ಚಿತ್ರನಿರ್ಮಾಪಕರಿಗೆ ಸೃಷ್ಟಿಯಾದ ಹೊಸ ಮಾರುಕಟ್ಟೆ ‘ಡಿಜಿಟಲ್‌ ರೈಟ್ಸ್’

ಬಾಲಿವುಡ್‌ ಮತ್ತು ದಕ್ಷಿಣ ಭಾರತದ ಪ್ರಾದೇಷಿಕ ಸಿನಿಮಾಗಳಿಗೆ ಸ್ಟ್ರೀಮಿಂಗ್‌ ಮೀಡಿಯಾ ‌ಹೊಸ ಮಾರುಕಟ್ಟೆ ಸೃಷ್ಟಿಸಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಡಿಜಿಟಲ್ ರೈಟ್ಸ್‌ ಬಿಕರಿಯಾಗುತ್ತಿವೆ. ಡಿಜಿಟಲ್ ವೇದಿಕೆ ಚಿತ್ರನಿರ್ಮಾಪಕರಿಗೆ ಹೊಸದೊಂದು ಆದಾಯದ ಮೂಲವಾಗಿ ಗೋಚರಿಸುತ್ತಿದೆ.

ಶೂಜಿತ್ ಸರ್ಕಾರ್ ನಿರ್ದೇಶನದಲ್ಲಿ ವರುಣ್‌ ಧವನ್‌ ನಟಿಸಿದ್ದ ‘ಅಕ್ಟೋಬರ್‌’ ಹಿಂದಿ ಸಿನಿಮಾ 2018ರ ಏಪ್ರಿಲ್‌ನಲ್ಲಿ ತೆರೆಕಂಡಿತ್ತು. ‌34 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಚಿತ್ರವಿದು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 45 ಕೋಟಿ ರೂಪಾಯಿ ವಹಿವಾಟು ನಡೆಸಿತು. ಉತ್ತಮ ವಿಮರ್ಶೆಗಳು ಸಿಕ್ಕರೂ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ನಿರೀಕ್ಷಿತ ಯಶಸ್ಸು ದಾಖಲಿಸಲಿಲ್ಲ. ಇದರಿಂದ ಚಿತ್ರದ ನಿರ್ಮಾಪಕರು ವಿಚಲಿತರಾಗಬೇಕಾದ ಸಂದರ್ಭವೇನೂ ಸೃಷ್ಟಿಯಾಗಲಿಲ್ಲ. ಏಕೆಂದರೆ ಅಮೆಜಾನ್ ಪ್ರೈಂ ವಿಡಿಯೋ 35 ಕೋಟಿ ರೂಪಾಯಿಗೆ ‘ಅಕ್ಟೋಬರ್‌’ ಡಿಜಿಟಲ್ ರೈಟ್ಸ್‌ ಖರೀದಿಸಿತ್ತು. ಚಿತ್ರನಿರ್ಮಾಣದ ಸಂಪೂರ್ಣ ವೆಚ್ಚ ಡಿಜಿಟಲ್ ರೈಟ್ಸ್‌ನಿಂದಲೇ ಸಿಕ್ಕಿತು.

