ಟ್ರೈಲರ್‌ | ಹಾಲಿವುಡ್‌ನ ‘ಅತಿ ಕೆಟ್ಟ ನಿರ್ದೇಶಕ’ ಯುವೆ ಬೋಲ್‌ ಸಾಕ್ಷ್ಯಚಿತ್ರ

ಹಾಲಿವುಡ್‌ನ ಅತಿ ಕೆಟ್ಟ ನಿರ್ದೇಶಕ ಎಂದೇ ಕರೆಸಿಕೊಳ್ಳುವ ಯುವೆ ಬೋಲ್‌ ಕುರಿತು ಸಾಕ್ಷ್ಯಚಿತ್ರ ತಯಾರಾಗಿದೆ. ಅವರು 30 ಸಿನಿಮಾ ನಿರ್ದೇಶಿಸಿದ್ದಾರೆ. ಸೀನ್ ಪ್ಯಾಟ್ರಿಕ್‌ ಶಾಲ್ ನಿರ್ದೇಶನದ ಈ ಸಾಕ್ಷ್ಯಚಿತ್ರ ‘ಫಕ್‌ ಯೂ ಆಲ್‌: ದಿ ಉವೆ ಬೋಲ್ ಸ್ಟೋರಿ’ ವಿಶ್ಲರ್‌ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಹಾಲಿವುಡ್‌ ನಿರ್ದೇಶಕ ಯುವೆ ಬೋಲ್‌ ಆಸ್ಕರ್ ಪುರಸ್ಕೃತ ನಟರೊಂದಿಗೆ ದೊಡ್ಡ ಬಜೆಟ್ನ ಸಿನಿಮಾಗಳನ್ನು ಮಾಡಿದ್ದಾರೆ. ಜನಪ್ರಿಯ ತಾರೆಯರಾದ ಜೇಸನ್‌ ಸ್ಟೇಥಮ್‌, ಬೆನ್‌ ಕಿಂಗ್‌ಸ್ಲೇ, ಬರ್ಟ್‌ ರೇನಾಲ್ಡ್ಸ್‌, ಜೆಕೆ ಸಿಮನ್ಸ್‌ ಅವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಿದ್ದಾರೆ. ‌ಮತ್ತೊಂದೆಡೆ ಇದೇ ಯುವೆ ಅತ್ಯಂತ ಕೆಟ್ಟ ಸಿನಿಮಾಗಳ ನಿರ್ದೇಶಕನೆಂದೂ ಕರೆಸಿಕೊಳ್ಳುತ್ತಾರೆ. ಒಂದು ಹಂತದಲ್ಲಿ ಬೋಲ್ ಸಿನಿಮಾ ನಿರ್ದೇಶನ ನಿಲ್ಲಿಸಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆದಿತ್ತು!

ಇಂತಹ ವಿಶಿಷ್ಟ, ವಿಕ್ಷಿಪ್ತ ನಿರ್ದೇಶಕನ ಕುರಿತು ಸೀನ್ ಪ್ಯಾಟ್ರಿಕ್‌ ಶಾಲ್‌ ‘ಫಕ್‌ ಯೂ ಆಲ್‌: ದಿ ಉವೆ ಬೋಲ್ ಸ್ಟೋರಿ’ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ. ಇಲ್ಲಿ ಬೋಲ್ ಸಿನಿಮಾಗಳ ವಿಶ್ಲೇಷಣೆ, ಅವರ ಸಮಕಾಲೀನರ ಮಾತುಗಳಿವೆ. ಸಾಕ್ಷ್ಯಚಿತ್ರದಲ್ಲಿ ಸ್ವತಃ ಬೋಲ್ ಮಾತನಾಡಿದ್ದಾರೆ. “ನಾನೆಂದಿಗೂ ನನಗೊಂದು ಇಮೇಜು ಕಟ್ಟಿಕೊಳ್ಳಬೇಕೆಂದು ಸಿನಿಮಾ ಮಾಡಲಿಲ್ಲ. ಸಿನಿಮಾಗಳು ನನ್ನಿಂದ ನಿರ್ದೇಶಿಸಲ್ಪಟ್ಟವು ಅಷ್ಟೆ” ಎನ್ನುತ್ತಾರೆ ಬೋಲ್‌.

ಜನಪ್ರಿಯ ವಿಡಿಯೋ ಗೇಮ್‌ಗಳನ್ನು ಬೋಲ್ ತಮ್ಮ ಸಿನಿಮಾಗಳಲ್ಲಿ ಅಳವಡಿಸುತ್ತಿದ್ದರು. ಅವರ ಕಡಿಮೆ ಬಜೆಟ್‌ನ ಆಕ್ಷನ್‌, ಹಾರರ್ ಸಿನಿಮಾಗಳು ಕಳಪೆ ಗುಣಮಟ್ಟದಲ್ಲಿವೆ. ಬೋಲ್‌ ಅವರ ಹಲವಾರು ಸಿನಿಮಾಗಳಲ್ಲಿ ಪಾತ್ರಪೋಷಣೆ, ಕಥಾಹಂದರವೇ ಕಾಣಿಸುವುದಿಲ್ಲ. ತಮ್ಮ ಸಿನಿಮಾಗಳನ್ನು ಟೀಕಿಸುವ ಸಿನಿಮಾ ವಿಶ್ಲೇಷಕರನ್ನು ಅವರು ಅಪಾರವಾಗಿ ದ್ವೇಷಿಸುತ್ತಿದ್ದರು. 2016ರಲ್ಲಿ ಚಿತ್ರನಿರ್ದೇಶನ ಕೈಬಿಟ್ಟ ಬೋಲ್‌ ತಮ್ಮ ಹುಟ್ಟೂರು ವ್ಯಾಂಕೋವರ್‌ನಲ್ಲಿ ರೆಸ್ಟೋರೆಂಟ್‌ ಮಾಲೀಕನಾಗಿ ಬದುಕು ಸಾಗಿಸುತ್ತಿದ್ದಾರೆ.

“ಹಾಲಿವುಡ್‌ನ ಕೆಟ್ಟ ನಿರ್ದೇಶನ ಬಗೆಗೊಂದು ಹಿನ್ನೋಟ” ಎನ್ನುವ ಒಕ್ಕಣಿಯೊಂದಿಗೆ ಟ್ರೈಲರ್ ಆರಂಭವಾಗುತ್ತದೆ. ಸಾಕ್ಷ್ಯಚಿತ್ರದಲ್ಲಿ ಬೋಲ್ ಮತ್ತು ಅವರ ಸಮಕಾಲೀನ ತಂತ್ರಜ್ಞರ ಸಂದರ್ಶನಗಳ ತುಣುಕುಗಳಿವೆ. ಜರ್ಮನಿ ಮೂಲದ ಯುವೆ ಬೋಲ್‌ ಅವರ ಸಿನಿಮಾ ಜೀವನ, ಅವರ ನಿರ್ದೇಶನದ ಮೂವತ್ತು ಸಿನಿಮಾಗಳ ಪ್ರಸ್ತಾಪ ಇಲ್ಲಿದೆ. ಇದೇ ವರ್ಷ ನಡೆಯಲಿರುವ ವಿಶ್ಲರ್‌ ಚಿತ್ರೋತ್ಸವದಲ್ಲಿ ‘ಫಕ್‌ ಯೂ ಆಲ್‌: ದಿ ಉವೆ ಬೋಲ್ ಸ್ಟೋರಿ’ ಪ್ರದರ್ಶನಗೊಳ್ಳಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More