ದೇಶ, ಧರ್ಮಗಳ ಗಡಿ ಮೀರಿದ ಸತ್ಯ ಮತ್ತು ಮಾನವೀಯತೆ ಎತ್ತಿಹಿಡಿವ ಚಿತ್ರ ‘ಮಂಟೋ’

ನಂದಿತಾ ದಾಸ್‌ ನಿರ್ದೇಶನದಲ್ಲಿ ತೆರೆಕಂಡಿರುವ ‘ಮಂಟೋ’ ತೀವ್ರವಾಗಿ ಕಾಡುವ ಚಿತ್ರವಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ರಾಜಕೀಯ ಸಂದಿಗ್ದ ಹಾಗೂ ಸಂಕೀರ್ಣ ಕಾಲಕ್ಕೆ ನಾವು ಕಂಡುಕೊಳ್ಳಬೇಕಾದ ಸತ್ಯಗಳನ್ನು ಈ ಸಿನಿಮಾ ಸ್ಪಷ್ಟವಾಗಿ ನೆನಪಿಸುತ್ತದೆ. ಹಾಗಾಗಿ ಇದು ಅಗತ್ಯವಾಗಿ ನೋಡಲೇಬೇಕಾದ ಚಿತ್ರ

ಇದು ಸತ್ಯದ ಕಾಲವಲ್ಲ. ಸುಳ್ಳು ಸುದ್ದಿಗಳ ಕಾಲ. ಬದಲಿ ಸತ್ಯಗಳ ಕಾಲ. ಈಗ ಸತ್ಯವನ್ನಾಡುವವರೇ ಅನುಮಾನದ ಸುಳಿಗೆ ಸಿಲುಕುವಂತೆ ಮಾಡುವ ಕಾಲ. ಸುಳ್ಳಿನ ರಾಜಕಾರಣದ ಮುಂದೆ ಸತ್ಯ ಕಾಲು ಮುರಿದುಕೊಂಡು ಬಿದ್ದಿದೆ. ಸುಳ್ಳು ಬದಲಿ ಸತ್ಯವಾಗಿ ಹೊಸ ಕಾಲದ ರೂಪಗಳಲ್ಲಿ ಕುಣಿಕುಣಿದು ವ್ಯಾಪಿಸಿಕೊಳ್ಳುತ್ತದೆ. ರಾಷ್ಟ್ಟೀಯತೆ ಹೆಸರಲ್ಲಿ, ಧರ್ಮದ ಹೆಸರಿನಲ್ಲಿ, ಸಂಪ್ರದಾಯದ ಹೆಸರಿನಲ್ಲಿ ನಾವೇ ಕಟ್ಟಿಕೊಂಡ ಚೌಕಟ್ಟುಗಳು ನಮ್ಮನ್ನೇ ಕಟ್ಟಿಹಾಕುವಂತೆ ಬಲಗೊಳ್ಳುತ್ತಿರುವಾಗ ಮಾನವೀಯತೆ, ವಾಸ್ತವತೆ ಎಂಬುದು ಅಪರಾಧವಾಗಿ ಕಾಣಲಾರಂಭಿಸುತ್ತದೆ.

ಈಗ್ಗೆ ಏಳೆಂಟು ದಶಕಗಳ ಹಿಂದೆ ಬದುಕಿದ್ದ ದೊಡ್ಡ ಕತೆಗಾರ ಹಸನ್‌ ಸದತ್‌ ಮಂಟೋ ಬದುಕು ಮತ್ತು ಆತನ ಕಾಲಘಟ್ಟ, ಮೇಲೆ ಹೇಳಿದ ಸಂದಿಗ್ದಗಳಿಂದ ಹೊರತಾಗಿರಲಿಲ್ಲ. ಸ್ವಾತಂತ್ರ್ಯಾನಂತರ ಭಾರತ ದೇಶ ಎರಡು ಭಾಗವಾಯಿತು. ಧರ್ಮದ ಹೆಸರಿನಲ್ಲಿ ಪ್ರಜೆಗಳನ್ನು ಗಡಿಯ ಆಚೀಚೆ ಬಲವಂತವಾಗಿ ನೂಕಲಾಯಿತು. ಅನೇಕರಿಗೆ ಇಷ್ಟವಿಲ್ಲದಿದ್ದರೂ ಅಸ್ತಿತ್ವದ ಕಾರಣಕ್ಕೆ ಇನ್ನೊಂದು ನೆಲವನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ಮಂಟೋ ಕೂಡ ಅಂಥ ಸಂದರ್ಭವನ್ನು ಎದುರಿಸಿ, ನಲವತ್ತೆರಡೇ ವಯಸ್ಸಿಗೆ ಕಾಲವಾದವರು.

ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ, ರಾಷ್ಟ್ರೀಯತೆಯಲ್ಲಿ ಹುಸಿ ಭ್ರಮೆಗಳನ್ನು ಬಿತ್ತುತ್ತಿರುವ, ರಾಜಕೀಯ ಅವಕಾಶವಾದಿತನಕ್ಕಾಗಿ ಹೊಸೆದ ಸುಳ್ಳುಗಳಿಂದ ಹಿಂಸೆ ಹಬ್ಬುತ್ತಿರುವ ಈ ಹೊತ್ತಲ್ಲಿ ಮಂಟೋ ಬದುಕನ್ನು ನೆನಪಿಸಿಕೊಳ್ಳುವುದು ನಂದಿತಾ ದಾಸ್‌ ಅವರಿಗೆ ಅಗತ್ಯವೆನಿಸಿರುವುದರಲ್ಲಿ ಅಚ್ಚರಿ ಇಲ್ಲ. ಅದು ಈಗಿನ ತುರ್ತು ಎಂದು ಭಾವಿಸಿ ಪರಿಶ್ರಮದಿಂದ ನಿರ್ದೇಶಿಸಿ ತೆರೆಗೆ ತಂದಿದ್ದಾರೆ. ಆ ಬದ್ಧತೆ ಚಿತ್ರದಲ್ಲಿ ಕಾಣಿಸುತ್ತದೆ.

ದೇಶ ಎರಡಾಗಿ ತಾನೆಲ್ಲಿ ಹೋಗಬೇಕೆಂದು ತಿಳಿಯದೆ ಗಡಿಯ ನಡುವಿನ ಮಾನವರಹಿತ ಜಾಗದಲ್ಲಿ ಬೀಳುವ ತೋಬಾ ಟೇಕ್‌ಸಿಂಗ್‌, ಸತ್ತ ಯುವತಿಯ ಮೇಲೆ ಅತ್ಯಾಚಾರವೆಸಗಿ ಪಾಪಪ್ರಜ್ಞೆಗೆ ಬೀಳುವ ಧರ್ಮಾಂಧ, ಸಂತ್ರಸ್ತ ಹೆಣ್ಣನ್ನು ರಕ್ಷಿಸುವ ನೆಪದಲ್ಲಿ ಶೋಷಿಸುವ ಕತೆಗಳನ್ನು ಕೊಟ್ಟವರು ಮಂಟೋ. ಆ ಕತೆಗಳ ಮಾನವೀಯ ತುಡಿತಗಳನ್ನು ಮಂಟೋ ಬದುಕಿನೊಂದಿಗೆ ಹೊಸೆದು ಚಿತ್ರವನ್ನು ಕಟ್ಟಿದ್ದಾರೆ ನಂದಿತಾ ದಾಸ್‌.