ಇದೀಗ ಸುದ್ದಿಯಲ್ಲಿರುವ ರಜನೀಕಾಂತ್‌ ಅಭಿನಯದ ‘2.0’ ಚಿತ್ರದ ಡಿಜಿಟಲ್ ರೈಟ್ಸ್‌ ಕಳೆದ ವರ್ಷವೇ ಬಿಕರಿಯಾಗಿವೆ. ಅಮೇಜಾನ್‌ ಪ್ರೈಂ ವಿಡಿಯೋ ದೊಡ್ಡ ಮೊತ್ತಕ್ಕೆ ಡಿಜಿಟಲ್ ಹಕ್ಕುಗಳನ್ನು ಖರೀದಿಸಿದೆ. ಹಿಂದಿ ಮಾತ್ರವಲ್ಲ ದಕ್ಷಿಣದ ತಮಿಳು, ತೆಲುಗು ಚಿತ್ರನಿರ್ಮಾಪಕರು ಕೂಡ ಡಿಜಿಟಲ್ ರೈಟ್ಸ್‌ನತ್ತ ದೃಷ್ಟಿ ನೆಟ್ಟಿದ್ದಾರೆ. ಅಲ್ಲಿ ಸಿಗುವ ದೊಡ್ಡ ಮೊತ್ತ ಸಿನಿಮಾಗೆ ಹೊಸ ಮಾರುಕಟ್ಟೆ ಸೃಷ್ಟಿಸಿದೆ. ಹಲವು ಹಿಂದಿ ಸಿನಿಮಾಗಳು ಥಿಯೇಟರ್‌ ವಹಿವಾಟಿಗಿಂತ ಹೆಚ್ಚಿನ ಮೊತ್ತವನ್ನು ಡಿಜಿಟಲ್ ರೈಟ್ಸ್‌ನಿಂದ ಪಡೆದಿವೆ. ಹೀಗಿರುವಾಗಿ ಡಿಜಿಟಲ್‌ ರೈಟ್ಸ್‌ನ ಪ್ರಾಮುಖ್ಯತೆಯನ್ನು ಮನಗಾಣಬಹುದು.

35 ಕೋಟಿ ರೂಪಾಯಿ ಡಿಜಿಟಲ್‌ ರೈಟ್ಸ್‌ ಪಡೆದ ‘ಅಕ್ಟೋಬರ್‌’ ಹಿಂದಿ ಚಿತ್ರ

ಕಳೆದ ವರ್ಷದಿಂದೀಚೆಗೆ ಸ್ಟ್ರೀಮಿಂಗ್ ಮೀಡಿಯಾಗಳು ವ್ಯಾಪಕವಾಗಿ ಬೆಳೆಯುತ್ತಿವೆ. ಹಿಂದಿ ಸೇರಿದಂತೆ ದಕ್ಷಿಣದ ಪ್ರಾದೇಷಿಕ ಸಿನಿಮಾರಂಗಗಳಿಗೆ ಡಿಜಿಟಲ್ ಫ್ಲಾಟ್‌ಫಾರ್ಮ್‌ ಹೊಸದೊಂದು ಮಾರುಕಟ್ಟೆ ಕಲ್ಪಿಸಿದೆ. ಅಂಕಿಅಂಶಗಳು ಇದನ್ನು ಸಾರಿ ಹೇಳುತ್ತವೆ. 2017ರ ಜನವರಿಯಿಂದ ಜುಲೈ ಮಧ್ಯೆ ತೆರೆಕಂಡ ಹತ್ತು ಪ್ರಮುಖ ಸಿನಿಮಾಗಳು ಡಿಜಿಟಲ್ ರೈಟ್ಸ್‌ನಿಂದ 307 ಕೋಟಿ ರೂಪಾಯಿ ಗಳಿಸಿದ್ದವು. ಇದು ಥಿಯೇಟರ್‌ಗಳಿಂದ ಅವರು ಗಳಿಸಬಹುದಾಗಿದ್ದ ವಹಿವಾಟಿನ ಶೇ. 40ರಷ್ಟು ಹಣ. ಮತ್ತೊಂದು ರೀತಿ ಹೇಳಬೇಕೆಂದರೆ ಚಿತ್ರಕ್ಕೆ ಹೂಡಿಕೆಯಾದ ಬಂಡವಾಳದ ಶೇ 42 ಹಣ ಅವರಿಗೆ ಡಿಜಿಟಲ್‌ ರೈಟ್ಸ್‌ನಿಂದ ಬಂದಿತ್ತು.

