ವಿವಾಹೇತರ ಸಂಬಂಧ; ಬಾಲಿವುಡ್‌ನಲ್ಲಿ ಗಮನ ಸೆಳೆದ ವಿಶಿಷ್ಟ ಪ್ರಯೋಗಗಳು

ಅಕ್ರಮ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಚರ್ಚೆಗೆ ಆಸ್ಪದ ನೀಡಿದ್ದು, ಸಾಕಷ್ಟು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬಾಲಿವುಡ್‌ನಲ್ಲಿ ದಶಕಗಳ ಹಿಂದೆಯೇ ಈ ಕುರಿತ ಸಿನಿಮಾಗಳು ತಯಾರಾಗಿದ್ದು, ಅಂತಹ ಚಿತ್ರಗಳತ್ತ ಇಣುಕುನೋಟ ಇಲ್ಲಿದೆ

ಭಾರತದ ಸಂದರ್ಭದಲ್ಲಿ ಮದುವೆ ಎನ್ನುವುದು ಪವಿತ್ರ ಸಂಬಂಧ. ಪ್ರೀತಿ, ನಂಬಿಕೆ, ನಿಷ್ಠೆ, ಗೌರವದ ತಳಹದಿಯಲ್ಲಿ ಪತಿ-ಪತ್ನಿ ಸಂಸಾರ ಸಾಗಿಸಬೇಕು. ಇಲ್ಲಿ ಒಂದಿಷ್ಟು ತೊಡಕಾದರೂ ದಾಂಪತ್ಯ ಬದುಕು ಹದಗೆಡುತ್ತದೆ. ಹಣ, ಅಧಿಕಾರ, ಲೈಂಗಿಕತೆಯ ವಿಚಾರಗಳಲ್ಲಿನ ಮನುಷ್ಯರ ದೌರ್ಬಲ್ಯಗಳಿಂದಾಗಿ ದಾಂಪತ್ಯ ಜೀವನ ಹಳಿ ತಪ್ಪುತ್ತದೆ. ಈ ಹಿನ್ನೆಲೆಯಲ್ಲಿ ಅಕ್ರಮ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎನ್ನುವ ಸುಪ್ರೀಂ ಕೋರ್ಟ್‌ ತೀರ್ಪು ಚರ್ಚೆಗೆ ಆಸ್ಪದ ನೀಡಿದೆ. ಬಾಲಿವುಡ್‌ನಲ್ಲಿ ಬ್ಲಾಕ್‌ ಅಂಡ್ ವೈಟ್‌ ಸಿನಿಮಾಗಳ ಅವಧಿಯಲ್ಲೇ ಈ ವಿಚಾರವಾಗಿ ಕತೆಗಳು ಬಂದಿವೆ. ಮೊನ್ನೆಯಷ್ಟೇ ತೆರೆಕಂಡ ‘ಮನ್‌ಮರ್ಝಿಯಾ’ ಚಿತ್ರದಲ್ಲೂ ವಿವಾಹೇತರ ಸಂಬಂಧದ ವಿಚಾರ ಪ್ರಸ್ತಾಪವಿತ್ತು. ವಿವಾಹೇತರ ಸಂಬಂಧದ ಕುರಿತ ಕಥಾವಸ್ತುವಿನ ಹಿಂದಿ ಚಿತ್ರಗಳತ್ತ ಒಂದು ಇಣುಕುನೋಟ ಇಲ್ಲಿದೆ.

ಗೈಡ್‌‌ (1965) | ಆರ್‌ ಕೆ ನಾರಾಯಣ್‌ ಅವರ ಕೃತಿಯನ್ನು ಆಧರಿಸಿದ ‘ಗೈಡ್‌’ ಚಿತ್ರದಲ್ಲಿ ನಿರ್ದೇಶಕ ವಿಜಯ್ ಆನಂದ್ ಅಕ್ರಮ ಸಂಬಂಧದ ವಸ್ತುವನ್ನು ಅತ್ಯಂತ ಸೂಕ್ಷ್ಮವಾಗಿ ಹೇಳಿದ್ದರು. ಈ ಬಗ್ಗೆ ಮಾತನಾಡುವುದೇ ಅಪರಾಧ ಎನ್ನುವ ಆ ದಿನಗಳಲ್ಲಿ ವಿಜಯ್‌ ಆನಂದ್‌ ಪರಿಣಾಮಕಾರಿ ನಿರೂಪಣೆಯ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ಪತಿಗೆ ತನ್ನ ಪತ್ನಿಯ (ವಹೀದಾ ರೆಹಮಾನ್‌) ಬಗ್ಗೆ ಪ್ರೀತಿಯಿಲ್ಲ. ಆತನ ಪಾಲಿಗೆ ಆಕೆಯೆಂದರೆ ತನ್ನ ವಾಂಛೆಗಳನ್ನು ಪೂರೈಸುವ ವ್ಯಕ್ತಿ. ಇದರಿಂದ ನೊಂದ ಆಕೆ ತನ್ನ ವ್ಯಕ್ತಿತ್ವವನ್ನು ಗುರುತಿಸಿ, ಗೌರವಿಸುವ ವ್ಯಕ್ತಿಯೊಂದಿಗೆ (ದೇವಾನಂದ್‌) ಸ್ನೇಹ ಬೆಳೆಸುತ್ತಾಳೆ. ಈ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು.

