ಸರ್ಕಾರದ ದೇಣಿಗೆ ಇಲ್ಲದೆ ಸರಳವಾಗಿ ಕೇರಳ ಚಿತ್ರೋತ್ಸವ ಆಯೋಜಿಸಲು ನಿರ್ಧಾರ

ತಿಂಗಳ ಹಿಂದೆ ಕೇರಳ ಪ್ರವಾಹಕ್ಕೆ ಸಿಲುಕಿ ನಲುಗಿತ್ತು. ದುರಂತದ ಹಿನ್ನೆಲೆಯಲ್ಲಿ ಈ ಬಾರಿ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಸದಿರಲು ಸರ್ಕಾರ ನಿರ್ಧರಿಸಿತ್ತು. ಚಿತ್ರರಂಗದ ಗಣ್ಯರ ಸಲಹೆ ಮೇರೆಗೆ ಖಾಸಗಿಯಾಗಿ ದೇಣಿಗೆ ಸಂಗ್ರಹಿಸಿ ಸರಳವಾಗಿ ಚಿತ್ರೋತ್ಸವ ಆಯೋಜಿಸುವ ಪ್ರಸ್ತಾವನೆ ಬಂದಿದೆ

ಕೇರಳದ ತಿರುವನಂತಪುರಂನಲ್ಲಿ ಪ್ರತಿವರ್ಷ ನಡೆಯುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತನ್ನದೇ ಆದ ಹೆಗ್ಗಳಿಕೆ ಇದೆ. ಇದು ಭಾರತದ ಪ್ರಮುಖ ಚಿತ್ರೋತ್ಸವಗಳಲ್ಲೊಂದು. ದೇಶ-ವಿದೇಶಗಳ ಸಿನಿಮಾಪ್ರೇಮಿಗಳು ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಮಲಯಾಳಂ ಚಿತ್ರರಂಗ ಈ ಸಮಾರಂಭವನ್ನು ಪ್ರತಿಷ್ಠೆಯಾಗಿ ಪರಿಗಣಿಸುತ್ತದೆ. ಪ್ರವಾಹದ ಹಿನ್ನೆಲೆಯಲ್ಲಿ ಈ ಬಾರಿ ಚಿತ್ರೋತ್ಸವ ನಡೆಸದಿರಲು ಕೇರಳ ಸರ್ಕಾರ ನಿರ್ಧರಿಸಿತ್ತು. ಚಿತ್ರೋತ್ಸವಕ್ಕೆ ನೀಡುವ ದೇಣಿಗೆಯನ್ನು ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಬಳಕೆ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು.

ಆದರೆ, ಸರ್ಕಾರದ ನಿರ್ಧಾರಕ್ಕೆ ಮಲಯಾಳಂ ಚಿತ್ರರಂಗದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದರು. ದುಂದುವೆಚ್ಚ ಮಾಡದಂತೆ ಸರಳವಾಗಿ ಚಿತ್ರೋತ್ಸವ ಆಚರಿಸಲು ಸಲಹೆ ಮಾಡಿದ್ದರು. ಅದರಂತೆ, ಕೇರಳ ಚಲನಚಿತ್ರ ಅಕಾಡೆಮಿ ಖಾಸಗಿ ದೇಣಿಗೆ ಸಂಗ್ರಹಿಸಿ ಚಿತ್ರೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಿದೆ. ಡಿಸೆಂಬರ್ 7ರಿಂದ 14ರವರೆಗೆ ಚಿತ್ರೋತ್ಸವ ನಡೆಸುವುದೆಂದು ನಿರ್ಧರಿಸಲಾಗಿದ್ದು, ದೇಣಿಗೆ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ. ಅದ್ಧೂರಿ ಪ್ರಾರಂಭೋತ್ಸವ ಈ ಬಾರಿ ಇರುವುದಿಲ್ಲ. ದೊಡ್ಡ ಮೊತ್ತದ ಸದಸ್ಯ ಶುಲ್ಕ ನಿಗದಿಪಡಿಸಲು ನಿರ್ಧರಿಸಲಾಗಿದ್ದು, ಸಮಾರಂಭ ಆಯೋಜನೆಯ ಪ್ರತಿ ಹಂತದಲ್ಲೂ ಖರ್ಚು ಕಡಿತಗೊಳಿಸುವುದು ಯೋಜನೆ.

