ವಿಡಿಯೋ | ಪ್ರೇಕ್ಷಕನನ್ನುಸೆಳೆದ ಬೆಳ್ಳಿತೆರೆ ಮೇಲಿನ ಪ್ರಭಾವಿ ಶಿಕ್ಷಕ

‘ಶ್ರೇಷ್ಠ ಶಿಕ್ಷಕ ಹೃದಯದಿಂದ ಕಲಿಸುತ್ತಾನೆ, ಪುಸ್ತಕದಿಂದಲ್ಲ’ ಎನ್ನುವ ಮಾತಿದೆ. ಹಾಗೆ ಕ್ಲಾಸ್‌ರೂಂನ ಹೊರತಾಗಿ ಶಿಕ್ಷಕನ ಸಹಚರ್ಯೆಯಲ್ಲೇ ಹೆಚ್ಚು ಜ್ಞಾನ ಸಂಪಾದಿಸಿದವರೂ ಇದ್ದಾರೆ. ಬೆಳ್ಳಿತೆರೆ ಮೇಲೆ ಮೂಡಿದ ಉತ್ತಮ ಶಿಕ್ಷಕ ಪಾತ್ರಗಳ ಬಗೆಗಿನ ಒಂದು ನೋಟ ಇಲ್ಲಿದೆ. ಇದು ಶಿಕ್ಷಕರ ದಿನದ ವಿಶೇಷ.

ಆದರ್ಶ ಗುರು - ಶಿಷ್ಯರನ್ನು ಚಿತ್ರಿಸಿರುವ ಸಾಕಷ್ಟು ಸಿನಿಮಾಗಳು ಕನ್ನಡದಲ್ಲಿ ತಯಾರಾಗಿವೆ. ಬಿ ಆರ್ ಪಂತುಲು ನಟಿಸಿ, ನಿರ್ದೇಶಿಸಿದ ‘ಸ್ಕೂಲ್ ಮಾಸ್ಟರ್’ ಮತ್ತು ಡಾ ರಾಜಕುಮಾರ್ ಅಭಿನಯದ ‘ನಾಂದಿ’ ಇಂಥ ಉತ್ತಮ ಚಿತ್ರಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟವು. ತಮಿಳು ಚಿತ್ರರಂಗದ ಖ್ಯಾತ ನಟ ಶಿವಾಜಿ ಗಣೇಶನ್ ಅಭಿನಯಿಸಿದ್ದ ‘ಸ್ಕೂಲ್ ಮಾಸ್ಟರ್’ ತಮಿಳು ಭಾಷೆಗೂ ಡಬ್ ಆಗಿತ್ತು. ಈ ಎರಡೂ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿಗಳು ಸಂದಿದ್ದವು. ಸಿ ವಿ ಶಿವಶಂಕರ್ ನಿರ್ದೇಶನದ ‘ನಮ್ಮ ಊರು’ ಚಿತ್ರದಲ್ಲಿ ಶಿಕ್ಷಕ ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವ ನೀತಿ ಪಾಠವಿತ್ತು.

ಸ್ಕೂಲ್ ಮಾಸ್ಟರ್‌

ಪುಟ್ಟಣ್ಣ ಕಣಗಾಲ್ ತಮ್ಮ ‘ನಾಗರಹಾವು’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರ ಅತ್ಯುತ್ತಮ ಪಾತ್ರ ರೂಪಿಸಿದ್ದರು. ಸಾಮಾಜಿಕ ಕಥೆಯೊಂದರಲ್ಲಿ ಗುರು - ಶಿಷ್ಯರ ಸಂಬಂಧವನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟ ಚಿತ್ರವದು. ಪುಟ್ಟಣ್ಣನವರೇ ನಿರ್ದೇಶಿಸಿದ್ದ ‘ಕಾಲೇಜು ರಂಗ’ದಲ್ಲಿ ಕಾಲೇಜ್ ಪಾಲಿಟಿಕ್ಸ್‌ ಅನಾವರಣಗೊಂಡಿತ್ತು. ಸಾಹಿತಿ ಲಂಕೇಶ್ ನಿರ್ದೇಶನದ ‘ಅನುರೂಪ’ ಕೂಡ ಇದೇ ಮಾದರಿಯ ಸಿನಿಮಾ. ‘ಜಾಗೃತಿ’, ‘ಕೂಡಿ ಬಾಳೋಣ’, ‘ಬೇಡಿ ಬಂದವಳು’, ‘ಗುರು ಭಕ್ತಿ’ಯಂತಹ ಸಿನಿಮಾಗಳಲ್ಲಿ ಗುರುವನ್ನು ಪೂಜ್ಯ ಭಾವನೆಯಿಂದ ಚಿತ್ರಿಸಲಾಗಿತ್ತು. ‘ಗುರುಶಿಷ್ಯರು’ ಮತ್ತೊಂದು ಪರಿಣಾಮಕಾರಿ ಚಿತ್ರ.

