‘ಪೆಟ್ಟಾ’ ಪೊಲಿಟಿಕಲ್ ಸಿನಿಮಾ ಅಲ್ಲ ಎಂದ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್

ರಜನೀಕಾಂತ್‌ ಅಭಿನಯದ ನೂತನ ತಮಿಳು ಸಿನಿಮಾ ‘ಪೆಟ್ಟಾ’ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರವಿದು. ರಜನಿ ಅವರ ಈ ಹಿಂದಿನ ಚಿತ್ರ ‘ಕಾಲ’ದಂತೆ ಇದು ರಾಜಕೀಯ ಚಿತ್ರವಲ್ಲ ಎಂದು ನಿರ್ದೇಶಕ ಕಾರ್ತಿಕ್ ಸ್ಪಷ್ಟಪಡಿಸಿದ್ದಾರೆ

ರಜನೀಕಾಂತ್‌ ಅಭಿನಯದ ನೂತನ ಸಿನಿಮಾಗೆ ‘ಪೆಟ್ಟಾ’ ಎಂದು ನಾಮಕರಣವಾಗಿದೆ. ಕಾರ್ತಿಕ್ ಸುಬ್ಬರಾಜ್‌ ನಿರ್ದೇಶನದ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಕಥಾವಸ್ತುವಿನ ಬಗ್ಗೆ ಚರ್ಚೆ ಶುರುವಾಗಿದೆ. ಪಾ ರಂಜಿತ್ ನಿರ್ದೇಶನದಲ್ಲಿ ರಜನೀಕಾಂತ್ ನಟಿಸಿದ್ದ ಈ ಹಿಂದಿನ ‘ಕಾಲ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ರಾಜಕೀಯ ಪ್ರವೇಶಿಸಿದ ರಜನೀಕಾಂತ್‌ ಇಮೇಜ್‌ಗೆ ಹೊಂದುವಂತಹ ಕತೆ ಇದು ಎಂದೇ ಎಲ್ಲರೂ ಮಾತನಾಡಿಕೊಂಡಿದ್ದರು. ಈಗ ನೂತನ ಸಿನಿಮಾ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲವಿದೆ. ತಮ್ಮ ಸಿನಿಮಾ ತಿಳಿಹಾಸ್ಯದ ಮೆಲೋಡ್ರಾಮಾ ಎಂದು ಅಚ್ಚರಿ ಮೂಡಿಸಿದ್ದಾರೆ ನಿರ್ದೇಶಕ ಕಾರ್ತಿಕ್.

ಸನ್ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ‘ಪೆಟ್ಟಾ’ ನಿರ್ಮಾಣವಾಗುತ್ತಿದೆ. ಒಂದು ನಿಮಿಷದ ಮೋಷನ್ ಪೋಸ್ಟರ್‌ನಲ್ಲಿ, ಚರ್ಚ್‌ನಲ್ಲಿ ರಜನಿ ನಡೆದುಬರುವ ಸ್ಟೈಲಿಶ್‌ ದೃಶ್ಯಗಳಿವೆ. ಕಾರ್ತಿಕ್ ಸುಬ್ಬರಾಜ್‌ ನಿರ್ದೇಶನದ ಈ ಹಿಂದಿನ ಮೂರು ಸಿನಿಮಾಗಳಲ್ಲಿ ನಟಿಸಿದ್ದ ವಿಜಯ್ ಸೇತುಪತಿ, ಬಾಬ್ಬಿ ಸಿಂಹ ‘ಪೆಟ್ಟಾ’ದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿಮ್ರನ್ ಮತ್ತು ತ್ರಿಷಾ ಚಿತ್ರದ ಇಬ್ಬರು ನಾಯಕಿಯರು. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದೊಂದಿಗೆ ಕಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸಂಗೀತ ಸಂಯೋಜನೆ ಅನಿರುದ್ಧ ರವಿಚಂದ್ರನ್ ಅವರದು. ರಜನೀಕಾಂತ್‌ ಅವರೊಂದಿಗೆ ಇವರೆಲ್ಲರೂ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.

ಇದನ್ನೂ ಓದಿ : ಜನುಮದಿನ | ಆಶಾ ಬೋಸ್ಲೆ ಜನಪ್ರಿಯ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ

‘ಪೆಟ್ಟಾ’ ರಜನೀಕಾಂತ್ ಅವರ 165ನೇ ಸಿನಿಮಾ. ನಿರ್ದೇಶಕ ಕಾರ್ತಿಕ್ ಅವರಿಗೆ ಇದು ಐದನೇ ಪ್ರಯೋಗ. ಇದೇ ವರ್ಷ ತೆರೆಕಂಡಿದ್ದ ಕಾರ್ತೀಕ್‌ ನಿರ್ದೇಶನದ ‘ಮೆರ್ಕ್ಯೂರಿ’ ಹಾರರ್‌-ಥ್ರಿಲ್ಲರ್‌ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿರಲಿಲ್ಲ. ಮತ್ತೊಂದೆಡೆ, ‘ಕಾಲ’ ಚಿತ್ರವೂ ನಿರೀಕ್ಷಿತ ಯಶಸ್ಸು ದಾಖಲಿಸಲಿಲ್ಲ. ಹಾಗಾಗಿ ‘ಪೆಟ್ಟಾ’ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಪೆಟ್ಟಾ’ಗೂ ಮುನ್ನ ರಜನೀಕಾಂತ್‌ರ ‘2.0’ ನವೆಂಬರ್ 29ರಂದು‌ ತೆರೆಕಾಣಲಿದೆ. ಶಂಕರ್ ನಿರ್ದೇಶನದ ಈ ಸಿನಿಮಾ 2010ರ ಬ್ಲಾಕ್‌ಬಸ್ಟರ್‌ ‘ಎಂಧಿರನ್‌’ ಸರಣಿ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More