ಜನುಮದಿನ | ಬಾಲಿವುಡ್‌ನ ಎವರ್‌ಗ್ರೀನ್‌ ರೊಮ್ಯಾಂಟಿಕ್‌ ಹೀರೋ ದೇವಾನಂದ್

ನಟ ದೇವಾನಂದ್‌ ಕೊನೆಯವರೆಗೂ ‘ಚಿರಯೌವ್ವನದ ಹೀರೋ’ ಆಗಿಯೇ ಉಳಿದದ್ದು ಸೋಜಿಗ. ದೇವ್ ರೊಮ್ಯಾಂಟಿಕ್ ಸಿನಿಮಾಗಳು ಹಿಂದಿ ಚಿತ್ರರಂಗದ ಮೈಲುಗಲ್ಲುಗಳಾಗಿವೆ. ಇಂದು (ಸೆಪ್ಟೆಂಬರ್‌ 26) ಅವರ 95ನೇ ಜನ್ಮದಿನ. ದೇವಾನಂದ್ ಕುರಿತ ಲೇಖನ, ಸಿನಿಮಾ ಹಾಡುಗಳು ಇಲ್ಲಿವೆ

ಧರಂ ದೇವ್ ಪಿಶೋರ್ಮಲ್ ಆನಂದ್ ಸರಳವಾಗಿ ‘ದೇವ್ ಆನಂದ್’ ಎಂದೇ ಹೆಸರಾಗಿದ್ದರು. ದೇವ್ ಆನಂದ್‌ ಅವರ ರೊಮ್ಯಾಂಟಿಕ್ ಇಮೇಜ್ ಮತ್ತು ಸ್ಟೈಲ್ ಮುಂದೆ ಭಾರತದ ಹಲವು ಹೀರೋಗಳಿಗೆ ಮಾದರಿಯಾಗಿದ್ದು ಹೌದು. ದೇವ್ ಜನಿಸಿದ್ದು ಅವಿಭಜಿತ ಪಂಜಾಬ್‌ನ ಗುರುದಾಸ್‌ಪುರ್‌ ಜಿಲ್ಲೆಯಲ್ಲಿ (1923, ಸೆಪ್ಟೆಂಬರ್ 26). ಅವರ ತಂದೆ ಪಿಶೋರಿಮಲ್ ಆನಂದ್ ಅಲ್ಲಿನ ಖ್ಯಾತ ವಕೀಲರು. ದೇವ್, ಲಾಹೋರ್‌ನಲ್ಲಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಪದವಿ ಪಡೆಯುತ್ತಿದ್ದಂತೆ ಸಿನಿಮಾ ಸೇರುವ ಇರಾದೆಯಿಂದ ಮುಂಬಯಿಗೆ ತೆರಳಿದರು. ದೇವ್ ಅದೃಷ್ಟಶಾಲಿ. ಬೆಳ್ಳಿತೆರೆ ಅವರ ಕೈಹಿಡಿಯಿತು.

ಕಾಲಾ ಪಾನಿ (1958)

