ಜನುಮದಿನ | ಮುಮ್ಮೂಟಿ ವೃತ್ತಿಬದುಕಿಗೆ ತಿರುವು ನೀಡಿದ ಸಿನಿಮಾಗಳು

ನಟ ಮುಮ್ಮೂಟಿ ಇಂದು (ಸೆ.7) 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ಬಹುತೇಕ ನಟ-ನಟಿಯರು ಅವರಿಗೆ ಶುಭಾಶಯ ಕೋರಿದ್ದಾರೆ. ಮುಮ್ಮೂಟಿ ಬೆಳ್ಳಿತೆರೆ ಪ್ರವೇಶಿಸಿ ನಾಲ್ಕು ದಶಕ ಸಂದಿದ್ದು, ಅವರ ವೃತ್ತಿಬದುಕಿಗೆ ತಿರುವು ನೀಡಿದ ಸಿನಿಮಾಗಳತ್ತ ಇಣುಕುನೋಟ ಇಲ್ಲಿದೆ

ನಾಲ್ಕು ದಶಕಗಳ ವೃತ್ತಿಬದುಕಿನಲ್ಲಿ ಮುಮ್ಮೂಟಿ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರು ರಾಷ್ಟ್ರ ಪ್ರಶಸ್ತಿ, ಏಳು ಕೇರಳ ರಾಜ್ಯ ಪ್ರಶಸ್ತಿ ಪಡೆದಿರುವ ಅವರು, ಹದಿಮೂರು ಬಾರಿ ಫಿಲ್ಮ್‌ಫೇರ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟ ಇಂದು 67ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ವೃತ್ತಿಬದುಕಿಗೆ ತಿರುವು ನೀಡಿದ ಹತ್ತಾರು ಸಿನಿಮಾಗಳ ಪಟ್ಟಿಯಲ್ಲಿ ಪ್ರಮುಖ ಐದು ಸಿನಿಮಾಗಳಿವು.

ದಳಪತಿ | ಮಣಿರತ್ನಂ ನಿರ್ದೇಶನದ ತಮಿಳು ಕ್ಲಾಸಿಕ್ ಸಿನಿಮಾ. ಮಹಾಭಾರತ ಆಧರಿಸಿ ತಯಾರಾದ ಈ ಚಿತ್ರದಲ್ಲಿ ಮುಮ್ಮೂಟಿ ದೇವರಾಜ್‌ ಪಾತ್ರದಲ್ಲಿ ನಟಿಸಿದ್ದರು. ಮಹಾಭಾರತದ ದುರ್ಯೋಧನ ಈ ಪಾತ್ರಕ್ಕೆ ಸ್ಫೂರ್ತಿ. ರಜನೀಕಾಂತ್ ನಟಿಸಿದ್ದ ‘ಸೂರ್ಯ’ ಪಾತ್ರಕ್ಕೆ ಕರ್ಣ ಪ್ರೇರಣೆ. ಇಬ್ಬರ ಸ್ನೇಹ, ಬದುಕಿನ ಸುತ್ತ ಸುಂದರವಾಗಿ ನಿರೂಪಿಸಿದ್ದ ಚಿತ್ರ.

ಕಂಡುಕೊಂಡೇನ್ ಕಂಡುಕೊಂಡೇನ್ | ರಾಜೀವ್ ಮೆನನ್ ನಿರ್ದೇಶನದ ಈ ತಮಿಳು ಸಿನಿಮಾಗೆ ವಿಶ್ಲೇಷಕರ ಮೆಚ್ಚುಗೆ ವ್ಯಕ್ತವಾದರೂ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಮುಮ್ಮೂಟಿ, ಐಶ್ವರ್ಯಾ ರೈ, ಅಬ್ಬಾಸ್‌, ಅಜಿತ್, ತಬು ಮತ್ತಿತರರ ಆಕರ್ಷಕ ತಾರಾಬಳಗವಿತ್ತು. ಮನುಷ್ಯ ಸಂಬಂಧಗಳನ್ನು ಚರ್ಚಿಸಿದ ಸಿನಿಮಾ. ಮುಮ್ಮೂಟಿ ನಿವೃತ್ತ ಮೇಜರ್ ಪಾತ್ರದಲ್ಲಿ ನಟಿಸಿದ್ದರು.