ಇದನ್ನೂ ಓದಿ : ಸ್ಮರಣೆ | ಸ್ತ್ರೀ ಸಂವೇದನೆಯ ಹಿಂದಿ ಸಿನಿಮಾ ನಿರ್ದೇಶಕಿ ಕಲ್ಪನಾ ಲಾಜ್ಮಿ  

ರಾಷ್ಟ್ರಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರನಿರ್ದೇಶಕ ಪಿ ಶೇಷಾದ್ರಿ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. “ಕೇರಳ ಮತ್ತು ಕೊಲ್ಕತ್ತಾದ ಚಿತ್ರೋತ್ಸವಗಳು ಭಾರತದ ಪ್ರಮುಖ ಈವೆಂಟ್‌ಗಳು. ದೇಶದ ವಿವಿಧೆಡೆ ಹಾಗೂ ವಿದೇಶಗಳಿಂದಲೂ ಸಿನಿಪ್ರೇಮಿಗಳು ಅಲ್ಲಿಗೆ ಆಗಮಿಸುತ್ತಾರೆ. ಸ್ಥಳೀಯರಲ್ಲಿ ಸಿನಿಮಾ ಕುರಿತಾಗಿ ಉತ್ತಮ ಅಭಿರುಚಿ ಬೆಳೆಸುವಲ್ಲಿಯೂ ಚಿತ್ರೋತ್ಸವದ ಪಾತ್ರ ಹಿರಿದು. ಈ ಬಾರಿ ಚಿತ್ರೋತ್ಸವ ನಡೆಸದಿದ್ದರೆ ಸಿನಿಮಾ ಮಾಡಿರುವ ಅಲ್ಲಿನ ತಂತ್ರಜ್ಞರು ಹಾಗೂ ಕಲಾವಿದರಿಗೆ ಅಸಮಾಧಾನ ಆಗುತ್ತದೆ. ದುಂದುವೆಚ್ಚ ಕಡಿತಗೊಳಿಸಿ ಚಿತ್ರೋತ್ಸವ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ,” ಎನ್ನುತ್ತಾರವರು.

ಕೇರಳದಲ್ಲಿ 1996ರಿಂದ ಪ್ರತಿವರ್ಷ ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಲಾಗುತ್ತಿದೆ. ಈ ಬಾರಿ ಚಿತ್ರೋತ್ಸವ ನಡೆಸದಿರುವ ನಿರ್ಧಾರಕ್ಕೆ ಕೇರಳದ ಹಿರಿಯ ಚಿತ್ರನಿರ್ದೇಶಕ ಅಡೂರು ಗೋಪಾಲಕೃಷ್ಣನ್‌ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. “ಹೆಚ್ಚು ವಿಭಾಗಗಳಿಲ್ಲದೆ ಸರಳವಾಗಿ ಚಿತ್ರೋತ್ಸವ ಆಚರಿಸುವುದು ಒಳ್ಳೆಯ ನಿರ್ಧಾರ,” ಎಂದಿದ್ದರು. ಇದು ಮಲಯಾಳಂ ಚಿತ್ರರಂಗಕ್ಕೆ ಹಿನ್ನಡೆಯಾಗುತ್ತದೆ ಎನ್ನುವ ಮಾತುಗಳೂ ಕೇಳಿಬಂದವು. ಈ ಹಿನ್ನೆಲೆಯಲ್ಲಿ ಎಂದಿನಂತೆ ಚಿತ್ರೋತ್ಸವಕ್ಕೆ ಚಾಲನೆ ಸಿಕ್ಕಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More