ಸಲಿಂಗಿಗಳ ಬದುಕು, ಬವಣೆ ಕುರಿತು ಭಾರತೀಯರ ಕಣ್ತೆರೆಸಲು ಪ್ರಯತ್ನಿಸಿದ 9 ಸಿನಿಮಾ

ಮರಾಠಿಯ ‘ಮಿತ್ರಾಚಿ ಗೋಶ್ಟಾ’, ಹಿಂದಿಯ ‘ಫೈರ್‌’ ಸಲಿಂಗಿಗಳ ಕುರಿತ ಸಿನಿಮಾಗಳಿಗೆ ನಾಂದಿ ಹಾಡಿದವು. ನಂತರ ಹಿಂದಿ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಸಲಿಂಗಿ, ದ್ವಿಲಿಂಗಿ, ಲಿಂಗ ಪರಿವರ್ತನೆ ಮಾಡಿಕೊಂಡ ಸಮುದಾಯದ ಮೇಲೆ ಬೆಳಕು ಚೆಲ್ಲುವ ಹಲವು ಸಿನಿಮಾಗಳು ತಯಾರಾಗಿವೆ

ಸಿನಿಮಾಗಳು ಸಮಾಜದ ಭಿನ್ನ ವರ್ಗಗಳ ನೋವು, ನಲಿವು, ಸಂಕಷ್ಟಗಳು, ಅಲ್ಲಿನ ಆಗುಹೋಗುಗಳಿಗೆ ಕೈಗನ್ನಡಿ. ತೊಂಬತ್ತರ ದಶಕದಿಂದೀಚೆಗೆ ಬಾಲಿವುಡ್‌ ಸೇರಿದಂತೆ ಭಾರತದ ವಿವಿಧ ಪ್ರಾದೇಷಿಕ ಭಾಷೆಗಳ ಸಿನಿಮಾಗಳಿಗೆ ಸೂಕ್ಷ್ಮ ವಿಷಯಗಳು ವಸ್ತುವಾದವು. ಸಲಿಂಗಕಾಮದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಹಿಂಜರಿಯುತ್ತಿದ್ದ ದಿನಗಳಲ್ಲಿ ಈ ವಿಚಾರ ಸಿನಿಮಾಗೆ ಚಿತ್ರಕತೆಗಳಾದವು. ಈ ವರ್ಗದವರ ದ್ವನಿಯಾಗಿ, ಮುಕ್ತವಾಗಿ ಚರ್ಚಿಸಿದ ಹತ್ತಾರು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.

ಫೈರ್‌ (1996)

ದೀಪಾ ಮೆಹ್ತಾ ನಿರ್ದೇಶನದ ‘ಫೈರ್‌’ ಭಾರತೀಯ ಸಿನಿಮಾ ಸಂದರ್ಭದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವ ಪ್ರಯೋಗ. ಸ್ತ್ರೀ ಸಲಿಂಗ ಸಂಬಂಧದ ಕುರಿತ ಈ ಚಿತ್ರದ ಕಥಾವಸ್ತು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು. ಸಾಂಪ್ರದಾಯಿಕ ಮನಸ್ಸುಗಳು ಚಿತ್ರದ ಬಿಡುಗಡೆಗೆ ತಡೆಯೊಡ್ಡಿದ್ದವು. ಚಿತ್ರದ ಬಗ್ಗೆ ಸಂಸತ್‌ನಲ್ಲೂ ಚರ್ಚೆಯಾಗಿತ್ತು. ಸಾಕಷ್ಟು ಪ್ರತಿರೋಧದ ಮಧ್ಯೆ ತೆರೆಕಂಡ ಸಿನಿಮಾಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯ್ತು.

