ದೇವರಾಜ್‌ ಮಾತು | ಓಡಿಬಂದು ಖಳನನ್ನೇ ಅಪ್ಪಿಕೊಂಡ ‘ಆಗಂತುಕ’ ನಾಯಕಿ!

ರಂಗಭೂಮಿ ಹಿನ್ನೆಲೆಯ ಪ್ರತಿಭಾವಂತ ಚಿತ್ರನಟ ದೇವರಾಜ್‌ ಇಂದು (ಸೆ.20) 65ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ದೇವ್, ಮುಂದೆ ಹೀರೋ ಆಗಿಯೂ ಯಶಸ್ಸು ಕಂಡರು. ತಮ್ಮ ವೃತ್ತಿಬದುಕಿನ ಆರಂಭ ದಿನಗಳನ್ನು ಅವರಿಲ್ಲಿ ಸ್ಮರಿಸಿಕೊಂಡಿದ್ದಾರೆ

ನಿರ್ದೇಶಕ ಕೆ ವಿ ರಾಜು ತಮ್ಮ ‘ಕೂಗು’ ಚಿತ್ರದ ಪಾತ್ರವೊಂದಕ್ಕೆ ನಟನನ್ನು ಹುಡುಕುತ್ತಿದ್ದರು. ಅವಕಾಶಕ್ಕಾಗಿ ಹಾತೊರೆಯುತ್ತಿದ್ದ ನಾನು ಅವರೆದುರು ಹೋಗಿ ನಿಂತೆ. ಆ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅನಂತ ನಾಗ್ ನಟಿಸುತ್ತಿದ್ದರು. ಅನಂತ್ ನಟಿಸುವ ಚಿತ್ರದಲ್ಲಿ ಹೇಗಾದರೂ ಮಾಡಿ ಅವಕಾಶ ಗಿಟ್ಟಿಸಿಕೊಳ್ಳಬೇಕೆನ್ನುವ ಹಠ ನನ್ನದು. ಹಾಗಾಗಿ ನಿರ್ದೇಶಕ ರಾಜು ಅವರು ಕೇಳಿದ್ದಕ್ಕೆಲ್ಲಾ ಓಕೆ ಎಂದಿದ್ದೆ. ಚೆನ್ನಾಗಿ ಕಾರು ಓಡಿಸಬೇಕೆನ್ನುವ ಷರತ್ತಿನೊಂದಿಗೇ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿದ್ದರು.

ಬೆಂಗಳೂರಿನ ರಾಜಾಜಿನಗರದಲ್ಲಿ ‘ಕೂಗು’ ಚಿತ್ರೀಕರಣ ಆರಂಭವಾಯ್ತು. ಇನ್ಸ್‌ಪೆಕ್ಟರ್‌ ಪಾತ್ರದಲ್ಲಿದ್ದ ಅನಂತನಾಗ್ ಜೀಪು ಓಡಿಸುತ್ತಿದ್ದರು. ನಾನು ಕಾರು ಓಡಿಸಬೇಕಿತ್ತು. ನಡುಗುತ್ತಲೇ ಕಾರಿನ ಸ್ಟೇರಿಂಗ್ ಹಿಡಿದೆ. ನಿರ್ದೇಶಕ ರಾಜು ಅವರಿಗೆ ಆಗಲೇ ಅನುಮಾನ ಬಂದದ್ದು! ನಾನು ಕ್ಲಚ್ ಬಿಡೋದು ನೋಡುತ್ತಲೇ, ನನಗೆ ಕಾರು ಓಡಿಸಲು ಬರೋಲ್ಲ ಎನ್ನುವುದು ಅವರಿಗೆ ಸ್ಪಷ್ಟವಾಯ್ತು. ಸುಳ್ಳು ಹೇಳಿ ಅವಕಾಶ ಗಿಟ್ಟಿಸಿದ್ದ ನನ್ನ ಮೇಲೆ ರಾಜು ಅವರಿಗೆ ಕೋಪ ಬರಲಿಲ್ಲ, ಬದಲಿಗೆ ನಗತೊಡಗಿದರು. ಮತ್ತೊಂದೆಡೆ ಅನಂತ್‌ಗೆ ಕೋಪ. “ಯಾಕ್ರೀ ಇಂಥವರನ್ನು ಕರೆದುಕೊಂಡು ಬರ್ತೀರಿ?” ಎಂದು ಅವರು ಕೋಪ ಮಾಡಿಕೊಂಡರು.

ನಿರ್ದೇಶಕ ಕೆ ವಿ ರಾಜು ಕಾರು ಓಡಿಸಲು ಬೇರೆ ಪ್ಲ್ಯಾನ್ ಮಾಡಿದರು. ಕಾರಿನ ಡ್ರೈವರ್ ಸೀಟ್‌ನಲ್ಲಿ ಕುಳಿತು ಸ್ಟೇರಿಂಗ್ ನಾನು ಹಿಡಿದುಕೊಳ್ಳಬೇಕು. ನನ್ನ ಸೀಟ್ ಕೆಳಗೆ ಅನುಭವಿ ಡ್ರೈವರ್‌ವೊಬ್ಬ ಕುಳಿತು ಆ್ಯಕ್ಸಿಲರೇಟರ್, ಕ್ಲಚ್ ಆಪರೇಟ್ ಮಾಡಬೇಕು! ಒಂದೇ ಡ್ರೈವರ್ ಸೀಟ್‌ನಲ್ಲಿ ಇಬ್ಬರು ಡ್ರೈವರ್‌ಗಳು! ಕೊನೆಗೆ ಇದೇ ಅವತಾರದಲ್ಲಿ ಶೂಟಿಂಗ್ ನಡೆಯಿತು. ನಿಜಕ್ಕೂ ಇದೊಂದು ಅಪರೂಪದ ಸನ್ನಿವೇಶ! ಕೋಪಿಸಿಕೊಂಡಿದ್ದ ಅನಂತನಾಗ್ ಅವರಿಗೂ ನಗು ತಡೆಯಲಾಗಲಿಲ್ಲ.

