ವಿವಾದಕ್ಕೆ ಆಸ್ಪದವಾಗಿದ್ದ ಚಿತ್ರದ ಶೀರ್ಷಿಕೆ ಬದಲಿಸಿದ ನಿರ್ಮಾಪಕ ಸಲ್ಮಾನ್ 

ಸಲ್ಮಾನ್ ಖಾನ್‌ ನಿರ್ಮಾಣದ ‘ಲವ್‌ರಾತ್ರಿ’ ಸಿನಿಮಾ ಶೀರ್ಷಿಕೆಯ ಕಾರಣಕ್ಕೆ ವಿವಾದಕ್ಕೀಡಾಗಿತ್ತು. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ ಎಂದು ಕೆಲವರು ದೂರು ದಾಖಲಿಸಿದ್ದರು. ಒತ್ತಡಗಳಿಗೆ ಮಣಿದ ಸಲ್ಮಾನ್ ಖಾನ್‌ ತಮ್ಮ ಚಿತ್ರದ ಶೀರ್ಷಿಕೆಯನ್ನು ‘ಲವ್‌ಯಾತ್ರಿ’ ಎಂದು ಬದಲಿಸಿದ್ದಾರೆ

ಬಾಲಿವುಡ್ ನಟ ಸಲ್ಮಾನ್ ಖಾನ್‌ ‘ಲವ್‌ರಾತ್ರಿ’ ಹಿಂದಿ ಸಿನಿಮಾ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಿಂದೂ ಧಾರ್ಮಿಕ ಸಂಘಟನೆಗಳ ಒತ್ತಡಕ್ಕೆ ಮಣಿದು ಅವರು ಚಿತ್ರದ ಶೀರ್ಷಿಕೆಯನ್ನು ‘ಲವ್‌ಯಾತ್ರಿ’ ಎಂದು ಬದಲಿಸಿದ್ದಾರೆ. ‘ಲವ್‌ರಾತ್ರಿ’ ಶೀರ್ಷಿಕೆ ಹಿಂದೂಗಳ ಧಾರ್ಮಿಕ ಹಬ್ಬ ನವರಾತ್ರಿಯನ್ನು ಅಣಕಿಸುವಂತಿದೆ ಎಂದು ಕೆಲವರು ದೂರು ದಾಖಲಿಸಿದ್ದರು. ಚಿತ್ರದ ನಿರ್ಮಾಪಕ ಸಲ್ಮಾನ್ ಖಾನ್ ಸೇರಿದಂತೆ ನಾಯಕ-ನಾಯಕಿ ಮೇಲೂ ದೂರು ದಾಖಲಾಗಿತ್ತು. ಅಂತಿಮವಾಗಿ ಶೀರ್ಷಿಕೆ ಬದಲಾಗಿದೆ. ಚಿತ್ರದ ನೂತನ ಶೀರ್ಷಿಕೆಯನ್ನು ಟ್ವೀಟ್ ಮಾಡಿರುವ ಸಲ್ಮಾನ್‌, “ಇದು ಸ್ಪೆಲ್ಲಿಂಗ್ ಮಿಸ್ಟೇಕ್‌ ಅಲ್ಲ” ಎಂದು ಸಂದೇಶ ಹಾಕಿದ್ದಾರೆ.

‘ಲವ್‌ಯಾತ್ರಿ’ ಚಿತ್ರದೊಂದಿಗೆ ಸಲ್ಮಾನ್‌ ತಮ್ಮ ಸಹೋದರಿಯ ಪತಿ ಆಯುಶ್ ಶರ್ಮಾ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಆಯುಶ್‌ಗೆ ಜೋಡಿಯಾಗಿ ವರೀನಾ ಹುಸೇನ್‌ ನಾಯಕಿಯಾಗಿ ನಟಿಸಿದ್ದು, ಶೀರ್ಷಿಕೆ ಕಾರಣಕ್ಕೆ ಸಿನಿಮಾ ಆರಂಭದಿಂದಲೂ ಸುದ್ದಿಯಲ್ಲಿತ್ತು. ನವರಾತ್ರಿ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕತೆ ಎಂದು ತಿಳಿಯುತ್ತಿದ್ದಂತೆ ಪ್ರತಿರೋಧ ಹೆಚ್ಚಾಯ್ತು. ಈ ಮೊದಲು ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಅವರು, “ಇದೊಂದು ಸುಂದರ ಶೀರ್ಷಿಕೆ. ಪ್ರೀತಿಗಿಂತ ಹೆಚ್ಚಿನದು ಯಾವುದೂ ಇಲ್ಲ. ಹಾಗಾಗಿ ಚಿತ್ರದ ಶೀರ್ಷಿಕೆ ಲವ್‌ರಾತ್ರಿ ಎಂದಿದೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನಮಗಿಲ್ಲ” ಎಂದಿದ್ದರು.

ಇದನ್ನೂ ಓದಿ : ಸಲ್ಮಾನ್‌ ನಿರ್ಮಾಣದ ‘ಲವ್‌ರಾತ್ರಿ’ ಸಿನಿಮಾ ಶೀರ್ಷಿಕೆಗೆ ಆಕ್ಷೇಪ, ದೂರು

“ಸೆನ್ಸಾರ್ ಬೋರ್ಡ್‌ ಸಲಹೆ ಮತ್ತು ದೂರುಗಳ ಹಿನ್ನೆಲೆಯಲ್ಲಿ ಚಿತ್ರತಂಡ ಶೀರ್ಷಿಕೆ ಬದಲಿಸಿದೆ. ವಿವಾದದಿಂದಾಗಿ ಅನಗತ್ಯವಾಗಿ ಚಿತ್ರದ ರಿಲೀಸ್‌ಗೆ ತೊಂದರೆ ತಂದುಕೊಳ್ಳುವುದನ್ನು ತಪ್ಪಿಸಲು ಸಲ್ಮಾನ್ ಈ ನಿರ್ಧಾರ ಕೈಗೊಂಡಿದ್ದಾರೆ” ಎನ್ನಲಾಗಿದೆ. ಗುಜರಾತಿನ ಆಚರಣೆ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಕತೆ ಹೆಣೆಯಲಾಗಿದೆ. ಆಯುಶ್ ಶರ್ಮಾ ಮತ್ತು ವರೀನಾ ಹುಸೇನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರೋನಿತ್‌ ರಾಯ್ ಮತ್ತು ರಾಮ್ ಕಪೂರ್‌ ಪ್ರಮುಖ ಪಾತ್ರಗಳಲ್ಲಿದ್ದು, ಅಕ್ಟೋಬರ್‌ 5ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More