‘ಅಂಬಿ ನಿಂಗೆ ವಯಸ್ಸಾಯ್ತೋ’ ಆಡಿಯೋ ಟ್ವೀಟ್ ಮಾಡಿದ ನಟ ಸುದೀಪ್

ಅಂಬರೀಶ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದೂ ಒಂದು. ತಾವು ತುಂಬಾ ಇಷ್ಟಪಟ್ಟು ನಟಿಸಿದ ಪಾತ್ರವಿದು ಎಂದು ಅಂಬರೀಶ್ ಹೇಳಿಕೊಳ್ಳುವ ಈ ಸಿನಿಮಾ ಸೆ.28ಕ್ಕೆ ತೆರೆಕಾಣಲಿದೆ

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಆಡಿಯೋ ದೊಡ್ಡ ಸಮಾರಂಭದಲ್ಲಿ ಬಿಡುಗಡೆ ಆಗಬೇಕಿತ್ತು. ಇದು ಹಿರಿಯ ನಟ ಅಂಬರೀಶ್‌ ಅವರ ಪ್ರಮುಖ ಸಿನಿಮಾ. ಅಂಬರೀಶ್ ಆತ್ಮೀಯರಾದ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖರನ್ನು ಆಹ್ವಾನಿಸಿ ಆಡಿಯೋ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ಮಾಪಕ ಜಾಕ್ ಮಂಜು ಹೇಳಿದ್ದರು. ಆದರೆ, ಅಂಬರೀಶ್ ಅನಾರೋಗ್ಯದ ಕಾರಣದಿಂದಾಗಿ ಕಾರ್ಯಕ್ರಮ ರದ್ದು ಮಾಡಿ ಯೂಟ್ಯೂಬ್‌ನಲ್ಲಿ ಸರಳವಾಗಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸುದೀಪ್, ಟ್ವಿಟರ್‌ನಲ್ಲಿ ಆಡಿಯೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿವೆ. ವಿ ನಾಗೇಂದ್ರ ಪ್ರಸಾದ್‌ ಮೂರು ಹಾಡು ಬರೆದಿದ್ದರೆ, ಕವಿರಾಜ್‌ ಮತ್ತು ಪ್ರೇಮ್‌ ತಲಾ ಒಂದೊಂದು ಹಾಡು ರಚಿಸಿದ್ದಾರೆ. ಸಂಗೀತ ಸಂಯೋಜನೆ ಅರ್ಜುನ್ ಜನ್ಯ ಅವರದು. ನಟ ಧನುಷ್ ನಿರ್ಮಾಣದ ‘ಪವರ್ ಪಾಂಡಿ’ ಯಶಸ್ವಿ ತಮಿಳು ಚಿತ್ರದ ರೀಮೇಕ್‌ ‘ಅಂಬಿ ನಿಂಗೆ ವಯಸ್ಸಾಯ್ತೋ.’ ವಿಶಿಷ್ಟ ಕಥಾಹಂದರದ ಚಿತ್ರದ ಪ್ರಮುಖ ಪಾತ್ರವನ್ನು ತಮಿಳಿನಲ್ಲಿ ರಾಜ್‌ಕಿರಣ್‌ ನಿರ್ವಹಿಸಿದ್ದರು. ನಿರ್ಮಾಪಕರು ಚಿತ್ರದ ರಿಮೇಕ್‌ ಹಕ್ಕು ಖರೀದಿಸಿದಾಗ ತಮಿಳಿನ ಹಿರಿಯ ನಟ ರಜನೀಕಾಂತ್‌, "ಪ್ರಮುಖ ಪಾತ್ರದಲ್ಲಿ ಅಂಬರೀಶ್ ನಟಿಸಲಿ,” ಎಂದಿದ್ದರು. ಸ್ನೇಹಿತನ ಸಲಹೆಯಂತೆ ಅಂಬರೀಶ್ ನಟಿಸಿದ್ದು, ತಮ್ಮ ಪಾತ್ರದ ಬಗ್ಗೆ ಅವರು ಅಪಾರ ಆಸ್ಥೆಯಿಂದ ಮಾತನಾಡುತ್ತಾರೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ‘ಗಂಧದ ಗುಡಿ’ ಚಿತ್ರದ ವಿವಾದ ಆಕಸ್ಮಿಕ, ದುರದೃಷ್ಟಕರ

“ಇದು ನನ್ನ ವಯಸ್ಸಿಗೆ ಸೂಕ್ತವಾಗಿ ಹೊಂದಿಕೆ ಆಗುವಂತಹ ಪಾತ್ರ. ಒಳ್ಳೆಯ ಕತೆಯ ಸಿನಿಮಾಗಳಲ್ಲಿ ನಟಿಸಿದಾಗ ತೃಪ್ತಿ ಇರುತ್ತದೆ,” ಎನ್ನುತ್ತಾರೆ ಅಂಬರೀಶ್‌. ಮೊನ್ನೆ ಅನಾರೋಗ್ಯದ ಮಧ್ಯೆಯೂ ಅವರು ಸಿನಿಮಾ ನೋಡಿದ್ದರು. ತಮ್ಮ ಪಾತ್ರದ ಚಿತ್ರಣ ಮತ್ತು ನಿರ್ದೇಶನದ ಬಗ್ಗೆ ಅವರು ಮೆಚ್ಚುಗೆಯಿಂದ ಮಾತನಾಡಿದ್ದಾರೆ. ಚಿತ್ರದಲ್ಲಿ ಅವರಿಗೆ ಸುಹಾಸಿನಿ ಜೋಡಿ. ಅಂಬರೀಶ್‌ ಪಾತ್ರದ ಚಿಕ್ಕ ವಯಸ್ಸಿನ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ಅಲ್ಲಿ ಅವರಿಗೆ ಶೃತಿ ಹರಿಹರನ್‌ ಜೋಡಿ. ಸುದೀಪ್‌ ಅವರಿಗೆ ಹಿಂದಿನ ಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಗುರುದತ್‌ ಗಾಣಿಗ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 28ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More