ವಿವಿಧ ಕಾರಣಗಳಿಗಾಗಿ ಸಿನಿಮಾಗಳು ಥಿಯೇಟರ್‌ನಲ್ಲಿ ಹಣಗಳಿಕೆಯಲ್ಲಿ ಹಿಂದೆ ಬೀಳುತ್ತವೆ. ಆಗ ನಿರ್ಮಾಪಕರು ಸ್ಯಾಟಲೈಟ್‌ ಹಕ್ಕುಗಳ ಮೊರೆ ಹೋಗುತ್ತಾರೆ. ಇದೀಗ ಡಿಜಿಟಲ್‌ ರೈಟ್ಸ್‌ ಕೂಡ ಅವರಿಗೆ ದೊಡ್ಡ ಮೊತ್ತವನ್ನು ತಂದುಕೊಡುತ್ತಿದೆ. ಮತ್ತೊಂದೆಡೆ ಚಿತ್ರ ರೂಪಿಸಿದ ತಂಡಕ್ಕೆ ಡಿಜಿಟಲ್ ಸ್ಟ್ರೀಮಿಂಗ್‌ ಮೀಡಿಯಾ ಮೂಲಕ ಹೆಚ್ಚು ಜನರನ್ನು ತಲುಪಿದ ಸಮಾಧಾನ. ಬಾಲಿವುಡ್‌ನಲ್ಲಿ ಹೊಸ ಮಾರುಕಟ್ಟೆ ಸೃಷ್ಟಿ ಮಾಡಿರುವ ಮೀಡಿಯಾ ಬಗ್ಗೆ ನಟ ವರುಣ್‌ ಧವನ್‌ ಮಾತನಾಡುತ್ತಾ, “ನಾನು ನಟಿಸಿದ್ದ ‘ಹಂಪ್ಟಿ ಶರ್ಮಾ ಕಿ ದುಲ್ಹನಿಯಾ’ ಮತ್ತು ‘ಜುದ್ವಾ2’ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡವು. ಆದರೆ ನಾನು ಮತ್ತು ಚಿತ್ರತಂಡ ತುಂಬಾ ನಿರೀಕ್ಷೆ ಹೊಂದಿದ್ದ ‘‌ಅಕ್ಟೋಬರ್‌’ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸುಕಾಣಲಿಲ್ಲ. ಆದರೆ ಅಮೇಜಾನ್‌ ಪ್ರೈಂನಲ್ಲಿ ಚಿತ್ರವನ್ನು ದೊಡ್ಡ ಸಂಖ್ಯೆಯಲ್ಲಿ ಜನರು ನೋಡಿದರು. ಡಿಜಿಟಲ್‌ ರೈಟ್ಸ್‌ನಿಂದ ನಿರ್ಮಾಪಕರಿಗೆ ದೊಡ್ಡ ಮೊತ್ತದ ಹಣ ಸಿಕ್ಕಿತು” ಎನ್ನುತ್ತಾರೆ.

