ಜನುಮದಿನ | ನಟ ವಿಷ್ಣುವರ್ಧನ್‌ ವೃತ್ತಿಬದುಕಿನ ಮಹತ್ವದ ಹತ್ತು ಸಿನಿಮಾ

ಸ್ಫುರದ್ರೂಪಿ ಹೀರೋ ವಿಷ್ಣುವರ್ಧನ್‌ ಜನ್ಮದಿನ ಇಂದು (ಸೆ.18). ವೈವಿಧ್ಯಮಯ ಪಾತ್ರಗಳು, ಉತ್ತಮ ನಟನೆಯಿಂದ ಪ್ರೀತಿ ಗಳಿಸಿದ ಅವರ ಸಿನಿಮಾಗಳ ಸಾಲು ವರ್ಣರಂಜಿತ. ಮೇರುತಾರೆ ವಿಷ್ಣುವರ್ಧನ್‌ ವೃತ್ತಿಬದುಕಿಗೆ ತಿರುವು ನೀಡಿದ ಮತ್ತು ಸದಾ ಅವರ ನೆನಪನ್ನು ಜೀವಂತವಾಗಿಡುವ ಚಿತ್ರಗಳಿವು

ಸಿನಿಮಾ: ನಾಗರಹಾವು (1973) ನಿರ್ದೇಶನ: ಪುಟ್ಟಣ್ಣ ಕಣಗಾಲ್‌ ಸಂಗೀತ: ವಿಜಯ ಭಾಸ್ಕರ್‌

ವಿಷ್ಣು ನಾಯಕನಟನಾಗಿ ಪರಿಚಯವಾದ ಸಿನಿಮಾ. ಸಾಹಿತಿ ತರಾಸು ಅವರ ಕಾದಂಬರಿಗಳನ್ನು ಆಧರಿಸಿ ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ್ದರು. ವಿಷ್ಣು ಕಣ್ಗಳು, ನಿಲುವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡ ಪುಟ್ಟಣ್ಣ ಅವರಿಗೊಂದು ಆಂಗ್ರಿ ಯಂಗ್‌ಮ್ಯಾನ್‌ ಇಮೇಜು ಸೃಷ್ಟಿಸಿಕೊಟ್ಟರು. ದೊಡ್ಡ ಯಶಸ್ಸು ಕಂಡ ಸಿನಿಮಾದಿಂದಾಗಿ ವಿಷ್ಣು ಭರವಸೆಯ ಹೀರೋ ಆಗಿ ಹೊರಹೊಮ್ಮಿದರು.

ಸಿನಿಮಾ: ಬೂತಯ್ಯನ ಮಗ ಅಯ್ಯು (1974) ನಿರ್ದೇಶನ: ಸಿದ್ದಲಿಂಗಯ್ಯ ಸಂಗೀತ: ಜಿ ಕೆ ವೆಂಕಟೇಶ್‌

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಣ್ಣ ಕತೆಯನ್ನು ಆಧರಿಸಿ ಸಿದ್ದಲಿಂಗಯ್ಯನವರು ನಿರ್ದೇಶಿಸಿದ ಸಿನಿಮಾ. ‘ನಾಗರ ಹಾವು’ ಚಿತ್ರದಲ್ಲಿ ಸಿಕ್ಕಿದ್ದ ಆಂಗ್ರಿ ಯಂಗ್‌ಮ್ಯಾನ್‌ ಇಮೇಜು ಇಲ್ಲಿಯೂ ಮುಂದುವರಿಯಿತು. ಚಿತ್ರದ ದೊಡ್ಡ ಯಶಸ್ಸು ವಿಷ್ಣು ಅವರನ್ನು ಜನಮಾನಸದಲ್ಲಿ ನೆಲೆಸುವಂತೆ ಮಾಡಿತು.

ಸಿನಿಮಾ: ಕಳ್ಳ ಕುಳ್ಳ (1975) ನಿರ್ದೇಶನ: ಕೆಎಸ್‌ಆರ್‌ ದಾಸ್‌ ಸಂಗೀತ: ರಾಜನ್‌-ನಾಗೇಂದ್ರ

ಆರಂಭದ ದೊಡ್ಡ ಯಶಸ್ಸಿನೊಂದಿಗೆ ಗುರುತಿಸಿಕೊಂಡ ವಿಷ್ಣುವರ್ಧನ್‌ ಹಾಸ್ಯ ಪಾತ್ರವನ್ನು ಮಾಡಬಲ್ಲರು ಎಂದು ಈ ಚಿತ್ರದಲ್ಲಿ ಸಾಬೀತಾಯಿತು. ತಮ್ಮ ಉತ್ತಮ ಟೈಮಿಂಗ್‌ನಿಂದಾಗಿ ಚಿತ್ರದಲ್ಲಿ ವಿಷ್ಣು ಗಮನ ಸೆಳೆದರು. ರಾಜನ್‌-ನಾಗೇಂದ್ರ ಅವರ ಸಂಗೀತ ಸಂಯೋಜನೆಯಿದ್ದ ಸಿನಿಮಾದ ಯಶಸ್ಸು ವಿಷ್ಣು ವೃತ್ತಿ ಬದುಕಿಗೆ ಶುಭವಾಯ್ತು.