ಗುಮ್ರಾಹ್‌ (1963) | ವಿವಾಹೇತರ ಸಂಬಂಧದ ಬಗ್ಗೆ ಚರ್ಚಿಸುವ ಪ್ರಭಾವಿ, ಯಶಸ್ವಿ ಚಿತ್ರವಿದು. ಬಿ ಆರ್ ಚೋಪ್ರಾ ನಿರ್ದೇಶನದ ಪ್ರಯೋಗ. ನಾಯಕಿಯ (ಮಾಲಾ ಸಿನ್ಹಾ) ವೈವಾಹಿಕ ಬದುಕಿನಲ್ಲಿ ಆಕೆಯ ಮಾಜಿ ಪ್ರಿಯಕರನ (ಸುನೀಲ್ ದತ್‌) ಪ್ರವೇಶವಾಗುತ್ತದೆ. ಈ ತೊಳಲಾಟದಲ್ಲಿ ಆಕೆ ಗಂಡ, ಪ್ರಿಯಕರನ ಆಯ್ಕೆಯಲ್ಲಿ ಗೊಂದಲಕ್ಕೀಡಾಗುತ್ತಾಳೆ. ನಿರ್ದೇಶಕರು, “ಆಕೆಗೆ ಪತಿಯೇ ಉತ್ತಮ ಆಯ್ಕೆ, ಕೌಟುಂಬಿಕ ಮೌಲ್ಯಗಳೇ ಮುಖ್ಯ,” ಎನ್ನುವ ಸಂದೇಶ ರವಾನಿಸುತ್ತಾರೆ. ಸುನೀಲ್‌ ದತ್‌, ಮಾಲಾ ಸಿನ್ಹಾ ಮತ್ತು ಅಶೋಕ್ ಕುಮಾರ್‌ ಅವರ ಅತ್ಯುತ್ತಮ ನಟನೆಯ ಚಿತ್ರ ಉತ್ತಮ ಸಂಗೀತದೊಂದಿಗೆ ಗಮನ ಸೆಳೆದಿತ್ತು.

ಅರ್ಥ್‌‌‌ (1982) | ನಟಿ ಪರ್ವೀನ್‌ ಬಾಬಿ ಜೊತೆಗಿನ ತಮ್ಮ ಸಂಬಂಧದ ಎಳೆಯನ್ನು ಆಧರಿಸಿ ನಿರ್ದೇಶಕ ಮಹೇಶ್ ಭಟ್‌ ‘ಅರ್ಥ್‌’ ಚಿತ್ರ ಮಾಡಿದ್ದರು. ತನ್ನ ಪತಿ ಮತ್ತೊಬ್ಬ ಸ್ತ್ರೀಯೊಬ್ಬಳ ಬಲೆಗೆ ಬಿದ್ದಿರುವುದು ತಿಳಿದ ನಂತರ ಪತ್ನಿಯ ಬದುಕಿನಲ್ಲಿನ ತಲ್ಲಣ ಚಿತ್ರದ ಕಥಾವಸ್ತು. ಔತಣಕೂಟದಲ್ಲಿ ಪತಿಯ (ಕುಲಭೂಷಣ ಕರಬಂಧ) ವಿರುದ್ಧ ಸಿಡುಕುವ ಪತ್ನಿ (ಶಬಾನಾ ಅಜ್ಮಿ), ಆತನ ಪ್ರೇಯಸಿಯನ್ನು (ಸ್ಮಿತಾ ಪಾಟೀಲ್‌) ಬಯ್ಯುವ ಸನ್ನಿವೇಶ ಚಿತ್ರದ ಪ್ರಭಾವಿ ಸನ್ನಿವೇಶಗಳಲ್ಲೊಂದು. ಚಿತ್ರದಲ್ಲಿನ ಉತ್ತಮ ನಟನೆಗೆ ಶಬಾನಾ ಅಜ್ಮಿ ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿದ್ದರು.

