ಪ್ರತಿಭಟನೆಗೆ ಮಣಿದ ನಿರ್ದೇಶಕ ಕಶ್ಯಪ್‌; ‘ಮನ್‌ಮರ್ಝಿಯಾ’ ದೃಶ್ಯಗಳಿಗೆ ಕತ್ತರಿ

ಅನುರಾಗ್ ಕಶ್ಯಪ್ ನಿರ್ದೇಶನದ ‘ಮನ್‌ಮರ್ಝಿಯಾ’ ಹಿಂದಿ ಸಿನಿಮಾ ವಿವಾದ ತಣ್ಣಗಾಗಿದೆ. ಚಿತ್ರದಲ್ಲಿ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳಿವೆ ಎಂದು ಸಿಖ್ ಸಮುದಾಯ ಪ್ರತಿಭಟಿಸಿತ್ತು. ಇದಕ್ಕೆ ಮಣಿದ ಚಿತ್ರತಂಡ ಇದೀಗ ಆಕ್ಷೇಪಿತ ಮೂರು ದೃಶ್ಯಗಳಿಗೆ ಕತ್ತರಿ ಹಾಕಿದೆ

ಕಳೆದ ವಾರ ತೆರೆಕಂಡಿದ್ದ ‘ಮನ್‌ಮರ್ಝಿಯಾ’ ಹಿಂದಿ ಸಿನಿಮಾ ವಿವಾದಕ್ಕೆ ಗುರಿಯಾಗಿತ್ತು. ಚಿತ್ರದಲ್ಲಿ ತಮ್ಮ ಸಮುದಾಯಕ್ಕೆ ಧಕ್ಕೆ ತರುವಂತಹ ಸನ್ನಿವೇಶಗಳಿವೆ ಎಂದು ಸಿಖ್ ಸಮುದಾಯ ಪ್ರತಿಭಟನೆ ನಡೆಸಿತ್ತು. ಸಮುದಾಯವನ್ನು ಹಗುರವಾಗಿ ಚಿತ್ರಿಸಿರುವ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಪ್ರತಿಭಟನಾಕಾರರು ಒತ್ತಾಯಿಸಿ ದೂರು ದಾಖಲಿಸಿದ್ದರು. ಇದೀಗ ನಿರ್ಮಾಪಕರು ಚಿತ್ರದ ಮೂರು ದೃಶ್ಯಗಳನ್ನು ತೆಗೆದಿದ್ದಾರೆ.

