ಟ್ರೈಲರ್‌ | ‘ನೋಟಾ’ದಲ್ಲಿ ರಾಜಕಾರಣಿಯಾದ ವಿಜಯ್‌ ದೇವರಕೊಂಡ

ಆನಂದ್‌ ಶಂಕರ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ನಟಿಸಿರುವ ‘ನೋಟಾ’ ದ್ವಿಭಾಷಾ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ರೌಡಿ, ಲವರ್ ಬಾಯ್‌ ನಂತರ ಇಲ್ಲಿ ವಿಜಯ್‌ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ. ಆಕರ್ಷಕ ತಾರಾಬಳಗ ಇರುವ ಈ ಚಿತ್ರ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ

ಆನಂದ್ ಶಂಕರ್ ನಿರ್ದೇಶನದ ‘ನೋಟಾ’ ಚಿತ್ರದೊಂದಿಗೆ ವಿಜಯ್ ದೇವರಕೊಂಡ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ತೆಲುಗು ಭಾಷೆಯಲ್ಲೂ ಸಿನಿಮಾ ತಯಾರಾಗುತ್ತಿದೆ. ಬಿರುಸಾದ ಮಳೆ, ಭರ್ತಿಯಾಗಿರುವ ಅಣೆಕಟ್ಟು ಟ್ರೈಲರ್‌ನ ಮೊದಲ ದೃಶ್ಯದಲ್ಲಿ ಕಾಣಿಸುತ್ತದೆ. ಅಣೆಕಟ್ಟಿನ ಗೇಟು ತೆಗೆದರೆ ನಗರದ ಹಲವು ಪ್ರದೇಶಗಳು ಮುಳುಗಡೆಯಾಗುತ್ತವೆ ಎಂದು ಸರ್ಕಾರಿ ಅಧಿಕಾರಿಗಳು ಮಾತನಾಡಿಕೊಳ್ಳುತ್ತಾರೆ. ಇತ್ತೀಚಿನ ಕೇರಳ ಪ್ರವಾಹವಿನ್ನೂ ಮನಸ್ಸಿನಲ್ಲಿ ಉಳಿದಿರುವಾಗ ಚಿತ್ರದ ಈ ಸನ್ನಿವೇಶ ಕಾಡುತ್ತದೆ.

ಶ್ರೀಮಂತ ಯುವಕ ರಾಜಕೀಯದಲ್ಲಿನ ಕೆಸರೆರೆಚಾಟ, ಭ್ರಷ್ಟಾಚಾರದಿಂದ ಬದಲಾಗುವ, ರಾಜಕೀಯ ಪ್ರವೇಶಿಸಿ ಸಮಾಜಕ್ಕಾಗಿ ಮರುಗುವ ಕತೆಯ ಸುಳಿವು ನೀಡುತ್ತದೆ ಟ್ರೈಲರ್‌. ಶಾನ್‌ ಕರುಪ್ಪುಸ್ವಾಮಿ ಚಿತ್ರಕತೆ ರಚಿಸಿದ್ದು, ‘ಇರು ಮುಗನ್‌’ ಸಿನಿಮಾ ಖ್ಯಾತಿಯ ಆನಂದ್ ಶಂಕರ್‌ ಚಿತ್ರ ನಿರ್ದೇಶಿಸಿದ್ದಾರೆ. ಸತ್ಯರಾಜ್‌, ನಾಜರ್‌, ಎಂ ಎಸ್ ಭಾಸ್ಕರ್‌, ಮೆಹ್ರೀನ್‌ ಪಿರ್ಝಾದಾ ಮತ್ತಿತರರು ನಟಿಸಿದ್ದಾರೆ. ಮುಖ್ಯಮಂತ್ರಿಗೆ ತಿರುಗಿ ಬೀಳುವ ಪ್ರತಿಪಕ್ಷದ ಯುವ ರಾಜಕೀಯ ನಾಯಕಿಯಾಗಿ ಸಂಚನಾ ನಟರಾಜನ್‌ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ಬಾಲಾಜಿ ಮೋಹನ್‌ ನಿರ್ದೇಶನದ ವೆಬ್‌ ಸರಣಿಯಲ್ಲಿ ಗಮನ ಸೆಳೆದಿದ್ದರು.

ಇದನ್ನೂ ಓದಿ : ಸಲಿಂಗಿಗಳ ಬದುಕು, ಬವಣೆ ಕುರಿತು ಭಾರತೀಯರ ಕಣ್ತೆರೆಸಲು ಪ್ರಯತ್ನಿಸಿದ 9 ಸಿನಿಮಾ

‘ನೋಟಾ’ ಚಿತ್ರ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗುತ್ತಿದೆ. ತಮಿಳು ಅವತರಣಿಕೆಗೆ ಸ್ವತಃ ವಿಜಯ್‌ ಡಬ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಸದ್ಯ ‘ಗೀತಗೋವಿಂದಂ’ ತೆಲುಗು ಸಿನಿಮಾದ ದೊಡ್ಡ ಯಶಸ್ಸಿನಲ್ಲಿದ್ದಾರೆ. ಬ್ಲಾಕ್‌ಬಸ್ಟರ್‌ ‘ಅರ್ಜುನ್‌ ರೆಡ್ಡಿ’ ತೆಲುಗು ಚಿತ್ರದ ನಂತರ ‘ಗೀತಗೋವಿಂದಂ’ ಅವರಿಗೆ ಮತ್ತೊಂದು ದೊಡ್ಡ ಗೆಲುವು ತಂದುಕೊಟ್ಟಿತು. ಇದೀಗ ‘ನೋಟಾ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅಕ್ಟೋಬರ್‌ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಚಿತ್ರತಂಡದ ಯೋಜನೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More