ವಿಡಿಯೋ | ‘ಅಂಬಿ ನಿಂಗೆ ವಯಸ್ಸಾಯ್ತೋ’ ತಮ್ಮ ಕೊನೆಯ ಸಿನಿಮಾ ಎಂದ ಅಂಬರೀಶ್‌

ಅಂಬರೀಶ್‌ ತಮ್ಮ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಬಗ್ಗೆ ಅಪಾರ ವಿಶ್ವಾಸವಿಟ್ಟಿದ್ದಾರೆ. ಈ ಸಿನಿಮಾ ಮಾಡುವಂತೆ ಗೆಳೆಯ ರಜನೀಕಾಂತ್ ಸಲಹೆ ಮಾಡಿದ್ದು, ತಾವು ಚಿತ್ರಕತೆ ಇಷ್ಟಪಟ್ಟಿದ್ದು, ನಿರ್ದೇಶಕರ ಆಯ್ಕೆ ಸೇರಿದಂತೆ ಚಿತ್ರೀಕರಣದ ಅನುಭವಗಳನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ

ತಾವು ತುಂಬಾ ಪ್ರೀತಿಯಿಂದ ನಟಿಸಿದ ಸಿನಿಮಾ ಇದು ಎನ್ನುತ್ತಾರೆ ಅಂಬರೀಶ್‌. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ‘ಅಂಬಿ ನಿಂಗ್ ವಯಸ್ಸಾಯ್ತೋ’ ಇಂದು (ಸೆ.27) ತೆರೆಕಂಡಿದೆ. ಅಂಬರೀಶ್‌ ಈ ಸಿನಿಮಾ ಹಾಗೂ ಚಿತ್ರತಂಡದ ಬಗೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದು ತಮ್ಮ ಕೊನೆಯ ಚಿತ್ರ ಎನ್ನುತ್ತಲೇ ಮಾತಿಗಿಳಿದ ಅಂಬಿ, ತುಸು ಭಾವುಕರಾಗಿಯೇ ಚಿತ್ರದ ಕುರಿತಾದ ತಮ್ಮ ಅನುಭವಗಳನ್ನು ಹಂಚಿಕೊಂಡರು.

“ಗೆಳೆಯ ರಜನೀಕಾಂತ್ ನನಗೊಮ್ಮೆ ಕರೆ ಮಾಡಿ, “ಹೀಗೊಂದು ಚಿತ್ರವಿದೆ, ನಿನಗೆ ಒಪ್ಪುವಂಥದ್ದು. ಈ ಚಿತ್ರವನ್ನು ನೀನೇ ಮಾಡಬೇಕು,” ಎಂದು ಸಲಹೆ ನೀಡಿದ್ದರು. ಸರಿ ನೋಡೋಣ ಎಂದು ಸುಮ್ಮನಾಗಿದ್ದೆ, ‘ಪಾ ಪಾಂಡಿ’ ಚಿತ್ರವನ್ನು ವೀಕ್ಷಿಸಿದ ಬಳಿಕ ರಜನಿ ಮಾತು ನಿಜವೆನಿಸಿತು. ಚಿತ್ರದ ಕತೆ ಮನಸ್ಸಿಗೆ ತೀರಾ ಹತ್ತಿರವಾಯ್ತು. ನಿರ್ಮಾಪಕ ಜ್ಯಾಕ್ ಮಂಜು ನನ್ನ ಮನೆಗೆ ಬಂದು, ‘ಈ ಚಿತ್ರವನ್ನು ನೀವು ಮಾಡಲೇಬೇಕು’ ಎಂದು ಕೇಳಿಕೊಂಡರು. ಮೂಲ ಕತೆಯ ಅರಿವಿದ್ದರಿಂದ ತಕರಾರುಗಳಿಲ್ಲದೆ ಒಪ್ಪಿಕೊಂಡೆ,” ಎನ್ನುವ ಅವರಿಗೆ, ಮುಂದೆ ಮತ್ತೊಂದು ಸವಾಲು ಎದುರಾಗಿತ್ತು.

