‘ಆ ಆಕಸ್ಮಿಕ ಮರೆತೇ ಹೋಗಿದೆ, ಆದರೆ ರಾಜಕುಮಾರ್‌ ಮಾತ್ರ ಚಿರಸ್ಮರಣೀಯ’

ನಟ ರಾಜಕುಮಾರ್‌ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಿದ್ದು, ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಹಿರಿಯ ಚಿತ್ರನಿರ್ದೇಶಕ ಭಗವಾನ್‌ ತೀರ್ಪಿನ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಅಪಹರಣ ದಿನಗಳ ಸಂಕಟ, ತೀರ್ಪಿನ ಬಗೆಗಿನ ಅವರ ಮಾತುಗಳು ಇಲ್ಲಿವೆ

ರಾಜ್‌ ಅಪಹರಣವಾಗಿದ್ದ ಆ ನೂರೆಂಟು ದಿನಗಳನ್ನು ವೇದನೆಯಲ್ಲೇ ಕಳೆದಿದ್ದೆವು. ಯಾವ ಕ್ಷಣದಲ್ಲಿ ಏನಾಗುತ್ತದೋ ಎನ್ನುವ ಭಯ, ಆತಂಕವಿರುತ್ತಿತ್ತು. ಪಾರ್ವತಮ್ಮ ರಾಜಕುಮಾರ್ ತೀರಾ‌ ಕುಗ್ಗಿ ಹೋಗಿದ್ದರು. ರಾಜ್ ಪುತ್ರಿ ಲಕ್ಷ್ಮೀ ತಂದೆ ಮತ್ತು ಪತಿ (ಗೋವಿಂದರಾಜು) ಅವರನ್ನು ನೆನೆದು ಕಣ್ಣೀರಾಗುತ್ತಿದ್ದರು. ದೇವಸ್ಥಾನ, ದರ್ಗಾ, ಚರ್ಚ್‌ಗಳಿಗೆಲ್ಲಾ ಹೋಗಿ ಪ್ರಾರ್ಥಿಸುತ್ತಿದ್ದೆವು. ಜ್ಯೋತಿಷಿಗಳ ಮೊರೆ ಹೋಗುವುದು, ಹರಕೆ, ಪೂಜೆಗಳಂತೂ ದಿನಚರಿಯಾಗಿತ್ತು. ನೂರೆಂಟು ದಿನಗಳ ಈ ತಳಮಳವನ್ನು ಹೇಳಿಕೊಳ್ಳುವುದಕ್ಕೇ ಸಂಕಟವಾಗುತ್ತದೆ.

ಈಗ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಖುಲಾಸೆಯಾಗಿದೆ. ಹದಿನೆಂಟು ವರ್ಷಗಳ ಹಳೆಯ ಕೇಸು ಹೇಗೆ ನಿಲ್ಲಲು ಸಾಧ್ಯ? ಈ ಅವಧಿಯಲ್ಲಿ ಸಾಕ್ಷ್ಯಗಳು ಡೈಲ್ಯೂಟ್ ಆಗುತ್ತವೆ. ‘ಜಸ್ಟೀಸ್‌ ಡಿಲೇಡ್‌ ಈಸ್‌ ಜಸ್ಟೀಸ್ ಡಿನೈಡ್’ ಎನ್ನುವ ಇಂಗ್ಲಿಷ್ ನಾಣ್ನುಡಿಯಂತೆ ಈ ಕೇಸ್ ಆಗಿದೆ ಅಷ್ಟೆ. ಹಾಗೆ ನೋಡಿದರೆ ನಾವು ಈ ಕೇಸನ್ನೇ ಮರೆತಿದ್ದೇವೆ. ಸ್ವತಃ ರಾಜಕುಮಾರ್ ಇದ್ದಿದ್ದರೂ ಬಹುಶಃ ಆರೋಪಿಗಳನ್ನು ಕ್ಷಮಿಸಿಬಿಡುತ್ತಿದ್ದರು. ಅವರು ಎಫ್‌ಐಆರ್ ದಾಖಲಿಸಲೂ ಇಚ್ಛಿಸುತ್ತಿರಲಿಲ್ಲವೇನೋ? ಕಾಲ ಎಲ್ಲಾ ಆಘಾತಗಳನ್ನು ಮರೆಸಿಬಿಡುತ್ತದೆ. ಅಪಹರಣ ಒಂದು ಆಕಸ್ಮಿಕ, ಅದೇನೇ ಇರಲಿ ರಾಜ್‌ ಮಾತ್ರ ಚಿರಸ್ಮರಣೀಯ. ಅವರು ಅಗಲಿ ಹತ್ತು ವರ್ಷಗಳ ನಂತರವೂ ಇನ್ನೂ ಜೀವಂತವಾಗಿದ್ದಾರೆ ಎನ್ನುವ ಭಾವ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ : ರಾಜ್‌ ಯೋಗ ವಿಡಿಯೋ | ವರನಟ ಯೋಗ ಆರಂಭಿಸಿದ್ದು 51ನೇ ವಯಸ್ಸಿನಲ್ಲಿ

ಪ್ರಕರಣ | ಕಾಡುಗಳ್ಳ ವೀರಪ್ಪನ್‌ ಮತ್ತು ತಂಡ 2000ರ ಜುಲೈ 30ರಂದು ಗಾಜನೂರಿನ ತೋಟದ ಮನೆಯಿಂದ ನಟ ಡಾ ರಾಜ್‌ ಅವರನ್ನು ಅಪಹರಿಸಿತ್ತು. ನೂರೆಂಟು ದಿನ ಅವರನ್ನು ಕಾಡಿನಲ್ಲಿ ಇರಿಸಿಕೊಳ್ಳಲಾಗಿತ್ತು. ತಮಿಳು ಪತ್ರಕರ್ತ ಆರ್ ಆರ್ ಗೋಪಾಲ್ ನೇತೃತ್ವದಲ್ಲಿ ಹಲವು ಸುತ್ತುಗಳ ಮಾತುಕತೆ ನಂತರ ರಾಜ್‌ ಮತ್ತು ಇತರರನ್ನು ವೀರಪ್ಪನ್ ಬಿಡುಗಡೆ ಮಾಡಿದ್ದ. ಈ ಪ್ರಕರಣದಲ್ಲಿ ವೀರಪ್ಪನ್‌ ಸೇರಿದಂತೆ ಹನ್ನೆರೆಡು ಜನರ ವಿರುದ್ಧ ದೂರು ದಾಖಲಾಗಿತ್ತು.

ಇವರಲ್ಲಿ ವೀರಪ್ಪನ್‌, ಸೇತುಕುಡಿ ಗೋವಿಂದನ್, ರಂಗಸ್ವಾಮಿ ವಿಚಾರಣೆ ವೇಳೆ ಸಾವನ್ನಪ್ಪಿದ್ದಾರೆ. ತಮಿಳುನಾಡು ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ನ್ಯಾಯಾಲಯ ಈ ಕುರಿತು ನಿನ್ನೆ (ಸೆ. 25) ತೀರ್ಪು ಪ್ರಕಟಿಸಿ, ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಏಳು ವರ್ಷಗಳ ಹಿಂದೆ 2011ರಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲಾಗಿದ್ದು, ಹತ್ತು ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ. ಪ್ರಕರಣ ಘಟಿಸಿ ಹತ್ತು ವರ್ಷಗಳ ನಂತರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More