ಸಿನಿಮಾ: ಸಾಹಸಸಿಂಹ (1982) ನಿರ್ದೇಶನ: ಜೋಸೈಮನ್‌ ಸಂಗೀತ: ಚೆಲ್ಲಪಿಲ್ಲ ಸತ್ಯಂ

ವಿಷ್ಣು ಅವರಿಗೆ ಆಕ್ಷನ್‌ ಪಾತ್ರಗಳಲ್ಲಿ ಬ್ರೇಕ್‌ ಕೊಟ್ಟ ಸಿನಿಮಾ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಯುವಕನಾಗಿ ವಿಷ್ಣುವರ್ಧನ್‌ ಯುವಪೀಳಿಗೆಯ ಫೇವರಿಟ್‌ ಹೀರೋ ಆದರು. ಈ ಚಿತ್ರದ ಯಶಸ್ಸಿನ ನಂತರ ಅವರ ಹೆಸರಿನ ಹಿಂದೆ ‘ಸಾಹಸಸಿಂಹ’ ಸೇರಿಕೊಂಡಿತು.

ಸಿನಿಮಾ: ಬಂಧನ (1984) ನಿರ್ದೇಶನ: ರಾಜೇಂದ್ರಸಿಂಗ್‌ ಬಾಬು‌ ಸಂಗೀತ: ಎಂ.ರಂಗರಾವ್‌

ಲೇಖಕಿ ಉಷಾ ನವರತ್ನರಾಂ ಅವರ ಕೃತಿಯನ್ನು ಅಧರಿಸಿ ರಾಜೇಂದ್ರಸಿಂಗ್‌ ಬಾಬು ಅವರು ನಿರ್ದೇಶಿಸಿದ ಸಿನಿಮಾ. ಆಕ್ಷನ್‌ ಸಿನಿಮಾಗಳಲ್ಲೇ ಹೆಚ್ಚಾಗಿ ಮಿಂಚುತ್ತಿದ್ದ ವಿಷ್ಣುಗೆ ಈ ಸಿನಿಮಾ ಬೇರೆಯದ್ದೇ ಇಮೇಜು ಸೃಷ್ಟಿಸಿಕೊಟ್ಟಿತು. ಉತ್ತಮ ಕತೆ, ಹಾಡು, ನಿರೂಪಣೆಯಿಂದಾಗಿ ಅತ್ಯುತ್ತಮ ಕೌಟುಂಬಿಕ ಚಿತ್ರ ಎನಿಸಿಕೊಂಡಿತು.

ಸಿನಿಮಾ: ಮಲಯ ಮಾರುತ (1986) ನಿರ್ದೇಶನ: ಕೆಎಸ್‌ಎಲ್‌ ಸ್ವಾಮಿ‌ ಸಂಗೀತ: ವಿಜಯ ಭಾಸ್ಕರ್‌‌

ಅತ್ಯುತ್ತಮ ಚಿತ್ರಸಾಹಿತ್ಯ ಮತ್ತು ಸಂಗೀತ ಸಂಯೋಜನೆಯ ಸಂಗೀತಮಯ ಸಿನಿಮಾ. ಎಲ್ಲಾ ವರ್ಗದ ಪ್ರೇಕ್ಷಕರ ಫೇವರಿಟ್‌ ಹೀರೋ ಆಗಿದ್ದ ವಿಷ್ಣು ಇಲ್ಲಿ ಮತ್ತೊಂದು ಎತ್ತರಕ್ಕೆ ಏರಿದರು. ವಿಜಯ ಭಾಸ್ಕರ್ ಸಂಗೀತ ಸಂಯೋಜನೆಯ ಹಾಡುಗಳು ಚಿತ್ರಕ್ಕೆ ವಿಶೇಷ ಮೆರುಗು ನೀಡಿದವು. ಒಂದೊಳ್ಳೆಯ ಪ್ರೇಮಕತೆಯಾಗಿಯೂ ಇದು ಸೆಳೆಯಿತು.