ಇದನ್ನೂ ಓದಿ : ಜನುಮದಿನ | ಅಂಬರೀಶ್‌ ಸಿನಿಮಾಗಳ ಜನಪ್ರಿಯ ವಿಡಿಯೋ ಹಾಡುಗಳ ಗುಚ್ಛ

ಪಾತ್ರ ಒಪ್ಪಿಕೊಂಡಿದ್ದೇ ಅಂಬರೀಶ್ ಹರೆಯದಲ್ಲಿನ ಲುಕ್‌ಗಾಗಿ ಸುದೀಪ್, ದರ್ಶನ್‌, ಪುನೀತ್‌ ಹೀಗೆ ಯಾರನ್ನಾದರೂ ಒಪ್ಪಿಸಿ ಎಂದು ನಿರ್ಮಾಪಕರು ಅವರ ಬೆನ್ನಿಗೆ ಬಿದ್ದಿದ್ದಾರೆ. “ಅಯ್ಯೋ ರಾಮಾ, ಇವರನ್ನೆಲ್ಲ ಒಪ್ಪಿಸುವುದಾದರೆ ನಾನೇ ಸಿನಿಮಾ ಮಾಡ್ತಿದ್ದೆ ಎಂದು ಮನಸ್ಸಿನಲ್ಲೇ ಅಂದುಕೊಂಡೇ ಸುದೀಪ್‌ಗೆ ನನ್ನ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಂಡೆ. ಆತ ಪ್ರೀತಿಯಿಂದಲೇ ಒಪ್ಪಿಕೊಂಡು ನಮ್ಮ ಜೊತೆಯಾದ. ಮೊದಲು ನಂದಕಿಶೋರ್ ಈ ಚಿತ್ರ ನಿರ್ದೇಶಿಸುವುದೆಂದಾಗಿತ್ತು. ಸುದೀಪ್, ನಂದಕಿಶೋರ್ ಕೆಲವು ಬಾರಿ ನನ್ನನ್ನು ಭೇಟಿಯಾಗಿ ಚಿತ್ರದ ಕುರಿತು ಮಾತನಾಡಿದ್ದರು. ಇದ್ದಕ್ಕಿದ್ದಂತೆ ಸುದೀಪ್ ಕರೆ ಮಾಡಿ ನಿರ್ದೇಶಕರು ಕಾರಣಾಂತರಗಳಿಂದ ನಮ್ಮ ಚಿತ್ರವನ್ನು ಮಾಡಲಾಗುತ್ತಿಲ್ಲವಂತೆ ಎಂದ. ‘ಸರಿ ಮಾತಾಡೋಣ ಬಿಡು’ ಎಂದು ಸುಮ್ಮನಾಗಿದ್ದೆ,” ಎಂದು ಚಿತ್ರದ ಆರಂಭದ ದಿನಗಳನ್ನು ಅವರು ನೆನಪು ಮಾಡಿಕೊಳ್ಳುತ್ತಾರೆ.

ಮುಂದೆ ನಂದಕಿಶೋರ್ ಬದಲಿಗೆ ಸುದೀಪ್ ಸಹಾಯಕ ಗುರು ಚಿತ್ರದ ನಿರ್ದೇಶಕರಾದರು. ಸುದೀಪ್ ಹಿಂದೇಟು ಹಾಕುತ್ತಲೇ ಈ ವಿಷಯ ಪ್ರಸ್ತಾಪಿಸಿದ್ದರಂತೆ. “ನೀವು ಒಪ್ಕೋತೀರ ಅನ್ನೋದಾದ್ರೆ, ನನ್ನ ಜೊತೆಗೊಬ್ಬ ಹುಡುಗ ಸಹನಿರ್ದೇಶಕನಾಗಿ ಕೆಲಸ ಮಾಡ್ತಿದ್ದಾನೆ, ಚುರುಕಾಗಿದ್ದಾನೆ. ಈ ಚಿತ್ರದ ಮೂಲಕ ಆತನನ್ನ ನಿರ್ದೇಶಕನನ್ನಾಗಿ ಪರಿಚಯ ಮಾಡಬಹುದು’ ಎಂದ. ಸರಿ ನೋಡೋಣ ಕಳಿಸಿಕೊಡು ಎಂದೆ. ಹೊಸ ನಿರ್ದೇಶಕರಾದರೆ ನಮಗೆ ಹೆದರಿಕೊಂಡು ಕೆಲಸ ಮಾಡ್ತಾರೆಂಬ ಸ್ವಾರ್ಥವೂ ನನ್ನಲ್ಲಿತ್ತು. ನಂತರ ಗುರು ಮನೆಗೆ ಬಂದ. ಅನುಮಾನದಲ್ಲೇ ಒಪ್ಪಿಕೊಂಡೆ,” ಎಂದರು ಅಂಬರೀಶ್‌.

ಯುವ ನಿರ್ದೇಶಕ ಗುರುದತ್ತ ಗಾಣಿಗ ಪಾಲಿಗೆ ಇದು ಸ್ವತಂತ್ರ ನಿರ್ದೇಶನದ ಚೊಚ್ಚಲ ಸಿನಿಮಾ. ಮೊದಲ ಚಿತ್ರದಲ್ಲೇ ದಿಗ್ಗಜ ನಟರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಪುಣ್ಯ ಎನ್ನುತ್ತಾರೆ ಗುರು. ಅಂಬರೀಶ್ ಸೇರಿದಂತೆ ಹಿರಿಯ ನಟಿ ಸುಹಾಸಿನಿ, ಸುದೀಪ್ ಹಾಗೂ ಶೃತಿ ಹರಿಹರನ್- ಹೀಗೆ ಬಹುತಾರಾಬಳಗದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಕಿಚ್ಚ ಕ್ರಿಯೇಶನ್ಸ್‌ ಮತ್ತು ಕೆಎಸ್‌ಕೆ ಶೋ ರೀಲ್‌ ಪ್ರೊಡಕ್ಷನ್‌ ಹೌಸ್‌ ಬ್ಯಾನರ್‌ನಡಿ ತಯಾರಾಗಿದೆ. ಸಂಗೀತ ಸಂಯೋಜನೆ ಅರ್ಜುನ್ ಜನ್ಯ ಅವರದು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More