ಚಿತ್ರವಿಮರ್ಶೆ | ಮಣಿರತ್ನಂ ‘ಕಡುಗೆಂಪು ಆಗಸ’ದಲ್ಲಿ ಮನರಂಜನೆಯೇ ಮುಖ್ಯ ಬಣ್ಣ

ಅಧಿಕಾರ ಮತ್ತು ಹಣಕ್ಕಾಗಿ ನಡೆಯುವ ಸ್ಪರ್ಧೆಯೇ ‘ಚೆಕ್ಕ ಚಿವಂತ ವಾನಂ’ ಜೀವಾಳ. ಇಲ್ಲಿ ಸಂಬಂಧ ಮತ್ತು ಭಾವನೆಗಳೂ ಅಪರಾಧದ ಜಗತ್ತಿನ ರಂಗನ್ನು ಹೊದ್ದು ಮಲಗಿವೆ. ಮಣಿರತ್ನಂರ ಸಾಮಾನ್ಯ ಪ್ರೇಮಕತೆಗಳಿಗೆ ಭಿನ್ನವಾದ ಹಿಂಸೆಯನ್ನೇ ರಾರಾಜಿಸುವ ಈ ಸಿನಿಮಾದಲ್ಲಿ ಹೊಸತನವಿದೆ

ಮಣಿರತ್ನಂ ಇತ್ತೀಚೆಗೆ ನಿರ್ದೇಶಿಸಿದ ಮೂರು ಪ್ರೇಮಕತೆಗಳಿಗೆ ಜನರು ಹೆಚ್ಚೇನೂ ಪ್ರೋತ್ಸಾಹ ಕೊಟ್ಟಿರಲಿಲ್ಲ. ಹೀಗಾಗಿ, ಹೊಸತನದ ಹಾದಿಯಲ್ಲಿ ಮಣಿರತ್ನಂ ಭಿನ್ನ ಕತೆಯನ್ನು ಆರಿಸಿದ್ದಾರೆ. ‘ಚೆಕ್ಕ ಚಿವಂತ ವಾನಂ’ (ಕಡುಗೆಂಪು ಆಗಸ) ಸಿನಿಮಾದಲ್ಲಿ ಯಾರು ನಾಯಕ ಅಥವಾ ಯಾರು ಖಳನಾಯಕ ಎನ್ನುವ ರಹಸ್ಯವೇ ಸಿನಿಮಾವನ್ನು ಕೊನೆಯ ಘಟ್ಟದವರೆಗೂ ಕುತೂಹಲದಿಂದ ನೋಡುವಂತೆ ಮಾಡುತ್ತದೆ.

ಚೆನ್ನೈ ನಗರದ ದೊಡ್ಡ ಗ್ಯಾಂಗ್‌ಸ್ಟರ್ ಸೇನಾಪತಿ (ಪ್ರಕಾಶ್ ರೈ) ಮತ್ತು ಆತನ ಮೂವರು ಮಕ್ಕಳಾದ ವರದನ್ (ಅರವಿಂದ ಸ್ವಾಮಿ), ತ್ಯಾಗು (ಅರುಣ್ ವಿಜಯ್) ಮತ್ತು ಎತಿ (ಸಿಂಭು) ನಡುವೆ ಅಧಿಕಾರ ಮತ್ತು ಹಣಕ್ಕಾಗಿ ನಡೆಯುವ ಸ್ಪರ್ಧೆಯೇ ಕತೆಯ ಜೀವಾಳ. ಹಣ ಮತ್ತು ಕೊಲೆಯ ಭಾಷೆಯನ್ನೇ ಮಾತನಾಡುವ ದೊಡ್ಡ ಗ್ಯಾಂಗ್‌ಸ್ಟರ್‌ ಸೇನಾಪತಿ ನಗರದ ಪ್ರಸಿದ್ಧ ಉದ್ಯಮಿಯಾಗಿ ಬೆಳೆದಿದ್ದಾನೆ, ತನ್ನ ಮಕ್ಕಳಿಗೂ ಅದೇ ಭಾಷೆಯನ್ನು ಕಲಿಸಿದ್ದ ಕೂಡ. ಆದರೆ ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ನಿಯಂತ್ರಿಸುವುದು ಸ್ವತಃ ಸೇನಾಪತಿಗೂ ಹೇಗೆ ಅಸಾಧ್ಯವಾಯಿತು ಎಂಬುದು ಕತೆ.

