ವಿಡಿಯೋ | ಲೈಂಗಿಕ ದೌರ್ಜನ್ಯ ಆರೋಪ; ತನುಶ್ರೀಗೆ ಬೆಂಬಲ ಸೂಚಿಸಿದ ಬಾಲಿವುಡ್

ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾಗೆ ಬಾಲಿವುಡ್‌ನ ಹಲವರಿಂದ ಬೆಂಬಲ ವ್ಯಕ್ತವಾಗಿದೆ. ಮತ್ತೊಂದೆಡೆ, ನಟ ನಾನಾ ಪಾಟೇಕರ್‌, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀ ಸಿದ್ದಿಕಿ, ನಿರ್ದೇಶಕ ರಾಕೇಶ್‌ ಸಾರಂಗ್‌ ನಟಿಯ ಆರೋಪವನ್ನು ಅಲ್ಲಗಳೆದಿದ್ದಾರೆ

ಹತ್ತು ವರ್ಷಗಳ ಹಿಂದೆ ‘ಹಾರ್ನ್ ಓಕೆ ಪ್ಲೀಸ್‌’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ನಟಿ ತನುಶ್ರೀ ದತ್ತಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಚಿತ್ರದ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ನೇರ ಆರೋಪ ಮಾಡಿದ್ದರು. ಎರಡು ದಿನಗಳ ಕಾಲ ಸುಮ್ಮನಿದ್ದ ಬಾಲಿವುಡ್‌ ನಿಧಾನವಾಗಿ ತನುಶ್ರೀ ಹೇಳಿಕೆ ಕುರಿತು ಪ್ರತಿಕ್ರಿಯಿಸುತ್ತಿದೆ. ಪ್ರಿಯಾಂಕಾ ಚೋಪ್ರಾ, ಸ್ವರ ಭಾಸ್ಕರ್, ರಿಚಾ ಛಡ್ಡಾ, ಸೋನಂ ಕಪೂರ್‌, ಫರ್ಹನ್ ಅಖ್ತರ್‌, ಸಿದ್ದಾರ್ಥ್‌, ವೀರ್ ದಾಸ್‌, ನಿರ್ದೇಶಕ ಅನುರಾಗ್ ಕಶ್ಯಪ್‌, ಚಿತ್ರಕತೆಗಾರ ವರುಣ್ ಗ್ರೋವರ್ ಸೇರಿದಂತೆ ಹಲವರು ಟ್ವೀಟ್‌ಗಳ ಮೂಲಕ ತನುಶ್ರೀ ಅವರನ್ನು ಬೆಂಬಲಿಸಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ, “ಜಗತ್ತು ನೊಂದವರನ್ನು ನಂಬಬೇಕಿದೆ,” ಎಂದು ಟ್ವೀಟಿಸಿದ್ದರೆ, ರಿಛಾ ಛಡ್ಡಾ, “ಯಾವ ಮಹಿಳೆಯೂ ಪ್ರಚಾರಕ್ಕಾಗಿ ಇಂತಹ ವಿಚಾರಗಳನ್ನು ಪ್ರಸ್ತಾಪಿಸುವುದಿಲ್ಲ. ಆಕೆಯ ದಿಟ್ಟತನಕ್ಕೆ ನನ್ನ ಬೆಂಬಲವಿದೆ,” ಎಂದು ಟ್ವೀಟಿಸಿದ್ದಾರೆ. ‘ಹಾರ್ನ್ ಓಕೆ ಪ್ಲೀಸ್‌’ ಚಿತ್ರದ ಚಿತ್ರಕತೆ ವಿಭಾಗದಲ್ಲಿ ಸಹಾಯಕಿಯಾಗಿದ್ದ ಶೈನಿ ಶೆಟ್ಟಿ ಅವರೂ ಟ್ವೀಟ್‌ನೊಂದಿಗೆ ತನುಶ್ರೀ ಪರ ನಿಂತಿದ್ದಾರೆ. “ಅಂದು ಸ್ಟುಡಿಯೋದಲ್ಲಿ ತನುಶ್ರೀ ನೋವಿನಲ್ಲಿದ್ದರು. ನಮಗೆ ಏನಾಗುತ್ತಿದೆ ಎಂದು ತಿಳಿದಿರಲಿಲ್ಲ. ಗೂಂಡಾಗಳು ಅಲ್ಲಿಗೆ ನುಗ್ಗಿ ನಟಿಯ ಕಾರಿಗೆ ಹಾನಿ ಮಾಡಿದರು. ಆಗ ಪರಿಸ್ಥಿತಿ ಗಂಭೀರವಾಗಿರುವುದು ನಮ್ಮ ಅರಿವಿಗೆ ಬಂತು,” ಎಂದಿದ್ದಾರೆ ಶೈನಿ.