ಆರಂಭದಲ್ಲಿ ಅವರು ಮಾಸ್ ಪ್ರೇಕ್ಷಕರ ಆರಾಧ್ಯ ದೈವವಾಗಿದ್ದರು. ದಿನಕಳೆದಂತೆ ಕ್ಲಾಸ್‌ ಪ್ರೇಕ್ಷಕರೂ ಅವರ ಆಕರ್ಷಣೆಗೆ ಒಳಗಾದರು. ದೇವ್ ಎರಡೂ ವರ್ಗದ ಪ್ರೇಕ್ಷಕರನ್ನು ಒಲಿಸಿಕೊಳ್ಳುವಂಥ ಪಾತ್ರಗಳನ್ನು ಜಾಣ್ಮೆಯಿಂದ ಆಯ್ಕೆ ಮಾಡಿಕೊಂಡರು. ಅಭಿಮಾನಿಗಳಿಗೆ ಅವರು ಕೊನೆಯವರೆಗೂ ‘ಚಿರಯೌವ್ವನದ ಹೀರೋ’ ಆಗಿಯೇ ಉಳಿದದ್ದು ಸೋಜಿಗ. ಅಂದಿನ ಸುಂದರ ನಾಯಕಿಯರೊಂದಿಗಿನ ದೇವ್ ರೊಮ್ಯಾಂಟಿಕ್ ಸಿನಿಮಾಗಳು ಹಿಂದಿ ಚಿತ್ರರಂಗದ ಮೈಲುಗಲ್ಲುಗಳಾಗಿವೆ. ಸುರಯ್ಯಾ (ವಿದ್ಯಾ, ಜೀತ್, ಅಫ್ಸರ್), ಗೀತಾ ಬಾಲಿ (ಬಾಜಿ, ಜಾಲ್, ಫರಾರ್, ಮಿಲಾಪ್), ಮಧುಬಾಲಾ (ನಿರಾಲಾ, ನಾದಾನ್, ಅರ್ಮಾನ್), ಕಲ್ಪನಾ ಕಾರ್ತಿಕ್ (ನೌ ದೋ ಗ್ಯಾರಹ್‌, ಹಮ್‌ಸಫರ್‌, ಟ್ಯಾಕ್ಸಿ ಡ್ರೈವರ್, ಹೌಸ್ ನಂ.44), ವಹೀದಾ ರೆಹಮಾನ್ (ಸೋಲ್ವಾ ಸಾಲ್, ಕಾಲಾ ಬಜಾರ್, ಬಾತ್ ಏಕ್ ರಾತ್ ಕಿ, ಗೈಡ್, ಪ್ರೇಮ್ ಪೂಜಾರಿ) ಅವರ ಜನಪ್ರಿಯ ರೊಮ್ಯಾಂಟಿಕ್‌ ನಾಯಕಿಯರು.

ಹಮ್ ದೋನೋ (1961)

ದೇವ್ ಆನಂದ್ ಬೆಳ್ಳಿತೆರೆ ಪ್ರವೇಶವಾಗಿದ್ದು ‘ಹಮ್ ಏಕ್ ಹೈ’ (1944) ಚಿತ್ರದೊಂದಿಗೆ. ಪ್ರಭಾತ್ ಟಾಕೀಸ್ ಸಂಸ್ಥೆ ನಿರ್ಮಾಣದ ಈ ಚಿತ್ರದ ನಾಯಕಿಯಾಗಿ ಕಮಲಾ ಕೊಲ್ನಿಸ್ ನಟಿಸಿದ್ದರು. ಆದರೆ ದೇವ್‌ಗೆ ಗೆಲುವು ತಂದುಕೊಟ್ಟ ಸಿನಿಮಾ ‘ಜಿದ್ದಿ’ (1948). ಬಾಂಬೆ ಟಾಕೀಸ್ ಚಿತ್ರಸಂಸ್ಥೆಯ ಈ ಚಿತ್ರದ ಅವಕಾಶ ಸಿಗಲು ದೇವ್‌ಗೆ ನೆರವಾದದ್ದು ನಟ ಅಶೋಕ್ ಕುಮಾರ್. ಕಾಮಿನಿ ಕೌಶಲ್ ಚಿತ್ರದ ನಾಯಕಿಯಾಗಿ ನಟಿಸಿದ್ದರು. 1949ರಲ್ಲಿ ದೇವ್, ‘ನವಕೇತನ್’ ಶೀರ್ಷಿಕೆಯಡಿ ತಮ್ಮದೇ ಸ್ವಂತ ಚಿತ್ರನಿರ್ಮಾಣ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆಯಡಿ ಇಂದಿಗೂ ಸಿನಿಮಾಗಳು ತಯಾರಾಗುತ್ತಿವೆ.

ದೇವ್ ಸಿನಿಮಾ ಜೀವನದ ಮಹತ್ವದ ತಿರುವು ‘ಬಾಜಿ’. ಮುಂದೆ ದಶಕಗಳ ಕಾಲ ಅವರು ತಮ್ಮ ವಿಶಿಷ್ಟ ಸ್ಟೈಲ್, ಮ್ಯಾನರಿಸಂನಿಂದ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದರು. ವಿಶಿಷ್ಠ ರೀತಿಯ ಡೈಲಾಗ್ ಡೆಲಿವರಿ, ಹ್ಯಾಟ್, ತಲೆದೂಗುತ್ತಾ ಮಾತನಾಡುವ ಪರಿ.. ದೇವ್‌ರ ಈ ಸ್ಟೈಲ್‌ಗಳನ್ನು ಅಭಿಮಾನಿಗಳು ಅನುಕರಣೆ ಮಾಡತೊಡಗಿದ್ದರು. 1955ರ ‘ಇನ್ಸಾನಿಯಾತ್‌’ ಚಿತ್ರದಲ್ಲಿ ದೇವ್, ಅಂದಿನ ಮತ್ತೊಬ್ಬ ಸೂಪರ್‌ಸ್ಟಾರ್‌ ದಿಲೀಪ್ ಕುಮಾರ್ ಜೊತೆ ನಟಿಸಿದ್ದರು. ‘ಕಾಲಾಪಾನಿ’ (1958) ಚಿತ್ರದ ಉತ್ತಮ ನಟನೆಗಾಗಿ ದೇವ್ ಫಿಲ್ಮ್‌ಫೇರ್‌ ಪುರಸ್ಕಾರ ಪಡೆದರು.