ಗುರು ಶಿಷ್ಯರು

ಕಾಲದ ತಿರುಗಣಿಯಲ್ಲಿ ಆದರ್ಶ ಶಿಕ್ಷಕನ ಪಾತ್ರಗಳು ಮಕ್ಕಳ ಚಿತ್ರಗಳಿಗಷ್ಟೇ ಸೀಮಿತವಾಗುತ್ತಿವೆ. ಬಹುಪಾಲು ಕಮರ್ಷಿಯಲ್ ಚಿತ್ರಗಳಲ್ಲಿ ಕಾಲೇಜು, ಕ್ಲಾಸ್‌ರೂಂ ಸನ್ನಿವೇಶಗಳು ಹಾಸ್ಯಕ್ಕೆ ಬಳಕೆಯಾಗುತ್ತವೆ. ಮೊದಲಿನಂತೆ ಬೆಳ್ಳಿತೆರೆ ಮೇಲೆ ಆದರ್ಶ ಶಿಕ್ಷಕರ ಚಿತ್ರಣವನ್ನು ಈಗ ನೋಡಲು ಸಾಧ್ಯವಿಲ್ಲ. ಹಾಸ್ಯ ಸನ್ನಿವೇಶಗಳನ್ನು ಚಿತ್ರಿಸಲು ಕಾಲೇಜು ಉತ್ತಮ ಲೊಕೇಲ್ ಆಗುತ್ತಿದೆ ಎನ್ನುವುದು ವಿಪರ್ಯಾಸ.

ತಾರೇ ಜಮೀನ್ ಪರ್‌ (2007) | ಶಿಕ್ಷಕ ಮತ್ತು ವಿದ್ಯಾರ್ಥಿ ಮಧ್ಯೆಯ ಸುಂದರ ಕತೆ ಹೇಳುವ ಅತ್ಯುತ್ತಮ ಹಿಂದಿ ಚಿತ್ರಗಳಲ್ಲೊಂದು ‘ತಾರೇ ಜಮೀನ್ ಪರ್’. ಚೊಚ್ಚಲ ನಿರ್ದೇಶನದಲ್ಲೇ ಪ್ರತಿಭಾವಂತ ನಟ ಅಮೀರ್ ಖಾನ್ ಗೆದ್ದು ಬೀಗಿದರು. ಚಿತ್ರದಲ್ಲಿ ಶಿಕ್ಷಕ ‘ರಾಮ್ ಶಂಕರ್ ನಿಕುಂಬ್’ ಪಾತ್ರಕ್ಕೆ ಅಮೀರ್ ಜೀವ ತುಂಬಿದ್ದರು. ವಿದ್ಯಾರ್ಥಿಗಳೆಂದರೆ ನಿಕುಂಬ್‌ಗೆ ಅಪ್ಯಾಯಮಾನ. ಆಟದೊಂದಿಗೆ ಪಾಠ ಕಲಿಸಬೇಕೆನ್ನುವ ಪಾಲಿಸಿ ಆತನದ್ದು. ಸಹೋದ್ಯೋಗಿ ಶಿಕ್ಷಕರ ವಿರೋಧದ ನಡುವೆಯೂ ತನ್ನ ಕ್ಲಾಸ್‌ರೂಂ ಅನ್ನು ಆಟದ ಮೈದಾನವಾಗಿಸುತ್ತಾನೆ.

