ವಿಡಿಯೋ | ರಜನಿ ಅಭಿನಯದ ‘2.0’ ಸಿನಿಮಾ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ

ನಿನ್ನೆ ಬಿಡುಗಡೆಯಾದ ರಜನೀಕಾಂತ್‌ ಅಭಿನಯದ ಬಹುನಿರೀಕ್ಷಿತ ‘2.0’ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ರಜನಿಯ ‘ಎಂಧಿರನ್‌’ ಚಿತ್ರದ ಪುನರಾವರ್ತನೆ ಇದೆ ಎನ್ನುವುದು ಕೆಲವರ ದೂರು. ಉಳಿದಂತೆ, 3ಡಿ ಟೀಸರ್ ನೋಡಿರುವವರು ನಿರ್ದೇಶಕ ಶಂಕರ್ ತಂತ್ರಗಾರಿಕೆಯನ್ನು ಮೆಚ್ಚಿದ್ದಾರೆ

ರಜನೀಕಾಂತ್‌ರ ಬಹುನಿರೀಕ್ಷಿತ ಸಿನಿಮಾ ‘2.0’ ಟೀಸರ್‌ಗೆ ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರ್ಷದಿಂದಲೂ ಸುದ್ದಿಯಲ್ಲಿದ್ದ ಸಿನಿಮಾ ಅದ್ಧೂರಿ ಬಜೆಟ್‌, ದೊಡ್ಡ ತಾರಾಬಳಗ, ತಂತ್ರಗಾರಿಕೆಯಿಂದಾಗಿ ತೀವ್ರ ಕುತೂಹಲ ಮೂಡಿಸಿತ್ತು. ನಿನ್ನೆ ಗಣೇಶ ಹಬ್ಬದಂದು ಬಿಡುಗಡೆಯಾದ ಟೀಸರ್‌ ಚಿತ್ರದ ಬಗ್ಗೆ ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ‘2.0’ ಸಿನಿಮಾ ಈ ಹಿಂದೆ ಶಂಕರ್‌-ರಜನಿ ಕಾಂಬಿನೇಷನ್‌ನಲ್ಲಿ ತಯಾರಾಗಿದ್ದ ‘ಎಂಧಿರನ್‌’ (2010) ಸರಣಿ. ಟೀಸರ್‌ನಲ್ಲಿ ಮೂಲ ‘ಎಂಧಿರನ್‌’ನಲ್ಲಿದ್ದ ರಜನೀಕಾಂತ್‌ ಕಾಣಿಸುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಗ್ರಾಫಿಕ್ಸ್‌ ಕೂಡ ಸಮರ್ಪಕವಾಗಿ ಬಳಕೆಯಾದಂತಿಲ್ಲ ಎನ್ನುವ ಕಮೆಂಟ್‌ಗಳೂ ಇವೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ‘ಗಂಧದ ಗುಡಿ’ ಚಿತ್ರದ ವಿವಾದ ಆಕಸ್ಮಿಕ, ದುರದೃಷ್ಟಕರ

ಚಿತ್ರದಲ್ಲಿ ಅತಿಮಾನುಷ, ಕ್ರೂರ ಶಕ್ತಿ ರೂಪದಲ್ಲಿ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ರಜನಿ ಹಿಂದಿನಂತೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾನವ ಸಂಕುಲಕ್ಕೆ ಮಾರಕವಾಗುವ ದೈತ್ಯ ಶಕ್ತಿಯನ್ನು ಮುಗಿಸಲು ವಿಜ್ಞಾನಿಯೊಬ್ಬನ ಯೋಜನೆಯಂತೆ ಜನ್ಮತಾಳುವ ಕೃತಕ ಮಾನವ ಚಿಟ್ಟಿ (ರೋಬೋ), ಅತಿಮಾನು‍ಷ ಶಕ್ತಿಯ ನಡುವಣ ನಡೆಯುವ ಜಟಾಪಟಿ... ಹೀಗೆ ಚಿತ್ರದ ಟೀಸರ್ ಸಾಗುತ್ತದೆ. 2ಡಿ ಮತ್ತು 3ಡಿ ಎರಡು ಅವತರಣಿಕೆಗಳಲ್ಲಿ ಟೀಸರ್ ಬಿಡುಗಡೆಯಾಗಿದೆ. 3ಡಿ ಟೀಸರ್‌ ವೀಕ್ಷಿಸಿದವರು ತಂತ್ರಗಾರಿಕೆಗೆ ಸಂಬಂಧಿದಂತೆ ನಿರ್ದೇಶಕ ಶಂಕರ್‌ರನ್ನು ಅಭಿನಂದಿಸುತ್ತಿದ್ದಾರೆ.

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ‘2.0’ ಟೀಸರ್‌ ಬಗ್ಗೆ ಟ್ರಾಲ್‌ ಶುರುವಾಗಿದೆ. ಮೆಚ್ಚುಗೆಯ ಜೊತೆಗೆ ಟೀಕೆಗಳೂ ಕಾಣಿಸುತ್ತವೆ. ಟೀಸರ್‌ನಲ್ಲಿನ ರಜನಿ, ಅಕ್ಷಯ್ ಕುಮಾರ್‌ ಲುಕ್‌ಗಳನ್ನು ಗ್ರಾಫಿಕ್ಸ್‌ನೊಂದಿಗೆ ಮಾರ್ಪಾಟು ಮಾಡಿದ ತುಂಟ ಮೆಸೇಜ್‌ಗಳೂ ಹೇರಳವಾಗಿವೆ. ನಿರ್ದೇಶಕ ಶಂಕರ್‌ ಮತ್ತು ತಂಡ ಮತ್ತಷ್ಟು ಶ್ರದ್ಧೆಯಿಂದ ಟೀಸರ್ ರೂಪಿಸಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದಲ್ಲಿ ತಮ್ಮ ಹಳೆಯ ತಂತ್ರಗಳನ್ನೇ ಹೊಸ ನಿರೂಪಣೆಯ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ಮತ್ತೆ ಕೆಲವರು ಟ್ವೀಟ್ ಮಾಡಿದ್ದಾರೆ. ಒಟ್ಟಾರೆ, ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಮಧ್ಯೆ, ಬಾಲಿವುಡ್‌ ಸೇರಿದಂತೆ ದಕ್ಷಿಣದ ತಾರೆಯರು ಹಾಗೂ ತಂತ್ರಜ್ಞರು ತಮ್ಮ ಟ್ವಿಟರ್‌ ಅಕೌಂಟ್‌ಗಳಲ್ಲಿ ಟೀಸರ್ ಶೇರ್‌ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರುತ್ತಿದ್ದಾರೆ. 2010ರಲ್ಲಿ ಶಂಕರ್ ನಿರ್ದೇಶನದಲ್ಲಿ ತೆರೆಕಂಡಿದ್ದ ‘ಎಂದಿರನ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಬಿಡುಗಡೆಗೆ ಸಿದ್ಧವಾಗಿರುವ ‘2.0’ ಹಲವು ಕಾರಣಗಳಿಂದ ಸುದ್ದಿ ಮಾಡುತ್ತಿದೆ. 540 ಕೋಟಿ ರುಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ಚಿತ್ರದ ನಾಯಕಿಯಾಗಿ ಏಮಿ ಜಾಕ್ಸನ್‌ ಇದ್ದಾರೆ. ಸಂಗೀತ ಸಂಯೋಜನೆ ಎ ಆರ್ ರೆಹಮಾನ್ ಅವರದು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More