ಚಿತ್ರವಿಮರ್ಶೆ | ಹೊಸ ತಲೆಮಾರಿನ ಪ್ರೀತಿ, ಗೊಂದಲದ ‘ಮನ್‌ಮರ್ಝಿಯಾ’

ಪಾತ್ರಗಳು ತೀವ್ರತೆಯಿಂದ ಕೂಡಿವೆ ಎನಿಸಿದರೂ ಕತೆ ಮನಸಿಗೆ ಗಾಢವಾಗಿ ತಾಕುವುದಿಲ್ಲ. ಪ್ರೀತಿಯ ವಿಷಯದಲ್ಲಿ ಗೊಂದಲಕ್ಕೀಡಾಗುವ ಪಾತ್ರಗಳನ್ನು ಕಟ್ಟುವ ನಿರ್ದೇಶಕ ಕಶ್ಯಪ್‌ಗೆ, ಅವುಗಳಿಗೆ ತಾರ್ಕಿಕ ಅಂತ್ಯ ಕಾಣಿಸುವ ಉಮೇದು ಇದ್ದಂತಿಲ್ಲ; ಆ ಕೆಲಸವನ್ನು ಅವರು ಪ್ರೇಕ್ಷಕರಿಗೇ ಬಿಡುತ್ತಾರೆ

“ನನ್ನ ಪ್ರೀತಿ ಇನ್ನೂ ಕೊನೆಯಾಗಿಲ್ಲ, ವೈವಾಹಿಕ ಬದುಕು ಶುರುವಾಗಿಲ್ಲ," ಎನ್ನುತ್ತಾಳೆ ಚಿತ್ರದ ನಾಯಕಿ ರೂಮಿ. ಆ ವೇಳೆಗಾಗಲೇ ಆಕೆಗೆ ರಾಬ್ಬಿಯೊಂದಿಗೆ ಮದುವೆಯಾಗಿದೆ. ಇತ್ತ ಆಕೆಗೆ ತನ್ನ ಪ್ರಿಯತಮ ವಿಕ್ಕಿಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ; ರಾಬ್ಬಿಯನ್ನು ಪತಿ ಎಂದು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ, ರೂಮಿಯನ್ನು ಬಹುವಾಗಿ ಪ್ರೀತಿಸುವ ರಾಬ್ಬಿಗೆ ಪತ್ನಿಯನ್ನು ಬಿಟ್ಟುಕೊಡಲು ಇಷ್ಟವಿಲ್ಲ. ಭರಪೂರ ಆತ್ಮವಿಶ್ವಾಸದ ಯುವತಿಯಾದರೂ ಪ್ರೀತಿಯ ವಿಷಯದಲ್ಲಿ ರೂಮಿ ಗೊಂದಲದ ಗೂಡು.

ಹೀಗೆ, ನಿರ್ದೇಶಕ ಅನುರಾಗ್ ಕಶ್ಯಪ್‌ ‘ಮನ್‌ಮರ್ಝಿಯಾ’ ಕತೆ ನಿರೂಪಿಸುತ್ತಾರೆ. ಹೊಸ ತಲೆಮಾರಿನ ಯುವ ಪ್ರೇಮಿಗಳ ಪ್ರೀತಿಯಲ್ಲಿನ ಗೊಂದಲಗಳಿಗೆ ಕನ್ನಡಿ ಹಿಡಿಯುತ್ತಾರೆ. ‘ಮನ್‌ಮರ್ಝಿಯಾ’ ಬಾಲಿವುಡ್‌ಗೆ ಹೊಸ ಕತೆಯೇನಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮ್ಯೂಸಿಕಲ್ ರೊಮ್ಯಾಂಟಿಕ್ ಸಿನಿಮಾ ‘ಹಮ್ ದಿಲ್ ದೇ ಚುಕೆ ಸನಂ’ ಇದೇ ಕಥಾಹಂದರದ ಚಿತ್ರ. 19 ವರ್ಷಗಳ ಹಿಂದೆ ತೆರೆಕಂಡ ಚಿತ್ರ ಅದು. ‘ಮನ್‌ಮರ್ಝಿಯಾ’ದಲ್ಲಿ ಅನುರಾಗ್‌ ಈಗಿನ ದಿನಮಾನಕ್ಕೆ ಹೊಂದುವಂತೆ ಪಾತ್ರಗಳನ್ನು ಹೆಚ್ಚು ತೀವ್ರವಾಗಿ ಕಟ್ಟಿಕೊಟ್ಟಿದ್ದಾರೆ.