ತೇರೆ ಘರ್ ಕೆ ಸಾಮ್ನೆ (1963)

ದೇವ್‌ರ ಮೊದಲ ವರ್ಣಚಿತ್ರ ‘ಗೈಡ್’ ನಿರ್ದೇಶಿಸಿದ್ದು ಅವರ ಕಿರಿಯ ಸಹೋದರ ವಿಜಯ್ ಆನಂದ್. ಆರ್ ಕೆ ನಾರಾಯಣ್ ಕೃತಿಯನ್ನಾಧರಿಸಿದ ಚಿತ್ರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗಿತ್ತು. 1965ರಲ್ಲಿ ತೆರೆಕಂಡ ಈ ಚಿತ್ರ ಭಾರತ ಮತ್ತು ಅಮೆರಿಕಾ ಚಿತ್ರನಿರ್ಮಾಣ ಸಂಸ್ಥೆಗಳ ಸಹಯೋಗದಲ್ಲಿ ತಯಾರಾಗಿತ್ತು. ದೇವ್ ಸಿನಿಮಾಜೀವನದ ಶ್ರೇಷ್ಠ ಚಿತ್ರಗಳಲ್ಲಿ ‘ಗೈಡ್’ಗೆ ಮಹತ್ವದ ಸ್ಥಾನವಿದೆ. ಮುಂದೆ ಸಹೋದರ ವಿಜಯ್ ನಿರ್ದೇಶನದಲ್ಲಿ ದೇವ್ ನಟಿಸಿದ ‘ಜ್ಯೂವೆಲ್ ಥೀಫ್’, ‘ಜಾನಿ ಮೇರಾ ನಾಮ್’, ‘ತೇರೆ ಮೇರೆ ಸಪ್ನೇ’ ಚಿತ್ರಗಳು ಬಾಕ್‌ಸ್‌ ಆಫೀಸ್‌ನಲ್ಲಿ ಯಶಸ್ಸು ಕಂಡವು.

ಇದನ್ನೂ ಓದಿ : ಬರ್ತಡೇ ಸ್ಪೆಷಲ್ | ರಫಿ ಅವರ ಕಂಠದಲ್ಲಿ ನೀವು ಕೇಳಲೇಬೇಕಾದ ಹತ್ತು ಹಾಡು

ಹಿಂದಿ ಚಿತ್ರರಂಗ ಕಂಡ ಪ್ರತಿಭಾವಂತ ನಾಯಕಿಯರಾದ ಜೀನತ್ ಅಮಾನ್ ಮತ್ತು ಟೀನಾ ಮುನೀಮ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದೇ ದೇವ್. ನೂರಾರು ಮರೆಯಲಾರದಂಥ ಚಿತ್ರಗೀತೆಗಳು ದೇವ್ ಸಿನಿಮಾಗಳ ಕೊಡುಗೆ. ಸಂಗೀತ ಸಂಯೋಜಕರಾದ ಶಂಕರ್ - ಜೈಕಿಶನ್, ಓ ಪಿ ನಯ್ಯರ್, ಸಚಿನ್ ದೇವ್ ಬರ್ಮನ್, ರಾಹುಲ್ ದೇವ್ ಬರ್ಮನ್ ಮತ್ತಿತರೆ ಪ್ರಮುಖರು ದೇವ್ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಗೀತಸಾಹಿತಿಗಳಾದ ಹಜ್ರತ್ ಜೈಪುರಿ, ಮಜ್ರೂಹ್ ಸುಲ್ತಾನ್‌ಪುರಿ, ನೀರಜ್, ಶೈಲೇಂದ್ರ, ಆನಂದ್ ಭಕ್ಷಿ ವಿರಚಿತ ಗೀತೆಗಳಿಗೆ ಖ್ಯಾತ ಗಾಯಕರಾದ ಮೊಹಮ್ಮದ್ ರಫಿ, ತಲತ್ ಮೊಹಮ್ಮದ್, ಕಿಶೋರ್ ಕುಮಾರ್ ದನಿಯಾಗಿದ್ದಾರೆ. ಪ್ರತಿಭಾವಂತರ ಸಂಗಮದಿಂದಾಗಿ ದೇವ್ ಚಿತ್ರಗಳ ಗೀತೆಗಳು ಚಿರಸ್ಮರಣೀಯವಾಗಿವೆ.

