ಸ್ಮರಣೆ | ಸ್ತ್ರೀ ಸಂವೇದನೆಯ ಹಿಂದಿ ಸಿನಿಮಾ ನಿರ್ದೇಶಕಿ ಕಲ್ಪನಾ ಲಾಜ್ಮಿ  

ನಿನ್ನೆ (ಸೆ.23) ಅಗಲಿದ ಕಲ್ಪನಾ ಲಾಜ್ಮಿ ಹಿಂದಿ ಚಿತ್ರರಂಗ ಕಂಡ ಪ್ರತಿಭಾವಂತ ನಿರ್ದೇಶಕಿಯರಲ್ಲಿ ಒಬ್ಬರು. ಅವರ ಸಿನಿಮಾಗಳಲ್ಲಿ ಮಹಿಳಾ ಸಬಲೀಕರಣ, ಸ್ತ್ರೀವಾದಿ ನಿಲುವುಗಳ ದಟ್ಟ ಪ್ರಸ್ತಾಪ ಸಾಮಾನ್ಯವಾಗಿ ಇರುತ್ತಿತ್ತು. ಅವರ ಸಿನಿಮಾಗಳು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿವೆ

ನೌಕಾದಳ ಕ್ಯಾಪ್ಟನ್‌ ಗೋಪಿ ಲಾಜ್ಮಿ ಮತ್ತು ಚಿತ್ರಕಲಾವಿದೆ ಲಲಿತಾ ಲಾಜ್ಮಿ ಪುತ್ರಿ ಕಲ್ಪನಾ ಬೆಳೆದದ್ದು ಮುಂಬೈನಲ್ಲಿ. ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗುರುದತ್‌, ಶ್ಯಾಮ್ ಬೆನಗಲ್‌ ಅವರ ದೂರದ ಸಂಬಂಧಿಗಳು ಕೂಡ. ಕಲ್ಪನಾ ಚಿತ್ರರಂಗದತ್ತ ಆಕರ್ಷಿತರಾಗಲು ಈ ಹಿನ್ನೆಲೆಯೂ ಕಾರಣ. ಶ್ಯಾಮ್ ಬೆನಗಲ್ ನಿರ್ದೇಶನದ ‘ಭೂಮಿಕಾ’ (1977) ಚಿತ್ರದ ಕಾಸ್ಟ್ಯೂಮ್ ಸಹಾಯಕಿಯಾಗಿ ಕಲ್ಪನಾ ಅಧಿಕೃತವಾಗಿ ಚಿತ್ರರಂಗ ಪ್ರವೇಶಿಸಿದರು. ಮುಂದೆ ‘ಮಂಡಿ’ (1983) ಚಿತ್ರದಲ್ಲಿ ಅವರು ಸಹಾಯಕ ನಿರ್ದೇಶಕಿಯಾಗಿ ಬಡ್ತಿ ಪಡೆದರು.

ಕಲ್ಪನಾ ಅವರಿಗೆ ನಟನೆಗೂ ಕರೆ ಬಂದಿತ್ತು. ನಿರ್ದೇಶಕ ದೇವ್ ಆನಂದ್ ತಮ್ಮ ‘ಹೀರಾ ಪನ್ನಾ’ (1973) ಚಿತ್ರಕ್ಕೆ ಅವರಿಗೆ ಆಹ್ವಾನ ನೀಡಿದ್ದರು. ನಿರ್ದೇಶನದಲ್ಲಿ ಆಸಕ್ತಿ ಇದ್ದ ಕಲ್ಪನಾಗೆ ನಟಿಸುವ ಆಸೆ ಇರಲಿಲ್ಲ. ಕಲ್ಪನಾ ಚಿಕ್ಕಪ್ಪ ಆತ್ಮಾ ರಾಮ್‌ ನಿರ್ದೇಶನದ ‘ಆರೋಪ್‌’ ಸಿನಿಮಾಗೆ ಭೂಪೇನ್ ಹಜಾರಿಕಾ ಸಂಗೀತ ಸಂಯೋಜಿಸುತ್ತಿದ್ದರು. ಅಲ್ಲಿ ಪರಿಚಿತರಾದ ಹಜಾರಿಕಾ ಅವರು ಕಲ್ಪನಾರ ಮುಂದಿನ ಸಿನಿಮಾ ಬದುಕಿಗೆ ದೀವಿಗೆಯಾದರು. ಹಜಾರಿಕಾ ಅವರೊಂದಿಗೆ ಸಹನಿರ್ಮಾಣದಲ್ಲಿ ಕಲ್ಪನಾ ಸಾಕ್ಷ್ಯಚಿತ್ರಗಳನ್ನು ಮಾಡಿದರು.