ಡಿಸ್ಲೆಕ್ಸಿಯಾದಿಂದ ಬಳಲುವ ವಿದ್ಯಾರ್ಥಿ (ದರ್ಶೀಲ್ ಸಾಫರಿ) ಬಗ್ಗೆ ನಿಕುಂಬ್‌ಗೆ ವಿಶೇಷ ಕಾಳಜಿ. ಹುಡುಗನಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆದು ಇತರೆ ಶಿಕ್ಷಕರಿಗೆ ಮಾದರಿಯಾಗುತ್ತಾನೆ. ಅಮೀರ್ ಹೊರತಾಗಿ ಇತರೆ ಯಾರೇ ನಟಿಸಿದ್ದರೂ ಶಿಕ್ಷಕನ ಪಾತ್ರ ಇಷ್ಟು ಸದೃಢವಾಗಿ ರೂಪುಗೊಳ್ಳುತ್ತಿರಲಿಲ್ಲ ಎಂದು ವಿಮರ್ಶಕರು ಮೆಚ್ಚಿಕೊಂಡಿದ್ದರು.

ಮೊಹಬ್ಬತೇ (2000) | ಬದುಕಿನ ಪಾಠ ಕಲಿಸುವ ಶಿಕ್ಷಕ ರಾಜ್ ಆರ್ಯನ್ ಮಲ್ಹೋತ್ರಾ ಆಗಿ ಶಾರುಖ್‌ರದ್ದು ಅಪರೂಪದ ಪಾತ್ರ. ಆದಿತ್ಯ ಚೋಪ್ರಾ ನಿರ್ದೇಶನದ ಈ ಸಿನಿಮಾ ಶಾರುಖ್ ಲವರ್‌ಬಾಯ್‌ ಇಮೇಜು ಗಟ್ಟಿಗೊಳಿಸಿತು. ರಾಜ್ ಆರ್ಯನ್ ಇಲ್ಲಿ ಮ್ಯೂಸಿಕ್ ಟೀಚರ್. ಬಿಳಿ ಷರ್ಟ್, ಫಾರ್ಮಲ್ ಟ್ರೌಸರ್ಸ್‌, ಕುತ್ತಿಗೆ ಮುಚ್ಚುವಂಥ ಸ್ವೆಟರ್, ಕೈಯಲ್ಲೊಂದು ವಯಲಿನ್ - ಇದು ರಾಜ್ ಗೆಟಪ್. ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನೂ ಸವಿಯಬೇಕೆನ್ನುವುದು ಆತನ ನಿಲುವು.

ಹರೆಯದ ವಿದ್ಯಾರ್ಥಿಗಳಿಗೆ ಪ್ರೀತಿ ಮತ್ತು ಜೀವನದ ಅರ್ಥವನ್ನು ಸಂಗೀತದ ಮೂಲಕ ಹೇಳುವ ಕಲಾವಿದ. ಯುವಕ - ಯುವತಿಯರ ಪಾರ್ಟಿ, ಕಾಲೇಜಿನ ಪ್ರವಾಸಗಳನ್ನು ಸಮರ್ಥಿಸಿಕೊಳ್ಳುತ್ತಾನೆ. ಇದಕ್ಕಾಗಿ ಕಾಲೇಜಿನ ಪ್ರಿನ್ಸಿಪಾಲರ (ಅಮಿತಾಭ್ ಬಚ್ಚನ್) ವಿರೋಧ ಎದುರಿಸಬೇಕಾಗುತ್ತದೆ. ಬದುಕು ಒಂದು ಮಧುರ ಹಾಡಿನಂತೆ ಎನ್ನುವುದು ಆತನ ಪ್ರತಿಪಾದನೆ. ವಯಲಿನ್ ಹಿನ್ನೆಲೆಯಲ್ಲಿ ಜೀವನದ ಸೊಬಗನ್ನು ನವಿರಾಗಿ ಹೇಳುವ ರಾಜ್ ಯುವ ಪ್ರೇಕ್ಷಕರ ಮನಗೆಲ್ಲುತ್ತಾನೆ.