ಮಣಿರತ್ನಂ ಅವರ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಭಾವನೆಗಳಿಗೆ ಹೆಚ್ಚು ಮಹತ್ವ. ಇದೀಗ ಗ್ಯಾಂಗ್‌ಸ್ಟರ್‌ ಸಾಮ್ರಾಜ್ಯದ ಒಳಗೂ ಭಾವನೆಗಳನ್ನು ಹುಡುಕುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಗ್ಯಾಂಗ್‌ಸ್ಟರ್ ಸೇನಾಪತಿಯ ಮೂವರು ಮಕ್ಕಳು ಭಾವನಾತ್ಮಕವಾಗಿ ಬಹಳ ಆತ್ಮೀಯರು ಮತ್ತು ಆಪ್ತರು. ಹಾಗಿದ್ದರೂ ಹಣ ಮತ್ತು ಅಪ್ಪನ ಆಸ್ತಿಗಾಗಿ ಪರಸ್ಪರರಿಗೆ ವಂಚಿಸುತ್ತಾರೆ. ವರದನ್ ಮತ್ತು ಪತ್ನಿ ಚಿತ್ರಾ (ಜ್ಯೋತಿಕಾ) ಬಹಳ ಆಪ್ತವಾಗಿ ಎಲ್ಲವನ್ನೂ ಹಂಚಿಕೊಳ್ಳುವ ದಂಪತಿ. ಚಿತ್ರಾ ಕೊನೆ ಕ್ಷಣದವರೆಗೂ ಪತಿಯ ಜೊತೆಗಿದ್ದೇ ಪ್ರಾಣ ಕಳೆದುಕೊಳ್ಳುತ್ತಾಳೆ. ಆದರೂ ವರದನ್‌ಗೆ ಮತ್ತೊಬ್ಬ ಯುವತಿ (ಅದಿತಿ ಹೈದರಿ) ಜೊತೆ ಸಂಬಂಧವಿರುತ್ತದೆ. ಆ ಸಂಬಂಧವನ್ನು ತಿಳಿದೂ ಜ್ಯೋತಿಕಾ ಪತಿಗಾಗಿ ಮರುಗಿ, ಕುಕೃತ್ಯಗಳ ಹೊರತಾಗಿಯೂ ಆತನನ್ನು ಪ್ರೀತಿಸುತ್ತಾಳೆ. ಮಣಿರತ್ನಂ ಅವರ ಸಿನಿಮಾದಲ್ಲಿ ಸಾಮಾನ್ಯವಾಗಿ ಕಾಣುವ ಭಾವನಾತ್ಮಕ ಮತ್ತು ಪ್ರಾಮಾಣಿಕ ಸಂಬಂಧಗಳು ಈ ಸಿನಿಮಾದಲ್ಲಿ ಇಲ್ಲ. ಇಲ್ಲಿ ಎಲ್ಲವೂ ಸ್ವಾರ್ಥ. ಸಂಬಂಧಗಳು ಎಷ್ಟು ಆಪ್ತವಾಗಿ ಕಾಣುತ್ತದೋ ಅಷ್ಟೇ ಸಡಿಲವಾಗಿರುತ್ತವೆ. ಅಪರಾಧದ ಜಗತ್ತಿನಲ್ಲಿ ಕಾಲಿಟ್ಟಾಗ ಎಷ್ಟೇ ಆತ್ಮೀಯತೆ ಇದ್ದರೂ, ಪ್ರತಿಯೊಬ್ಬರೂ ಪರಸ್ಪರರ ಕಾಲೆಳೆಯುವವರೇ. ಸ್ನೇಹವೂ ಇಲ್ಲಿ ಪ್ರಾಮಾಣಿಕವಲ್ಲ.

ಪೊಲೀಸ್ ಅಧಿಕಾರಿ ಮತ್ತು ಗ್ಯಾಂಗ್‌ಸ್ಟರ್‌ನ ಸ್ನೇಹಿತ ರಸೂಲ್ (ವಿಜಯ್ ಸೇತುಪತಿ) ಅವರದೂ ಇಂತಹ ಒಳಗೊಂದು ಮತ್ತು ಹೊರಗೊಂದು ಮುಖವಾಡದ ಪಾತ್ರ. ಆದರೆ, ಮಣಿರತ್ನಂ ಸಿನಿಮಾಗಳಿಗೆ ಅಗತ್ಯವಿರುವ ದೃಢ ಪಾತ್ರ ಅವರದು. ಅಂತಿಮವಾಗಿ ಸಿನಿಮಾದ ಹೀರೋ ಆಗಿ ಮಿಂಚುವ ವ್ಯಕ್ತಿ. ಸ್ನೇಹಿತನಾಗಿ ಕೊನೆಯವರೆಗೂ ವರದನ್‌ನ ಜೊತೆಗಿರುತ್ತಾನೆ ರಸೂಲ್. ಆದರೆ, “ಆಪ್ತ ಸ್ನೇಹಿತನಿದ್ದರೆ ಆತನನ್ನು ನಂಬಬೇಡ,” ಎಂದು ಬುದ್ಧಿ ಹೇಳುವ ವಾಕ್ಯವೂ ಸಿನಿಮಾದಲ್ಲಿ ಬರುತ್ತದೆ.

