ಗ್ಯಾಂಗ್‌ಸ್ಟರ್‌ ಸಿನಿಮಾ ಮಾಡಿ ದಶಕದ ಸೇಡು ತೀರಿಸಿಕೊಂಡ ಮಣಿರತ್ನಂ

ಸತತ ಸೋಲು ಕಂಡಿದ್ದ ಭಾರತದ ಪ್ರಮುಖ ನಿರ್ದೇಶಕ ಮಣಿರತ್ನಂ, ತಮ್ಮ ‘ಚೆಕ್ಕ ಚಿವಂತ ವಾನಂ’ ಚಿತ್ರದ ಮೂಲಕ ಹಳೆಯ ಖದರಿಗೆ ಮರಳಿದ್ದಾರೆ. ತಮ್ಮ ನವಿರು ನವಿರಾದ ಚಿತ್ರಚೌಕಟ್ಟಿನಾಚೆಗೆ ಬಂದಿರುವ ಅವರು, ಅದಕ್ಕೆ ತದ್ವಿರುದ್ಧ ಎನಿಸುವಂತಹ ಕತೆಯೊಂದನ್ನು ಕಟ್ಟಿಕೊಟ್ಟಿದ್ದು ಏಕೆ ಗೊತ್ತೇ?

ಸೇಡು ಎಂಬುದು ಮಣಿರತ್ನಂ ಅವರ ವಿಚಾರದಲ್ಲಿ ಸ್ವಲ್ಪ ಅತಿರೇಕದ ಮಾತೆನಿಸಬಹುದು. ಆದರೆ, ಶುಕ್ರವಾರ (ಸೆ.೨೭) ತೆರೆಕಂಡ 'ಚೆಕ್ಕ ಚಿವಂತ ವಾನಂ' ಚಿತ್ರ ನೋಡಿದವರಿಗೆ ಒಂದು ಕ್ಷಣ, ಇದು ರಾಮ್‌ ಗೋಪಾಲ್‌ ವರ್ಮಾ ಚಿತ್ರವೋ, ಮಣಿರತ್ನಂ ಚಿತ್ರವೋ ಎಂದು ಗೊಂದಲ ಹುಟ್ಟುತ್ತದೆ. ಅಷ್ಟರ ಮಟ್ಟಿಗೆ ಇದು, ಹಿಂಸೆಯೇ ಮೈವೆತ್ತ ಗ್ಯಾಂಗ್‌ಸ್ಟರ್ ಚಿತ್ರ ಹಾಗೂ ಮಣಿರತ್ನಂ ಸ್ಕೂಲ್‌ ಆಫ್ ಸಿನಿಮಾಕ್ಕೆ ಒಗ್ಗದ ಚಿತ್ರ. ನವಿರಾದ ಭಾವನಾತ್ಮಕ ಚಿತ್ರಗಳು, ಅವುಗಳಿಗೆ ಸಿಕ್ಕ ಪ್ರತಿಕ್ರಿಯೆಯಿಂದ ಬೇಸತ್ತಿದ್ದ ಮಣಿರತ್ನಂ, ಪಕ್ಕಾ ಗ್ಯಾಂಗ್‌ಸ್ಟರ್ ಚಿತ್ರದೊಂದಿಗೆ ಮರಳಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ.

ಮಣಿರತ್ನಂ ತಮ್ಮ ಚಿತ್ರಜೀವನದಲ್ಲಿ ಎರಡು ಮಹತ್ವದ ಗ್ಯಾಂಗ್‌ಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಾಯಗನ್‌ (೧೯೮೭) ಮತ್ತು ದಳಪತಿ (೧೯೯೧). ನಂತರದಲ್ಲಿ ಕೆಲವು ರಾಜಕೀಯ ಚಿತ್ರಗಳ ಹೊರತಾಗಿ ಬಹುತೇಕ ಪ್ರೇಮ, ಸಂಬಂಧ ಮುಂತಾದ ಮನುಷ್ಯನ ಭಾವಲೋಕವನ್ನು ಅನ್ವೇಷಿಸುವ ಚಿತ್ರಗಳನ್ನೇ ಕೊಡುತ್ತ ಬಂದಿದ್ದಾರೆ. ಅವುಗಳಲ್ಲಿ ‘ಅಂಜಲಿ’, ‘ಬಾಂಬೆ’, ‘ದಿಲ್‌ ಸೆ’, ‘ಅಲೈ ಪಾಯುದೆ’ ಪ್ರಮುಖ ಚಿತ್ರಗಳು.

