕುಮಾರ್ ಚಿತ್ರನಿರ್ಮಾಣದ ಸಂಸ್ಥೆಯ ಚೊಚ್ಚಲ ಚಿತ್ರವಿದು. ಪುನೀತ್ ಇತ್ತೀಚೆಗಷ್ಟೇ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದು, ಅವರ ಮೊದಲ ಟ್ವೀಟ್ ಏನಾಗಿರುತ್ತದೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು, ‘ಕವಲುದಾರಿ’ ಚಿತ್ರದ ಟೀಸರ್ ಪೋಸ್ಟ್ ಮಾಡುವ ಮೂಲಕ ತಮ್ಮ ಮೊದಲ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಟ್ರೈಲರ್‌ | ಅಟ್ಕಿನ್ಸನ್‌ ಅಭಿನಯದ ‘ಜಾನಿ ಇಂಗ್ಲಿಷ್‌ ಸ್ಟ್ರೈಕ್ಸ್‌ ಎಗೈನ್‌’

ಒಂದೂವರೆ ನಿಮಿಷಗಳ ಟೀಸರ್ ನೋಡುಗರಲ್ಲಿ ಕುತೂಹಲ ಕೆರಳಿಸುತ್ತಲೇ ಸಾಗುತ್ತದೆ. ಪುಟ್ಟ ಹುಡುಗಿಯ ಸಾವಿನ ವೃತ್ತಾಂತ ಹೆಣೆದಿರುವ ಕತೆಯೆಂದು ಕಾಣುತ್ತದಾದರೂ ಆಕೆಯ ಸಾವಿನ ರಹಸ್ಯ ಭೇದಿಸಲು ಹೊರಡುವ ಸಂಚಾರಿ ಪೋಲಿಸ್ ತನ್ನದಲ್ಲದ ಕರ್ತವ್ಯದ ಬಗೆಗೆ ಇನ್ನಿಲ್ಲದ ಆಸ್ಥೆ ಹೊಂದಿರುತ್ತಾನೆ. ಆ ಕಾರ್ಯಾಚರಣೆಯಲ್ಲಿ ಆತನ ಜೊತೆಯಾಗುವ ಪತ್ರಕರ್ತ ಇವರಿಬ್ಬರು ಜೊತೆಗೂಡಿ ಏಳೆಂಟು ವರ್ಷಗಳ ಹಿಂದೆ ಹುದುಗಿ ಹೋಗಿದ್ದ ಪುಟ್ಟ ಮಗುವಿನ ಸಾವಿನ ಕತೆಯನ್ನು ಬಿಡಿಸಿಡುತ್ತಾರೆ.

ಈ ಹಿಂದೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ನಿರ್ದೇಶಿಸಿದ್ದ ಹೇಮಂತ್ ರಾವ್ ‘ಕವಲು ದಾರಿ’ ನಿರ್ದೇಶಕ. ರಂಗಭೂಮಿ ಕಿರುತೆರೆಯಲ್ಲಿ ಗುರುತಿಸಿಕೊಂಡು ‘ಆಪರೇಷನ್ ಅಲಮೇಲಮ್ಮ’ ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದ ನಟ ರಿಷಿ ಚಿತ್ರದ ನಾಯಕ. ಅನಂತ್ ನಾಗ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ದಿ ಟೆರರಿಸ್ಟ್‌ | ಪಿ ಸಿ ಶೇಖರ್ ನಿರ್ದೇಶನದ ‘ದಿ ಟೆರರಿಸ್ಟ್’ ಚಿತ್ರದ ಟ್ರೇಲರ್‌ನಲ್ಲಿ ಬುರ್ಖಾಧಾರಿ ಮುಸ್ಲಿಂ ಮಹಿಳೆಯಾಗಿ ನಟಿ ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರ ಸಂಘಟನೆಗಳು ಸಮಾಜದ ಶಾಂತಿ ಕದಡಿಸಲು ನೀಡುವ ಪ್ರಚೋದನಕಾರಿ ಸಂದೇಶದೊಂದಿಗೆ ಟ್ರೈಲರ್ ಶುರುವಾಗುತ್ತದೆ. ದೊಂಬಿ ಹತ್ಯೆಗಳೊಂದಿಗೆ ಕಾನೂನುವ್ಯವಸ್ಥೆಯ ಹತೋಟಿಯನ್ನು ಮೀರಿ ಸ್ಮಶಾನದಂತೆ ಭಾಸವಾಗುವ ನಗರಗಳು, ಕೈಮೀರಿದ ಪರಿಸ್ಥಿತಿಯನ್ನು ಹತೋಟಿಗೆ ತರಲು ಆರಕ್ಷಕರು ನೀಡುವ ಭರವಸೆಗಳು, ಇದಲ್ಲೆದರ ನಡುವೆಯೇ ಬಂಧಿಯಾಗುವ ನಾಯಕಿ ವಿಚಾರಣೆಗೊಳಪಡುತ್ತಾಳೆ.

“ನಮ್ಮ ಭಯ ನಮ್ಮ ಸಾವಿಗೆ ಕಾರಣ ಆಗುತ್ತೆ ಎನ್ನುವುದಾದರೆ ನಾವು ಸಾಯಬಾರದು. ನಮ್ಮ ಭಯವನ್ನು ಸಾಯಿಸಬೇಕು" ಎನ್ನುವ ನಾಯಕಿಯ ಸಂಭಾಷಣೆ ಇದೆ. ಅಮಾನುಷ ಕೃತ್ಯಗಳನ್ನು ಪ್ರತಿರೋಧಿಸುವಂತೆ ತೋರುತ್ತದೆ. ಅಶಾಂತಿಯ ಹಾಗೂ ಹಿಂಸೆಯ ವ್ಯೂಹದಲ್ಲಿ ಶಾಂತಿಮಂತ್ರ ಜಪಿಸುವ ಸಂದೇಶದ ಕತೆ ‘ದಿ ಟೆರರಿಸ್ಟ್‌’. ಚಿತ್ರಕ್ಕೆ ಎಸ್ ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದು, ಮುರಳಿ ಕ್ರಿಶ್ ಛಾಯಾಗ್ರಹಣವಿದೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿವೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More