ಟ್ರೈಲರ್‌ | ಅಮಿತಾಭ್‌, ಅಮೀರ್‌ ಆಕ್ಷನ್-ಡ್ರಾಮಾ ‘ಥಗ್ಸ್‌ ಆಫ್ ಹಿಂದೂಸ್ತಾನ್‌’

ಯಶ್‌ರಾಜ್‌ ಫಿಲ್ಸ್ಮ್‌ನ ‘ಥಗ್ಸ್ ಆಫ್‌ ಹಿಂದೂಸ್ತಾನ್‌’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. 17ನೇ ಶತಮಾನದಲ್ಲಿ ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ ಸಿಡಿದೇಳುವ ವೀರರ ಕಥಾನಕವಿದು. ಅಮಿತಾಭ್ ಮತ್ತು ಅಮೀರ್ ಮೊದಲ ಬಾರಿ ಜೊತೆಯಾಗಿರುವ ಈ ಸಿನಿಮಾ ನವೆಂಬರ್‌ 8ರಂದು ತೆರೆಕಾಣಲಿದೆ

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಥಗ್ಸ್ ಆಫ್ ಹಿಂದೂಸ್ತಾನ್‌’ ಟ್ರೈಲರ್ ಬಿಡುಗಡೆಯಾಗಿದೆ. ಬಹುತಾರಾಗಣದ ಇದೊಂದು ಆಕ್ಷನ್‌ ಪ್ಯಾಕ್ಡ್‌ ಪೀರಿಯಡ್‌ ಡ್ರಾಮಾ ಎನ್ನುವುದರ ಸುಳಿವು ಸಿಗುತ್ತದೆ. 1795ರ ಅವಧಿಯಲ್ಲಿ ನಡೆಯುವ ಕಥಾನಕ. ವ್ಯಾಪಾರಕ್ಕೆಂದು ಬರುವ ಈಸ್ಟ್‌ ಇಂಡಿಯಾ ಕಂಪನಿಯವರು ಬಾರತದಲ್ಲಿ ಅಧಿಕಾರ ಹಿಡಿಯುತ್ತಾರೆ. ಇವರ ದಾರಿಗೆ ಆಜಾದ್‌ (ಅಮಿತಾಭ್ ಬಚ್ಚನ್‌) ಮತ್ತು ಝಾಫಿರಾ (ಫಾತಿಮಾ ಸನಾ ಶೇಕ್‌) ಮುಳ್ಳಾಗುತ್ತಾರೆ. ಆಜಾದ್ ಕತ್ತಿವರಸೆ ಪರಿಣಿತ, ಝಾಫಿರಾ ಅತ್ಯುತ್ತಮ ಬಿಲ್ಲುಗಾರ್ತಿ ಎನ್ನುವುದರ ಸುಳಿವು ಟ್ರೈಲರ್‌ನಲ್ಲಿ ಸಿಗುತ್ತದೆ. ತಮ್ಮ ದಾರಿಗೆ ಅಡ್ಡಿಯಾಗಿರುವ ಆಜಾದ್‌ನನ್ನು ಮಟ್ಟಹಾಕಲು ಬ್ರಿಟಿಷರು ಫಿರಂಗಿಯನ್ನು (ಅಮೀರ್ ಖಾನ್‌) ಕರೆತರುತ್ತಾರೆ.

ಇದನ್ನೂ ಓದಿ : ಟೀಸರ್ | ಬಯಲಾಯಿತು ‘ಥಗ್ಸ್‌ ಆಫ್ ಹಿಂದೂಸ್ತಾನ್’ನ ಅಮಿತಾಭ್‌ ಲುಕ್

ಜಾನ್‌ ಕ್ಲೈವ್‌ ಬ್ರಿಟಿಷ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ನೃತ್ಯದ ಸನ್ನಿವೇಶಗಳಲ್ಲಿ ಕಾಣಿಸುವ ಕತ್ರೀನಾ ಕೈಫ್ ಪಾತ್ರದ ಬಗ್ಗೆ ಟ್ರೈಲರ್‌ನಲ್ಲಿ ಸರಿಯಾದ ಚಿತ್ರಣ ಸಿಗುವುದಿಲ್ಲ. ಗ್ರಾಫಿಕ್ಸ್‌ನಲ್ಲಿ ರೂಪಿಸಿರುವ ಸಾಗರದ ಮೇಲಿನ ಹಡಗಿನಲ್ಲಿನ ಆಕ್ಷನ್‌ ಸೀನ್‌ಗಳು ಮತ್ತು ಹಿನ್ನೆಲೆ ಸಂಗೀತವು ‘ಪೈರೇಟ್ಸ್ ಆಫ್ ಕೆರೇಬಿಯನ್‌’ ಇಂಗ್ಲಿಷ್‌ ಚಿತ್ರವನ್ನು ನೆನಪಿಸುತ್ತವೆ. ಅಮೀರ್ ಖಾನ್‌ ವೇಷ-ಭೂಷಣ, ಭಾಷೆ ತಮಾಷೆಯಾಗಿದೆ. ಬಹುಶಃ ಚಿತ್ರದ ಹಾಸ್ಯ ವಿಭಾಗವನ್ನೂ ಅವರ ಪಾತ್ರ ಒಳಗೊಂಡಿರಬಹುದು.

ಅಮಿತಾಭ್ ಬಚ್ಚನ್ ಮತ್ತು ಅಮೀರ್ ಖಾನ್‌ ‘ಥಗ್ಸ್ ಆಫ್ ಹಿಂದೂಸ್ತಾನ್‌’ ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನು, ಕತ್ರೀನಾ ಕೈಫ್ ಜೊತೆ ಅಮೀರ್ ‘ಧೂಮ್‌ 3’ ಚಿತ್ರದಲ್ಲಿ ನಟಿಸಿದ್ದರು. ‘ಧೂಮ್‌ 3’ ನಿರ್ದೇಶಿಸಿದ್ದ ವಿಜಯ್ ಕೃಷ್ಣ ಆಚಾರ್ಯ ಅವರೇ ‘ಥಗ್ಸ್‌ ಆಫ್ ಹಿಂದೂಸ್ತಾನ್‌’ ಸಾರಥ್ಯ ವಹಿಸಿದ್ದಾರೆ. 2016ರಲ್ಲಿ ತೆರೆಕಂಡ ‘ದಂಗಲ್‌’ (2016) ಚಿತ್ರದಲ್ಲಿ ನಟಿಸಿದ್ದ ಫಾತಿಮಾ ಸನಾ ಶೇಖ್‌ ಅವರಿಗೆ ಇದು ಎರಡನೇ ಸಿನಿಮಾ. ನವೆಂಬರ್ 8ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More