ತಪ್ಪುಗಳಿಂದ ಪಾಠ ಕಲಿಯದೆ ದುನಿಯಾದ ಅಭಿಮಾನ ಕಳೆದುಕೊಂಡರೇ ವಿಜಯ್?

ಹುಂಬತನ, ದಾಷ್ಟ್ಯದಿಂದಾಗಿ ವಿಜಯ್‌ ಸಾರ್ವಜನಿಕ ಬದುಕು ಆಡಿಕೊಳ್ಳುವಂತಾಗಿದೆ. ಅವರು ಅಭಿಮಾನಿಗಳ ಎದುರು ತಲೆತಗ್ಗಿಸುವಂತಹ ಸಂದರ್ಭಗಳನ್ನು ಪದೇಪದೇ ಸೃಷ್ಟಿಸಿಕೊಳ್ಳುತ್ತಲೇ ಇದ್ದಾರೆ. ತಪ್ಪುಗಳಿಂದ ಪಾಠ ಕಲಿಯದ ವಿಜಯ್‌, ತಾವು ಚಿತ್ರರಂಗದ ಭಾಗ ಎನ್ನುವುದನ್ನು ಮರೆತಂತಿದೆ

ನಟ ದುನಿಯಾ ವಿಜಯ್‌ ವೃತ್ತಿಬದುಕಿಗೆ ತಿರುವು ನೀಡಿದ ಸಿನಿಮಾ ‘ದುನಿಯಾ’ (2007). ಅಲ್ಲಿಂದ ಮುಂದೆ ವಿಜಯ್‌, ‘ದುನಿಯಾ ವಿಜಯ್‌’ ಎಂದಾದರು. ಹಳ್ಳಿಯಿಂದ ನಗರಕ್ಕೆ ಬರುವ ಅಮಾಯಕ ಯುವಕ, ಅಲ್ಲೊಂದು ಪ್ರೇಮಕತೆ, ಅಮಾಯಕನನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುವ ಭೂಗತ ಜಗತ್ತು, ತನಗೇ ಅರಿವಿಲ್ಲದಂತೆ ರೌಡಿಯಾಗುವ ಚಿತ್ರದ ನಾಯಕ, ಕೊನೆಗೆ ಆತ್ಮಹತ್ಯೆಯಲ್ಲಿ ಕೊನೆಯಾಗುವ ಪ್ರೀತಿ... ಇದು ‘ದುನಿಯಾ’ ಸಿನಿಮಾದ ಕಥಾಹಂದರ.

ಈ ಚಿತ್ರದ ದೊಡ್ಡ ಯಶಸ್ಸಿನ ನಂತರ ವಿಜಯ್‌ ಜನಪ್ರಿಯ ಹೀರೋ ಆದರು. ಸ್ಯಾಂಡಲ್‌ವುಡ್‌ನಲ್ಲಿ ಅವರಿಗೆ ಅಭಿಮಾನಿ ಬಳಗ ಸೃಷ್ಟಿಯಾಯ್ತು. ಸ್ಟಂಟ್‌ ಅಸಿಸ್ಟೆಂಟ್‌ ಆಗಿದ್ದ ವಿಜಯ್, ಚಿಕ್ಕಪುಟ್ಟ ಪಾತ್ರಗಳ ಮೂಲಕ ಕ್ಯಾಮೆರಾ ಎದುರು ನಿಂತಿದ್ದರು. ‘ದುನಿಯಾ’ ಸಿನಿಮಾ ಅವರಿಗೆ ನಾಯಕಪಟ್ಟ ತಂದುಕೊಟ್ಟಿತು. ವರ್ಷಗಳ ಕಾಲ ಸಿನಿಮಾರಂಗದಲ್ಲಿ ಕಾಣಿಸಿಕೊಂಡು ಕಷ್ಟದಿಂದ ಈ ಅವಕಾಶ ಪಡೆದಿದ್ದ ವಿಜಯ್‌ ಈ ಯಶಸ್ಸನ್ನು ಕಾಪಾಡಿಕೊಳ್ಳುವಲ್ಲಿ ಎಡವಿದರು. ‘ದುನಿಯಾ’ ನಂತರದ ಎರಡೇ ವರ್ಷದಲ್ಲಿ ಅವರ ಸಾರ್ವಜನಿಕ ನಡೆ-ನುಡಿಯಲ್ಲಿ ಬದಲಾವಣೆಗಳು ಕಾಣಿಸತೊಡಗಿದವು. ಶಿಸ್ತು, ಸಂಯಮ ಮರೆತಂತೆ ವರ್ತಿಸತೊಡಗಿದ ಅವರ ವೈಯಕ್ತಿಕ ಬದುಕಿನಲ್ಲೂ ಬಿರುಕು ಉಂಟಾಯ್ತು.