ಇದನ್ನೂ ಓದಿ : ವಿಡಿಯೋ | ಮಹಿಳೆಯರ ಬಗ್ಗೆ ನಾನಾಗೆ ಗೌರವವಿಲ್ಲ ಎಂದ ನಟಿ ತನುಶ್ರೀ ದತ್ತಾ

ಚಿತ್ರನಿರ್ದೇಶಕ ಫರ್ಹನ್ ಅಖ್ತರ್‌, “ಹತ್ತು ವರ್ಷ ಹಿಂದಿನ ಘಟನೆ ಈಗ ಚರ್ಚೆಗೀಡಾಗಿರುವುದನ್ನು ಸಂಶಯದ ದೃಷ್ಟಿಯಿಂದ ನೋಡಕೂಡದು. ತಮ್ಮ ವೃತ್ತಿಬದುಕಿನ ಒತ್ತಡದಿಂದಾಗಿ ಆಕೆ ಸುಮ್ಮನಿದ್ದರು ಎನಿಸುತ್ತದೆ. ಅವರಿಗೆ ಬೆಂಬಲ ಅಗತ್ಯವಿದ್ದು, ಉದ್ದೇಶವನ್ನು ಕೆಣಕುವುದು ಸರಿಯಲ್ಲ,” ಎಂದಿದ್ದಾರೆ. ನಿರ್ದೇಶಕ ಅನುರಾಗ್ ಕಶ್ಯಪ್‌ ಟ್ವೀಟ್ ಕೂಡ ಇದೇ ಒಕ್ಕಣಿಯದ್ದಾಗಿದೆ. ನಟಿ, ನಿರ್ಮಾಪಕಿ ಟ್ವಿಂಕಲ್ ಖನ್ನಾ, “ಚಿತ್ರರಂಗದಲ್ಲಿ ಕೆಲಸ ಮಾಡುವ ವಾತಾವರಣ ಗೌರವಯುತವಾಗಿರಬೇಕು. ತನುಶ್ರೀ ನಿಲುವು ಇಂತಹ ವಾತಾವರಣ ನಿರ್ಮಾಣವಾಗಲು ಸಹಾಯಕವಾಗುತ್ತದೆ,” ಎಂದಿದ್ದಾರೆ. ಟ್ವಿಂಕಲ್‌ಗೆ ಪ್ರತಿಕ್ರಿಯಿಸಿರುವ ತನುಶ್ರೀ, “ನಿಮ್ಮ ಕಳಕಳಿಗೆ ಧನ್ಯವಾದ. ನಿಮ್ಮ ಪತಿ ಅಕ್ಷಯ್‌ ಕುಮಾರ್ ಅವರು ನಾನಾ ಪಾಟೇಕರ್‌ ಜೊತೆ ಕೆಲಸ ಮಾಡುತ್ತಿದ್ದಾರೆ. ಆ ಬಗ್ಗೆ ಏನು ಹೇಳುತ್ತೀರಿ?” ಎಂದು ಪ್ರಶ್ನಿಸಿದ್ದಾರೆ. ಅಕ್ಷಯ್‌ ಮತ್ತು ನಾನಾ ಪಾಟೇಕರ್‌ ‘ಹೌಸ್‌ಫುಲ್‌ 4’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಿರ್ದೇಶಕ ಹನ್ಸಲ್ ಮೆಹ್ತಾ, “ಇಂತಹ ಸಂದರ್ಭಗಳಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯೇ ಆಗುವುದಿಲ್ಲ,” ಎಂದು ಖೇದ ವ್ಯಕ್ತಪಡಿಸಿದ್ದಾರೆ. ಆರೋಪಗಳನ್ನು ಸಿನಿಕತನದಿಂದ ಸ್ವೀಕರಿಸುವ ಜನರು ಬಹುಬೇಗ ಘಟನೆಗಳನ್ನು ಮರೆತುಬಿಡುತ್ತಾರೆ ಎನ್ನುವುದು ಅವರ ಅಸಮಾಧಾನ. ಬಹುಭಾಷಾ ನಟ ಸಿದ್ದಾರ್ಥ್‌ ಟ್ವೀಟ್‌ನೊಂದಿಗೆ ನಟಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “ಐವತ್ತು ವರ್ಷಗಳ ಹಿಂದೆ ತನ್ನ ಮೇಲೆ ದೌರ್ಜನ್ಯ ನಡೆದಿತ್ತು ಎಂದು ಮಹಿಳೆ ಹೇಳಿದರೆ ಅದನ್ನು ಸಾವಧಾನದಿಂದ ಆಲಿಸಿ. ಮರಣಶಯ್ಯೆಯಲ್ಲಿದ್ದರೂ ಆಕೆಗೆ ನೀವು ದನಿಯಾಗಬೇಕು. ಈ ಬಗ್ಗೆ ತನಿಖೆಯಾಗಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು... ಎಲ್ಲವೂ ಸರಿ. ಎಲ್ಲಕ್ಕಿಂತ ಮೊದಲು ಆಕೆಯ ಮಾತುಗಳನ್ನು ಆಲಿಸಬೇಕು,” ಎಂದಿದ್ದಾರೆ ಸಿದ್ದಾರ್ಥ್‌.

