ಭಾರದ್ವಾಜ್‌ ಹಚ್ಚಿದ ‘ಪಟಾಕಿ’ ಸದ್ದಿನಲ್ಲಿ ಕೇಳಿಸಿದ್ದು ಪ್ರೀತಿ, ಶಾಂತಿ ಮಾತು

ಶೇಕ್ಸ್‌ಪಿಯರ್‌ ಹ್ಯಾಂಗ್‌ವೋರ್‌ನಿಂದ ಹೊರಬಂದಿರುವ ವಿಶಾಲ್ ಭಾರದ್ವಾಜ್‌, ಮತ್ತೊಂದು ತಾಜಾ ಸಿನಿಮಾ ತೆರೆಗೆ ತಂದಿದ್ದಾರೆ. ಕಚ್ಚಾಡುವ ಸೋದರಿಯರಿಬ್ಬರ ಕತೆ ಹೇಳುತ್ತಲೇ, ಎರಡು ದೇಶಗಳ ನಡುವಿನ ಸಂಘರ್ಷ ಮತ್ತು ಶಾಂತಿ ಸ್ಥಾಪಿಸಲು ಮಾಡಬೇಕಾದ ಕಸರತ್ತಿನ ಬಗ್ಗೆ ಮಾತನಾಡಿದ್ದಾರೆ

ನಾಲ್ಕು ವರ್ಷಗಳ ಹಿಂದೆ ಸುರೇಂದ್ರ ರೆಡ್ಡಿ ನಿರ್ದೇಶನದಲ್ಲಿ ತೆಲುಗು ಚಿತ್ರವೊಂದು ತೆರೆ ಕಂಡಿತ್ತು. ಅದರ ಹೆಸರು ‘ರೇಸುಗುರ್ರಂ.’ ಅಲ್ಲು ಅರ್ಜುನ್‌ ಮತ್ತು ಶಾಮ್‌ ಸೋದರರಾಗಿ ನಟಿಸಿದ್ದರು. ಅಲ್ಲು ಅರ್ಜುನ್‌ ಏನೂ ಕೆಲಸ ಮಾಡದೆ ಕಾಲಹರಣ ಮಾಡುವ ಸೋಂಬೇರಿ; ಶಾಮ್‌, ಪ್ರಾಮಾಣಿಕತೆಯನ್ನೇ ಬ್ಯಾಡ್ಜ್‌ ಮಾಡಿಕೊಂಡ ಪೊಲೀಸ್‌ ಅಧಿಕಾರಿ. ಇವರಿಬ್ಬರೂ ಸದಾ ಜಗಳವಾಡುತ್ತಲೇ ಇರುತ್ತಾರೆ. ಆ ಜಗಳವೇ ಅವರ ನಡುವಿನ ಪ್ರೀತಿ ಎಂಬುದು ಚಿತ್ರದ ಎರಡನೆಯ ಅರ್ಧದಲ್ಲಿ ಅಲ್ಲು ಅರ್ಜುನ್‌ಗೆ ಅರ್ಥವಾಗಿ, ಅಣ್ಣನಿಗೆ ತನ್ನಿಂದಾದ ಅನ್ಯಾಯ ಸರಿಪಡಿಸುವುದಕ್ಕೆ ಹೋರಾಡುತ್ತಾನೆ.

ನಿರ್ದೇಶಕ ವಿಶಾಲ್ ಭಾರದ್ವಾಜ್‌ ಕೂಡ, ಒಡಹುಟ್ಟಿದವರ ನಡುವಿನ ಕಲಹದ ಅಂಥದ್ದೇ ಒಂದು ಕತೆಯನ್ನು ತಂದಿದ್ದಾರೆ. ‘ಪಟಾಖಾ’ ಹೆಸರಿನ ಈ ಚಿತ್ರದಲ್ಲಿ ಸೋದರರ ಬದಲು ಸೋದರಿಯರು ಜಗಳವಾಡುತ್ತಾರೆ. ಚಿಕ್ಕವರಾದಾಗಿನಿಂದಲೂ ಜಗಳವಾಡುತ್ತಲೇ ಬೆಳೆಯುವ ಈ ಸೋದರಿಯರು, ಒಬ್ಬರು ಇನ್ನೊಬ್ಬರನ್ನು ಪೇಚಿಗೆ ಸಿಲುಕಿಸಿ ಸಂತೋಷಪಡುವ ಅವಕಾಶಕ್ಕಾಗಿ ಸದಾ ಕಾಯುತ್ತಿರುತ್ತಾರೆ. ಇವರಿಬ್ಬರಿಗೆ ತಮ್ಮ ನಡುವಿನ ಜಗಳದ ಹಿಂದೆ ಪ್ರೀತಿ ಎಂಬುದು ಅರ್ಥವಾಗುವ ಮೂಲಕ ಸಿನಿಮಾ ಮುಗಿಯುತ್ತದೆ.