ಇದನ್ನೂ ಓದಿ : ಅಪಹರಣ, ಹಲ್ಲೆ ಪ್ರಕರಣ; ಜೈಲುಪಾಲಾದ ನಟ ದುನಿಯಾ ವಿಜಯ್

ತಮ್ಮ ಮೊದಲ ಪತ್ನಿ ನಾಗರತ್ನ ಅವರಿಗೆ ಬೆದರಿಕೆ, ಸಂಬಂಧಿಯೊಬ್ಬರ ಮೇಲೆ ಹಲ್ಲೆ, ‘ಮಾಸ್ತಿಗುಡಿ’ ಸಿನಿಮಾ ಪ್ರಕರಣ, ಈ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರನ್ನು ರಕ್ಷಿಸಲು ಪೊಲೀಸರ ದಾರಿ ತಪ್ಪಸಿದ್ದು, ವೃದ್ಧ ದಂಪತಿ ಹಾಗೂ ಮಾಜಿ ಸೈನಿಕರೊಬ್ಬರಿಗೆ ಧಮಕಿ, ಇದೀಗ ಜಿಮ್ ಟ್ರೈನರ್‌ ಅಪರಹಣ ಮತ್ತು ಹಲ್ಲೆ ಪ್ರಕರಣ... ಹೀಗೆ ದುನಿಯಾ ವಿಜಯ್‌ ವಿರುದ್ಧ ಹಲವು ಆರೋಪಗಳಿವೆ. ತಪ್ಪಿನಿಂದ ಪಾಠ ಕಲಿಯದ ವಿಜಯ್‌, ಪದೇಪದೇ ಸಾರ್ವಜನಿಕವಾಗಿ ಅವಮಾನಕ್ಕೆ ಗುರಿಯಾಗುತ್ತಲೇ ಇದ್ದಾರೆ. ಈ ಬಾರಿ ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು, ಕಾನೂನು ಹೋರಾಟ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲೂ ಚರ್ಚೆಯಾಗಿದೆ. ಅಲ್ಲಿ ಕೈಗೊಳ್ಳುವ ನಿರ್ಧಾರಗಳು ವಿಜಯ್‌ ಅವರ ಮುಂದಿನ ಸಿನಿಮಾ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ನಾಯಕನಾಗಿ ನಟಿಸಿದ ಮೊದಲ ಸಿನಿಮಾದಲ್ಲಿ ವಿಜಯ್‌ ರೌಡಿಯಾಗಿ ಕಾಣಿಸಿಕೊಂಡಿದ್ದರು. ಚಿತ್ರದ ಉತ್ತಮ ನಟನೆಗೆ ಅವರಿಗೆ ರಾಜ್ಯ ಪ್ರಶಸ್ತಿಯೂ ಸಿಕ್ಕಿತ್ತು. ಈ ಇಮೇಜು ಅವರ ಮುಂದಿನ ಚಿತ್ರಗಳಿಗೂ ಮಾದರಿಯಾಯ್ತು. ಪ್ರಜ್ಞಾಪೂರ್ವಕವಾಗಿ ವಿಜಯ್‌ ಆಕ್ಷನ್ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತ ಬಂದರು. ರೌಡಿ ಪಾತ್ರಗಳಲ್ಲಿ, ವ್ಯವಸ್ಥೆಯ ವಿರುದ್ಧ ಸಿಡಿದೇಳುವ ವ್ಯಕ್ತಿಯಾಗಿ, ಪೊಲೀಸ್ ಅಧಿಕಾರಿಯಾಗಿ (ಶಂಕರ್ ಐಪಿಎಸ್‌) ಕಾಣಿಸಿಕೊಂಡ ಅವರ ಪಾತ್ರಗಳಲ್ಲಿ ವೀರಾವೇ‍ಶವೇ ಹೆಚ್ಚು. ಸಮಾಜದ ದುಷ್ಟ ಶಕ್ತಿಗಳ ವಿರುದ್ಧ ಸಿನಿಮಾಗಳಲ್ಲಿ ಉದ್ದನೆಯ ಸಂಭಾಷಣೆಗಳಿವೆ.

