ವಿಡಿಯೋ | ಮಹಿಳೆಯರ ಬಗ್ಗೆ ನಾನಾಗೆ ಗೌರವವಿಲ್ಲ ಎಂದ ನಟಿ ತನುಶ್ರೀ ದತ್ತಾ

ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ನಟ ನಾನಾ ಪಾಟೇಕರ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ‘ಹಾರ್ನ್ ಓಕೆ ಪ್ಲೀಸ್‌’ ಚಿತ್ರೀಕರಣದ ವೇಳೆ ನಟ ತಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರು ಎಂದಿದ್ದಾರೆ. ಅವರ ಹೇಳಿಕೆ ಸಂಚಲನ ಸೃಷ್ಟಿಸಿದೆ

ಮಾಜಿ ಮಿಸ್ ಇಂಡಿಯಾ, ಬಾಲಿವುಡ್ ನಟಿ ತನುಶ್ರೀ ದತ್ತಾ ವರ್ಷಗಳ ಕಾಲ ವಿದೇಶದಲ್ಲಿದ್ದರು. ಇದೇ ವರ್ಷ ಜುಲೈನಲ್ಲಿ ಭಾರತಕ್ಕೆ ಹಿಂತಿರುಗಿರುವ ನಟಿ ಬೆಳ್ಳಿತೆರೆಗೆ ಮರಳುವ ಬಗ್ಗೆ ಆಲೋಚಿಸುತ್ತಿದ್ದಾರೆ. ಈ ಮಧ್ಯೆ ಟೀವಿ ಸಂದರ್ಶನವೊಂದರಲ್ಲಿ ಅವರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿರುವುದು ಬಾಲಿವುಡ್‌ನಲ್ಲಿ ಸುದ್ದಿಯಾಗಿದೆ. #MeToo ಅಭಿಯಾನದ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದಿದೆ. ಹತ್ತು ವರ್ಷಗಳ ಹಿಂದೆ ‘ಹಾರ್ನ್ ಓಕೆ ಪ್ಲೀಸ್‌’ ಹಿಂದಿ ಸಿನಿಮಾ ಚಿತ್ರೀಕರಣದ ವೇಳೆ ನಟ ನಾನಾ ಪಾಟೇಕರ್‌ ತಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರು ಎಂದಿದ್ದಾರೆ ತನುಶ್ರೀ.

ಖಾಸಗಿ ಟೀವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿನ ತನುಶ್ರೀ ಮಾತು ಬಾಲಿವುಡ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಕರಣದ ಬಗ್ಗೆ ಗೊತ್ತಿದ್ದರೂ ಉದ್ಯಮದಲ್ಲಿ ಯಾರೂ ಮಾತನಾಡಲಿಲ್ಲ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮಹಿಳೆಯರ ಬಗ್ಗೆ ನಾನಾ ಪಾಟೇಕರ್‌ ಅವರಿಗೆ ಗೌರವವಿಲ್ಲ. ಇದು ಉದ್ಯಮದ ಒಳಗಿನವರಿಗೆ ಗೊತ್ತಿದೆ. ಅವರು ನಟಿಯರಿಗೆ ಹೊಡೆದಿದ್ದಾರೆ, ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಮಹಿಳೆಯರೊಂದಿಗೆ ನಾನಾ ಒರಟಾಗಿ ನಡೆದುಕೊಳ್ಳುತ್ತಾರೆ ಎನ್ನುವುದು ಗೊತ್ತಿದ್ದರೂ ಮಾಧ್ಯಮಗಳು ಇದನ್ನು ಅಚ್ಚು ಮಾಡಿಲ್ಲ” ಎಂದಿದ್ದಾರೆ ತನುಶ್ರೀ.

ನಟರ ಕೆಟ್ಟ ನಡವಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗುವುದಿಲ್ಲ ಎನ್ನುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ. “ಉದ್ಯಮದಲ್ಲಿರುವ ನಾವು ನಟಿಯರು ಇಂತಹ ಹಲವು ಕೆಟ್ಟ ಸಂದರ್ಭಗಳನ್ನು ಎದುರಿಸಿರುತ್ತೇವೆ. ಹಲವರು ಇದನ್ನು ಗಾಸಿಪ್ ಎಂದು ಅಲ್ಲಗಳೆಯುತ್ತಾರೆ. ಆದರೆ ನಟರು ಇಂತಹ ಪ್ರಕರಣಗಳಲ್ಲಿ ಹುಷಾರಾಗಿ ಜಾರಿಕೊಳ್ಳುತ್ತಾರೆ. ಬಡ ರೈತರಿಗೆ ಸಹಾಯ ಮಾಡುವವರಂತೆ ತೋರಿಸಿಕೊಳ್ಳುತ್ತಾರೆ. ಅವರು ಅದೆಷ್ಟು ಹಣ ಕೊಡುತ್ತಾರೋ, ಇಲ್ಲವೋ ಅದೂ ತಿಳಿಯುವುದಿಲ್ಲ. ಇದೊಂದು ರೀತಿ ಶೋ” ಎಂದಿದ್ದಾರೆ ಆಕೆ.

ನಟಿ ತನುಶ್ರೀ ತಮ್ಮ ನಿರ್ಭಿಡೆಯ ನಡೆ-ನುಡಿಯಿಂದ ಆಗ ಸುದ್ದಿಯಾಗುತ್ತಿದ್ದರು. 2008ರಲ್ಲಿ ಅವರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾನಹಾನಿಯಾಗಿದೆ ಎಂದು ಸಿನೆ ಮತ್ತು ಟೆಲಿವಿಷನ್‌ ಆರ್ಟಿಸ್ಟ್ಸ್‌ ಅಸೋಸಿಯೇಷನ್‌ಗೆ ದೂರು ನೀಡಿದ್ದರು. ‘ಹಾರ್ನ್‌ ಓಕೆ ಪ್ಲೀಸ್‌’ ಚಿತ್ರೀಕರಣದ ವೇಳೆ ನಾನಾ ಪಾಟೇಕರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಚಿತ್ರದಿಂದ ಹೊರನಡೆದಿದ್ದರು. ಚಿತ್ರತಂಡದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಹೊತ್ತಿಗಾಗಲೇ ಅವರ ಜಾಗಕ್ಕೆ ರಾಖಿ ಸಾವಂತ್ ಆಯ್ಕೆಯಾಗಿದ್ದರು. “ಸಹನಟರು ತಮ್ಮೊಂದಿಗೆ ನಟಿಸುವ ನಟಿಯರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಅವರು ತಪ್ಪಾಗಿ ನಡೆದುಕೊಂಡರೆ ಚಿತ್ರತಂಡದ ಇತರರೂ ನಟಿಯರನ್ನು ಹಗುರವಾಗಿ ಕಾಣುತ್ತಾರೆ” ಎಂದು ಸಂದರ್ಶನದಲ್ಲಿ ತನುಶ್ರೀ ಮಾತನಾಡಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More