ಟ್ರೈಲರ್‌ | ವೆಬ್ ಸರಣಿಯಾಗಲಿದೆ ಶಶಿ ತರೂರ್‌ ಕೃತಿ ‘ವೈ ಐ ಆಮ್‌ ಎ ಹಿಂದೂ’

ರಾಜಕೀಯ ಮುಖಂಡ, ಲೋಕಸಭಾ ಸದಸ್ಯ ಶಶಿ ತರೂರ್‌ ಅವರ ಕೃತಿ ‘ವೈ ಐ ಆಮ್ ಎ ಹಿಂದೂ’ ವೆಬ್ ಸರಣಿಯಾಗಿ ಮೂಡಿಬರಲಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶೀತಲ್ ತಲ್ವಾರ್ ನಿರ್ದೇಶನದಲ್ಲಿ ತಯಾರಾಗಲಿರುವ ಸರಣಿಯಲ್ಲಿ ಶಶಿ ತರೂರ್‌ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ವೆಬ್ ಸ್ಟ್ರೀಮಿಂಗ್‌ ಮೀಡಿಯಾಗಳಲ್ಲೀಗ ಭಿನ್ನ ಕಥಾವಸ್ತುಗಳು ಕಾಣಿಸುತ್ತಿವೆ. ವೈವಿಧ್ಯಮಯ ಕಂಟೆಂಟ್‌ನೊಂದಿಗೆ ಎಲ್ಲಾ ವರ್ಗದ ಜನರನ್ನು ತಲುಪುವ ಹಾದಿಯಲ್ಲಿ ತೀವ್ರ ಪೈಪೋಟಿ ನಡೆದಿದೆ. ‌ಈ ಹಾದಿಯಲ್ಲಿ ಮತ್ತೊಂದು ಹೊಸ ಪ್ರಯೋಗ ‘ವೈ ಐ ಆಮ್‌ ಎ ಹಿಂದೂ’. ರಾಜಕಾರಣಿ, ಲೋಕಸಭಾ ಸದಸ್ಯ ಶಶಿ ತರೂರ್‌ ಅವರ ಕೃತಿ ಅದೇ ಶೀರ್ಷಿಕೆಯಡಿ ವೆಬ್‌ ಸರಣಿಯಾಗಿ ಮೂಡಿಬರಲಿದೆ. ಶೀತಲ್ ತಲ್ವಾರ್ ಸರಣಿಯನ್ನು ನಿರ್ದೇಶಸಲಿದ್ದು, ಶಶಿ ತರೂರ್‌ ಇಲ್ಲಿ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಟ್ರೈಲರ್ ಬಿಡುಗಡೆಯಾಗಿದ್ದು, ರಾಜಕೀಯ ಕಾರಣಗಳಿಗಾಗಿಯೂ ಸರಣಿ ಕುತೂಹಲ ಮೂಡಿಸಿದೆ.

ಸರಣಿಯಲ್ಲಿ ಶಶಿ ತರೂರ್ ಹಿಂದೂ ಧರ್ಮದ ಕುರಿತಾಗಿನ ತಮ್ಮ ನಂಬಿಕೆ, ಇತಿಹಾಸ, ಆಚರಣೆಗಳು, ಹಿಂದೂ ಧರ್ಮದ ಬಗೆಗಿನ ತಪ್ಪು ವ್ಯಾಖ್ಯಾನ, ದುರುಪಯೋಗ, ಧರ್ಮದ ಹಿನ್ನೆಲೆಯಲ್ಲಿ ನಡೆಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘರ್ಷಗಳು, ಹಿಂದೂ ರಾಷ್ಟ್ರೀಯವಾದ ಸೇರಿದಂತೆ ಹಲವು ವಿಷಯಗಳನ್ನು ಅವರಿಲ್ಲಿ ಚರ್ಚಿಸಲಿದ್ದಾರೆ. ತಾವು ಬೆಳೆದು ಬಂದ ಹಾದಿಯಲ್ಲಿ ಕಂಡ ಹಿಂದೂ ಧರ್ಮವನ್ನು ಬದಲಾದ ದಿನಗಳಲ್ಲಿನ ಸಂದರ್ಭಗಳೊಂದಿಗೆ ಹೋಲಿಸಿ ನೋಡುವ ಪ್ರಯತ್ನವೂ ಇಲ್ಲಿ ಕಾಣಿಸಲಿದೆ.

“ಯಾವುದೇ ಸಂದರ್ಭದಲ್ಲಾದರೂ ನನ್ನ ಪುಸ್ತಕದಲ್ಲಿನ ವಸ್ತು ಸಿನಿಮಾಗೆ ಪ್ರಸ್ತುತವಾಗಲಿದೆ. ಸದ್ಯದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿ ಸಂದರ್ಭದಲ್ಲಿ ಈ ಸರಣಿ ಹೆಚ್ಚು ಜನರನ್ನು ತಲುಪುವಂತಾಗಬೇಕಿದೆ. ನಿರ್ದೇಶಕ ಸೀತಲ್ ಮತ್ತು ನನ್ನ ನಿಲುವು ಹೊಂದಿಕೆಯಾಗುತ್ತವೆ. ಹಾಗಾಗಿ ಈ ಸರಣಿ ಬಗ್ಗೆ ನನಗೂ ಕುತೂಹಲಿವಿದೆ” ಎನ್ನುತ್ತಾರೆ ಶಶಿ ತರೂರ್‌.

‘ರಣ್‌’ ಸಿನಿಮಾ ತೆರೆಕಂಡು ಏಳು ವರ್ಷಗಳ ನಂತರ ಶೀತಲ್ ತಲ್ವಾರ್ ಸರಣಿಯೊಂದಿಗೆ ನಿರ್ದೇಶನಕ್ಕೆ ವಾಪಸಾಗಿದ್ದಾರೆ. “ಸಮಾಜಕ್ಕೆ ಸರಿ-ತಪ್ಪುಗಳನ್ನು ಹೇಳುವ ಅವಕಾಶಗಳನ್ನು ಚಿತ್ರನಿರ್ದೇಶಕನೊಬ್ಬ ಕಳೆದುಕೊಳ್ಳಬಾರದು. ಈ ಸರಣಿ ನನಗೆ ಅಂಥದ್ದೊಂದು ಅವಕಾಶ ಕಲ್ಪಿಸಿದೆ” ಎನ್ನುತ್ತಾರೆ ನಿರ್ದೇಶಕ ಶೀತಲ್ ತಲ್ವಾರ್‌. ಸರಣಿ ಭಾರತದ ವಿವಿಧ ಭಾಷೆಗಳಲ್ಲಿ ಮೂಡಿಬರಲಿದ್ದು, 2019ರ ಆರಂಭದಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆಗಳಿವೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More