ಸಲ್ಮಾನ್‌ ನಿರ್ಮಾಣದ ‘ಲವ್‌ರಾತ್ರಿ’ ಸಿನಿಮಾ ಶೀರ್ಷಿಕೆಗೆ ಆಕ್ಷೇಪ, ದೂರು

ಸಲ್ಮಾನ್‌ ಖಾನ್‌ ನಿರ್ಮಾಣದ ‘ಲವ್‌ರಾತ್ರಿ’ ಹಿಂದಿ ಸಿನಿಮಾ ಮತ್ತೆ ವಿವಾದಕ್ಕೆ ಸಿಲುಕಿದೆ. ಚಿತ್ರದ ಶೀರ್ಷಿಕೆ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತರುತ್ತದೆ ಎಂದು ಬಿಹಾರದ ಕೋರ್ಟ್‌ನಲ್ಲಿ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ನಟ ಸಲ್ಮಾನ್‌ ತಮ್ಮ ಚಿತ್ರದ ಶೀರ್ಷಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

‘ಲವ್‌ರಾತ್ರಿ’ ಚಿತ್ರದೊಂದಿಗೆ ನಟ ಸಲ್ಮಾನ್ ಖಾನ್ ತಮ್ಮ ಸಹೋದರಿಯ ಪತಿ ಆಯುಶ್ ಶರ್ಮಾರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಈ ಮಧ್ಯೆ, ಬಿಹಾರದ ವಕೀಲ ಸುಧೀರ್ ಕುಮಾರ್ ಓಝಾ ಎಂಬುವರು ಚಿತ್ರದ ಶೀರ್ಷಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಸಿನಿಮಾದ ಶೀರ್ಷಿಕೆ ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಿದೆ, ನವರಾತ್ರಿ ಹಬ್ಬದ ಸಂದರ್ಭದಲ್ಲೇ ಸಿನಿಮಾ ಬಿಡುಗಡೆಯಾಗುತ್ತಿದ್ದು, ಇದು ತಪ್ಪು ಸಂದೇಶ ರವಾನಿಸುತ್ತಿದೆ,” ಎಂದು ಬಿಹಾರದ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ.

“ಸಲ್ಮಾನ್‌ ಖಾನ್‌ ನಿರ್ಮಾಣದ ಈ ಸಿನಿಮಾ, ದೇವಿ ದುರ್ಗಾಮಾತೆಯ ನವರಾತ್ರಿ ಆಶಯಕ್ಕೆ ವ್ಯತಿರಿಕ್ತವಾಗಿದೆ. ಇದು ಹಿಂದೂಗಳ ಭಾವನೆಗಳಿಗೆ ನೋವು ಉಂಟುಮಾಡುವ ಸಂಗತಿ. ಇಲ್ಲಿಯವರೆಗೆ ಬಿಡುಗಡೆಯಾಗಿರುವ ಚಿತ್ರದ ಟೀಸರ್‌, ಟ್ರೈಲರ್‌, ಪ್ರೊಮೋಗಳಿಂದ ತಮಗೆ ಈ ಸಂಗತಿ ತಿಳಿದುಬರುತ್ತದೆ,” ಎಂದು ಸುಧೀರ್‌ ಕುಮಾರ್ ಓಝಾ ದೂರಿನಲ್ಲಿ ದಾಖಲಿಸಿದ್ದಾರೆ. ಸಲ್ಮಾನ್ ಮಾತ್ರವಲ್ಲದೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಆಯುಶ್‌ ಶರ್ಮಾ, ವರೀನಾ ಹುಸೇನ್‌ ಅವರ ಹೆಸರುಗಳನ್ನೂ ಅವರು ದೂರಿನಲ್ಲಿ ದಾಖಲಿಸಿದ್ದಾರೆ. ಸೆಪ್ಟೆಂಬರ್‌ 12ರಂದು ಪ್ರಕರಣ ವಿಚಾರಣೆಗೆ ಬರಲಿದೆ.

ಇದನ್ನೂ ಓದಿ : ಟ್ರೈಲರ್ | ಆರ್‌ಜಿವಿ ನಿರ್ಮಾಣದಲ್ಲಿ ಧನಂಜಯ್‌ ನಟಿಸುತ್ತಿರುವ ‘ಭೈರವಗೀತ’

ಶೀರ್ಷಿಕೆ ಕುರಿತ ವಿವಾದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್‌, ತಮ್ಮ ಸಿನಿಮಾ ಯಾವುದೇ ಧರ್ಮೀಯರ ಭಾವನೆಗೆ ಧಕ್ಕೆ ಉಂಟುಮಾಡುವಂತಿಲ್ಲ ಎಂದಿದ್ದಾರೆ. ತಮ್ಮ ಚಿತ್ರವನ್ನು ಸಮರ್ಥಿಸಿಕೊಳ್ಳುವ ಅವರು, “ಚಿತ್ರದ ಶೀರ್ಷಿಕೆ ಕುರಿತಂತೆ ಕೆಲವರು ತಕರಾರು ತೆಗೆದಿರುವುದು ಏಕೆಂದು ಗೊತ್ತಾಗುತ್ತಿಲ್ಲ. ಇದೊಂದು ಸುಂದರವಾದ ಶೀರ್ಷಿಕೆ. ಆಕರ್ಷಕ ನವರಾತ್ರಿ ಹಿನ್ನೆಲೆಯಲ್ಲಿ ಕತೆ ನಿರೂಪಿಸುತ್ತಿದ್ದು, ಹಾಗಾಗಿ ಈ ಶೀರ್ಷಿಕೆ ಇದೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಕತೆ ಚಿತ್ರದಲ್ಲಿಲ್ಲ,” ಎಂದಿದ್ದಾರೆ. ಹಾಗೆ ನೋಡಿದರೆ, ಸಿನಿಮಾ ಸೆಟ್ಟೇರಿದಾಗಲೇ ವಿವಾದ ಹುಟ್ಟುಕೊಂಡಿತ್ತು. ಈಗ ಬಿಡುಗಡೆಯ ಹೊತ್ತಿನಲ್ಲಿ ದೂರು ದಾಖಲಾಗಿದೆ. ಅಭಿರಾಜ್ ಮಿನಾವಾಲಾ ನಿರ್ದೇಶನದ ಈ ಚಿತ್ರ ಅಕ್ಟೋಬರ್‌ 5ರಂದು ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More