ಪತಿ ಪತ್ನಿ ಔರ್ ವೋ‌‌‌ (1978) | ನಿರ್ದೇಶಕ ಬಿ ಆರ್ ಚೋಪ್ರಾ ತಮ್ಮ ಹಿಂದಿನ ಚಿತ್ರಗಳಾದ ‘ಅಫ್ಸಾನಾ’ ಮತ್ತು ‘ಗುಮ್ರಾಹ್‌’ನಲ್ಲಿ ವಿವಾಹೇತರ ಸಂಬಂಧದ ಬಗ್ಗೆ ಚರ್ಚಿಸಿದ್ದರು. ‘ಪತಿ ಪತ್ನಿ ಔರ್ ವೋ’ ಚಿತ್ರದಲ್ಲಿ ಇದೇ ವಿಷಯವನ್ನು ತೆಳುಹಾಸ್ಯದ ಹಿನ್ನೆಲೆಯಲ್ಲಿ ನಿರೂಪಿಸಿದ್ದರು. ಸಂಜೀವ್ ಕುಮಾರ್ ಮತ್ತು ವಿದ್ಯಾ ಸಿನ್ಹಾ ಪತಿ-ಪತ್ನಿಯಾಗಿ ನಟಿಸಿದ್ದರೆ, ರಂಜಿತಾ ದಾಂಪತ್ಯಕ್ಕೆ ತೊಡಕಾಗುವ ಯುವತಿಯಾಗಿ ಕಾಣಿಸಿಕೊಂಡಿದ್ದರು. ಉತ್ತಮ ಕಾಮಿಡಿ ಟೈಮಿಂಗ್‌ನೊಂದಿಗೆ ಸಂಜೀವ್ ಕುಮಾರ್‌ ಸಿನಿಪ್ರೇಮಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದರು.

ಇದನ್ನೂ ಓದಿ : ಜನುಮದಿನ | ಗಾಯಕಿ ಲತಾ ಮಂಗೇಶ್ಕರ್ ಸಿನಿಮಾ ಹಾಡುಗಳ ವಿಡಿಯೋ ಗುಚ್ಛ

ಅಸ್ತಿತ್ವ್‌‌‌‌ (2000) | ‘ಅಸ್ತಿತ್ವ್‌’ ಸಿನಿಮಾದೊಂದಿಗೆ ನಿರ್ದೇಶಕ ಮಹೇಶ್ ಮಂಜ್ರೇಕರ್‌ ಪುರುಷ ಪ್ರಧಾನ ಸಮಾಜಕ್ಕೆ ಕನ್ನಡಿ ಹಿಡಿದಿದ್ದರು. ‘ಗೈಡ್‌’ ಚಿತ್ರದ ನಂತರ ವಿವಾಹೇತರ ಸಂಬಂಧ ಕುರಿತಂತೆ ದಿಟ್ಟತನದ ನಿರೂಪಣೆಯೊಂದಿಗೆ ಗಮನ ಸೆಳೆದ ಚಿತ್ರವಿದು. ಅಕ್ರಮ ಸಂಬಂಧದ ವಿಚಾರದಲ್ಲಿ ವಿವಾಹಿತ ಪುರುಷರನ್ನು ಪ್ರಶ್ನಿಸದ ಸಮಾಜ ಸ್ತ್ರೀಯರ ಬಗ್ಗೆ ಕೀಳಾಗಿ ಮಾತನಾಡುತ್ತದೆ ಎನ್ನುವುದನ್ನು ನಿರ್ದೇಶಕ ಮಂಜ್ರೇಕರ್‌ ತೀಕ್ಷ್ಣವಾಗಿ ನಿರೂಪಿಸಿದ್ದರು. ಮರಾಠಿ ಚಿತ್ರದ ಹಿಂದಿ ಅವತರಣಿಕೆಯಿದು. ಉತ್ತಮ ನಟನೆಗೆ ತಬು ಹಲವು ಪ್ರಶಸ್ತಿಗಳಿಗೆ ಪಾತ್ರರಾದರು.

