ವಿಡಿಯೋ | ಸೈಕಲಾಜಿಕಲ್ ಥ್ರಿಲ್ಲರ್‌ ‘ಕಾರ್ನಿ’ಯಲ್ಲಿ ನಟಿ ರಶ್ಮಿಗೆ ಮಾತಿಲ್ಲ

ವಿನೋದ್ ಕುಮಾರ್‌ ನಿರ್ದೇಶನದ ‘ಕಾರ್ನಿ’ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಬಹುದಿನಗಳ ನಂತರ ದುನಿಯಾ ರಶ್ಮಿ ಪ್ರಮುಖ ಪಾತ್ರದೊಂದಿಗೆ ಬೆಳ್ಳಿತೆರೆಗೆ ಮರಳಿದ್ದಾರೆ. ಪ್ರಯೋಗಶೀಲ ಸಿನಿಮಾಗಳು ತಯಾರಾಗುತ್ತಿರುವ ಹೊತ್ತಿನಲ್ಲಿ ‘ಕಾರ್ನಿ’ ನಿರೀಕ್ಷೆ ಹುಟ್ಟುಹಾಕಿದೆ

ನಟಿ ದುನಿಯಾ ರಶ್ಮಿ ಬೆಳ್ಳಿತೆರೆಗೆ ಮರಳಿದ್ದಾರೆ, ಸೈಕಲಾಜಿಕಲ್ ಥ್ರಿಲ್ಲರ್ ‘ಕಾರ್ನಿ’ ಚಿತ್ರದಲ್ಲಿ ಅಭಿನಯಿಸುತ್ತಿರುವ ರಶ್ಮಿ, “ಪಾತ್ರದ ಬಗ್ಗೆ ನನಗೆ ಬಲವಾದ ನಂಬಿಕೆ ಇದೆ. ಚಿತ್ರದಲ್ಲಿ ಮೂಗಿಯ ಪಾತ್ರ ನನ್ನದು. ಪ್ರಯೋಗಾತ್ಮಕ ಪಾತ್ರಗಳಲ್ಲಿ ತೊಡಗಿಸಿಕೊಂಡಿರುವುದು ಖುಷಿ ಕೊಟ್ಟಿದೆ,” ಎನ್ನುತ್ತಾರೆ. ಈ ಹಿಂದೆ ‘ಲೈಫ್ ಸೂಪರ್‌' ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ವಿನೋದ್ ಕುಮಾರ್ ಸಾರಥ್ಯದಲ್ಲಿ ಸಿದ್ಧಗೊಂಡಿರುವ ‘ಕಾರ್ನಿ’ ಚಿತ್ರದ ಟ್ರೈಲರ್‌ ಕುತೂಹಲ ಮೂಡಿಸುತ್ತದೆ. ಸೈಕಲಾಜಿಕಲ್ ಹಾರರ್ ಸಿನಿಮಾ 'ಕಾರ್ನಿ' ಈಗಾಗಲೇ ಚಿತ್ರೀಕರಣ ಮುಗಿಸಿದ್ದು, ಇದೇ ತಿಂಗಳು ತೆರೆಗೆ ಬರಲು ಸಜ್ಜಾಗಿದೆ.

ಇದನ್ನೂ ಓದಿ : ಜನುಮದಿನ | ಆಶಾ ಬೋಸ್ಲೆ ಜನಪ್ರಿಯ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ

ನಾಲ್ವರು ಗೆಳತಿಯರ ಜೊತೆ ಪ್ರಯಾಣ ಬೆಳೆಸುವ ನಾಯಕಿಯು ಬಂಗಲೆಯೊಂದರಲ್ಲಿ ಠಿಕಾಣಿ ಹೂಡುತ್ತಾಳೆ. ಜೊತೆಗಿದ್ದ ನಾಲ್ವರೂ ಒಬ್ಬೊಬ್ಬರಂತೆ ಕಾಣೆಯಾಗುತ್ತಾರೆ. ಕಾಣೆಯಾದವರ ಮೃತದೇಹಗಳು ಪತ್ತೆಯಾಗುತ್ತವೆ. ಈ ಸರಣಿ ಸಾವಿನ ಸುಳಿಯಲ್ಲಿ ಸಿಲುಕುವ ನಾಯಕಿ, ಆಗಂತುಕನಂತೆ ಕಾಣುವ ನಾಯಕನನ್ನೂ ಎದುರಾಗುತ್ತಾಳೆ. ಈ ಎಲ್ಲ ಇಕ್ಕಟ್ಟುಗಳಿಂದ ಆಕೆ ತನ್ನ ಶಕ್ತಿಯಿಂದ ಪಾರಾಗುತ್ತಾಳೋ, ಯುಕ್ತಿಯಿಂದಲೋ ಎನ್ನುವುದು ಚಿತ್ರದ ಕಥಾಹಂದರ.

ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಚಿತ್ರದ ಬಹುಪಾಲು ದೃಶ್ಯಗಳನ್ನು ರಾತ್ರಿ ವೇಳೆಯಲ್ಲೇ ಚಿತ್ರೀಕರಿಸಲಾಗಿದೆ. ಒಂದು ಗಂಟೆ ನಲವತ್ತೈದು ನಿಮಿಷಗಳ ಚಿತ್ರದಲ್ಲಿ ಹಾಡುಗಳಿಲ್ಲ ಎನ್ನುವುದು ವಿಶೇಷ. ಚಿತ್ರದಲ್ಲಿ ಕತೆಯೇ ಪ್ರಧಾನವಾದ್ದರಿಂದ ಹಾಡುಗಳನ್ನು ಸೇರಿಸುವ ಅಗತ್ಯ ಬೀಳಲಿಲ್ಲ ಎನ್ನುತ್ತಾರೆ ನಿರ್ದೇಶಕರು. ದಿನೇಶ್ ಬಾಬು ನಿರ್ದೇಶನದ ‘ಇದೂ ಸತ್ಯ’ ಚಿತ್ರದ ಪ್ರೇರಣೆಯೂ ‘ಕಾರ್ನಿ’ಗಿದೆ. ಗೋವಿಂದರಾಜು ಚಿತ್ರಕ್ಕೆ ಹಣ ಹೂಡಿದ್ದು, ನಿರಂತ್, ರಾಜೇಶ್, ರಾಮಕೃಷ್ಣ ಸೇರಿದಂತೆ ಹಲವರು ಈ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More