ರುಡಾಲಿ

ಹಜಾರಿಕಾ ಮತ್ತು ಕಲ್ಪನಾ ನಿರ್ಮಾಣ ಸಹಯೋಗದಲ್ಲಿ ‘ಡಿ ಜಿ ಮೂವೀ ಪಯನೀರ್‌’ (1978), ‘ಎ ವರ್ಕ್‌ ಸ್ಟಡೀ ಇನ್ ಟೀ ಪ್ಲಕಿಂಗ್‌’ (1979), ‘ಅಲಾಂಗ್‌ ದಿ ಬ್ರಹ್ಮಪುತ್ರ’ (1981) ಸಾಕ್ಷ್ಯಚಿತ್ರಗಳು ತಯಾರಾದವು. ಕಲ್ಪನಾ ಈ ಮೂರೂ ಸಾಕ್ಷ್ಯಚಿತ್ರಗಳ ನಿರ್ದೇಶಕಿಯೂ ಹೌದು. ಶಬಾನಾ ಅಜ್ಮಿ ಮತ್ತು ಫಾರೂಕ್ ಶೇಕ್‌ ಅಭಿನಯದ ‘ಏಕ್‌ ಪಲ್‌’ (1986) ಕಲ್ಪನಾ ನಿರ್ದೇಶನದ ಚೊಚ್ಚಲ ಸಿನಿಮಾ. ಲೈಂಗಿಕತೆ ಮತ್ತು ವಿವಾಹೇತರ ಸಂಬಂಧ ಕಥಾವಸ್ತು. ಚಿತ್ರಕತೆಯಲ್ಲಿ ಕಲ್ಪನಾಗೆ ಗುಲ್ಜಾರ್ ಸಹಕಾರವಿತ್ತು. ಭೂಪೇನ್ ಹಜಾರಿಕಾ ಜನಪದ ಮತ್ತು ಮಾಡ್ರನ್‌ ಸಂಗೀತದ ಸಮ್ಮಿಳನದ ಸಂಗೀತ ಸಂಯೋಜಿಸಿದ್ದರು.

ಇದನ್ನೂ ಓದಿ : ಸ್ಮರಣೆ | ಗಾಯಕ ರಫಿ ಅವರ ಕಂಠದಲ್ಲಿ ನೀವು ಕೇಳಲೇಬೇಕಾದ ಹತ್ತು ಹಾಡು

‘ಏಕ್ ಪಲ್‌’ ಚಿತ್ರಕ್ಕೆ ವಿಶ್ಲೇಷಕರ ಅಪಾರ ಮೆಚ್ಚುಗೆ ವ್ಯಕ್ತವಾಯ್ತು. ಈ ಯಶಸ್ವಿ ಚಿತ್ರದೊಂದಿಗೆ ಕಲ್ಪನಾ, ಚಿತ್ರರಂಗದಲ್ಲಿ ಪ್ರತಿಭಾವಂತ ನಿರ್ದೇಶಕಿ ಎಂದು ಕರೆಸಿಕೊಂಡರು. ನಿರ್ದೇಶಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಇರದ ಅವಧಿಯಲ್ಲಿ ಕಲ್ಪನಾ ತಮ್ಮ ಛಾಪು ಮೂಡಿಸಿದರು. ಈ ಮಧ್ಯೆ, ‘ಲೋಹಿಟ್ ಕಿನಾರೆ’ (1988) ಧಾರಾವಾಹಿಯೊಂದಿಗೆ ಕಿರುತೆರೆಗೆ ಹೋಗಿದ್ದ ಅವರು ಮತ್ತೆ ಬೆಳ್ಳಿತೆರೆಗೆ ಮೆರಳಿದ್ದು ‘ರುಡಾಲಿ’ (1993) ಚಿತ್ರದೊಂದಿಗೆ. ಈ ಚಿತ್ರ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಚಿತ್ರದ ಉತ್ತಮ ನಟನೆಗೆ ಡಿಂಪಲ್ ಕಪಾಡಿಯಾ ರಾಷ್ಟ್ರಪ್ರಶಸ್ತಿ ಪಡೆದರು. ಭೂಪೇನ್ ಹಜಾರಿಕಾ ಸಂಯೋಜನೆಯ ಹಾಡುಗಳನ್ನು ಜನರು ಮೆಚ್ಚಿದರು.

ದಮನ್‌

ಕಲ್ಪನಾ ಲಾಜ್ಮಿ ತಮ್ಮ ಸಿನಿಮಾಗಳಲ್ಲಿ ಸ್ತ್ರೀ ಸಂವೇದನೆಯ ಕತೆಗಳನ್ನು ನಿರೂಪಿಸಿದರು. ನಾಲ್ಕು ದಶಕಗಳ ಸಿನಿಮಾ ಜೀವನದಲ್ಲಿ ಅವರು ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ. ‘ದರ್ಮಿಯಾ’ (1997), ‘ದಮನ್‌’ (2011), ‘ಕ್ಯೂ’ (2003), ‘ಚಿಂಗಾರಿ’ (2006) ಚಿತ್ರಗಳು ಮಹಿಳಾ ಪ್ರಧಾನ ಪ್ರಯೋಗಗಳು. ಆದರೆ, ತಮ್ಮನ್ನು ಸ್ತ್ರೀವಾದಿ ಎಂದು ಕರೆಯುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. "ನಾನು ಜನಪರ, ಮನುಷ್ಯತ್ವದ ಪರ,” ಎಂದು ಹೇಳುತ್ತಿದ್ದ ಅವರೀಗ ಇಹಲೋಕ ತ್ಯಜಿಸಿದ್ದಾರೆ. ಕಲ್ಪನಾರ ದಿಟ್ಟ ಸಿನಿಮಾಗಳು ಹಿಂದಿ ಚಿತ್ರರಂಗದಲ್ಲಿ ಅವರ ಹೆಸರನ್ನು ಸದಾ ನೆನಪಿಸುತ್ತವೆ.

ಚಿಂಗಾರಿ

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More