ಆದರೆ, ಈ ಬಗ್ಗೆ ಬೇಸರಗೊಂಡಿರುವ ನಿರ್ದೇಶಕ ಕಶ್ಯಪ್‌, ಟ್ವಿಟರ್‌ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಖ್‌ ಯುವಕ-ಯುವತಿಯಾಗಿ ಕಾಣಿಸಿಕೊಂಡಿರುವ ಅಭಿಷೇಕ್ ಬಚ್ಚನ್ ಮತ್ತು ತಾಪಸಿ ಪನ್ನು ಸಿಗರೇಟು ಸೇದುವ ಎರಡು ದೃಶ್ಯಗಳಿವೆ. ಇವರಿಬ್ಬರೂ ವಧು-ವರರ ಪೋಷಾಕಿನಲ್ಲಿ ಗುರುದ್ವಾರ ಪ್ರವೇಶಿಸುತ್ತಾರೆ. ಆಗ ವಧು ಪಾತ್ರಧಾರಿ ತನ್ನ ಪ್ರಿಯತಮನನ್ನು ನೆನಪು ಮಾಡಿಕೊಳ್ಳುತ್ತಾಳೆ. ಈ ಮೂರು ದೃಶ್ಯಗಳ ಬಗ್ಗೆ ಸಿಖ್ ಸಮುದಾಯ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಮೂರೂ ದೃಶ್ಯಗಳನ್ನು ಚಿತ್ರದಿಂದ ತೆಗೆಯಲಾಗಿದೆ. ಅನುರಾಗ್ ಕಶ್ಯಪ್‌ ಟ್ವೀಟ್‌ನಲ್ಲಿ, “ಅಭಿನಂದನೆಗಳು. ಇಲ್ಲಿಂದ ಮುಂದೆ ಪಂಜಾಬ್‌ನ ಎಲ್ಲ ಸಮಸ್ಯೆಗಳು ಪರಿಹಾರವಾಗಿವೆ ಮತ್ತು ಸಿಖ್ ಯುವಕರು ಅಪಮಾನದಿಂದ ಪಾರಾಗಿದ್ದಾರೆ,” ಎಂದು ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫ್ಯಾಂಟಮ್‌ ಫಿಲ್ಮ್ಸ್‌, ಕಲರ್ ಯೆಲ್ಲೋ ಪ್ರೊಡಕ್ಷನ್ಸ್‌ ಮತ್ತು ಎರೋಸ್ ಇಂಟರ್‌ನ್ಯಾಷನಲ್‌ ನಿರ್ಮಾಣದ ‘ಮನ್‌ಮರ್ಝಿಯಾ’ ಚಿತ್ರದಲ್ಲಿ ಪಂಜಾಬ್‌ನ ನೇಟಿವಿಟಿಯಿದೆ. ಬಹುಪಾಲು ಚಿತ್ರೀಕರಣ ಅಮೃತಸರದಲ್ಲಿ ನಡೆದಿದೆ. ಕಳೆದ ವಾರ ತೆರೆಕಂಡ ಚಿತ್ರಕ್ಕೆ ಬಾಕ್ಸ್ ಅಫೀಸ್‌ನಲ್ಲಿ ಸೂಕ್ತ ಬೆಂಬಲ ವ್ಯಕ್ತವಾಗಿಲ್ಲ. ವಿವಾದದಿಂದಾಗಿ ಉತ್ತರ ಭಾರತದ ಕೆಲವು ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು. ಇದರಿಂದ ಎಚ್ಚೆತ್ತ ಚಿತ್ರ ನಿರ್ಮಾಪಕರು ತುರಾತುರಿಯಲ್ಲಿ ಚಿತ್ರದ ಮೂರು ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ.

ವಿವಾದದ ಬಗ್ಗೆ ಖೇದ ವ್ಯಕ್ತಪಡಿಸಿರುವ ನಿರ್ದೇಶಕ ಅನುರಾಗ್ ಕಶ್ಯಪ್‌, “ಚಿತ್ರದ ಸನ್ನಿವೇಶಗಳನ್ನು ಚಿತ್ರಿಸುವ ಮುನ್ನ ಸಿಖ್ ಮುಖಂಡರ ಸಲಹೆ-ಸೂಚನೆ ಪಡೆದಿದ್ದೆವು. ಸಿಗರೇಟು ಸೇದುವ ಮುನ್ನ ಚಿತ್ರದ ನಾಯಕ ಟರ್ಬನ್ ತೆಗೆಯುತ್ತಾನೆ. ಸಿಖ್ ಸಮುದಾಯದ ಹಿರಿಯರ ಸಲಹೆಯಂತೆಯೇ ನಾವು ಈ ದೃಶ್ಯ ಚಿತ್ರಿಸಿದ್ದು. ಇಲ್ಲಿ ನಾವು ಸಿಖ್‌ ಜನರ ಭಾವನೆಗಳಿಗೆ ಧಕ್ಕೆ ತಂದಿಲ್ಲ. ಇದೊಂದು ಅನಗತ್ಯ ವಿವಾದ,” ಎಂದಿದ್ದಾರೆ. ಚಿತ್ರದ ನಾಯಕಿ ತಾಪಸಿ ಪನ್ನು ಅವರೂ ಟ್ವಿಟರ್‌ನಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More