ಸ್ಟ್ರೀಮಿಂಗ್ ಮೀಡಿಯಾದಲ್ಲೂ ದೊಡ್ಡ ಯಶಸ್ಸು ಕಂಡ ‘ರಂಗಸ್ಥಳಂ’ ತೆಲುಗು ಚಿತ್ರ

ಬದಲಾದ ಚಿತ್ರಣ | ದಕ್ಷಿಣ ಭಾರತದ ಪ್ರಾದೇ‍ಷಿಕ ಸಿನಿಮಾರಂಗದಲ್ಲೂ ಡಿಜಿಟಲ್ ರೈಟ್ಸ್‌ ಮಾರುಕಟ್ಟೆಯ ಚಿತ್ರಣ ಬದಲಿಸುತ್ತಿವೆ. ಜಾಹೀರಾತಿನ ಅವಧಿ ಕಡಿಮೆಯಾಗಿದ್ದು ಹಾಗೂ ಇತರೆ ತಾಂತ್ರಿಕ ಕಾರಣಗಳಿಂದಾಗಿ ಕಳೆದೊಂದು ವರ್ಷದಿಂದೀಚೆಗೆ ಸ್ಯಾಟಲೈಟ್ ರೈಟ್ಸ್‌ ಮಾರುಕಟ್ಟೆ ಕುಂಠಿತಗೊಂಡಿದೆ. ಟೀವಿ ಚಾನಲ್‌ನವರು ದೊಡ್ಡ ತಾರೆಯರ ಚಿತ್ರಗಳಿಗೆ ಮಾತ್ರ ಹೆಚ್ಚು ಹಣ ಕೊಡುತ್ತಿದ್ದಾರೆ. ಹಾಗಾಗಿ ಚಿತ್ರನಿರ್ಮಾಪಕರು ಬಹುಪಾಲು ಬಾಕ್ಸ್ ಆಫೀಸ್‌ ವಹಿವಾಟನ್ನು ಮಾತ್ರ ನೆಚ್ಚಿಕೊಂಡಿದ್ದಾರೆ. ಇದೀಗ ತಮಿಳು, ತೆಲುಗು ಸಿನಿಮಾಗಳು ಸ್ಟ್ರೀಮಿಂಗ್ ಮೀಡಿಯಾಗಳಲ್ಲಿ ಹೆಚ್ಚೆಚ್ಚು ಕಾಣಿಸುತ್ತಿವೆ. ನಿರ್ಮಾಪಕರಿಗೆ ಮತ್ತೊಂದು ಆದಾಯದ ಮೂಲ ಸಿಕ್ಕಿದ್ದು ನಿಟ್ಟುಸಿರುಬಿಟ್ಟಿದ್ದಾರೆ.

ಸ್ಟ್ರೀಮಿಂಗ್‌ ಮೀಡಿಯಾಗಳು ಸ್ಟಾರ್ ಸಿನಿಮಾಗಳಲ್ಲದೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ, ಪ್ರಯೋಗಶೀಲ ಚಿತ್ರಗಳಿಗೂ ಮನ್ನಣೆ ನೀಡುತ್ತಿವೆ. ಹೀಗಾಗಿ ನಿರ್ಮಾಪಕರಿಗೆ ಸಿನಿಮಾದ ಹೂಡಿಕೆಯ ಒಂದಂಶ ಡಿಜಿಟಲ್ ರೈಟ್ಸ್‌ನಿಂದ ಸಿಗುತ್ತಿದೆ. ಸೂರ್ಯ ನಟಿಸಿದ್ದ ‘ಥಾನಾ ಸೆರೆಂದ ಕೊಟ್ಟಂ’ ಸಿನಿಮಾ ತೆರೆಕಾಣುವ ಮುನ್ನವೇ 6.25 ರೂಪಾಯಿ ಡಿಜಿಟಲ್‌ ರೈಟ್ಸ್‌ ಪಡೆದಿತ್ತು. ಇದೊಂದು ಉದಾಹರಣೆಯಷ್ಟೆ. ಅಡಲ್ಟ್‌ ಕಾಮಿಡಿ ಚಿತ್ರಗಳನ್ನು ಟೀವಿ ಚಾನಲ್‌ಗಳು ಖರೀದಿಸುವುದಿಲ್ಲ. ಆದರೆ ಸ್ಟ್ರೀಮಿಂಗ್ ಮೀಡಿಯಾದಲ್ಲಿ ಈ ಕಂಟೆಂಟ್‌ಗೆ ಆಕ್ಷೇಪಣೆಯಿಲ್ಲ. ಹಾಗಾಗಿ ‘ಹರ ಹರ ಮಹದೇವಕಿ’, ‘ಇರುಟ್ಟು ಅರೈಯಿಲ್ ಮುರಟ್ಟು ಕತ್ತು’ ಅಡಲ್ಟ್‌ ತಮಿಳು ಚಿತ್ರಗಳು ಡಿಜಿಲಟ್‌ ವೇದಿಕೆಯಲ್ಲಿ ಹಣ ಗಳಿಸಿದವು.