ಕಥೆ ಇಷ್ಟೇ ಸರಳವಾಗಿದ್ದರೆ ಅದು ಭಾರದ್ವಾಜ್‌ ಸಿನಿಮಾ ಎನಿಸಿಕೊಳ್ಳಲು ಹೇಗೆ ಸಾಧ್ಯ? ಚುಟ್ಕಿ ಮತ್ತು ಭಡ್ಕಿ ತಾಯಿ ಇಲ್ಲದೆ ತಂದೆಯ ಆರೈಕೆಯಲ್ಲಿ ಬೆಳೆಯುವ ಹುಡುಗಿಯರು. ಎಲ್ಲಿದ್ದೇವೆ, ಯಾಕಾಗಿ ಜಗಳವಾಡುತ್ತಿದ್ದೇವೆ ಎಂಬುದನ್ನೂ ಲೆಕ್ಕಿಸದೆ, ಅವಕಾಶ ಹುಡುಕಿಕೊಂಡು ಜಗಳವಾಡುವವರು. ಅಕ್ಕನ ಬ್ಯಾಗಿನಲ್ಲಿದ್ದ ಬೀಡಿ ಕದ್ದು ಸೇದಿದ್ದಕ್ಕೆ, ಪ್ರೇಮಿ ಕೊಡಿಸಿದ ಜೀನ್ಸ್‌ ಮತ್ತು ಟಾಪ್‌ ಕದ್ದು ತೊಟ್ಟಿದ್ದಕ್ಕೆ... ಹೀಗೆ ಪಟ್ಟಿ ಬೆಳೆಯುತ್ತದೆ.

ಇವರಿಬ್ಬರ ಜಗಳ ನೋಡಿ ರೋಸಿದ ತಂದೆ, ಶಾಲೆ ಬಿಡಿಸುವುದು ಉತ್ತಮ ಎಂದು ನಿರ್ಧರಿಸುತ್ತಾನೆ. ಅಕ್ಕನಿಗೆ ಟೀಚರ್‌ ಆಗಬೇಕೆಂಬ ಆಸೆ, ಅದಕ್ಕಾಗಿ ಓದಬೇಕು. ತಂಗಿಗೆ ಡೈರಿ ಮಾಡುವಾಸೆ, ಆಕೆಯ ಪಾಲಿಗೆ 'ಓದು ಯಾರಿಗೆ ಬೇಕು?' ಇಂಥ ಹೊತ್ತಲ್ಲಿ ಜಿದ್ದಿಗೆ ಬಿದ್ದು ಒಬ್ಬಳು ಇಂಜಿನಿಯರ್‌ ಅನ್ನು, ಇನ್ನೊಬ್ಬಳು ಸೈನಿಕನನ್ನು ಪ್ರೀತಿಸಿಬಿಡುತ್ತಾರೆ. ಕಡೆಗೆ ಅವರಿಬ್ಬರೂ ನಿಶ್ಚಯವಾದ ಮದುವೆಯನ್ನು ತಪ್ಪಿಸಿಕೊಂಡು ಕೊನೆಗೂ ಪ್ರೀತಿಸಿದವರ ಮನೆ ಸೇರುತ್ತಾರೆ. ದುರ್ದೈವವೋ, ಸುದೈವವೋ, ಮದುವೆಯಾಗಿ ಒಬ್ಬರ ಮುಖ ಇನ್ನೊಬ್ಬರು ನೋಡಬಾರದು ಎಂದುಕೊಂಡವರು ಒಂದೇ ಮನೆಯ ಸೊಸೆಯರಾಗುತ್ತಾರೆ!