ಮೈ ಬ್ರದರ್ ನಿಖಿಲ್ (2005)

ಸಲಿಂಗ ಕಾಮ ಅಸಹಜ, ಅದೊಂದು ಕೆಟ್ಟ ಜೋಕ್ ಎಂದು ಆಡಿಕೊಳ್ಳುವವರಿಗೆ ಒಂದೊಳ್ಳೆಯ ಸಂದೇಶ ನೀಡಿದ ಸಿನಿಮಾ ‘ಮೈ ಬ್ರದರ್‌ ನಿಖಿಲ್‌.’ ಓನಿರ್ ನಿರ್ದೇಶನದ ಈ ಚಿತ್ರದಲ್ಲಿ ಸಲಿಂಗಿ ಪುರುಷ ಜೋಡಿಯ ಕತೆ ಇತ್ತು. ಏಡ್ಸ್‌ ಕುರಿತಂತೆ ಜಾಗೃತಿ ಮೂಡಿಸುವ ಸನ್ನಿವೇಶಗಳೂ ಚಿತ್ರದಲ್ಲಿ ಅಳವಡಿಕೆಯಾಗಿದ್ದವು.

ಐ ಆಮ್‌ (2011)

ಓನಿರ್ ನಿರ್ದೇಶನದ ಈ ಚಿತ್ರದಲ್ಲಿ ನಾಲ್ಕು ಕತೆಗಳಿದ್ದವು. ಇವುಗಳ ಪೈಕಿ, ಪುರುಷ ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುವ ‘ಒಮರ್‌’ ವಿಶ್ಲೇಷಕರ ಗಮನ ಸೆಳೆದಿತ್ತು. ಮುಂಬೈನ ಸಲಿಂಗಿಯೊಬ್ಬರ ಬದುಕು, ಆರ್ಟಿಕಲ್‌ 377 ದುರ್ಬಳಕೆ ಮಾಡಿಕೊಂಡು ಆತನನ್ನು ಬ್ಲ್ಯಾಕ್‌ಮೇಲ್ ಮಾಡುವ ಪೊಲೀಸ್ ಅಧಿಕಾರಿಗಳ ಬಗೆಗಿನ ಕತೆ ಪ್ರೇಕ್ಷಕರ ಕಣ್ತೆರೆಸುವಂತಿತ್ತು.

ಮಾರ್ಗರಿಟಾ ವಿತ್ ಎ ಸ್ಟ್ರಾ (2014)

ಶೋನಾಲಿ ಬೋಸ್ ನಿರ್ದೇಶನದ ‘ಮಾರ್ಗರಿಟಾ ವಿತ್ ಎ ಸ್ಟ್ರಾ’ ದ್ವಿಲಿಂಗಿಗಳು ಮತ್ತು ಅಂಗವಿಕಲರ ಲೈಂಗಿಕತೆ ಕುರಿತು ಹೇಳಿತ್ತು. ಪ್ರಾಮಾಣಿಕ ಮತ್ತು ತಾಜಾ ಚಿತ್ರಕತೆಯಿಂದಾಗಿ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯ್ತು. ಸಲಿಂಗಕಾಮ, ದ್ವಿಲಿಂಗಿಗಳ ಕುರಿತಂತೆ ಭಾರತೀಯರ ಮನಸ್ಥಿತಿ ಇಲ್ಲಿ ಅನಾವರಣಗೊಂಡಿತ್ತು. ಚಿತ್ರಕ್ಕೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

ಇದನ್ನೂ ಓದಿ : ಟ್ರೈಲರ್‌ | ವೆಬ್ ಸರಣಿಯಾಗಲಿದೆ ಶಶಿ ತರೂರ್‌ ಕೃತಿ ‘ವೈ ಐ ಆಮ್‌ ಎ ಹಿಂದೂ’

ಬಾಂಬೆ ಬಾಯ್ಸ್‌ (1998)