ಮಣಿರತ್ನಂ ಅವರ ಸಿನಿಮಾ ಪಯಣಕ್ಕೆ ತಿರುವು ೨೦೦೭. ಇದು ಯಶಸ್ಸಿ ತಿರುವಾಗಿರಲಿಲ್ಲ ಎಂಬುದು ಗಮನಿಸಬೇಕಾದ್ದು. ಧೀರುಭಾಯಿ ಅಂಬಾನಿ ಜೀವನವನ್ನು ಆಧರಿಸಿ ಮಾಡಿದ 'ಗುರು' ಚಿತ್ರ ಮಣಿರತ್ನಂ ಅವರ ಪಾಲಿಗೆ ಪ್ರಯೋಗವಾಗಿತ್ತೇನೋ. ಆದರೆ, ಪ್ರೇಕ್ಷಕರು ಚಿತ್ರವನ್ನು ಆನಂದಿಸಲಿಲ್ಲ. ಇಲ್ಲಿಂದ ಮುಂದೆ ಮಣಿರತ್ನಂ ಅವರು ನಿರ್ಮಿಸಿದ ಬಹುತೇಕ ಎಲ್ಲ ಸಿನಿಮಾಗಳು ಸೋತವು.

ದುಷ್ಟತನದ ಒಳಗೂ ಒಳ್ಳೆಯತನ ಇರುತ್ತೆ ಎಂಬುದನ್ನು ಹೇಳಲು ಹೊರಟ 'ರಾವಣ್‌' ಮಣಿರತ್ನಂ ಪಾಲಿಗೆ ವಿಲನ್‌ ಆದ. ಮೀನುಗಾರನ ಮಾನವೀಯತೆ ಕತೆ ಕಟ್ಟಿಕೊಡಲು ಹೊರಟ, 'ಕಡಲ್‌' ಕ್ಷಣ ತೇಲಿಸಿ, ಕ್ಷಣ ಮುಳುಗಿಸಿಬಿಟ್ಟಿತು. ನಂತರ ಬಂದ ‘ಓಕೆ ಜಾನು’ ಮತ್ತು ‘ಕಾಟ್ರು ವೇಲಿಯಿದೈ’ ಚಿತ್ರಗಳು ಮಣಿರತ್ನಂ ಅವರು ಚೇತರಿಸಿಕೊಳ್ಳುವ ಭರವಸೆಯನ್ನು ನೀಡಲಿಲ್ಲ.

ಇದಕ್ಕೆಲ್ಲ ಕಾರಣವಿತ್ತು. ಕಳೆದೆರಡು ದಶಕಗಳಲ್ಲಿ ಭಾರತೀಯ ಚಿತ್ರರಂಗವನ್ನು ಹಿಂಸೆ ಎಷ್ಟು ತೀವ್ರವಾಗಿ ಆವರಿಸಿಕೊಂಡಿದೆ ಎಂದರೆ, ಪ್ರೇಕ್ಷಕರ ಸಂವೇದನೆಗಳನ್ನೇ ಬದಲಿಸಿಬಿಟ್ಟಿದೆ. ಹಾಗಾಗಿ, ಮಣಿರತ್ನಂ ಅವರ ತೆಳುವಾದ ಮೆಲೊಡ್ರಾಮಾ, ರೊಮ್ಯಾಂಟಿಕ್‌ ಲವ್‌ ಸ್ಟೋರಿಗಳು ಅವುಗಳ ಮುಂದೆ ಅಸಹಜ ಎನಿಸಿ, ಅಪ್ರಸ್ತುತವೂ ಆಗಿಬಿಟ್ಟವು. ಜನಪ್ರಿಯತೆಗೆ, ಹಣಕ್ಕೆ ವರ್ಷಕ್ಕೆರಡು ಸಿನಿಮಾ ಮಾಡುವ ಧಾವಂತವಿಲ್ಲದ ಮಣಿರತ್ನಂ, ಎಂಥ ಕತೆಗಳನ್ನು ಸಿನಿಮಾ ಮಾಡಬೇಕೆನ್ನುವುದು ತೋಚದ ಸ್ಥಿತಿ ತಲುಪಿಬಿಟ್ಟರೇನು ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡಿದ್ದಿದೆ.