ಸಿನಿಮಾಗಳ ಆಯ್ಕೆಯಲ್ಲಿ ಸ್ಟ್ರೀಮಿಂಗ್ ಮೀಡಿಯಾ ಕಟ್ಟುನಿಟ್ಟಿನ ನೀತಿಗಳನ್ನು ಅನುಸರಿಸುತ್ತದೆ ಎನ್ನಲಾಗುತ್ತಿದೆ. ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅವರು ಕಂಟೆಂಟ್ ಖರೀದಿಸುತ್ತಾರೆ. ತಮಗೆ ಲಾಭ ತಂದುಕೊಡುತ್ತವೆ ಎನ್ನುವಂತಹ ಚಿತ್ರಗಳನ್ನಷ್ಟೇ ಅವರು ಆಯ್ಕೆ ಮಾಡುವುದು. ಈ ಪ್ರಕ್ರಿಯೆ ಬದಲಾಗುವವರೆಗೂ ಉದ್ಯಮದಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯವಿಲ್ಲ ಎಂದು ಕಾಲಿವುಡ್‌ನ ಕೆಲವು‌ ತಂತ್ರಜ್ಞರು ಅಭಿಪ್ರಾಯಪಡುತ್ತಾರೆ. ಮತ್ತೊಂದೆಡೆ ಉತ್ತಮ ಚಿತ್ರಕಥೆ ಮಾಡಿಕೊಂಡು ಪ್ರಯೋಗಶೀಲ ಸಿನಿಮಾ ಮಾಡುವವರಿಗೆ ಡಿಜಿಟಲ್‌ ವೇದಿಕೆ ವರವಾಗಿದೆ ಎನ್ನುವುದೂ ದಿಟ. ಸಮೀಕ್ಷೆಯ ಅನ್ವಯ 2017ರಲ್ಲಿ ಡಿಜಿಟಲ್‌ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಶೇ 50ರಷ್ಟು ಹೆಚ್ಚಾಗಿದೆ. 2020ರ ಹೊತ್ತಿವೆ ಅತಿ ಹೆಚ್ಚು ಆನ್‌ಲೈನ್‌ ವಿಡಿಯೋ ನೋಡುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ ಎನ್ನಲಾಗಿದೆ.

ಸ್ಟ್ರೀಮಿಂಗ್ ಮೀಡಿಯಾದಲ್ಲಿರುವ ‘ರಾಮಾ ರಾಮಾ ರೇ’ ಕನ್ನಡ ಚಿತ್ರದ ಟ್ರೈಲರ್

ಹಿಂದುಳಿದಿದೆ ಸ್ಯಾಂಡಲ್‌ವುಡ್‌ | ಸ್ಟ್ರೀಮಿಂಗ್‌ ಮೀಡಿಯಾ ವಿಚಾರದಲ್ಲಿ ಕನ್ನಡ ಚಿತ್ರರಂಗ ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಸದ್ಯ ಡಿಜಿಟಲ್ ಮೀಡಿಯಾದಲ್ಲಿ ಆರು ಕನ್ನಡ ಚಿತ್ರಗಳಿವೆಯಷ್ಟೆ. ಈ ಬಗ್ಗೆ ಮಾತನಾಡುವ ಯುವ ಚಿತ್ರನಿರ್ದೇಶಕ ಕೆ ಎಂ ಚೈತನ್ಯ, “ನಮ್ಮಲ್ಲಿ ಈಗಷ್ಟೇ ಡಿಜಿಟಲ್ ರೈಟ್ಸ್‌ ಬಗ್ಗೆ ಚರ್ಚೆಯಾಗುತ್ತಿದೆ. ಸ್ಯಾಟಲೈಟ್‌ ಹಕ್ಕುಗಳನ್ನು ಬಿಕರಿ ಮಾಡುವಾಗ ಚಾನಲ್‌ಗಳ ನೀತಿ, ನಿಯಮಗಳಿಗೆ ನಿರ್ಮಾಪಕರು ಕಣ್ಮುಚ್ಚಿಕೊಂಡು ಸಹಿ ಹಾಕಿರುತ್ತಾರೆ. ಅಲ್ಲಿನ ಕೆಲವು ತಾಂತ್ರಿಕ ತೊಡಕುಗಳಿಂದಾಗಿ ಸಿನಿಮಾಗಳು ಡಿಜಿಟಲ್ ಮೀಡಿಯಾಗೆ ಹೋಗಲು ಅಡ್ಡಿಯಾಗುತ್ತದೆ. ಬಹುಶಃ ಮುಂದಿನ ದಿನಗಳಲ್ಲಿ ನಮ್ಮ ನಿರ್ಮಾಪಕರು, ನಿರ್ದೇಶಕರು ಸ್ಟ್ರೀಮಿಂಗ್‌ಗೆ ಎಕ್ಸ್‌ಪ್ಲೋರ್ ಆಗಬಹುದು” ಎನ್ನುತ್ತಾರೆ.