ಖಳನನ್ನು ಅಪ್ಪಿಕೊಂಡ ನಾಯಕಿ: ಸುರೇಶ್ ಹೆಬ್ಳೀಕರ್ ನಿರ್ದೇಶಿಸಿ, ನಟಿಸಿದ್ದ ‘ಆಗಂತುಕ’ (1985) ಚಿತ್ರೀಕರಣದ ಸಂದರ್ಭ. ವನಿತಾ ವಾಸು ನಾಯಕಿಯಾಗಿದ್ದ ಚಿತ್ರದಲ್ಲಿ ನನಗೆ ಖಳಪಾತ್ರವಿತ್ತು. ಉತ್ತರ ಕನ್ನಡದ ಯಾಣ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಸನ್ನಿವೇಶವೊಂದರಲ್ಲಿ ನಟಿ ವನಿತಾ ವಾಸು ಅವರನ್ನು ನಾನು ಅಟ್ಟಿಸಿಕೊಂಡು ಹೋಗಬೇಕು. ನಿರ್ದೇಶಕ ಸುರೇಶ್ ಹೆಬ್ಳೀಕರ್ ಮತ್ತು ಕ್ಯಾಮೆರಾಮ್ಯಾನ್ ರಾಜು ಕೊಂಚ ಎತ್ತರದ ಪ್ರದೇಶದಲ್ಲಿ ನಿಂತು ನಿರ್ದೇಶನ ನೀಡುತ್ತಿದ್ದರು.

ನಿರ್ದೇಶಕ ಹೆಬ್ಳೀಕರ್ ಆ್ಯಕ್ಷನ್ ಹೇಳುತ್ತಿದ್ದಂತೆ, ಛಾಯಾಗ್ರಾಹಕ ರಾಜು ಚಿತ್ರೀಕರಣಕ್ಕೆ ಸಜ್ಜಾದರು. ನಟಿ ವನಿತಾ ವಾಸು, ಕೈಹಿಡಿದ ನನ್ನನ್ನು ದೂರ ತಳ್ಳಿ ಕಾಡಿನೊಳಗೆ ಓಡತೊಡಗಿದರು. ಒಂದಷ್ಟು ದೂರ ಓಡಿದ ನಟಿ ಅದೇ ಸ್ಪೀಡ್‌ನಲ್ಲಿ ವಾಪಸು ಓಡಿಬಂದರು! ಬಂದವರೇ ನನ್ನನ್ನು ಅಪ್ಪಿಕೊಂಡರು. ಆಗಿನ್ನೂ ಹೊಸಬನಾದ ನನಗೆ ನಿರ್ದೇಶಕರು ಬಯ್ಯುತ್ತಾರೆ ಎನ್ನುವ ಭಯ. ಅದಕ್ಕೆ ಸರಿಯಾಗಿ ಹೆಬ್ಳೀಕರ್, ‘ಶಾಟ್ ತೆಗೀತಾ ಇದೀವಿ. ಇವರೇನ್ರೀ ಹೀಗೆ ಮಾಡ್ತಾ ಇದಾರೆ! ಓಡಿ ಬಂದು ಖಳನನ್ನು ಅಪ್ಪಿಕೊಳ್ಳೋದೇ?” ಎಂದು ಗದರಿಕೊಂಡರು.

ನಿರ್ದೇಶಕರ ಮಾತು ಕೇಳಿಸಿಕೊಳ್ಳದ ವನಿತಾ ವಾಸು ಮಾತ್ರ ಕಣ್ಮುಚ್ಚಿಕೊಂಡು ಕಿರುಚಿಕೊಳ್ಳುತ್ತಿದ್ದರು! ಇದ್ಯಾಕೆ ಹೀಗಾಗುತ್ತಿದೆ ಎಂದು ನನಗೆ ಅರ್ಥವೇ ಆಗಲಿಲ್ಲ. ಅರೆಕ್ಷಣದಲ್ಲಿ ವನಿತಾ ವಾಸು ಓಡಿಹೋಗಿದ್ದ ಹಾದಿಯಲ್ಲಿ ನನಗೆ ಒಂದು ಕಾಡೆಮ್ಮೆ ಕಾಣಿಸಿತು! ಪರಿಸ್ಥಿತಿಯ ಅರಿವಾಗುತ್ತಿದ್ದಂತೆ ವನಿತಾ ಜೊತೆ ನಾನೂ ಓಡತೊಡಗಿದೆ. ನಿರ್ದೇಶಕರಾದಿಯಾಗಿ ಅಲ್ಲಿದ್ದವರೆಲ್ಲರೂ ದಿಕ್ಕಾಪಾಲಾದರು.

ದೇವರಾಜ್ ಅಭಿನಯದ ಸಿನಿಮಾ ಹಾಡುಗಳ ವಿಡಿಯೋ

ಲಾಕಪ್‌ ಡೆತ್‌

ಎಸ್‌ ಪಿ ಭಾರ್ಗವಿ

ಹಬ್ಬ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More