ಒರು ವಡಕ್ಕನ್ ವೀರಗಾಥಾ | ಎಂ ಟಿ ವಾಸುದೇವನ್ ನಾಯರ್ ಚಿತ್ರಕತೆ ರಚಿಸಿದ್ದ ‘ಒರು ಬಡಕ್ಕನ್ ವೀರಗಾಥಾ’ ಮಲಯಾಳಂ ಪೀರಿಯಡ್ ಡ್ರಾಮಾ ಮುಮ್ಮೂಟಿ ವೃತ್ತಿಬದುಕಿನ ಅತ್ಯಂತ ಪ್ರಮುಖ ಪ್ರಯೋಗ. ಬಾಲನ್ ಕೆ ನಾಯರ್‌, ಸುರೇಶ್ ಗೋಪಿ, ಮಾಧವಿ, ಗೀತಾ, ಕ್ಯಾಪ್ಟನ್‌ ರಾಜು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹರಿಹರನ್ ನಿರ್ದೇಶನದ ಈ ಸಿನಿಮಾಗೆ ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಸಂದಿವೆ.

ಇದನ್ನೂ ಓದಿ : ಸಲಿಂಗಿಗಳ ಬದುಕು, ಬವಣೆ ಕುರಿತು ಭಾರತೀಯರ ಕಣ್ತೆರೆಸಲು ಪ್ರಯತ್ನಿಸಿದ 9 ಸಿನಿಮಾ

ಧ್ರುವಂ | ಮಲಯಾಳಂ ಥ್ರಿಲ್ಲರ್ ಸಿನಿಮಾದಲ್ಲಿ ನರಸಿಂಹ ಮನ್ನಾಡಿಯಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮುಮ್ಮೂಟಿ. ಸುರೇಶ್ ಗೋಪಿ ಮತ್ತು ಗೌತಮಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗೌರವಯುತ ವ್ಯಕ್ತಿ ನರಸಿಂಹ ಮನ್ನಾಡಿಯಾರ್‌ ತನಗೇ ಅರಿವಿಲ್ಲದಂತೆ ಹೇಗೆ ಅಪರಾಧವೊಂದರ ಕೇಂದ್ರಬಿಂದು ಆಗುತ್ತಾನೆ ಎನ್ನುವ ರೋಚಕ ಕತೆ ಇದು.

ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ | ‌ರಂಗಕರ್ಮಿ, ಚಿತ್ರನಿರ್ದೇಶಕ ಜಬ್ಬಾರ್ ಪಟೇಲ್ ನಿರ್ದೇಶನದಲ್ಲಿ ತಯಾರಾಗಿರುವ ‘ಡಾ.ಬಾಬಾಸಾಹೇಬ್ ಅಂಬೇಡ್ಕರ್‌’ (2000) ಮಹತ್ವದ ಸಿನಿಮಾ. ದೊಡ್ಡ ಪ್ರಮಾಣದಲ್ಲಿ ತಯಾರಾಗಿದ್ದ ಈ ಇಂಗ್ಲಿಷ್ ಸಿನಿಮಾ ಭಾರತದ ಒಂಬತ್ತು ಪ್ರಾದೇಷಿಕ ಭಾಷೆಗಳಿಗೂ ಡಬ್ ಅಗಿತ್ತು. ಅತ್ಯುತ್ತಮ ಅಭಿನಯಕ್ಕಾಗಿ ಮುಮ್ಮೂಟಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು. ಅತ್ಯುತ್ತಮ ಪ್ರಾದೇಶಿಕ ಭಾಷಾ ವಿಭಾಗ ಹಾಗೂ ಕಲಾನಿರ್ದೇಶನ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗಳು ಒಲಿದಿದ್ದವು.

ಮುಮ್ಮೂಟಿಗೆ ಶುಭಾಶಯ ಕೋರಿದ ತಾರೆಯರ ಟ್ವೀಟ್‌ಗಳು

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More