ವೇಶ್ಯೆಯರ ಬಗ್ಗೆ, ಕಾಮದ ಬಗ್ಗೆ ನಿರ್ಭಿಡೆಯಿಂದ ಬರೆದ ಕಾರಣಕ್ಕೆ ಸೆನ್ಸೇಷನ್‌ ಆಗಿಬಿಡುವ ಮಂಟೋ, ವಾಸ್ತವದಲ್ಲಿ ಸಮಾಜದಲ್ಲಿ ನಡೆಯುತ್ತಿರುವುದನ್ನು ಯಾವುದೇ ಉತ್ಪ್ರೇಕ್ಷೆ, ಅಲಂಕಾರಗಳಿಲ್ಲದೆ, ಸತ್ಯವನ್ನೇ ಹೇಳಬೇಕೆಂಬ ನಿಲುವಿನವರು. ಅದೇ ಕಾರಣಕ್ಕೆ ಕೇಸುಗಳನ್ನು ಎದುರಿಸುವವರು. ಎಲ್ಲದರಲ್ಲೂ ಆಶಾವಾದವನ್ನು ಕಾಣುವ ಹುಸಿ ಆದರ್ಶದ ಪ್ರಗತಿಪರತೆ, ಕಾಮ್ರೇಡ್‌ಗಳ ಅವಕಾಶವಾದಿತನವನ್ನು ಟೀಕಿಸುತ್ತಾರೆ.

ಮುಂಬೈನಲ್ಲಿದ್ದಾಗ ಚಿತ್ರರಂಗದಲ್ಲಿ ಕೆಲಸ ಮಾಡುತ್ತ ಚಂದ ಬದುಕು ಕಟ್ಟಿಕೊಂಡ ಮಂಟೋ, ದೇಶ ವಿಭಜನೆಯ ಬಳಿಕ, ತನ್ನ ವಿಶ್ವಾಸದ ಗೆಳೆಯನೇ ಧರ್ಮದ ಕಾರಣಕ್ಕೆ ಕೊಲ್ಲಲು ಸಿದ್ಧ ಎಂಬುದನ್ನು ತಿಳಿದ ಮೇಲೆ ಆಘಾತಗೊಂಡು ಪಾಕಿಸ್ತಾನಕ್ಕೆ ಹೋಗಿಬಿಡುತ್ತಾರೆ. ದೇಶ ವಿಭಜನೆ ಸೃಷ್ಟಿಸಿದ ಕ್ರೌರ್ಯ, ಸಾವು, ಧರ್ಮ, ರಾಷ್ಟ್ರದ ಹುಸಿ ಕಲ್ಪನೆಗಳು ಮನುಷ್ಯ-ಮನುಷ್ಯರ ನಡುವೆ ಹುಟ್ಟಿಸಿದ ಅಪನಂಬಿಕೆಗಳಿಂದ ಕಂಗೆಡುವ ಮಂಟೋ, ತಮ್ಮ ಕತೆಗಳಲ್ಲಿ ಆ ಸಂಕಟಗಳನ್ನು ಹೊರಹಾಕುತ್ತಾರೆ. ಬರೆದೇ ಬದುಕುವ ಅವರ ಪ್ರಯತ್ನದಲ್ಲಿ ವೈಯಕ್ತಿಕ ಬದುಕು ಸಂಕಟಗಳ ಸುಳಿಗೆ ಸಿಲುಕುತ್ತದೆ. ಕುಡಿತದ ವ್ಯಸನದಿಂದ ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ.

ಹಿಂದೂ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿದ್ದರೆ, “ಪಾಕಿಸ್ತಾನಕ್ಕೆ ಹೋಗು,” ಎನ್ನುವ ಉಗ್ರತ್ವ ತುಂಬಿದ ಕಾಲದಲ್ಲಿ ನಂದಿತಾ ದಾಸ್‌ ಎರಡು ದೇಶಗಳ ಮನಸ್ಸುಗಳು ವಿವಿಧ ಸೂಕ್ಷ್ಮ ಸಂದರ್ಭಗಳಲ್ಲಿ ಸ್ಪಂದಿಸುವ ರೀತಿಯಲ್ಲೇ ಮನುಷ್ಯತ್ವ ಎಲ್ಲಕ್ಕಿಂತ ದೊಡ್ಡದು ಎನ್ನುವುದನ್ನು ಕಟ್ಟಿಕೊಡುತ್ತಾರೆ. ಕೊಂದೇಬಿಡುತ್ತಿದ್ದೆ ಎಂದ ಗೆಳೆಯನೇ ಸಾಯುವವರೆಗೂ ಪಾಕಿಸ್ತಾನ ಸೇರಿದ ಮಂಟೋಗೆ ಹಣ ಕಳಿಸುವುದು, ಗಾಂಧಿ ಹತ್ಯೆಯ ವಿಷಯವನ್ನು ಪಾಕಿಸ್ತಾನದ ಮುಸ್ಲಿಂ ಯುವಕನೊಬ್ಬ ಒರಟಾಗಿ ಘೋಷಿಸಿದಾಗ, ಹಿರಿಯನೊಬ್ಬ ಬೈಯ್ಯುವುದು ನಿಜಕ್ಕೂ ಮಹತ್ವದ ಸಂಗತಿಗಳಾಗಿ ಚಿತ್ರಕ್ಕೆ ಜೀವ ತುಂಬುತ್ತವೆ.