ಇದನ್ನೂ ಓದಿ : ‘ಮಣಿಕರ್ಣಿಕಾ’ ಹಿಂದಿ ಸಿನಿಮಾ ವಿವಾದ; ಮರುಚಿತ್ರೀಕರಣಕ್ಕೆ ನಿರ್ಧಾರ

ಸರ್ (1993) | ಮಹೇಶ್ ಭಟ್ ನಿರ್ದೇಶನದ ‘ಸರ್’ ಸಿನಿಮಾದಲ್ಲೊಂದು ಶ್ರೇಷ್ಠ ಶಿಕ್ಷಕ ಪಾತ್ರವಿದೆ. ನಾಸಿರುದ್ದೀನ್ ಷಾ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಕಲಿಕೆಯಲ್ಲಿ ತಮಾಷೆ, ಖುಷಿ ಇರಬೇಕೆನ್ನುವುದು ಪ್ರೊಫೆಸರ್ ಅಮರ್ ವರ್ಮಾ (ನಾಸಿರ್) ಪಾಲಿಸಿ. ಪಾಠದ ಮಧ್ಯೆ ಹಾಡಲೂ ಅವರು ಹಿಂಜರಿಯುವುದಿಲ್ಲ. ತನ್ನ ಟ್ರ್ಯಾಜಿಡಿ ಬದುಕನ್ನು ವಿದ್ಯಾರ್ಥಿಗಳ ಸಂಗದಲ್ಲಿ ಮರೆಯುತ್ತಾರೆ. ವೈಯಕ್ತಿಕ ಸಂಕಷ್ಟಗಳು ಕ್ಲಾಸ್‌ರೂಂ ಪ್ರವೇಶಿಸಬಾರದೆನ್ನುವ ಕಾಳಜಿ ಅವರದ್ದು.

ಪ್ರೊಫೆಸರ್ ವರ್ಮಾ ಪಾಠವನ್ನಷ್ಟೇ ಬೋಧಿಸುವುದಿಲ್ಲ. ಉಗ್ಗುವ ತೊಂದರೆಯಿರುವ ತನ್ನ ವಿದ್ಯಾರ್ಥಿನಿಗೆ ಆತ್ಮವಿಶ್ವಾಸ ತುಂಬುತ್ತಾರೆ. ತನ್ನಿಬ್ಬರು ನೆಚ್ಚಿನ ಶಿಷ್ಯರಿಗೆ ದುಷ್ಟರಿಂದ ಅಪಾಯ ಎದುರಾದಾಗ, ಅವರ ಬೆನ್ನಿಗೆ ನಿಲ್ಲುತ್ತಾರೆ. ‘ಸ್ಪರ್ಶ್’ (1980) ಚಿತ್ರದಲ್ಲೂ ನಾಸಿರುದ್ದೀನ್ ಷಾ ಅಪರೂಪದ ಶಿಕ್ಷಕ ಪಾತ್ರ ನಿರ್ವಹಿದ್ದಾರೆ. ಕಣ್ಣಿನ ತೊಂದರೆಯಿದ್ದೂ ಅಂಧ ಮಕ್ಕಳ ಶಾಲೆಯನ್ನು ನಡೆಸುವ ಆದರ್ಶಮಯ ಪಾತ್ರವಿದು.

ಬ್ಲ್ಯಾಕ್ (2005) | ಹಿಂದಿ ಚಿತ್ರರಂಗ ಹೆಮ್ಮೆ ಪಡುಬಹುದಾದಂಥ ಶಿಕ್ಷಕ ಪಾತ್ರ ‘ಬ್ಲ್ಯಾಕ್‌’ ಚಿತ್ರದಲ್ಲಿದೆ. ಶಿಕ್ಷಕ ದೇವರಾಜ್‌ ಸಹಾಯ್ ಪಾತ್ರದಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್‌ರದ್ದು ಅಮೋಘ ಅಭಿನಯ. ವಿಲಕ್ಷಣ ಪ್ರವೃತ್ತಿಯ ದೇವ್‌ರಾಜ್‌ ತನ್ನದೇ ವಿಶಿಷ್ಟ ಮಾದರಿಯಲ್ಲಿ ವಿದ್ಯೆ ಕಲಿಸುವ ಶಿಕ್ಷಕ. ಮೂಗ, ಕಿವುಡ ಮತ್ತು ಕಣ್ಣು ಕಾಣದ ಹುಡುಗಿ ಆತನ ವಿದ್ಯಾರ್ಥಿನಿ. ಮೊದಮೊದಲು ವಿದ್ಯಾರ್ಥಿನಿಯೆಡೆಗಿನ ದೇವ್‌ ಒರಟುತನ ಪ್ರೇಕ್ಷಕನಿಗೂ ಇಷ್ಟವಾಗುವುದಿಲ್ಲ. ಈ ಕಲಿಕೆಯ ಮಾದರಿ ಕಂಡು ಆ ಪುಟ್ಟ ಹುಡುಗಿಯ ಪೋಷಕರೂ ಗೊಂದಲಕ್ಕೀಡಾಗುತ್ತಾರೆ. ನಂತರದ ಕೆಲವೇ ಕ್ಷಣಗಳಲ್ಲಿ ಆತನ ಕಲಿಕೆಯ ರೀತಿಯೇ ಸರಿ ಎನಿಸುತ್ತದೆ.