ಇಂಥ ಹೊತ್ತಲ್ಲಿ ಮಣಿರತ್ನಂ ಅವರಿಗೆ, ತಮ್ಮ ಸಿನಿಮಾ ನಿರ್ಮಿಸುವ ಶೈಲಿಯನ್ನು ಮತ್ತು ಕಥಾವಸ್ತುವನ್ನು ಕಾಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವ ಒತ್ತಡವಂತೂ ಇತ್ತು. ಆದರೆ, ಸದಾ ಮಾನವೀಯ ನೆಲೆಯಲ್ಲಿ, ಮೌಲ್ಯಗಳ ಚೌಕಟ್ಟಿನಲ್ಲೇ ಚಿತ್ರಗಳನ್ನು ಕಟ್ಟುವ ಸಂವೇದನಾಶೀಲನೊಬ್ಬ ಕಾಲದ ಒತ್ತಡದಿಂದಾಗಿ ರಾಜಿ ಮಾಡಿಕೊಳ್ಳುವುದಿಲ್ಲ. ಬದಲಿಗೆ, ಪ್ರತಿಸವಾಲು ಹಾಕುತ್ತಾನೆ. 'ಚೆಕ್ಕ ಚೀವಂತ ವಾನಂ' ಚಿತ್ರದ ಮೂಲಕ ಮಣಿರತ್ನಂ ಅಂಥದ್ದೇ ಸವಾಲು ಹಾಕಿದ್ದಾರೆ.

'...ವಾನಂ' ಚಿತ್ರ ಗ್ಯಾಂಗ್‌ಸ್ಟರ್‌ವೊಬ್ಬನ ಕುಟುಂಬವನ್ನು ಕೇಂದ್ರವಾಗಿಸಿಕೊಂಡ ಕತೆ. ಈ ಚಿತ್ರದಲ್ಲಿ ನಾಯಕನಿಲ್ಲ, ಖಳನಾಯಕನೂ ಇಲ್ಲ. ಇಲ್ಲಿರುವುದು ‘ರೋಜಾ’, ‘ದಿಲ್‌’ ಚಿತ್ರದ ನಾಯಕಿಯರಂತಹ ದಿಟ್ಟ ಹೆಣ್ಣುಮಕ್ಕಳಲ್ಲ. ಮಕ್ಕಳಿಗೆ ತಾಯಿಯ ಮೇಲೆ ಪ್ರೀತಿ- ಲಾಭಕ್ಕಾಗಿ. ಹೆಂಡತಿಗೆ ಗಂಡನ ಮೇಲೆ ಪ್ರೀತಿ; ಆತ ಇನ್ನೊಬ್ಬಳ ತೆಕ್ಕೆಯಲ್ಲಿದ್ದರೂ ಬೇಸರವಿಲ್ಲ. ಒಂದು ದಾಳಿಯಿಂದ ಬದುಕುಳಿದು ಬಂದರೂ ತಾನೇ ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದೇ ಹೇಳುವ ವಯಸ್ಸಾದ ಗ್ಯಾಂಗ್‌ಸ್ಟರ್‌. ತನ್ನನ್ನು ತಾನೇ 'ರಾಕ್ಷಸಿ' ಎಂದು ತಮಾಷೆ ಮಾಡಿಕೊಂಡು ತನ್ನ ಇರುವನ್ನು ಜೀವಂತ ಆಗಿರಿಸಿಕೊಳ್ಳುವ ಅಸಹಾಯಕ ಪತ್ನಿ. ಹೀಗೆ, ಚಿತ್ರದಲ್ಲಿರುವ ಪಾತ್ರಗಳು ಸಿನಿಮಾ ಪಾತ್ರಗಳಿಗಾಗಿ ಕಾಣುವ ಜೊತೆಗೆ ಸಮಕಾಲೀನ ಚಿತ್ರಗಳು ಕಟ್ಟಿಕೊಡುತ್ತ ಬಂದ ಪಾತ್ರಗಳಿಗೆ ರೂಪಕಗಳಂತೆ ವ್ಯಂಗ್ಯವಾಗಿ ಕಟ್ಟಿದ್ದಾರೇನೊ ಎಂಬ ಅನುಮಾನ ಹುಟ್ಟಿಸುತ್ತವೆ.