ಸ್ನೇಹಿತ ಶ್ಯಾಮ್‌, ಸಮಕಾಲೀನ ಕತೆಗಾರ್ತಿ ಮತ್ತು ಗೆಳತಿ ಇಸ್ಮತ್‌ ಚುಗ್ತಾಯಿ, ಆ ಕಾಲದ ಸೂಪರ್ ಸ್ಟಾರ್‌ ಆಶೋಕ್‌ ಕುಮಾರ್‌, ಕವಿ ಫೈಜ್‌ ಅಹ್ಮದ್‌ ಫೈಜ್‌ ಮಂಟೋ ಬದುಕಿನ ವಿಸ್ತಾರ, ಅಗಾಧತೆಯನ್ನು ಪರಿಚಯಿಸುತ್ತಾರೆ.

ಮಂಟೋ ಪಾತ್ರದಲ್ಲಿ ನವಾಜುದ್ದೀನ್‌ ಸಿದ್ದಿಕಿ ಅಚ್ಚಳಿಯದೆ ಉಳಿಯುತ್ತಾರೆ. ತಮ್ಮ ಪಾತ್ರವೈವಿಧ್ಯಗಳಿಂದ ಮಿಂಚಿರುವ ಸಿದ್ದಿಕಿ ಅವರ ವೃತ್ತಿಜೀವನದ ಸವಾಲಿನ ಹಾಗೂ ಶ್ರೇಷ್ಠ ಪಾತ್ರವಿದು ಎಂಬುದರಲ್ಲಿ ಎರಡು ಮಾತಿಲ್ಲ. ಆವಾಹಿಸಿಕೊಂಡಂತೆ ಮಂಟೋ ವ್ಯಕ್ತಿತ್ವವನ್ನು ತೆರೆಯ ಮೇಲೆ ಬದುಕಿದ್ದಾರೆ. ಸ್ವತಃ ಕತೆಗಾರ ಮಂಟೋ ತಮ್ಮದೊಂದು ಲೇಖನದಲ್ಲಿ ಸಿನಿಮಾದ ನಾಯಕರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳುತ್ತ, ನಮಗೆ ಒಪ್ಪುವಂತೆ ಸಹಜ, ಸಾಮಾನ್ಯ, ಆಪ್ತವಾದ ಪಾತ್ರವಾಗಬೇಕೆಂದು ಹೇಳುತ್ತಾರೆ. ಸಿದ್ಧಿಕಿ ಈ ಚಿತ್ರದ ನಾಯಕನಾಗಿ ಅಷ್ಟೇ ಸರಳ, ಸಹಜ, ಹಾಗೂ ಗಾಢವಾಗಿ ಕಾಡುವ ವ್ಯಕ್ತಿಯಾಗಿ ಉಳಿಯುತ್ತಾರೆ.

ಇದನ್ನೂ ಓದಿ : ಹಿಂದಿ ಸಿನಿಮಾಗಳನ್ನು ನೋಡುವುದೇ ಇಲ್ಲ ಎಂದಿದ್ದರು ಮಂಟೋ!

