ಆಸ್ಕರ್‌ಗೆ ನಾಮನಿರ್ದೇಶನಗೊಂಡ ಅಸ್ಸಾಮಿ ಸಿನಿಮಾ ‘ವಿಲೇಜ್‌ ರಾಕ್‌ಸ್ಟಾರ್ಸ್‌’

ಅಸ್ಸಾಮಿ ಸಿನಿಮಾ ‘ವಿಲೇಜ್ ರಾಕ್‌ಸ್ಟಾರ್ಸ್‌‌’ ಈ ಬಾರಿ ಭಾರತದಿಂದ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ರೀಮಾ ದಾಸ್ ನಿರ್ದೇಶನದ ಚಿತ್ರವನ್ನು ಸಿನಿಮಾ ತಜ್ಞರು ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗಕ್ಕೆ ಆಯ್ಕೆ ಮಾಡಿದ್ದಾರೆ. ಗಿಟಾರ್‌ ಕುರಿತು ಕನಸು ಕಾಣುವ ಹಳ್ಳಿ ಹುಡುಗಿಯೊಬ್ಬಳ ಕತೆ ಇದು

ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಭಾರತದಿಂದ ಆಸ್ಕರ್‌ಗೆ ‘ವಿಲೇಜ್‌ ರಾಕ್‌ಸ್ಟಾರ್ಸ್‌’ ಅಸ್ಸಾಮಿ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ರೀಮಾ ದಾಸ್ ನಿರ್ದೇಶನದ ಈ ಚಿತ್ರ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು. ಕನ್ನಡ ಚಿತ್ರನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ನೇತೃತ್ವದ ಹನ್ನೆರೆಡು ಸದಸ್ಯರ ಫಿಲ್ಮ್ ಫೆಡರೇಷನ್‌ ಆಫ್ ಇಂಡಿಯಾ ಕಮಿಟಿ ‘ವಿಲೇಜ್‌ ರಾಕ್‌ಸ್ಟಾರ್ಸ್‌‌’ ಚಿತ್ರವನ್ನು ಆಯ್ಕೆ ಮಾಡಿದೆ. ಒಟ್ಟು ಇಪ್ಪತ್ತೆಂಟು ಚಿತ್ರಗಳು ಪಟ್ಟಿಯಲ್ಲಿದ್ದವು. ಚಿತ್ರಕತೆ, ನಿರೂಪಣೆ ಸೇರಿದಂತೆ ಚಿತ್ರದ ಇತರ ಆಯಾಮಗಳನ್ನು ಗಮನಿಸಿ ಕಮಿಟಿ ಈ ನಿರ್ಧಾರಕ್ಕೆ ಬಂದಿದೆ.

ಹಿಂದಿ ಚಿತ್ರಗಳಾದ ‘ರಾಝಿ’ (ನಿರ್ದೇಶಕಿ ಮೇಘನಾ ಗುಲ್ಜಾರ್‌), ಹಿಚ್ಕಿ (ಸಿದ್ಧಾರ್ಥ್‌ ಮಲ್ಹೋತ್ರಾ) ‘ಪದ್ಮಾವತ್‌’ (ಸಂಜಯ್ ಲೀಲಾ ಬನ್ಸಾಲಿ), ‘ಬಯೋಸ್ಕೋಪ್‌ವಾಲಾ’ (ದೇವ್‌ ಮೇಧಾಕರ್‌), ‘ಲವ್‌ ಸೋನಿಯಾ’ (ತಬ್ರೀಜ್‌ ನೂರಾನಿ), ‘ಮಹಾನಟಿ’ (ತೆಲುಗು, ಅಶ್ವಿನ್ ನಾಗ್‌), ‘ತುಂಬಡ್‌’ (ರಾಹಿ ಬಾರ್ವೆ), ‘ಟು ಲೆಟ್‌’ (ತಮಿಳು, ಚೆಝಿಯಾನ್‌), ‘ರಂಗಸ್ಥಳಂ’ (ತೆಲುಗು, ಸುಕುಮಾರ್‌), ‘ರೇವಾ’ (ಗುಜರಾತಿ, ರಾಹುಲ್ ಭೋಲ್‌ ಮತ್ತು ವಿನೀತ್ ಕನೋಜಿಯಾ) ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅಸ್ಸಾಮಿನ ಗ್ರಾಮವೊಂದರ ಹುಡುಗಿ ಧನು, ಗಿಟಾರ್‌ ಖರೀದಿಸುವ ಮತ್ತು ಹಳ್ಳಿಯಲ್ಲಿ ರಾಕ್‌ ಬ್ಯಾಂಡ್‌ ಕಟ್ಟುವ ಕನಸಿನ ಕತೆ ಇದು.