ಜಿಸ್ಮ್‌‌‌‌‌ (2003) | ನಾಯಕಿ ಪಾತ್ರವನ್ನು ನೆಗೆಟಿವ್ ಶೇಡ್‌ನಲ್ಲಿ ಪ್ರಭಾವಶಾಲಿಯಾಗಿ ತೋರಿಸಿದ ಕೆಲವೇ ಚಿತ್ರಗಳಲ್ಲಿ ಇದು ಕೂಡ ಒಂದು. ಚಿತ್ರದ ನಾಯಕಿ (ಬಿಪಾಶಾ ಬಸು) ಹಣಕ್ಕಾಗಿ ಯಾವ ಕೃತ್ಯಕ್ಕೂ ಸಿದ್ಧಳಾಗಿರುವಾಕೆ. ಹಣಕ್ಕಾಗಿ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಮುಂದೆ ಪ್ರಿಯಕರನ (ಜಾನ್‌ ಅಬ್ರಹಾಂ) ಜೊತೆಗೂಡಿ ಪತಿಯನ್ನೇ ಕೊಲ್ಲುವ ಆಕೆ, ನಂತರ ಪ್ರಿಯಕರನನ್ನೂ ಕೊಲ್ಲಲು ಹವಣಿಸುತ್ತಾಳೆ. ಬಿಪಾಶಾ-ಜಾನ್ ಅಬ್ರಹಾಂ ಮಧ್ಯೆಯ ರೋಚಕ ಸನ್ನಿವೇಶಗಳು ಮತ್ತು ಬಿಗಿಯಾದ ಚಿತ್ರಕತೆ ಸಿನಿಮಾದ ಹೈಲೈಟ್‌.

ಮರ್ಡರ್‌‌‌‌‌‌ (2004) | ಅಕ್ರಮ ಸಂಬಂಧದ ಕತೆಯನ್ನು ಅತ್ಯಂತ ರೊಮ್ಯಾಂಟಿಕ್‌ ಆಗಿ ನಿರೂಪಿಸಿದ ಬೋಲ್ಡ್‌ ಮತ್ತು ಥ್ರಿಲ್ಲಿಂಗ್ ಸಿನಿಮಾ. ‘ಅನ್‌ಫೈಥ್‌ಫುಲ್‌’ ಹಾಲಿವುಡ್‌ ಚಿತ್ರದ ಸ್ಫೂರ್ತಿ ಈ ಚಿತ್ರಕ್ಕಿದೆ. ವಿಶಿಷ್ಟ ತಿರುವುಗಳ ಮೂಲಕ ನಿರ್ದೇಶಕ ಅನುರಾಗ್ ಬಸು ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದರು. ಇದನ್ನು ‘ಬಿ ಗ್ರೇಡ್‌’ ಚಿತ್ರವೆಂದು ಜರಿದ ಸಿನಿಮಾ ವಿಶ್ಲೇಷಕರು, ಅತಿಯಾದ ದೇಹಪ್ರದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ದೊಡ್ಡ ಯಶಸ್ಸು ಕಂಡ ಸಿನಿಮಾ, ಮಲ್ಲಿಕಾ ಶೆರಾವತ್‌ಗೆ ಜನಪ್ರಿಯತೆ ತಂದುಕೊಟ್ಟಿತು.

ಕಭಿ ಅಲ್ವಿದಾ ನಾ ಕೆಹ್ನಾ‌‌‌‌‌‌ (2006) | ನಿರ್ದೇಶಕ ಕರಣ್ ಜೋಹರ್‌ ಈ ಚಿತ್ರದಲ್ಲಿ ಆಧುನಿಕ ಸಮಾಜದ ಟ್ರೆಂಡ್‌ ಹಿನ್ನೆಲೆಯಲ್ಲಿ ವಿವಾಹೇತರ ಸಂಬಂಧಗಳನ್ನು ನಿರೂಪಿಸಿದ್ದರು. ತಮ್ಮ ವೈವಾಹಿಕ ಬದುಕು ವಿಫಲವಾದರೆ, ಜಗತ್ತಿಗೆ ತಾವು ಸರಿಯಿದ್ದೇವೆ ಎಂದು ತೋರ್ಪಡಿಸುವುದರಲ್ಲಿ ಅರ್ಥವಿಲ್ಲ ಎನ್ನುವುದು ಚಿತ್ರದ ಸಂದೇಶ. ಮದುವೆಗೆ ಪ್ರೀತಿಯೇ ಬುನಾದಿ, ಪ್ರೀತಿ ಕಳೆದುಹೋದರೆ ದಾಂಪತ್ಯಕ್ಕೆ ಅರ್ಥವಿಲ್ಲ ಎನ್ನುವ ಸಾರವೂ ಇಲ್ಲಿದೆ. ಸಾಂಪ್ರದಾಯಿಕ ಮನಸ್ಸುಗಳಿರುವ ಭಾರತದಲ್ಲಿ ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆದರೆ, ವಿದೇಶಗಳಲ್ಲಿ ಚಿತ್ರ ಗೆಲುವು ಕಂಡಿತು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More