ಪುರುಷ ಸಲಿಂಗಕಾಮದ ಬಗ್ಗೆ (ನಗರ ಕೇಂದ್ರಿತ) ಗಂಭೀರವಾಗಿ ಚರ್ಚಿಸಿದ ಭಾರತದ ಮೊದಲ ಸಿನಿಮಾ ‘ಬಾಂಬೆ ಬಾಯ್ಸ್‌.’ ಕೈಜಾದ್‌ ಗುಸ್ತಾದ್ ನಿರ್ದೇಶನದ ಈ ಚಿತ್ರದಲ್ಲಿ ಮೂವರು ಅನಿವಾಸಿ ಭಾರತೀಯ ಯುವಕರ ಕತೆ ಇದೆ. ತಮ್ಮನ್ನು ತಾವು ಕಂಡುಕೊಳ್ಳಲು ಮುಂಬೈಗೆ ಬರುವ ಮೂವರು ಯುವಕರ ಸಲಿಂಗಕಾಮದ ಪ್ರಸ್ತಾಪ ಇಲ್ಲಿದೆ. ಪುರುಷ ಸಲಿಂಗಿಗಳ ಕತೆಯ ಸಿನಿಮಾಗಳ ಪೈಕಿ ವಿಶಿಷ್ಟ ಪ್ರಯೋಗವಾಗಿ ಇದು ಗಮನ ಸೆಳೆದಿದೆ.

ಕಪೂರ್ ಅಂಡ್ ಸನ್ಸ್ (2016)‌

ಶಕುನ್ ಬಾತ್ರಾ ನಿರ್ದೇಶನದ ಈ ಸಿನಿಮಾ ಒಂದು ಫ್ಯಾಮಿಲಿ ಡ್ರಾಮಾ. ಭಾವನಾತ್ಮಕ ಸನ್ನಿವೇಶಗಳ ಈ ಚಿತ್ರವು, ಸಲಿಂಗಿ ಫವಾದ್ ಖಾನ್‌ (ರಾಹುಲ್ ಕಪೂರ್‌) ಸುತ್ತ ಕೇಂದ್ರೀಕೃತವಾಗಿದೆ. ಕುಟುಂಬವೊಂದರ ದೊಡ್ಡ ಮಗ ಫವಾದ್‌ ಲೇಖಕನೂ ಹೌದು. ನಾಯಕಿಯ (ಅಲಿಯಾ ಭಟ್‌) ಭೇಟಿ ಅವರ ಬದುಕಿಗೆ ತಿರುವಾಗುತ್ತದೆ. ಪುತ್ರ ಸಲಿಂಗಿ ಎಂದು ತಿಳಿದ ನಂತರ ಆತನ ತಾಯಿಯ ಪ್ರತಿಕ್ರಿಯೆ, ಆತನ ಮುಂದಿನ ಬದುಕಿನ ಚಿತ್ರಣದ ಸನ್ನಿವೇಶಗಳನ್ನು ನಿರ್ದೇಶಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪಾತ್ರದ ವೈಭವೀಕರಣವಿಲ್ಲದೆ ಬದುಕಿನ ಸತ್ಯ ಅನಾವರಣಗೊಳ್ಳುತ್ತದೆ.

ಫ್ಯಾಷನ್‌ (2008)

ಗ್ಲ್ಯಾಮರ್‌, ಜನಪ್ರಿಯತೆ, ಫ್ಯಾಷನ್‌ ಜಗತ್ತಿನ ಹಿಂದಿನ ಕರಾಳ ಮುಖಗಳನ್ನು ತೆರೆದಿಡುವ ಸಿನಿಮಾ ‘ಫ್ಯಾಷನ್‌.’ ಇಲ್ಲಿ ಸಿನಿಮಾ ಜಗತ್ತಿನ ತೆರೆಯ ಹಿಂದಿನ ಕ್ರಿಯಾಶೀಲರ ಕುರಿತೂ ಪ್ರಸ್ತಾಪವಾಗುತ್ತದೆ. ಸಿನಿಮಾ ವಸ್ತ್ರವಿನ್ಯಾಸಕ ರಾಹುಲ್ ಅರೋರಾ (ಸಮೀರ್ ಸೋನಿ) ಸಲಿಂಗಿ. ಯಶಸ್ವಿ ವಸ್ತ್ರವಿನ್ಯಾಸಕನಾದ ಅವನಿಗೆ ತನ್ನ ಸಲಿಂಗಕಾಮದ ಬಗ್ಗೆ ಹೊರಜಗತ್ತಿಗೆ ಹೇಳಿಕೊಳ್ಳಲು ಮುಜುಗರ. ರಾಹುಲ್ ಅರೋರಾನ ಪಾತ್ರ ಸಮಾಜದಲ್ಲಿನ ಇಂತಹ ಸಾವಿರಾರು ಸಲಿಂಗಿಗಳ ಮನಸ್ಸಿನ ಒಳತೋಟಿಗೆ ಕನ್ನಡಿ ಹಿಡಿಯುತ್ತದೆ. ಮಧುರ್ ಭಂಡಾರ್ಕರ್ ನಿರ್ದೇಶನದ ಚಿತ್ರವಿದು.