ಯಾವುದೇ ಸಂಬಂಧ ನಂಬಿಕೆಗಳ ಮೇಲೆ ನಿಂತಿರುತ್ತದೆ. ಮಣಿರತ್ನಂ ತಮ್ಮ ಚಿತ್ರಗಳಲ್ಲಿ ಅದನ್ನು ಹೇಳುತ್ತ ಬಂದಿದ್ದಾರೆ. '...ವಾನಂ' ಚಿತ್ರದಲ್ಲಿ ಎಲ್ಲ ಪಾತ್ರಗಳನ್ನು ಜೀವಂತವಾಗಿರಿಸುವುದು ಅನುಮಾನ. ಯಾವ ಮೌಲ್ಯಗಳನ್ನು ಸಿನಿಮಾಗಳು ದಶಕಗಳ ದಾಟಿಸುತ್ತ ಬಂದವೊ, ಅದಕ್ಕೆ ತದ್ವಿರುದ್ಧ ಮೌಲ್ಯವನ್ನು ಈ ಚಿತ್ರ ಉಸಿರಾಡುತ್ತದೆ. ಹಾಗೆಯೇ, ಅದರಿಂದಾಗಿ ಎಂಥ ಅಂತ್ಯವನ್ನು ಕಾಣಬೇಕಾಗುತ್ತದೆ ಎಂಬುದನ್ನೂ ಹೇಳುತ್ತದೆ. ಸುಲಿಗೆ, ದಂಧೆ, ಲೂಟಿಗಳ ಮೂಲಕ ಬದುಕಿದ ಇಡೀ ಕುಟುಂಬ ಚಿತ್ರಾಂತ್ಯದಲ್ಲಿ ನಾಶವಾಗಿರುತ್ತದೆ.

ಪೊಲೀಸ್‌ ಪಾತ್ರಧಾರಿ, ಚಿತ್ರದ ಪ್ರಮುಖ ಗ್ಯಾಂಗ್‌ಸ್ಟರ್‌ನ ಹಿರಿಯ ಮಗನ ಸ್ನೇಹಿತ ಆರಂಭದಲ್ಲಿ ಹಣದ ಆಮಿಷಕ್ಕಾಗಿ ಭ್ರಷ್ಟನಾದಂತೆ ಕಂಡರೂ, ನೈತಿಕ ಪ್ರಜ್ಞೆ ಉಳಿಸಿಕೊಂಡವನಂತೆ ಕಡೆಗೆ ದುಷ್ಟರನ್ನು, ಸಮಾಜಘಾತುಕರನ್ನು ಅಂತ್ಯಗೊಳಿಸುವ ಮೂಲಕ ಒಳಿತೇ ಉಳಿಯುತ್ತದೆ ಎಂಬ ಸಂಕೇತವಾಗಿ ಕಾಣಿಸಿಕೊಳ್ಳುತ್ತಾನೆ. ಅಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ.