ನಟರನ್ನು ಆರಾಧಿಸುವ ವ್ಯವಸ್ಥೆಯಿಂದಾಗಿಯೇ ಇಂತಹ ಸಂದರ್ಭಗಳು ಸೃಷ್ಟಿಯಾಗುತ್ತವೆ ಎನ್ನುತ್ತಾರೆ ಚಿತ್ರಸಾಹಿತಿ ಅಪೂರ್ವ ಅಸ್ರಾನಿ. “ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ಚಿತ್ರರಂಗದ ಪ್ರಭಾವಿಗಳಿಂದ ಅವಮಾನ ಎದುರಿಸುವಂತಾಗಿದೆ. ವ್ಯಕ್ತಿಪೂಜೆಯಿಂದಾಗಿ ಹೀಗಾಗುತ್ತಿದೆ,” ಎನ್ನುವ ಅವರು, ತನುಶ್ರೀ ಅವರಿಗೆ ಧೈರ್ಯ ತುಂಬಿದ್ದಾರೆ. ‘ಇದೊಂದು ಪಬ್ಲಿಸಿಟಿ ಸ್ಟಂಟ್‌’ ಎಂದು ಅಣಕವಾಡುವವರನ್ನು ಯುವನಟ ಕುನಾಲ್ ಕಪೂರ್ ತರಾಟೆಗೆ ತೆಗೆದುಕೊಂಡಿದ್ದಾರೆ. ತನುಶ್ರೀ ಘಟನೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳಿವೆ ಎನ್ನುತ್ತಾರವರು. ತನುಶ್ರೀ ಪರ ಮಾತನಾಡಿರುವ ನಟಿ ರವೀನಾ ಟಂಡನ್‌, ಚಿತ್ರರಂಗದಲ್ಲಿ ನಟಿಯರಿಗೆ ಗೌರವ ಸಿಗಬೇಕು ಎಂದು ಪ್ರತಿಪಾದಿಸಿದ್ದಾರೆ.