ಬಾಂಬೆ ಟಾಕೀಸ್‌ (2013)

ನಾಲ್ಕು ಪ್ರತ್ಯೇಕ ಚಿಕ್ಕ ಕತೆಗಳ ಸಿನಿಮಾ ‘ಬಾಂಬೆ ಟಾಕೀಸ್‌.’ ಇವುಗಳ ಪೈಕಿ, ಕರಣ್ ಜೋಹರ್ ನಿರ್ದೇಶನದ ‘ಅಜೀಬ್ ದಾಸ್ತಾನ್‌ ಹೈ ಯೆಹ್‌’ ಸಲಿಂಗಿ ಪುರುಷನ ಕತೆ ಹೇಳುತ್ತದೆ. ದೇವ್‌ (ರಣದೀಪ್‌ ಹೂಡಾ) ಮತ್ತು ಗಾಯತ್ರಿ (ರಾಣಿ ಮುಖರ್ಜಿ) ದಂಪತಿ. ದೇವ್ ಮತ್ತು ಅವಿನಾಶ್‌ (ಸಾಕಿಬ್ ಸಲೀಂ) ಮಧ್ಯೆ ಗೌಪ್ಯ ರೊಮ್ಯಾನ್ಸ್‌ ನಡೆದಿರುತ್ತದೆ. ತನ್ನ ಪತಿ ಸಲಿಂಗಿ ಎಂದು ತಿಳಿದ ಗಾಯತ್ರಿಯ ಮುಂದಿನ ಬದುಕೇನು? ಸುಳ್ಳಿನ ಮದುವೆ ಹೇಗೆ ಪತಿ-ಪತ್ನಿಯ ಬದುಕಿಗೆ ಮುಳ್ಳಾಗುತ್ತದೆ ಎನ್ನುವುದು ಕಥಾವಸ್ತು.

ಮಿತ್ರಾಚಿ ಗೋಶ್ಟಾ (1981)

ಸಲಿಂಗಕಾಮದ ಬಗ್ಗೆ ಮಾತನಾಡಲೂ ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ತೆರೆಕಂಡ ಸಲಿಂಗಿಗಳ ಕುರಿತ ಮರಾಠಿ ಸಿನಿಮಾ ‘ಮಿತ್ರಾಚಿ ಗೋಶ್ಚಾ.’ ವಿವಾದಿತ ವಸ್ತುವಿನಿಂದಾಗಿ ಚರ್ಚಿತವಾದ ಈ ಸಿನಿಮಾ ಭಾರತದಲ್ಲಿ ಸಲಿಂಗಿ ಕಥಾವಸ್ತು ಹೆಣೆಯಲು ಇತರರಿಗೆ ಪ್ರೇರಣೆಯಾಯಿತು. ಮಲಯಾಳಂ ಚಿತ್ರಗಳಾದ ‘ರೆಂಡು ಪೆನ್‌ಕುಟ್ಟಿಕಲ್‌’ (1978) ಮತ್ತು ‘ಸಂಚಾರಂ’ (2004) ಸಲಿಂಗಕಾಮ ಕುರಿತ ಮತ್ತೆರೆಡು ಪ್ರಮುಖ ಪ್ರಯೋಗಗಳು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More