ಸಿನಿಮಾ: ಮುತ್ತಿನ ಹಾರ (1990) ನಿರ್ದೇಶನ: ರಾಜೇಂದ್ರಸಿಂಗ್‌ ಬಾಬು‌ ಸಂಗೀತ: ಹಂಸಲೇಖ‌‌

ವಿಷ್ಣು ವೃತ್ತಿಬದುಕಿನ ಮಹೋನ್ನತ ಚಿತ್ರಗಳಲ್ಲೊಂದು. ಗಡಿಯಲ್ಲಿ ದೇಶ ಕಾಯುವ ಸೈನಿಕವಾಗಿ ವಿಷ್ಣುವರ್ಧನ್‌ ಅವರದ್ದು ಮನೋಜ್ಞ ಅಭಿನಯ. ಮಡಿಕೇರಿ ನೇಟಿವಿಟಿಯನ್ನು ಸೊಗಸಾಗಿ ಚಿತ್ರಿಸಲಾಗಿದ್ದ ಚಿತ್ರದಲ್ಲಿ ‘ಅಚ್ಚಪ್ಪ’ನಾಗಿ ವಿಷ್ಣು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಸಿನಿಮಾ: ನಿಷ್ಕರ್ಷ (1993) ನಿರ್ದೇಶನ: ಸುನೀಲ್‌ಕುಮಾರ್‌ ದೇಸಾಯಿ‌ ಸಂಗೀತ: ಗುಣಸಿಂಗ್‌‌‌

ಕನ್ನಡದಲ್ಲಿ ಏಕತಾನತೆಯ ಪ್ರೇಮಕತೆ, ಆಕ್ಷನ್‌ ಸಿನಿಮಾಗಳೇ ಬರುತ್ತಿದ್ದ ದಿನಗಳಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ ‘ನಿಷ್ಕರ್ಷ’. ಪೊಲೀಸ್‌ ಅಧಿಕಾರಿಯಾಗಿ ವಿಷ್ಣುವರ್ಧನ್ ಸ್ಟೈಲಿ‍ಶ್‌ ಆಗಿ ಕಾಣಿಸಕೊಂಡಿದ್ದರು. ಉತ್ತಮ ಹಿನ್ನೆಲೆ ಸಂಗೀತ, ಆಕರ್ಷಕ ನಿರೂಪಣೆಯೊಂದಿಗೆ ಸಿನಿಮಾ ವಿಷ್ಣು ವೃತ್ತಿಬದುಕಿನ ಮತ್ತೊಂದು ಯಶಸ್ವೀ ಪ್ರಯೋಗ ಎನಿಸಿಕೊಂಡಿತು.

ಸಿನಿಮಾ: ಹಾಲುಂಡ ತವರು (1994) ನಿರ್ದೇಶನ: ಡಿ.ರಾಜೇಂದ್ರ ಬಾಬು‌ ಸಂಗೀತ: ಹಂಸಲೇಖ

ಅತ್ಯುತ್ತಮ ಕೌಟುಂಬಿಕ, ಸದಭಿರುಚಿಯ ಚಿತ್ರವಾಗಿ ‘ಹಾಲುಂಡ ತವರು’ ದೊಡ್ಡ ಯಶಸ್ಸು ಕಂಡಿತು. ಹೃದಯವಂತ, ದಯಾಮಯಿ, ತ್ಯಾಗಜೀವಿ ಪಾತ್ರದಲ್ಲಿ ತೆರೆಯ ಮೇಲೆ ವಿಷ್ಣು ಕಾಣಿಸಿದ್ದರು. ಉತ್ತಮ ಕತೆ, ಹಂಸಲೇಖ ಅವರ ಸಾಹಿತ್ಯ, ಸಂಗೀತವೂ ಜೊತೆಯಾಗಿ ಚಿತ್ರ ಸೂಪರ್‌ಹಿಟ್‌ ಎನಿಸಿಕೊಂಡಿತು.

ಸಿನಿಮಾ: ಆಪ್ತಮಿತ್ರ (2004) ನಿರ್ದೇಶನ: ಪಿ ವಾಸು ಸಂಗೀತ: ಗುರುಕಿರಣ್‌

ಉತ್ತಮ ಸೈಕಾಲಾಜಿಕಲ್‌ ಥ್ರಿಲ್ಲರ್ ಚಿತ್ರವಾಗಿ ‘ಅಪ್ತಮಿತ್ರ’ ಎಲ್ಲರಿಗೂ ಇಷ್ಟವಾಯ್ತು. ಮನಃಶಾಸ್ತ್ರಜ್ಞನ ಪಾತ್ರದಲ್ಲಿ ನಟಿಸಿದ್ದ ವಿಷ್ಣು ಇಮೇಜ್‌ಗೆ ಚಿತ್ರದ ಪಾತ್ರ ಸೂಕ್ತವಾಗಿ ಹೊಂದಿಕೆಯಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಎನಿಸಿಕೊಂಡ ಚಿತ್ರದಲ್ಲಿನ ವಿಷ್ಣು ಪಾತ್ರ ಇತರೆ ಭಾಷೆಗಳ ಹೀರೋಗಳಿಗೆ ಸ್ಫೂರ್ತಿಯಾಯ್ತು. ಮುಂದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ‘ಆಪ್ತಮಿತ್ರ’ ರೀಮೇಕಾಯ್ತು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More