ಮಾತುಗಳ ಅಗತ್ಯವೇ ಇಲ್ಲದೆ, ದೃಶ್ಯಗಳ ಮೂಲಕವೇ ಮಣಿರತ್ನಂ ಕತೆ ಹೇಳುತ್ತಾರೆ. ನಟನೆ ಬಗ್ಗೆ ಮಾತೇ ಎತ್ತುವ ಹಾಗಿಲ್ಲ. ಪ್ರಕಾಶ್ ರೈ, ಅರವಿಂದ ಸ್ವಾಮಿ, ಜ್ಯೋತಿಕಾ, ಅರುಣ್ ವಿಜಯ್, ಸಿಂಭು, ವಿಜಯ್ ಸೇತುಪತಿ, ಅದಿತಿ ಹೈದರಿ ಎಲ್ಲರದೂ ಅತ್ಯುತ್ತಮ ಅಭಿನಯ. ಈ ಪಾತ್ರಗಳ ನಿರ್ವಹಣೆ ಮತ್ತು ಅಭಿನಯವೇ ಚಿತ್ರದ ಜೀವಾಳ.

ವಿಶೇಷವಾದ ಆಕ್ಷನ್‌ಗಳಿಲ್ಲ, ದುಬಾರಿ ಖರ್ಚು ಬೀಳುವ ಸಾಹಸ ದೃಶ್ಯಗಳ ಅಗತ್ಯವೂ ಕಾಣುವುದಿಲ್ಲ, ರೋಮಾಂಚಕ ಎನಿಸುವ ಚೇಸಿಂಗ್ ದೃಶ್ಯವೂ ಸಿನಿಮಾದಲ್ಲಿ ಇಲ್ಲ. ಹಾಗಿದ್ದರೂ ಪ್ರತಿ ಆಕ್ಷನ್‌ ದೃಶ್ಯವೂ ಖುಷಿ ಕೊಡುತ್ತವೆ. ಹಾಗೆ ನೋಡಿದರೆ, ರುದ್ರರಮಣೀಯ ಎನಿಸುವುದು ಸಿನಿಮಾದ ಕೊನೆಯ ದೃಶ್ಯ. ಎಲ್ಲ ಆಕ್ಷನ್‌ಗಳೂ ಮುಗಿದು ಚಿತ್ರದ ಕೊನೆಯ ಘಟ್ಟ ತಲುಪಿದಾಗ ರೋಮಾಂಚಕ ಎನಿಸುವ ಕಣಿವೆಯ ದೃಶ್ಯವನ್ನು ತೋರಿಸುತ್ತ ಸಿನಿಮಾ ಮುಕ್ತಾಯಗೊಳ್ಳುತ್ತದೆ.

ಸಿನಿಮಾ ಎಲ್ಲೂ ಬೋರ್ ಹೊಡೆಸುವುದಿಲ್ಲ. ಎಲ್ಲೂ ಕತೆ ಎಳೆದಂತೆ ಭಾಸವಾಗುವುದಿಲ್ಲ. ಬಹಳ ಬಿಗಿಯಾದ ನಿರೂಪಣೆ ಇದೆ. ಸರಳವಾದ ಕತೆ. ಪ್ರತಿಭಾವಂತ ನಟರು ಸಿನಿಮಾವನ್ನು ಕೊನೆಯ ಕ್ಷಣದವರೆಗೂ ಹಿಡಿದಿಡುತ್ತಾರೆ. ಕೆಲವೊಂದು ರಹಸ್ಯಗಳು ಕೊನೆಯ ದೃಶ್ಯದವರೆಗೂ ಬಿಚ್ಚಿಕೊಳ್ಳುವುದಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ, ಮನೋರಂಜನೆ ಬಯಸಿ ಹೋಗುವವರಿಗೆ ಸಿನಿಮಾ ಮೋಸ ಮಾಡುವುದಿಲ್ಲ. ಹೊಸ ಸಿನಿಮಾ ನಿರ್ದೇಶಕನೊಬ್ಬನ ನಿರ್ದೇಶನ ನೋಡಿದ ತಾಜಾತನ ಸಿನಿಮಾದಲ್ಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More