ಪ್ರೀಮಿಯರ್‌ಗೆ ಮಾಂಟೋ ಪುತ್ರಿಯರನ್ನು ಆಹ್ವಾನಿಸಿದ ನಿರ್ದೇಶಕಿ ನಂದಿತಾ

ನಂದಿತಾ ದಾಸ್ ನಿರ್ದೇಶನದಲ್ಲಿ ತಯಾರಾಗಿರುವ ‘ಮಾಂಟೋ’ ಸಿನಿಮಾ ಇದೇ ಸೆಪ್ಟೆಂಬರ್‌ 21ರಂದು ತೆರೆಕಾಣಲಿದೆ. ಇದು ಉರ್ದು ಲೇಖಕ ಸಾದತ್‌ ಹಸನ್ ಮಾಂಟೋ ಅವರ ಬಯೋಪಿಕ್‌. ನಿರ್ದೇಶಕಿ ನಂದಿತಾ ಚಿತ್ರದ ಪ್ರೀಮಿಯರ್‌ ಶೋಗೆ ಮಾಂಟೋ ಪುತ್ರಿಯರಿಗೆ ಆಹ್ವಾನ ನೀಡಿದ್ದಾರೆ

ಪ್ರತಿಭಾವಂತ ನಟಿ, ನಿರ್ದೇಶಕಿ ನಂದಿತಾ ದಾಸ್ ಅವರ ಬಹುನಿರೀಕ್ಷಿತ ‘ಮಾಂಟೋ’ ಸಿನಿಮಾ ಮುಂದಿನ ವಾರ ತೆರೆಕಾಣಲಿದೆ. ಖ್ಯಾತ ಉರ್ದು ಲೇಖಕ ಸಾದತ್ ಹಸನ್ ಮಾಂಟೋ ಅವರ ಬಯೋಪಿಕ್ ಇದು. ನಿರ್ದೇಶಕಿ ನಂದಿತಾ ಚಿತ್ರದ ಪ್ರೀಮಿಯರ್ ಶೋಗೆ ಮಾಂಟೋ ಪುತ್ರಿಯರಾದ ನಿಘತ್ ಪಟೇಲ್‌, ನುಝತ್‌ ಅರ್ಷದ್‌ ಮತ್ತು ನುಸ್ರತ್‌ ಜಲಾಲ್ ಅವರನ್ನು ಆಹ್ವಾನಿಸಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಸಿರುವ ಇವರಿಗೆ ವಿಸಾ ನೀಡುವಂತೆ ನಂದಿತಾ ಇಸ್ಲಮಾಬಾದ್‌ನ ಭಾರತೀಯ ಹೈ ಕಮಿಷನ್‌ಗೆ ಪತ್ರ ಬರೆದಿದ್ದಾರೆ.

“ಚಿತ್ರೀಕರಣದುದ್ದಕ್ಕೂ ಮಾಂಟೋ ಕುಟುಂಬದವರು ಎಲ್ಲ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಮೇರು ಲೇಖಕನ ಕುರಿತಾಗಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ಒಳಹುಗಳಿಲ್ಲದೆ ನಾನು ಅವರನ್ನು ಅಪ್ಪಟ ಮನುಷ್ಯನಾಗಿ, ಆದರ್ಶ ತಂದೆಯಾಗಿ, ಉತ್ತಮ ಪತಿಯಾಗಿ ಚಿತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಸಿನಿಮಾದ ಪ್ರೀಮಿಯರ್ ಶೋನಲ್ಲಿ ಮಾಂಟೋ ಕುಟುಂಬದವರು ಇರಬೇಕೆಂದು ನಾನು ಅಪೇಕ್ಷಿಸುತ್ತೇನೆ,” ಎಂದಿದ್ದಾರೆ ನಂದಿತಾ.