ಮೌಲ್ಯಹೀನವಾದ (ಇದನ್ನು ಅಸಹಜ, ಅಪ್ರಾಮಾಣಿಕ, ಅಮಾನವೀಯ ಎಂದು ನೋಡಬೇಕು; ಸಂಪ್ರದಾಯಿಕ ಮೌಲ್ಯಗಳಾಗಿ ಅಷ್ಟೇ ಅಲ್ಲ) ಕಥಾವಸ್ತುಗಳನ್ನು, ಹಿಂಸೆ, ಅಕ್ರಮ, ಅನೈತಿಕತೆಯನ್ನು ಕಥಾವಸ್ತುವಾಗಿಸಿಕೊಂಡೇ ಚಿತ್ರಗಳನ್ನು ಮಾಡಿದವರಿಗೆ, ಅಂತಹ ಕಥಾವಸ್ತುಗಳ ಬಗ್ಗೆಯೇ ಅಹಸ್ಯ ಎನಿಸಿಬಿಡಬೇಕು ಎಂಬಂತೆ ತಣ್ಣನೆಯ ವ್ಯಂಗ್ಯದಲ್ಲಿ '...ವಾನಂ' ನಿರ್ಮಿಸಿದರು ಎನಿಸುತ್ತದೆ ಮಣಿರತ್ನಂ. ಕೆಲ ಕಾರಣಕ್ಕೆ ಹಾದಿ ತಪ್ಪಿದರೂ ನೈತಿಕವಾದದ್ದೇ ಉಳಿಯುತ್ತದೆ ಎಂಬ ಸಂದೇಶವನ್ನು ಕೊಡುವ ಯತ್ನ ಮಾಡಿದಂತೆ ಕಾಣುತ್ತದೆ.

ಇದನ್ನೂ ಓದಿ : ಚಿತ್ರವಿಮರ್ಶೆ | ಮಣಿರತ್ನಂ ‘ಕಡುಗೆಂಪು ಆಗಸ’ದಲ್ಲಿ ಮನರಂಜನೆಯೇ ಮುಖ್ಯ ಬಣ್ಣ

ಈ ಎಲ್ಲ ಕಾರಣದಿಂದಲೇ, ಬಿಡುಗಡೆಯಾದ ಎರಡು ದಿನಗಳಲ್ಲಿ, ಮಣಿರತ್ನಂ ಅವರ ಕಳೆದ ಕೆಲವು ಚಿತ್ರಗಳಿಗೆ ಕಾಣದ ಅಪಾರ ಮೆಚ್ಚುಗೆಯನ್ನು ಈ ಸಿನಿಮಾ ಪಡೆದುಕೊಂಡಿದೆ. ಮೇಲ್ನೋಟಕ್ಕೆ ಆಕ್ಷನ್‌ ಚಿತ್ರವೆನಿಸುವ ಕಾರಣಕ್ಕೆ ಅಂಥ ಆಕರ್ಷಣೆಯನ್ನಂತೂ ಹುಟ್ಟುಹಾಕಿದೆ. ಪಿಚ್ಚೆನಿಸುವ ಸನ್ನಿವೇಶಗಳು, ನಾಟುವಂತೆ ಮಾಡುವ ವ್ಯಂಗ್ಯಭರಿತ ಹಾಸ್ಯ, ಕೆರಳಿಸದೆ ದಂಗುಬಡಿಸುವ ಹಿಂಸೆಯು, ಇದುವರೆಗೆ ಬಂದ ಎಲ್ಲ ಭೂಗತ ಜಗತ್ತಿನ ಕತೆಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ. ಹಾಗೆಯೇ ಅಂಥ ಕತೆಗಳನ್ನು ಹೇಳಬಹುದಾಗಿದ್ದ ಸಾಧ್ಯತೆ, ನೋಡಬೇಕಾದ ಚೌಕಟ್ಟು ಯಾವುದು ಎಂಬುದನ್ನೂ ತಿಳಿಸುತ್ತದೆ.

ಕಳೆದೇ ಹೋಗುತ್ತಿದ್ದಾರೇನೋ ಎಂಬ ಅನುಮಾನ ಹುಟ್ಟಿಸಿದ್ದ ಮಣಿರತ್ನಂ, '...ವಾನಂ' ಚಿತ್ರದ ಮೂಲಕ ಹೊಸ ರೀತಿಯಲ್ಲಿ ಗಮನ ಸೆಳೆದಿರುವುದು ಖುಷಿಯ ವಿಷಯ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More