ಬೆಂಗಳೂರಿನ ಪರ್ಪಲ್ ಆರೋ ಕಂಪನಿ ಸ್ಟ್ರೀಮಿಂಗ್ ಮೀಡಿಯಾಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ. ಅವರ ಕಂಪನಿ ‘ರಾಮಾ ರಾಮಾ ರೇ’, ‘ಶುದ್ಧಿ’ ಮತ್ತು ‘ಹೊಂಬಣ್ಣ’ ಕನ್ನಡ ಚಿತ್ರಗಳನ್ನು ಸ್ಟ್ರೀಮಿಂಗ್‌ಗೆ ಪರಿಚಯಿಸಿದೆ. ‘ಪರ್ಪಲ್‌ ಆರೋ’ ಕಂಪನಿಯ ಅಜಯ್‌ ಅವರು ಮುಂದಿನ ದಿನಗಳ ಬಗ್ಗೆ ಆಶಾವಾದಿಯಾಗಿ ಮಾತನಾಡುತ್ತಾರೆ. “ಮುಂದೆ ನಿರ್ಮಾಪಕರಿಗೆ ಡಿಜಿಟಲ್‌ ರೈಟ್ಸ್‌ ಪರ್ಯಾಯ ಮಾರುಕಟ್ಟೆ ಒದಗಿಸಲಿದೆ. ಕನ್ನಡ ನಿರ್ಮಾಪಕರು, ನಿರ್ದೇಶಕರು ಈಗೀಗ ಸ್ಟ್ರೀಮಿಂಗ್‌ ಮೀಡಿಯಾಗೆ ತೆರೆದುಕೊಳ್ಳುತ್ತಿದ್ದಾರೆ. 2, 3, 5 ವರ್ಷಗಳ ಒಪ್ಪಂದಕ್ಕೆ ಡಿಜಿಟಲ್‌ ರೈಟ್ಸ್ ಪಡೆದುಕೊಳ್ಳುತ್ತಾರೆ. ಸಿನಿಮಾದ ಡಿಮಾಂಡ್‌ ನೋಡಿಕೊಂಡು ಮತ್ತೆ, ಮತ್ತೆ ಸ್ಟ್ರೀಮ್‌ ಮಾಡುವ ಸಾಧ್ಯತೆಗಳೂ ಇರುತ್ತವೆ. ಮುಂಬರುವ ದಿನಗಳಲ್ಲಿ ಸಿನಿಮಾ ಉದ್ಯಮದಲ್ಲಿ ಸ್ಟ್ರೀಮಿಂಗ್ ಮೀಡಿಯಾ ಸಂಚಲನ ಸೃಷ್ಟಿಸಲಿದೆ” ಎನ್ನುತ್ತಾರೆ ಅಜಯ್‌.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More