ಮಿಚೆಲ್‌ಳಿಗೆ (ರಾಣಿ ಮುಖರ್ಜಿ) ತೊದಲು ಮಾತು, ವಸ್ತುಗಳನ್ನು ಗುರುತಿಸುವುದನ್ನು ದೇವ್‌ ಕಲಿಸುತ್ತಾನೆ. ವರ್ಷಗಳ ನಂತರವೂ ಮಿಚೆಲ್ ತನ್ನ ಶಿಕ್ಷಕನನ್ನು ಸ್ಮರಿಸುತ್ತಾಳೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾ ಶಿಕ್ಷಕ - ವಿದ್ಯಾರ್ಥಿಯ ಸೂಕ್ಷ್ಮ ಮತ್ತು ವಾಸ್ತವಿಕ ಚಿತ್ರಣ ಕಟ್ಟಿಕೊಡುತ್ತದೆ. ಶಿಕ್ಷಕರು ಬಯ್ಯುವುದು, ಹೊಡೆಯುವುದು ವಿದ್ಯಾರ್ಥಿಗಳ ಶ್ರೇಯಸ್ಸಿಗೋಸ್ಕರ ಎನ್ನುವ ನೀತಿಯೂ ಇಲ್ಲಿದೆ. ‘ಚುಪ್ಕೆ ಚುಪ್ಕೆ’ (1975) ಚಿತ್ರದಲ್ಲಿ ಅಮಿತಾಭ್ ಬಚ್ಚನ್‌ಗೆ ಇಂಗ್ಲಿಷ್‌ ಪ್ರೊಫೆಸರ್ ಪಾತ್ರವಿತ್ತು. ‘ಕಸ್ಮೆ ವಾದೆ’ (1978) ಚಿತ್ರದಲ್ಲೂ ಬಚ್ಚನ್ ಅಧ್ಯಾಪಕ.

ಪರಿಚಯ್ | ಶಿಕ್ಷಕರ ಪಾತ್ರಗಳನ್ನು ಶ್ರೇಷ್ಠ ರೀತಿಯಲ್ಲಿ ಚಿತ್ರಿಸಿದ ಕೀರ್ತಿ ನಿರ್ದೇಶಕ ಗುಲ್ಜಾರ್‌ರಿಗೆ ಸಲ್ಲುತ್ತದೆ. ಅವರ ‘ಕಿತಾಬ್’ (1977) ಮತ್ತು ‘ಪರಿಚಯ್’ (1972) ಸಿನಿಮಾಗಳ ಶಿಕ್ಷಕ ಪಾತ್ರಗಳು ಸಂವೇದನಾಶೀಲವಾಗಿವೆ. ‘ಪರಿಚಯ್’ ಶಿಕ್ಷಕನ ಪಾತ್ರದಲ್ಲಿ ಜಿತೇಂದ್ರ ನಟಿಸಿದ್ದರು. ಇದು ಅವರ ವೃತ್ತಿ ಜೀವನದ ಉತ್ತಮ ಪಾತ್ರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಸತ್ಯಕಾಮ್’ (1969) ಚಿತ್ರದಲ್ಲಿನ ಶಿಕ್ಷಕ ಪಾತ್ರ ಅತ್ಯಂತ ಗೌರವಯುತವಾಗಿ ಚಿತ್ರಿತಗೊಂಡಿದೆ. ಇದು ನಟ ಧರ್ಮೇಂದ್ರರ ಪ್ರಮುಖ ಸಿನಿಮಾಗಳಲ್ಲೊಂದು. ಮತ್ತೆ ಕೆಲವು ಲವ್ ಸಿನಿಮಾಗಳ ಶಿಕ್ಷಕ ಪಾತ್ರಗಳಿಗೆ ರೊಮ್ಯಾಂಟಿಕ್‌ ಟಚ್ ಇದೆ. ‘ದೋ ಔರ್ ದೋ ಪಾಂಚ್’, ‘ಇಂತೆಹಾನ್’, ‘ಸದ್ಮಾ’ (1983) ಕೆಲವು ಉದಾಹರಣೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More