ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್‌ ಕುರಿತು ಮೌನ ಮುರಿದ ರಶ್ಮಿಕಾ ಮಂದಣ್ಣ‌

ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದುಬಿದ್ದ ನಂತರ ನಟಿ ರಶ್ಮಿಕಾ ಟ್ರಾಲ್‌ಗೆ ಒಳಗಾಗಿದ್ದರು. ಯಾವುದೇ ಪ್ರತಿಕ್ರಿಯೆ ನೀಡದ ನಟಿ ಇದೀಗ ಟ್ವಿಟರ್‌ನಲ್ಲಿ ಪ್ರಕರಣದ ಬಗ್ಗೆ ಬರೆದುಕೊಂಡಿದ್ದಾರೆ. ಸ್ಯಾಂಡಲ್‌ವುಡ್ ತೊರೆಯುವ ವದಂತಿಯಲ್ಲಿ ಹುರುಳಿಲ್ಲ ಎನ್ನುತ್ತಾರವರು

ನಟಿ ರಶ್ಮಿಕಾ ಮಂದಣ್ಣ ಕೆಲವು ದಿನಗಳಿಂದೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಲ್ಲಿದ್ದರು. ಅವರ ಕುರಿತಾಗಿ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ಕಮೆಂಟ್‌ಗಳು ಹರಿದಾಡಿದವು. ‘ಗೀತ ಗೋವಿಂದಂ’ ತೆಲುಗು ಚಿತ್ರದ ಯಶಸ್ಸು ಅವರಿಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಅವಕಾಶಗಳನ್ನು ತಂದುಕೊಟ್ಟಿದೆ. ಇದೇ ವೇಳೆ, ನಟ ರಕ್ಷಿತ್ ಜೊತೆಗಿನ ಅವರ ನಿಶ್ಚಿತಾರ್ಥ ಮುರಿದುಬಿದ್ದ ಸುದ್ದಿ ಹೊರಬಿದ್ದಿತು. ಯಶಸ್ಸು ಸಿಕ್ಕಿದಾಕ್ಷಣ ನಟಿ ಸಂಬಂಧ ಕಡಿದುಕೊಂಡರು ಎನ್ನುವ ಸಂದೇಶಗಳೆಲ್ಲ ಹರಿದಾಡಿದವು.

ತಮ್ಮ ಕುರಿತಾದ ಯಾವುದೇ ವಿವಾದ, ವದಂತಿಗಳ ಬಗ್ಗೆ ನಟಿ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಅವರು ಟ್ವಿಟರ್‌ನಲ್ಲಿ ಸಂದೇಶ ಹಾಕಿದ್ದಾರೆ. “ಕ್ಷಮಿಸಿ, ನಾನು ತುಂಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ಈ ಅವಧಿಯಲ್ಲಿ ನನ್ನ ಕುರಿತಂತೆ ಪ್ರಕಟವಾದ ಲೇಖನಗಳು, ಸೋಷಿಯಲ್ ಮೀಡಿಯಾದಲ್ಲಿನ ಕಮೆಂಟ್‌ಗಳನ್ನು ಓದುತ್ತಿದ್ದೆ. ಅಗತ್ಯಕ್ಕಿಂತ ಹೆಚ್ಚಾಗಿ ನನ್ನನ್ನು ಟ್ರೋಲ್ ಮಾಡಲಾಗುತ್ತಿದೆ ಎಂದು ಬೇಸರವಾಗಿತ್ತು. ಇದಕ್ಕಾಗಿ ನಾನು ಯಾರನ್ನೂ ದೂರುವುದಿಲ್ಲ. ಇದಕ್ಕೆ ನಾನು ಸಮರ್ಥನೆಗಳನ್ನು ನೀಡಲೂ ಸಾಧ್ಯವಿಲ್ಲ. ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ, ನನ್ನ ಕುರಿತಾದ ಪ್ರಕರಣಕ್ಕೂ ಬೇರೆ ಬೇರೆ ಆಯಾಮಗಳಿವೆ,” ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಜನುಮದಿನ | ನಟ ವಿಷ್ಣುವರ್ಧನ್‌ ವೃತ್ತಿಬದುಕಿನ ಮಹತ್ವದ ಹತ್ತು ಸಿನಿಮಾ

ನಾಯಕಿಪ್ರಧಾನ ಕನ್ನಡ ಸಿನಿಮಾ ‘ವೃತ್ರ’ದಲ್ಲಿ ಅವರು ನಟಿಸಬೇಕಿತ್ತು. ಫೋಟೋಶೂಟ್‌ ಕೂಡ ನಡೆದಿತ್ತು. ಬ್ರೇಕಪ್‌ ನಂತರ ಅವರು ಚಿತ್ರದಿಂದಲೂ ಹೊರನಡೆದರು. ರಶ್ಮಿಕಾ ಇನ್ನು ಮುಂದೆ ಕನ್ನಡ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ವದಂತಿಗೆ ಈ ಬೆಳವಣಿಗೆ ಕಾರಣವಾಯ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಅವರು, “ನಾನು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೇನೆ. ಯಾವುದೇ ಭಾಷೆಯ ಚಿತ್ರವಾಗಲಿ, ಆ ಚಿತ್ರದಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮ ಅಭಿನಯ ನೀಡಲು ಶ್ರಮಿಸುತ್ತೇನೆ,” ಎಂದಿದ್ದಾರೆ.

ವಿಜಯ್ ದೇವರಕೊಂಡ ಜೊತೆಗೆ ಅವರು ನಟಿಸಿದ ‘ಗೀತ ಗೋವಿಂದಂ’ ತೆಲುಗು ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಅವರು ನಟಿಸಿರುವ ‘ದೇವದಾಸ’ ತೆಲುಗು ಸಿನಿಮಾ ಈ ತಿಂಗಳ ಕೊನೆಯಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಅವರು ನಾಗಾರ್ಜುನ ಮತ್ತು ನಾನಿ ಅವರೊಂದಿಗೆ ನಟಿಸಿದ್ದಾರೆ. ಈ ಮಧ್ಯೆ, ವಿಜಯ್ ದೇವರಕೊಂಡ ನಟನೆಯ ‘ಡಿಯರ್ ಕಾಮ್ರೇಡ್‌’ ತೆಲುಗು ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More