ಮಾಂಟೋ ಪುತ್ರಿ ನುಝತ್‌ ಅರ್ಷದ್‌ ಅವರಿಗೆ ಚಿತ್ರದ ಬಗ್ಗೆ ಅಪಾರ ಕುತೂಹಲವಿದೆ. “ಚಿತ್ರ ತಯಾರಾಗುವ ಹಂತದಲ್ಲಿ ನಿರ್ದೇಶಕ ನಂದಿತಾ ನಮ್ಮ ಕುಟುಂಬದವರ ನಿರಂತರ ಸಂಪರ್ಕದಲ್ಲಿದ್ದರು. ಪ್ರತಿ ಹಂತದಲ್ಲೂ ಅವರು ದೂರವಾಣಿ, ಇಮೇಲ್‌ ಮೂಲಕ ನನ್ನೊಂದಿಗೆ ಚರ್ಚಿಸುತ್ತಿದ್ದರು. ಚಿತ್ರದಲ್ಲಿ ತಂದೆಯ ಬಗ್ಗೆ ಒಳ್ಳೆಯ ಒಳನೋಟ ಕಟ್ಟಿಕೊಟ್ಟಿದ್ದಾರೆ ಎಂದು ನಾನು ಭಾವಿಸುತ್ತೇನೆ. ಚಿತ್ರದ ಯಶಸ್ಸಿಗೆ ಶುಭ ಹಾರೈಸುತ್ತೇನೆ. ಈ ಸಿನಿಮಾ ಎರಡೂ ದೇಶಗಳ ಜನರ ಪುನರಾವಲೋಕನಕ್ಕೆ ದಾರಿಯಾಗಲಿ,” ಎನ್ನುತ್ತಾರೆ.

ಪ್ರೀಮಿಯರ್‌ ಶೋಗಳು ದಿಲ್ಲಿ ಮತ್ತು ಮುಂಬಯಿಯಲ್ಲಿ ಆಯೋಜನೆಗೊಂಡಿವೆ. ಬರವಣಿಗೆಯಲ್ಲಿ ಮಾಂಟೋ ಅವರನ್ನು ಬಹುವಾಗಿ ಪ್ರಭಾವಿಸಿದ ನಗರಗಳಿವು. ಮೂಲಗಳ ಪ್ರಕಾರ ಮುಂಬೈನಲ್ಲಿ ಸೆಪ್ಟೆಂಬರ್‌ 17ರಂದು ಮತ್ತು ದಿಲ್ಲಿಯಲ್ಲಿ ಸೆಪ್ಟೆಂಬರ್‌ 19ರಂದು ಪ್ರೀಮಿಯರ್ ಶೋಗಳು ಆಯೋಜನೆಗೊಂಡಿವೆ. ಭಾರತ ಮತ್ತು ಪಾಕಿಸ್ತಾನದ ನೆಲಗಳಲ್ಲಿ ತಮ್ಮ ಬೇರುಗಳನ್ನು ಹೊಂದಿದ್ದ ಮಾಂಟೋ ಬದುಕು, ಬರವಣಿಗೆ ಕುರಿತ ಈ ಪ್ರಯೋಗದ ಬಗ್ಗೆ ಸಿನಿಪ್ರೇಮಿಗಳು ದೊಡ್ಡ ನಿರೀಕ್ಷೆ ಹೊಂದಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ಮಾಂಟೋ ಪತ್ನಿಯಾಗಿ ರಸಿಕಾ ದುಗಾಲ್ ನಟಿಸಿದ್ದು, ತಾಹಿರ್ ರಾಜ್ ಭಾಸಿನ್‌, ರಿಷಿ ಕಪೂರ್‌, ದಿವ್ಯಾ ದತ್ತಾ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಆಸ್ಕರ್‌ಗೆ ನಾಮನಿರ್ದೇಶನಗೊಂಡ ಅಸ್ಸಾಮಿ ಸಿನಿಮಾ ‘ವಿಲೇಜ್‌ ರಾಕ್‌ಸ್ಟಾರ್ಸ್‌’
ವಿಡಿಯೋ | ‘ಮಂಟೋ’ ಸಿನಿಮಾ ಕುರಿತು ನವಾಜುದ್ದೀನ್ ಸಿದ್ದಿಕಿ ಮಾತು
ಪ್ರತಿಭಟನೆಗೆ ಮಣಿದ ನಿರ್ದೇಶಕ ಕಶ್ಯಪ್‌; ‘ಮನ್‌ಮರ್ಝಿಯಾ’ ದೃಶ್ಯಗಳಿಗೆ ಕತ್ತರಿ
Editor’s Pick More