ನೌ ದೋ ಗ್ಯಾರಹ್‌ (1957)

ದೇವ್ ಚೊಚ್ಚಲ ನಿರ್ದೇಶನದ ಸಿನಿಮಾ ‘ಪ್ರೇಮ್ ಪೂಜಾರಿ’ ವಿಫಲವಾಗಿತ್ತು. ಆದರೆ 1971ರಲ್ಲಿ ತಯಾರದ ‘ಹರೇ ರಾಮ ಹರೇ ಕೃಷ್ಣ’ ಚಿತ್ರದೊಂದಿಗೆ ನಿರ್ದೇಶಕರಾಗಿ ದೇವ್ ಗೆಲುವು ಕಂಡರು. ಅವರು ನಿರ್ಮಿಸಿ, ನಿರ್ದೇಶಿಸಿದ ಕೊನೆಯ ಸಿನಿಮಾ ‘ಚಾರ್ಜ್‌ಶೀಟ್‌’ (2011, ಸೆಪ್ಟೆಂಬರ್). 2007ರಲ್ಲಿ ಅವರ ಆತ್ಮಕಥೆ ‘ರೊಮ್ಯಾನ್ಸಿಂಗ್ ವಿಥ್ ಲೈಫ್’ ಬಿಡುಗಡೆಯಾಗಿತ್ತು. ದೇವ್ ಸಾಧನೆಗೆ ಹತ್ತಾರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ. ‘ಪದ್ಮ ಭೂಷಣ’ (2001) ಮತ್ತು ‘ದಾದಾ ಸಾಹೇಬ್ ಫಾಲ್ಕೆ’ (2002) ಪ್ರಮುಖ ಗೌರವಗಳು.

ಗಾಯಕಿ, ನಟಿ ಸುರಯ್ಯಾ ಮತ್ತು ದೇವ್ ಪರಸ್ಪರರನ್ನು ಮೆಚ್ಚಿದ್ದರು. ಆರು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದ ಜೋಡಿಯಿದು. ಇವರ ಪ್ರೀತಿಗೆ ಧರ್ಮ ಅಡ್ಡಿಯಾಯ್ತು. ಮುಂದೆ ದೇವ್ ತಮ್ಮ ಚಿತ್ರಗಳಲ್ಲಿ ನಟಿಸಿದ ನಾಯಕಿ ಕಲ್ಪನಾ ಕಾರ್ತಿಕ್‌ರನ್ನು ವರಿಸಿದರು. ಸುನೀಲ್ ಇವರ ಪುತ್ರ. ದೇವ್‌ರ ಹಿರಿಯ ಸಹೋದರ ಚೇತನ್ ಆನಂದ್ ಮತ್ತು ಕಿರಿಯ ಸಹೋದರ ವಿಜಯ್ ಆನಂದ್ ಇಬ್ಬರೂ ಚಿತ್ರನಿರ್ದೇಶಕರು. ದೇವ್ ಸಹೋದರಿಯ ಹೆಸರು ಶೀಲ್ ಕಾಂತಾ ಕಪೂರ್. ಖ್ಯಾತ ನಿರ್ದೇಶಕ ಶೇಖರ್ ಕಪೂರ್, ಶೀಲ್ ಕಾಂತಾರ ಪುತ್ರ. 2011, ಡಿಸೆಂಬರ್ 3ರಂದು ದೇವ್ ಲಂಡನ್‌ನಲ್ಲಿ ಕೊನೆಯುಸಿರೆಳೆದರು.

ಹರೇ ರಾಮ್ ಹರೇ ಕೃಷ್ಣ (1971)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More