ಮಂಟೋ ಪತ್ನಿ ಸಫಿಯಾ ಆಗಿ ನಟಿಸಿರುವ ರಸಿಕಾ ದುಗಾಲ್‌, ನಿರ್ಮಾಪಕರಾಗಿ ಕಾಣಿಸಿಕೊಂಡಿರುವ ರಿಶಿ ಕಪೂರ್‌, ಶ್ಯಾಮ್‌ ಛಡ್ಡಾ ಆಗಿ ಕಾಣಿಸಿಕೊಂಡಿರುವ ತಾಹೀರ್‌ ರಾಜ್‌ ಭಾಸಿನ್‌, ಜೊತೆಗೇ ಜಾವೇದ್‌ ಅಖ್ತರ್‌, ಪರೇಶ್‌ ರಾವಲ್‌, ರಣವೀರ್‌ ಶೋರೆ, ದಿವ್ಯಾ ದತ್ತ, ನೀರಜ್‌ ಕನಿ, ಭಾನು ಉದಯ್‌, ರಾಜಶ್ರೀ ದೇಶಪಾಂಡೆ, ಶಶಾಂಕ್‌ ಅರೋರ, ವಿಜಯ್‌ ವೆರ್ನಾ ತಮ್ಮ ಪಾತ್ರಗಳನ್ನು ನೆನಪಿನಲ್ಲಿ ಉಳಿಸುತ್ತಾರೆ.

ನಂದಿತಾ, ಮಂಟೋ ಬದುಕಿನ ಕತೆಯನ್ನು ಹೇಳುವ ಜೊತೆಗೇ, ಅವರ ಕತೆಗಳ ಕತೆಯನ್ನೂ ಪ್ರೇಕ್ಷಕನಿಗೆ ಮುಟ್ಟಿಸುತ್ತಾರೆ. ಸ್ವತಃ ಈ ಪಾತ್ರಗಳ ನಡುವೆ ಓಡಾಡುವ ಮಂಟೋ, ನಮ್ಮೊಳಗೆ ಅಚ್ಚಳಿಯದ ಪಾತ್ರವಾಗಿ ನಿಲ್ಲುತ್ತಾರೆ.

ಝಾಕಿರ್‌ ಹುಸೇನ್‌ ಹಿನ್ನೆಲೆ ಸಂಗೀತ, ರೆಸೂಲ್‌ ಪೂಕುಟ್ಟಿ ಅವರ ಸೌಂಡ್‌ ಡಿಸೈನ್‌ , ಕಾರ್ತಿಕ್‌ ಅವರ ಕ್ಯಾಮೆರಾ ಕೆಲಸ ಅತಿ ರಂಜನೆಯಿಲ್ಲದೆ ಗಾಢವಾಗಿ ಆವರಿಸಿಕೊಳ್ಳುತ್ತದೆ.

'ಧರ್ಮ ಹೃದಯದಿಂದ ಮಿದುಳಿಗೆ ಏರಿದ ಮೇಲೆ' ಎಂದು ಸಂಕಟದಿಂದ ಹೇಳುವ ಮಂಟೋ, ಒಬ್ಬ ಕತೆಗಾರನಾಗಿ ಅಷ್ಟೇ ಅಲ್ಲ, ಆಧುನಿಕ ಭಾರತ ಇತಿಹಾಸದ ಮಹತ್ವದ ಘಟ್ಟಕ್ಕೆ ಸಾಕ್ಷಿಯಾದ ಲೇಖಕನಾಗಿ 'ಕಂಡಿದ್ದನ್ನು ಹಾಗೇ ದಾಖಲಿಸಬೇಕು' ಎಂದು ನಂಬಿ ಬರೆದಾತ. ಅಂಥ ಮಂಟೋವನ್ನು ಈ ಚಿತ್ರದ ಮೂಲಕ ಸಮಕಾಲೀನ ಯುವ ಸಮುದಾಯಕ್ಕೆ ಪರಿಚಯಿಸಿದಂತಾಗಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More