ಕಾಲಚಕ್ರ ಉರುಳಿ, ಸಂಸಾರ, ಮಕ್ಕಳು ಎಲ್ಲವೂ ಜೀವನ ತುಂಬಿಕೊಳ್ಳುತ್ತವೆ. ಆದರೆ, ಇಬ್ಬರ ನಡುವಿನ ದ್ವೇಷ ಮಾತ್ರ ಕರಗುವುದಿಲ್ಲ. ಅಕ್ಕ ಕಡೆಗೂ ಓದಿ ಸುದ್ದಿ ಮಾಡುತ್ತಾಳೆ. ತಂಗಿ ಮಾದರಿ ಡೈರಿ ಬೆಳೆಸಿ ಸುದ್ದಿಯಾಗುತ್ತಾಳೆ. ಚಿತ್ರಕ್ಕೆ ವಿಶಾಲ್ ಭಾರದ್ವಾಜ್‌ ರಾಜಕೀಯ ಟ್ವಿಸ್ಟ್‌ ಕೊಡುವುದು ಇಲ್ಲೇ.

ಪರಸ್ಪರ ದ್ವೇಷಿಸುತ್ತ ಈ ಸೋದರಿಯರು ಎಂಥ ಸ್ಥಿತಿ ತಲುಪುತ್ತಾರೆಂದರೆ, ಒಬ್ಬಳು ದೃಷ್ಟಿ ಕಳೆದುಕೊಳ್ಳುತ್ತಾಳೆ, ಇನ್ನೊಬ್ಬಳು ಮಾತು ಕಳೆದುಕೊಳ್ಳುತ್ತಾಳೆ! ಆದರೆ, ವಾಸ್ತವದಲ್ಲಿ ತಜ್ಞರು ತಪಾಸಣೆ ಮಾಡಿದಾಗ, ಇಬ್ಬರಿಗೂ ದೈಹಿಕವಾಗಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಸಾಬೀತಾಗುತ್ತದೆ. ಆದರೆ, ಮಾನಸಿಕವಾಗಿ ಅವರು ಸಮಸ್ಯೆಯ ಸುಳಿಯಲ್ಲಿದ್ದಾರೆ ಎಂಬುದನ್ನು ಖಚಿತಪಡಿಸುತ್ತಾರೆ. ಅದು ಒಂದು ರೀತಿಯ ಸನ್ನಿ ಎಂದೂ ಹೇಳುತ್ತಾರೆ.

ದ್ವೇಷಿಸುತ್ತ ಎಂಥ ತುದಿಯನ್ನು ತಲುಪುತ್ತೇವೆ ಎಂದರೆ, ನಾವು ನೋಡಬೇಕೆಂದು ಬಯಸಿದ್ದನ್ನು ಮಾತ್ರ ನೋಡುತ್ತೇವೆ; ಇಷ್ಟವಾಗದ್ದು ನಮಗೆ ಕಾಣಿಸುವುದೇ ಇಲ್ಲ. ಹಾಗೆಯೇ, ನಮಗೆ ಬೇಕಾದ್ದನ್ನು ಹೇಳುವುದಕ್ಕೆ ಮಾತು ಬರುತ್ತದೆ, ಇಷ್ಟವಿಲ್ಲದ್ದರ ಬಗ್ಗೆ ಮೂಕವಾಗುತ್ತೇವೆ.

ರಕ್ತ ಹಂಚಿಕೊಂಡರೂ ಪರಸ್ಪರರ ಬಗ್ಗೆ ಇರುವ ದ್ವೇಷ, ಒಬ್ಬರ ಏಳಿಗೆಯನ್ನು ಮತ್ತೊಬ್ಬರು ನೋಡಿ ಸಹಿಲಾಗದ ಕುರುಡುತನ, ಮೆಚ್ಚಿ ಆಡಲಾಗದ ಮೂಕವಾಗುವ ಗುಣವನ್ನು ರಾಜಕೀಯ ಹೇಳಿಕೆಯಾಗಿ ವಿಶಾಲ್‌ ಭಾರದ್ವಾಜ್‌ ಹೇಳಿದ್ದಾರೆ ಎನ್ನಿಸಲಾರಂಭಿಸುತ್ತದೆ. ಅದಕ್ಕೆ ಕಾರಣವೂ ಇದೆ. ಈ ಸೋದರಿಯಬ್ಬರನ್ನು ಪಾಕಿಸ್ತಾನ-ಭಾರತ ಎಂದೇ ಇಡೀ ಹಳ್ಳಿ ಕರೆಯುತ್ತಿರುತ್ತದೆ. ಅಷ್ಟೇ ಏಕೆ, ಅವರಪ್ಪನೇ ಹಾಗೆ ಕರೆಯುತ್ತಾನೆ. ಗಂಡಂದಿರ ನಡುವೆ ವೈಮನಸ್ಸು ಹುಟ್ಟುಹಾಕುವ ಸಂಚು ಹೂಡಿದಾಗ ಗೆಳೆಯ ಡಿಪ್ಪರ್‌, ಗಡಿ ಎಳೆದು ದೇಶ ಎರಡು ಮಾಡುವ ಮಾತನ್ನೇ ಉಪಮೆಯಾಗಿ ಬಳಸುತ್ತಾನೆ.