ತೆರೆ ಮೇಲೆ ಮಾದರಿ ಪ್ರಜೆಯಂತೆ ಕಾಣಿಸುವ ವಿಜಯ್‌ ಅವರಿಂದ ತೆರೆಯಾಚೆಗೂ ಇಂಥದ್ದೇ ನಡೆ ನಿರೀಕ್ಷಿಸುವುದು ಕಷ್ಟಸಾಧ್ಯ. ಅದು ಸಿನಿಕತನ ಆದೀತು. ಆದರೆ, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟನಾಗಿ ಸಾರ್ವಜನಿಕವಾಗಿ ಅವರು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ, ವಿಜಯ್‌ ಇಂತಹ ಯಾವುದೇ ಜವಾಬ್ದಾರಿಯನ್ನು ಅರಿಯುತ್ತಿಲ್ಲ. ಪದೇಪದೇ ಅವರು ಕಾನೂನಿನ ತೊಡಕು ಎದುರಿಸುವಂತಹ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಈ ಒರಟುತನದ ನಡಾವಳಿ ಅವರ ಅಭಿಮಾನಿಗಳಿಗೂ ಬೇಸರ ಉಂಟುಮಾಡಿದೆ. ಮತ್ತೊಂದೆಡೆ, ಸ್ಯಾಂಡಲ್‌ವುಡ್‌ನಲ್ಲಿ ವಿಜಯ್‌ ಅವರನ್ನು ಬೆಂಬಲಿಸುವವರೂ ಇಲ್ಲವಾಗಿದ್ದಾರೆ. ಇದು ವಿಜಯ್ ಸ್ವತಃ ತಾವಾಗಿಯೇ ತಂದುಕೊಂಡ ಪರಿಸ್ಥಿತಿ.

ಕಳೆದ ವರ್ಷದ ‘ಮಾಸ್ತಿಗುಡಿ’ ಪ್ರಕರಣ ಕನ್ನಡ ಚಿತ್ರರಂಗಕ್ಕೊಂದು ಕಪ್ಪುಚುಕ್ಕೆ. ಆಕ್ಷನ್ ಸನ್ನಿವೇಶದ ಅವಘಡದಲ್ಲಿ ಇಬ್ಬರು ನಟರು ನೀರುಪಾಲಾದರು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಚಿತ್ರತಂಡದ ಪ್ರಮಾದವಿದು. ಇಹಲೋಕ ತ್ಯಜಿಸಿದ ನಟರಾದ ಅನಿಲ್ ಮತ್ತು ಉದಯ್‌ ಅವರು ‘ಮಾಸ್ತಿಗುಡಿ’ ಚಿತ್ರದ ಹೀರೋ ದುನಿಯಾ ವಿಜಯ್ ಆಪ್ತ ಸ್ನೇಹಿತರೇ. ದುನಿಯಾ ವಿಜಯ್ ಹುಂಬತನವೂ ಈ ಅವಘಡಕ್ಕೆ ಕಾರಣವಾಗಿದ್ದು ಹೌದು. ಈ ಹುಂಬತನ, ದಾಷ್ಟ್ಯದಿಂದಾಗಿ ವಿಜಯ್‌ ಸಾರ್ವಜನಿಕ ಬದುಕು ಆಡಿಕೊಳ್ಳುವಂತಾಗಿದೆ. ಅವರು ಅಭಿಮಾನಿಗಳ ಎದುರು ತಲೆತಗ್ಗಿಸುವಂತಹ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ತಪ್ಪುಗಳಿಂದ ಪಾಠ ಕಲಿಯದ ವಿಜಯ್, ಇದು ತಮ್ಮ ವೈಯಕ್ತಿಕ ವಿಚಾರ ಎನ್ನುವ ಸಬೂಬು ನೀಡುವಂತಿಲ್ಲ. ತಾವು ಕನ್ನಡ ಚಿತ್ರರಂಗದ ಭಾಗ ಎನ್ನುವುದನ್ನೂ ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More