ಫ್ಯೂಷನ್ ನೈಟ್‌ನಲ್ಲಿ ಸನ್ನಿ ಹೆಜ್ಜೆ ಹಾಕಲು ಬೆಂಗಳೂರಿನಲ್ಲಿ ವೇದಿಕೆ ಸಜ್ಜು

ದಿ ಟೈಮ್ಸ್ ಕ್ರಿಯೇಷನ್‌ನ ‘ಫ್ಯೂಷನ್ ನೈಟ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟಿ ಸನ್ನಿ ಲಿಯೋನ್ ನ.3ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ, ಈ ವರ್ಷವೂ ಸನ್ನಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂಬ ಸುದ್ದಿ ಸುಳ್ಳು ಎನ್ನುತ್ತಾರೆ ಆಯೋಜಕರು

ದಿ ಟೈಮ್ಸ್ ಕ್ರಿಯೇಷನ್ ಆಯೋಜಿಸಿರುವ ‘ಫ್ಯೂಷನ್ ನೈಟ್’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನವೆಂಬರ್ 3ರಂದು ಸನ್ನಿ ’ಫ್ಯೂಷನ್ ನೈಟ್’ ಕಾರ್ಯಕ್ರಮದಲ್ಲಿ ‘ಸೇಸಮ್ಮ ಸೇಸಮ್ಮ ಸೇರಿದಂತೆ ಕನ್ನಡದ 3 ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಕೂಡ ‘ಫ್ಯೂಷನ್ ನೈಟ್’ನಲ್ಲಿ ಪಾಲ್ಗೊಳ್ಳುತ್ತಿದ್ದು, ತಮ್ಮ ತಂಡದೊಂದಿಗೆ 90 ನಿಮಿಷಗಳ ಕಾಲ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಈ ಹಿಂದೆ ಇದೇ ‘ಟೈಮ್ಸ್ ಕ್ರಿಯೇಷನ್’ ಸಂಸ್ಥೆ ಹೊಸ ವರ್ಷದ ಸಂದರ್ಭದಲ್ಲಿ ಆಯೋಜಿಸಿದ್ದ ಸನ್ನಿ ಲಿಯೋನಿಯವರ ನೃತ್ಯ ಪ್ರದರ್ಶನ (ಸನ್ನಿ ನೈಟ್) ರದ್ದಾಗಿತ್ತು. ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಹಾಗೂ ಭದ್ರತೆಯ ದೃಷ್ಟಿಯಿಂದ ಕಾರ್ಯಕ್ರಮದ ಆಯೋಜಕರು ಪ್ರದರ್ಶನವನ್ನು ರದ್ದುಗೊಳಿಸಿದ್ದರು. ಚುನಾವಣಾ ಸಮಯವಾದ್ದರಿಂದ ಈ ವಿವಾದ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಗಳೂ ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ, ಆಗ ಗೃಹ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ, “ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಗರದಲ್ಲಿ ಬಿಗಿ ಬಂದೋಬಸ್ತಿನ ಅಗತ್ಯವಿರುತ್ತದೆ. ಆದ್ದರಿಂದ ‘ಸನ್ನಿ ನೈಟ್’ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಕಷ್ಟಸಾಧ್ಯ,” ಎಂಬ ಕಾರಣ ನೀಡಿ ಕಾರ್ಯಕ್ರಮ ರದ್ದುಗೊಳಿಸುವಂತೆ ಆಯೋಜಕರಿಗೆ ತಿಳಿಸಿದ್ದರು. ನಂತರ ಆಯೋಜಕ ಹರೀಶ್, ಪೋಲಿಸ್ ಇಲಾಖೆ ಹಾಗೂ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್ ಮೊರೆಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, “ಸರ್ಕಾರವು ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದಾದರೆ ಎಲ್ಲ ಕಾರ್ಯಕ್ರಮಗಳಿಗೂ ಅನುಮತಿ ನೀಡಬೇಕು, ಇಲ್ಲವೇ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿಬೇಕು,” ಎಂದು ತೀರ್ಪು ನೀಡಿತ್ತು.