ಸೋದರಿಯರಿಬ್ಬರು ಹೊಡೆದಾಡುವುದನ್ನು, ಅಖಂಡವಾಗಿದ್ದ ದೇಶದಿಂದ ಎರಡಾದ ದೇಶಗಳ ಜಗಳಕ್ಕೆ ಹೋಲಿಸಿ ಹೇಳಿಕೆಗಳನ್ನು ನೀಡುತ್ತಾರೆ ವಿಶಾಲ್‌ ಭಾರದ್ವಾಜ್‌. ಹಾಸ್ಯದ ಸನ್ನಿವೇಶಗಳ ಮೂಲಕ ರಾಜಕೀಯವಾಗಿ ಎರಡು ದೇಶಗಳ ನಡುವೆ ಬಿತ್ತಲಾದ ಶತ್ರುತ್ವ, ಪರಸ್ಪರರನ್ನು ಪ್ರಾಮಾಣಿಕವಾಗಿ ನೋಡಿಕೊಳ್ಳಲು ಆಗದ ಕುರುಡತನ, ನಮ್ಮನ್ನು ಆವರಿಸಿಕೊಂಡಿರುವ ದ್ವೇಷದ ಸನ್ನಿಯ ಬಗ್ಗೆ ಮಾತನಾಡುತ್ತಾರೆ.

ಇನ್ನೊಂದು ಅಂಶವನ್ನು ಇಲ್ಲಿ ಗಮನಿಸಬೇಕು. ಇಬ್ಬರ ನಡುವಿನ ಜಗಳದಲ್ಲಿ ಮೂರನೆಯ ವ್ಯಕ್ತಿಯ ಪಾಲು ಇದ್ದೇ ಇರುತ್ತದೆ. ಚುಟ್ಕಿ ಮತ್ತು ಭಡ್ಕಿಯ ಗೆಳೆಯ ಡಿಪ್ಪರ್‌ ಇಬ್ಬರ ನಡುವೆ ಜಗಳ ತಂದಿಟ್ಟು ಆನಂದಿಸುವ ವ್ಯಕ್ತಿ. ತಂದೆಗೆ ದೂರುವುದು, ಪರಸ್ಪರರ ಬಗ್ಗೆ ಚಾಡಿ ಹೇಳುವುದು ಮಾಡುತ್ತ, ಸೋದರಿಯರು ಸದಾ ಜಗಳವಾಡುತ್ತಲೇ ಇರುವಂತೆ ಮಾಡುವ ವ್ಯಕ್ತಿ ಈತ. ಇಂಥವರು ನಮ್ಮ ನಡುವೆ ಇದ್ದೇ ಇರುತ್ತಾರೆ. ನಾವು ಅವರನ್ನು ಗುರುತಿಸಲು ಸಾಧ್ಯವಾಗದಿರುವುದೇ ದ್ವೇಷ ಹೆಚ್ಚಾಗುವುದಕ್ಕೆ ಕಾರಣ.

ಅದೇ ದುಷ್ಟ ವ್ಯಕ್ತಿಯನ್ನೇ ಕಡೆಗೆ ಸೋದರಿಯರ ವೈಷಮ್ಯಕ್ಕೆ ಮಂಗಳ ಹಾಡುವುದಕ್ಕೆ ಬಳಸುತ್ತಾರೆ ವಿಶಾಲ್‌. ಯುದ್ಧದ ಮೂಲಕವೇ ಶಾಂತಿ ನೆಲೆಸುವುದು ಎನ್ನುವ ಡಿಪ್ಪರ್‌, ಕ್ಲೈಮ್ಯಾಕ್ಸ್‌ನಲ್ಲಿ ಅಕ್ಕ-ತಂಗಿಯರ ನಡುವೆ ಜಗಳಕ್ಕೆ ನಾಂದಿ ಹಾಡುತ್ತಾನೆ. ಆದರೆ, ಪರಸ್ಪರರ ಬಗ್ಗೆ ಇಟ್ಟುಕೊಂಡಿದ್ದ ಕಾಳಜಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡುವ ಮೂಲಕ ಸತ್ಯ ಹೊರಬೀಳುತ್ತದೆ. ಹೀಗೆ ಇವರಿಬ್ಬರೂ ಒಂದಾದಂತೆ, ಕೊರಿಯಾ ದೇಶಗಳು, ಇಸ್ರೇಲ್‌-ಪ್ಯಾಲಿಸ್ತೀನ್‌ಗಳು, ಭಾರತ-ಪಾಕಿಸ್ತಾನಗಳು ಪರಸ್ಪರ ದ್ವೇಷ ಕಳೆದುಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಎಂಬ ಮಾತಿನ ಮೂಲಕ ಚಿತ್ರ ಕೊನೆಯಾಗುತ್ತದೆ.