ನಾನು ಹೇಗೆ ಉತ್ತರಿಸಲಿ?: ಪ್ರಕರಣದ ಬಗ್ಗೆ ನಟಿಯರೆಲ್ಲರೂ ತನುಶ್ರೀ ಪರವಾಗಿ ಮಾತನಾಡಿದ್ದಾರೆ. ಆದರೆ, ಬಾಲಿವುಡ್‌ನ ಪ್ರಮುಖರು ಮಾತ್ರ ಉಪಾಯದ ಉತ್ತರಗಳೊಂದಿಗೆ ಜಾರಿಕೊಳ್ಳುತ್ತಿದ್ದಾರೆ. ಮೊನ್ನೆ ‘ಥಗ್ಸ್ ಆಫ್‌ ಹಿಂದೂಸ್ತಾನ್‌’ ಹಿಂದಿ ಚಿತ್ರದ ಟ್ರೈಲರ್‌ ಬಿಡುಗಡೆ ಸಂದರ್ಭದಲ್ಲಿ ಹಿರಿಯ ನಟ ಅಮಿತಾಭ್ ಅವರಿಗೆ ಈ ಬಗ್ಗೆ ಪ್ರಶ್ನಿಸಲಾಗಿದೆ. “ನನ್ನ ಹೆಸರು ತನುಶ್ರೀ ಅಲ್ಲ, ನಾನಾ ಪಾಟೇಕರ್ ಕೂಡ ಅಲ್ಲ. ನಿಮ್ಮ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ?” ಎಂದಿದ್ದಾರೆ ಬಚ್ಚನ್‌. ಇದೇ ಪ್ರಶ್ನೆಯನ್ನು ಅಮೀರ್ ಖಾನ್‌ ಮುಂದಿಟ್ಟಾಗ, “ಪ್ರಕರಣದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ನಾನು ಈ ಪ್ರಶ್ನೆಗೆ ಉತ್ತರಿಸುವುದು ತಪ್ಪಾಗುತ್ತದೆ. ಒಂದೊಮ್ಮೆ ಇಂತಹ ಘಟನೆ ನಡೆದಿದ್ದರೆ ಅದು ದುರದೃಷ್ಟಕರ. ತನಿಖೆ ನಂತರ ಎಲ್ಲವೂ ತಿಳಿದುಬರಲಿದೆ,” ಎಂದಿದ್ದಾರೆ. “ನನಗೆ ಇದರ ಮಾಹಿತಿ ಇಲ್ಲ. ತಿಳಿದ ನಂತರ ನಾನು ಪ್ರತಿಕ್ರಿಯಿಸುತ್ತೇನೆ,” ಎನ್ನುವುದು ಸಲ್ಮಾನ್ ಖಾನ್‌ ಹೇಳಿಕೆ.

ಆರೋಪ ಅಲ್ಲಗಳೆದ ನಾನಾ: ತಮ್ಮ ಮೇಲಿನ ತನುಶ್ರೀ ಅವರ ಗಂಭೀರ ಆರೋಪವನ್ನು ನಟ ನಾನಾ ಪಾಟೇಕರ್ ಅಲ್ಲಗಳೆದಿದ್ದಾರೆ. ಮಾಧ್ಯಮಗಳಿಗೆ ಹೆಚ್ಚು ಪ್ರತಿಕ್ರಿಯೆ ನೀಡದ ಅವರು, ತನುಶ್ರೀಗೆ ಲೀಗಲ್ ನೋಟಿಸ್‌ ನೀಡುವುದಾಗಿ ಹೇಳಿದ್ದಾರೆ. ನಟಿ ತಮ್ಮಲ್ಲಿ ಕ್ಷಮೆ ಯಾಚಿಸಬೇಕು ಎನ್ನುವುದೂ ಅವರ ಬೇಡಿಕೆಯಾಗಿದೆ. ‘ಹಾರ್ನ್ ಓಕೆ ಪ್ಲೀಸ್‌’ ಸಿನಿಮಾದ ನೃತ್ಯನಿರ್ದೇಶಕ ಗಣೇಶ್‌ ಆಚಾರ್ಯ, ನಿರ್ಮಾಪಕ ಸಮೀ ಸಿದ್ದಿಕಿ ಮತ್ತು ನಿರ್ದೇಶಕ ರಾಕೇಶ್ ಸಾರಂಗ್‌ ಆರೋಪವನ್ನು ಅಲ್ಲಗಳೆದಿದ್ದಾರೆ. “ಅಂದು ಚಿತ್ರೀಕರಣ ಸಂದರ್ಭದಲ್ಲಿನ ಘಟನೆಗಳ ಬಗ್ಗೆ ನಟಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಲ್ಲಿ ಯಾರೂ ತಪ್ಪಾಗಿ ನಡೆದುಕೊಂಡಿಲ್ಲ,” ಎನ್ನುವುದು ನಿರ್ದೇಶಕ ರಾಕೇಶ್ ಸಾರಂಗ್ ಹೇಳಿಕೆ. ಪ್ರಕರಣದ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸದ ಇವರು ಮಾಧ್ಯಮಗಳಿಂದ ದೂರವೇ ಉಳಿದಿದ್ದಾರೆ. ಹಾಲಿವುಡ್‌ನಲ್ಲಿ ಸದ್ದು ಮಾಡಿದ್ದ #MeToo ಅಭಿಯಾನ ತನುಶ್ರೀ ಪ್ರಕರಣದಿಂದ ಮತ್ತೊಂದು ಆಯಾಮ ಪಡೆದುಕೊಂಡಂತಾಗಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More