ಇದನ್ನೂ ಓದಿ : ಸನ್ನಿ ಲಿಯೋನ್‌ ವಿಷಯದಲ್ಲಿ ನೈತಿಕ ಪೊಲೀಸ್‌ಗಿರಿಗೆ ಇಳಿಯಿತೇ ರಾಜ್ಯ ಸರ್ಕಾರ?

ಸರ್ಕಾರ ಹಾಗೂ ಪೋಲಿಸ್ ಇಲಾಖೆಯಿಂದ ಅನುಮತಿ ದೊರಕದೆ ಕೊನೆಗೂ ‘ಸನ್ನಿ ನೈಟ್’ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಇದಾದ ನಂತರ ‘ಟೈಮ್ಸ್ ಕ್ರಿಯೇಷನ್’ ಸಂಸ್ಥೆ ಈಗ ಮತ್ತೊಮ್ಮೆ ಸನ್ನಿ ಲಿಯೋನ್ ಕರೆತರಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ‘ದಿ ಸ್ಟೇಟ್’ನೊಂದಿಗೆ ಮಾತನಾಡಿರುವ ‘ಫ್ಯೂಷನ್ ನೈಟ್’ ಆಯೋಜಕರಾದ ಎಂ ಎಸ್ ಹರೀಶ್, “ಈ ಹಿಂದಿನ ಘಟನಾವಳಿಗಳು ಮರುಕಳಿಸದಂತೆ ಮುನ್ನಚ್ಚರಿಕೆ ವಹಿಸಿದ್ದೇವೆ. ಪೋಲಿಸ್ ಇಲಾಖೆಯ ಅನುಮತಿ ಪಡೆದಕೊಂಡ ನಂತರವೇ ಕಾರ್ಯಕ್ರಮದ ಸಿದ್ಧತೆ ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಹಿಂದಿನಂತೆ ನಮ್ಮ ಕಾರ್ಯಕ್ರಮಕ್ಕೆ ಕನ್ನಡಪರ ಸಂಘಟನೆಗಳು, ಹಿಂದೂ ಸಂಘಟನೆಗಳ ವಿರೋಧ ವ್ಯಕ್ತವಾಗುತ್ತಿದೆ ಎಂಬ ಸುದ್ದಿಗಳ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿರುವುದನ್ನು ಗಮನಿಸಿದ್ದೇನೆ. ಆದರೆ ಅವೆಲ್ಲವೂ ಉಹಾಪೋಹ ಎನ್ನುವುದರಲ್ಲಿ ಸಂದೇಹವಿಲ್ಲ. ಯಾವ ಸಂಘಟನೆಗಳೂ ಈವರೆಗೆ ನಮ್ಮನ್ನು ಸಂಪರ್ಕಿಸಿಲ್ಲ. ನಾವಾಗಿಯೇ ಕೆಲ ಸಂಘಟನೆಗಳ ಮುಖ್ಯಸ್ಥರನ್ನು ಭೇಟಿಯಾಗಿ ಅಭಿಪ್ರಾಯ ಕೇಳಿದ್ದೇವೆ. ‘ಕನ್ನಡಕ್ಕೆ ಆದ್ಯತೆ ನೀಡುವ ಮೂಲಕ ಕಾರ್ಯಕ್ರಮ ನಡೆಸುದಾದರೆ ನಮ್ಮ ಯಾವುದೇ ಅಭ್ಯಂತರಗಳಿಲ್ಲ’ ಎಂದು ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ನಾವು ಆಯೋಜಿಸಿರುವುದು ಖಾಸಗಿ ಕಾರ್ಯಕ್ರಮ, ಇದರಿಂದ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆಂಬ ಮಾತು ಸಮಂಜಸವಲ್ಲ,” ಎಂದು ಅಭಿಪ್ರಾಯಪಟ್ಟರು.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More