ಇದನ್ನೂ ಓದಿ : ಗ್ಯಾಂಗ್‌ಸ್ಟರ್‌ ಸಿನಿಮಾ ಮಾಡಿ ದಶಕದ ಸೇಡು ತೀರಿಸಿಕೊಂಡ ಮಣಿರತ್ನಂ

ವಿಶಾಲ್‌ ಭಾರದ್ವಾಜ್‌, ಹಾಸ್ಯ ತುಂಬಿದ ಕತೆಯನ್ನು ಬಳಸಿಕೊಂಡು, ಸಾಮಾಜಿಕ ಮತ್ತು ರಾಜಕೀಯ ದ್ವೇಷಗಳ ಬಗೆಗಿನ ನಮ್ಮ ಪೂರ್ವಗ್ರಹ, ಕುರುಡುತನವನ್ನು ತಿವಿಯುತ್ತಾರೆ. ಪಟಾಕಿ ಸದ್ದಿನಂತೆ ಇಡೀ ಚಿತ್ರದುದ್ದಕ್ಕೂ ಕೇಳಿಸುವ ಅಕ್ಕ-ತಂಗಿಯರ ಜಗಳದಲ್ಲಿ, ಮನದ ಆಳದಲ್ಲಿರುವ ಪ್ರೀತಿ ತಿಳಿಯದೆ ಹೋಗಿತ್ತು. ಅಂಥ ಪ್ರೀತಿಯನ್ನು ಆಲಿಸುವುದಕ್ಕೇ ಆಗದಿರಲೆಂದೇ ಕೆಲವರು ಗದ್ದಲ ಸೃಷ್ಟಿಸುತ್ತಲೇ ಇರುತ್ತಾರೆ. ಆ ಗದ್ದಲದ ಮೂಲಕ ನಮ್ಮ ವಿವೇಚನೆ, ಸಂವೇದನೆ ಕೊಲ್ಲುತ್ತಾರೆ. ಅದನ್ನು ಒಂದು ಕ್ಷಣ ಹತ್ತಿಕ್ಕಿದರೂ ನಮ್ಮೊಳಗಿನ ಒಳ್ಳೆಯತನ ಗೋಚರಿಸುತ್ತದೆ ಎನ್ನುತ್ತಾರೆ ವಿಶಾಲ್‌ ಭಾರದ್ವಾಜ್‌.

ಅಕ್ಕ-ತಂಗಿಯರಾಗಿ ಸನ್ಯಾ ಮಲ್ಹೋತ್ರಾ, ರಾಧಿಕ ಮದನ್‌ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಚಿತ್ರವನ್ನು ನಡೆಸುವ ಸೂತ್ರಧಾರನಂತೆ ಹಾಸ್ಯ ಕಲಾವಿದ ಸುನಿಲ್‌ ಗ್ರೋವರ್‌ ತಮ್ಮ ಛಾಪು ಒತ್ತಿದ್ದಾರೆ. ನಾಯಕನಿಲ್ಲದ ಚಿತ್ರಗಳನ್ನು ನೋಡುವ ಅನುಭವ ಹೇಗಿರುತ್ತದೆ ಎಂಬುದಕ್ಕೆ ‘ಪಟಾಖಾ’ ನೋಡಲೇಬೇಕು. ಬೋರು ಹೊಡೆಸದ, ಕಡೆಯಲ್ಲಿ ಕಣ್ಣು ತೇವ ಮಾಡುವ ಭಾವುಕತೆಯನ್ನು ಒಳಗೊಂಡ ‘ಪಟಾಖಾ’, ನಿರ್ದೇಶಕ ವಿಶಾಲ್‌ ಭಾರದ್ವಾಜ್‌ ಅವರ ಕಲಾತ್ಮಕತೆಯ ಹಿರಿಮೆಯನ್ನು ಗಟ್ಟಿಯಾಗಿ ಘೋಷಿಸುತ್ತದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More