ನಿಧಾನಗತಿಯ ನಿರೂಪಣೆ ಚಿತ್ರದ ಓಘಕ್ಕೆ ಅಡ್ಡಿಯಾಗಿದೆ. ಸಾವಧಾನದಲ್ಲೇ ಕತೆ ದಾಟಿಸುವ ಶೈಲಿ ಚಿತ್ರದಲ್ಲಿನ ಹಲವು ಸನ್ನಿವೇಶಗಳಲ್ಲಿ ವರ್ಕ್‌ ಆಗಿಲ್ಲ. ಇಲ್ಲಿ ಮೇಲ್ನೋಟಕ್ಕೆ ಪಾತ್ರಗಳು ಹೆಚ್ಚು ತೀವ್ರತೆಯಿಂದ ಕೂಡಿವೆ ಎನಿಸಿದರೂ ಕತೆ ಮನಸಿಗೆ ಗಾಢವಾಗಿ ತಾಕುವುದಿಲ್ಲ. ‘ಹಮ್ ದಿಲ್‌ ದೇ ಚುಕೆ ಸನಂ’ನಲ್ಲಿ ಬನ್ಸಾಲಿ ಆಕರ್ಷಕ ಸಂಗೀತ ಮತ್ತು ಅತಿ ಕಡಿಮೆ ಸಂಭಾಷಣೆಯ ಸನ್ನಿವೇಶಗಳಿಂದಲೇ ಪಾತ್ರಗಳನ್ನು ಗೆಲ್ಲಿಸಿದ್ದರು. ಅನುರಾಗ್ ಕಶ್ಯಪ್‌ ಅವರೇ ನಿರ್ದೇಶಿಸಿದ್ದ ‘ದೇವ್‌ ಡಿ’ (2009) ಚಿತ್ರದಲ್ಲಿ ಒಬ್ಬ ನಾಯಕ ಹಾಗೂ ಇಬ್ಬರು ನಾಯಕಿಯರಿದ್ದರು. ‘ಮನ್‌ಮರ್ಝಿಯಾ’ದಲ್ಲಿ ನಾಯಕಿ ಒಬ್ಬಳೇ, ಇಬ್ಬರು ನಾಯಕರು. ಅಲ್ಲಿಗಿಂತ ಇಲ್ಲಿ ಪ್ರೇಮಿಗಳ ನಡುವಿನ ಲವ್‌ಮೇಕಿಂಗ್‌ ಸೀನ್‌ಗಳನ್ನು ರೋಚಕವಾಗಿ ತೋರಿಸಿದ್ದಾರೆ ಕಶ್ಯಪ್‌. ಅದು ಅವರ ಎಂದಿನ ಶೈಲಿ.

ಇದನ್ನೂ ಓದಿ : ವಿಡಿಯೋ | ರಜನಿ ಅಭಿನಯದ ‘2.0’ ಸಿನಿಮಾ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ

ಅಮೃತಸರದ ಪರಿಸರದಲ್ಲಿ ನಡೆಯುವ ಕತೆಯಲ್ಲಿ ಪಂಜಾಬ್‌ನ ಆಚಾರ, ಸಂಸ್ಕೃತಿಯ ದಟ್ಟ ವಾಸನೆ ಇದೆ. ಹಾಕಿ ಆಟಗಾರ್ತಿ, ಪಂಜಾಬಿ ಹುಡುಗಿಯಾಗಿ ಕಾಣಿಸಿಕೊಂಡಿರುವ ತಾಪ್ಸಿ ಪನ್ನು ಪಾತ್ರವನ್ನು ಜೀವಿಸಿದ್ದಾರೆ. ಪ್ರೀತಿಯಲ್ಲಿ ಮುಳುಗೇಳುವ, ಪ್ರಿಯತಮನಿಗೆ ಜವಾಬ್ದಾರಿ ನೆನಪಿಸುವ, ಗೊಂದಲಕ್ಕೆ ಸಿಲುಕಿ ನಲುಗುವ, ಪತಿಯ ಪ್ರಾಮಾಣಿಕತೆಗೆ ಮರುಗುವ ಯುವತಿಯಾಗಿ ಅವರದ್ದು ಅತ್ಯುತ್ತಮ ನಟನೆ. ಎರಡು ವರ್ಷಗಳ ನಂತರ ತೆರೆಗೆ ಮರಳಿರುವ ಅಭಿಷೇಕ್‌ ಬಚ್ಚನ್‌ಗೆ ಚಿತ್ರದ ಪಾತ್ರ ಸೊಗಸಾಗಿ ಹೊಂದಿಕೆಯಾಗಿದೆ. ಅವರು ಕೂಡ ಪಾತ್ರದ ಹದ ಅರಿತು ನಟಿಸಿದ್ದಾರೆ. ಬಾಲಿವುಡ್‌ ಕಂಡ ಇತ್ತೀಚಿನ ಪ್ರತಿಭಾವಂತ ನಟ ವಿಕ್ಕಿ ಕೌಶಾಲ್ ಈ ಪಾತ್ರಕ್ಕೆ ಪ್ರಯಾಸಪಟ್ಟಂತೆ ಕಾಣಿಸುತ್ತದೆ. ಪ್ರೀತಿಯ ವಿಷಯದಲ್ಲಿ ಗೊಂದಲಕ್ಕೀಡಾಗುವ ಪಾತ್ರಗಳನ್ನು ಕಟ್ಟುವ ನಿರ್ದೇಶಕ ಕಶ್ಯಪ್‌ಗೆ ತಾರ್ಕಿಕ ಅಂತ್ಯ ಕಾಣಿಸುವ ಉಮೇದು ಇಲ್ಲ; ಆ ಕೆಲಸವನ್ನು ಅವರು ಪ್ರೇಕ್ಷಕರಿಗೇ ಬಿಡುತ್ತಾರೆ.

ನಿರ್ದೇಶನ: ಅನುರಾಗ್ ಕಶ್ಯಪ್‌‌‌ | ನಿರ್ಮಾಣ: ಆನಂದ್ ಎಲ್ ರಾಯ್‌, ವಿಕಾಸ್ ಬೆಹ್ಲ್‌, ವಿಕ್ರಮಾದಿತ್ಯ ಮೋಟ್ವಾನೆ, ಮಧು ಮಂಟೇನಾ, ಅನುರಾಗ್ ಕಶ್ಯಪ್‌‌, ಸಂಗೀತ: ಅಮಿತ್ ತ್ರಿವೇದಿ‌ | ಛಾಯಾಗ್ರಹಣ: ಸಿಲ್ವೆಸ್ಟರ್ ಫೋನ್ಸೆಕಾ‌ | ತಾರಾಗಣ: ಅಭಿಷೇಕ್ ಬಚ್ಚನ್‌, ತಾಪಸಿ ಪನ್ನು, ವಿಕ್ಕಿ ಕೌಶಾಲ್ ಮತ್ತಿತರರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More