ನಿರ್ದೇಶಕಿ ರೀಮಾ ದಾಸ್ ಚಿತ್ರದ ನಿರ್ಮಾಪಕಿ ಮತ್ತು ಸಂಕಲಕಾರ್ತಿಯೂ ಹೌದು. ಮುಂದಿನ ವಾರ ಸೆಪ್ಟೆಂಬರ್‌ 28ರಂದು ಭಾರತದಲ್ಲಿ ತೆರೆಕಾಣಲಿದೆ. ಹಲವಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ರಾಜ್ಯ ಪ್ರಶಸ್ತಿ ಸಂದಿದೆ. ಆಸ್ಕರ್‌ಗೆ ನಾಮನಿರ್ದೇಶನಗೊಂಡ ಮೊದಲ ಅಸ್ಸಾಮಿ ಚಿತ್ರವಿದು. ‘ರಾಕ್‌ಸ್ಟಾರ್‌’ ರೀಮಾ ದಾಸ್‌ ನಿರ್ದೇಶನದ ಎರಡನೇ ಸಿನಿಮಾ. ‘ಅಂತರ್‌ದೃಷ್ಟಿ’ (2016) ಚಿತ್ರದೊಂದಿಗೆ ನಿರ್ದೇಶಕಿಯಾದ ಅವರ ಇತ್ತೀಚಿನ ‘ಬುಲ್‌ಬುಲ್ ಕ್ಯಾನ್ ಸಿಂಗ್‌’ (2018) ಸಿನಿಮಾ ಕಳೆದ ತಿಂಗಳು ಟೊರಾಂಟೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು.

‘ವಿಲೇಜ್‌ ರಾಕ್‌ಸ್ಟಾರ್ಸ್‌‌’ ಸಿನಿಮಾ ಆಸ್ಕರ್‌ನಲ್ಲಿ ಹಲವು ವಿದೇಶಿ ಸಿನಿಮಾಗಳೊಂದಿಗೆ ಸ್ಪರ್ಧಿಸಬೇಕಿದೆ. ಆಲ್ಫನ್ಸೋ ಕುವಾರಾನ್ ನಿರ್ದೇಶನದ ಆಟೋಬಯೋಗ್ರಫಿಕಲ್ ಡ್ರಾಮಾ ‘ರೋಮಾ’ (ಮೆಕ್ಸಿಕೋ), ಇರಾಮ್‌ ಹಕ್‌ ಅವರ ‘ವಾಟ್ ವಿಲ್ ಪೀಪಲ್ ಸೇ’, ಯಾಸ್ಮಿನ್ ಚೌಕಿ ಅವರ ‘ಅಂಟಿಲ್ ದಿ ಎಂಡ್ ಆಫ್‌ ದಿ ಟೈಂ’ (ತೈವಾನ್‌), ವಾಹಿದ್‌ ಜಲೀಲ್‌ವಾಂದ್‌ ಅವರ ‘ಡ್ರಾಮಾ ನೋ ಡೇಟ್, ನೋ ಸಿಗ್ನೇಚರ್’ (ಇರಾನ್‌), ನೆಲ್ಸನ್‌ ಕಾರ್ಲೋಸ್‌ ಡೆ ಲಾಸ್‌ ಅವರ ‘ಕೊಕೊಟೆ’ (ಡಾಮಿನಿಕಾನ್ ರಿಪಬ್ಲಿಕ್‌), ಅಬು ಬಾಕರ್‌ ಶಾಕಿ ನಿರ್ದೇಶನದ ‘ಯೊಮೆದ್ದೀನ್‌’ (ಈಜಿಪ್ಟ್‌) ಮತ್ತು ಸಿಲ್ವಿಯೋ ಕೈಝಿ ಅವರ ‘ಅಂಡ್ ಸಡನ್ಲೀ ದಿ ಡಾನ್’ (ಚಿಲಿ) ಚಿತ್ರಗಳೊಂದಿಗೆ ‘ವಿಲೇಜ್‌ ರಾಕ್‌ಸ್ಟಾರ್ಸ್‌’ ಸ್ಪರ್ಧಿಸಬೇಕಿದೆ. ‌

‌ ಸೆಬಾಸ್ಟಿಯನ್ ಲಿಲಿಯೋ ನಿರ್ದೇಶನದ ಚಿಲಿ ದೇಶದ ‘ಎ ಫಂಟಾಸ್ಟಿಕ್ ವುಮನ್‌’ ಸಿನಿಮಾ 2018ರ ವಿದೇಶಿ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿತ್ತು. ಭಾರತಕ್ಕೆ ಇಲ್ಲಿವರೆಗೆ ಈ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿಲ್ಲ. ‘ಕೋರ್ಟ್‌’ (2015), ‘ವಿಸಾರಣೈ’ (2016), ‘ನ್ಯೂಟನ್‌’ (2017) ಚಿತ್ರಗಳು ಕಳೆದ ವರ್ಷಗಳಲ್ಲಿ ಭಾರತದಿಂದ ನಾಮನಿರ್ದೇಶನಗೊಂಡಿದ್ದವು. ಅಕಾಡೆಮಿ ಆಫ್ ಮೋಷನ್‌ ಪಿಕ್ಚರ್‌ ಆರ್ಟ್ಸ್‌ ಮತ್ತು ಸೈನ್ಸನ್‌ ಶಾರ್ಟ್‌ಲಿಸ್ಟ್‌ ಆದ ಐದು ಸಿನಿಮಾಗಳ ಪಟ್ಟಿಯಲ್ಲಿ ವಿಜೇತರ ಆಯ್ಕೆ ಮಾಡುತ್ತದೆ. ಇಲ್ಲಿವರೆಗೆ ಭಾರತದ ‘ಮದರ್ ಇಂಡಿಯಾ’ (1957), ‘ಸಲಾಂ ಬಾಂಬೆ’ (1988) ಮತ್ತು ‘ಲಗಾನ್‌’ (2001) ಮೂರು ಚಿತ್ರಗಳು ಮಾತ್ರ ಶಾರ್ಟ್‌ಲಿಸ್ಟ್‌ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದವು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More