ಟ್ರೈಲರ್‌ | ಹದಿಹರೆಯದ ತವಕ-ತಲ್ಲಣ, ಪ್ರೀತಿಯ ಕತೆ ‘ನಡುವೆ ಅಂತರವಿರಲಿ’

ರವೀನ್‌ ನಿರ್ದೇಶನದ ‘ನಡುವೆ ಅಂತರವಿರಲಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪ್ರೀತಿಯ ಭ್ರಮೆಯಲ್ಲಿ ವಾಸ್ತವವನ್ನೇ ಮರೆತು ಬದುಕುವ ಪ್ರೇಮಿಗಳು, ಅವರಿಗೆದುರಾಗುವ ಸಂಕಷ್ಟಗಳ ಚಿತ್ರಣ ಇಲ್ಲಿದೆ. ಪ್ರಖ್ಯಾತ್‌, ಐಶಾನಿ ಜೋಡಿಯ ಈ ಸಿನಿಮಾ ಅಕ್ಟೋಬರ್‌ 5ರಂದು ತೆರೆಕಾಣುತ್ತಿದೆ

ವಿಶಿಷ್ಟ ಶೀರ್ಷಿಕೆ ಮತ್ತು ಕಥಾಹಂದರದಿಂದ ಗಮನ ಸೆಳೆದಿರುವ ‘ನಡುವೆ ಅಂತರವಿರಲಿ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ರವೀನ್‌ ಚೊಚ್ಚಲ ನಿರ್ದೇಶನದ ಚಿತ್ರವಿದು. ಕಾಲೇಜು ದಿನಗಳ ಸಾಧಾರಣ ಪ್ರೇಮಕತೆಯೊಂದು ದಿನಗಳೆದಂತೆ ಪಡೆದುಕೊಳ್ಳುವ ತೀವ್ರತೆ, ಪ್ರೀತಿಯ ಭ್ರಮೆಯಲ್ಲಿ ವಾಸ್ತವವನ್ನೇ ಮರೆತು ಬದುಕುವ ಪ್ರೇಮಿಗಳು, ಮಕ್ಕಳ ಪ್ರೀತಿಯ ವಿಚಾರ ತಿಳಿದು ಅವರಿಬ್ಬರನ್ನು ದಂಡಿಸಿ ದೂರ ಮಾಡುವ ಪೋಷಕರು, ತನ್ನ ಪ್ರೇಯಸಿಯನ್ನು ತೊರೆದು ಬದುಕಲಾರದೆ ಆತ್ಮಹತ್ಯೆಗೆ ಯತ್ನಿಸುವ ನಾಯಕ, ನಾಯಕನ ಅವಸ್ಥೆಯನ್ನು ತಿಳಿದು ತನ್ನ ಬದುಕನ್ನೂ ಅಂತ್ಯಗೊಳಿಸಿಕೊಳ್ಳಲು ಚಲಿಸುವ ಲಾರಿಗೆ ಎದುರಾಗಿ ಓಡುವ ನಾಯಕಿ... ಹೀಗೆ ಸಾಗುವ ಎರಡೂವರೆ ನಿಮಿಷಗಳ ಟ್ರೇಲರ್ ಅಷ್ಟೇನೂ ಕುತೂಹಲಗಳನ್ನು ಸೃಷ್ಟಿಸುವುದಿಲ್ಲ.

ಇದನ್ನೂ ಓದಿ : ವಿಡಿಯೋ | ‘ಅಂಬಿ ನಿಂಗೆ ವಯಸ್ಸಾಯ್ತೋ’ ತಮ್ಮ ಕೊನೆಯ ಸಿನಿಮಾ ಎಂದ ಅಂಬರೀಶ್‌

ಪ್ರೀತಿಯೇ ಬದುಕಲ್ಲ, ಭ್ರಮೆಯಾಚೆಗೂ ಬದುಕನ್ನು ನೋಡುವ ಅಗತ್ಯವಿದೆ ಎಂಬ ಅದೃಶ್ಯ ಸಂದೇಶವೊಂದು ಇಲ್ಲಿದೆ. ಟ್ರೈಲರ್‌ನಲ್ಲಿ ಆಗಾಗ ಕಾಣಿಸಿಕೊಳ್ಳುವ ಹಾಸ್ಯನಟ ಚಿಕ್ಕಣ್ಣ, ತಮ್ಮ ಮ್ಯಾನರಿಸಂನೊಂದಿಗೆ ನಗಿಸುತ್ತಾರೆ. ಹದಿಹರೆಯದ ತಲ್ಲಣ, ಅರ್ಥ-ಅನರ್ಥಗಳ ಸುತ್ತ ಹೆಣೆದಿರುವ ಈ ಕತೆಗೆ ನಾಯಕಿಯಾಗಿ ‘ವಾಸ್ತು ಪ್ರಕಾರ’ ಖ್ಯಾತಿಯ ಐಶಾನಿ ಶೆಟ್ಟಿ ಅಭಿನಯಿಸಿದ್ದಾರೆ. ಪ್ರಖ್ಯಾತ್ ಪರಮೇಶ್ ಅವರಿಗೆ ನಾಯಕನಾಗಿ ಇದು ಚೊಚ್ಚಲ ಪ್ರಯೋಗ. ಅಚ್ಯುತ್‌ ಕುಮಾರ್‌, ಚಿಕ್ಕಣ್ಣ ಮತ್ತಿತರ ಅನುಭವಿ ಕಲಾವಿದರು ಈ ಹೊಸಬರ ತಂಡಕ್ಕೆ ಸಾಥ್ ನೀಡಿದ್ದಾರೆ. ಬೃಂದಾ ಪ್ರೋಡಕ್ಷನ್‌ನಡಿ ಸಿನಿಮಾ ತಯಾರಾಗಿದೆ. ಮಣಿಕಾಂತ್ ಕದ್ರಿ ಸಂಗೀತವಿದ್ದು, ಅಕ್ಟೋಬರ್ 5ರಂದು ಸಿನಿಮಾ ತೆರೆಕಾಣಲಿದೆ.

#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
Editor’s Pick More