ವಿಡಿಯೋ | ಚಿತ್ರೀಕರಣದ ವೇಳೆ ನಟಿ ತನುಶ್ರೀ ಕಾರು ಜಖಂಗೊಳಿಸಿದ ದೃಶ್ಯಾವಳಿ

ನಟಿ ತನುಶ್ರೀ ದತ್ತಾ ಲೈಂಗಿಕ ದೌರ್ಜನ್ಯದ ಆರೋಪ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಹಲವು ನಟ-ನಟಿಯರು ತನುಶ್ರೀಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹತ್ತು ವರ್ಷಗಳ ಹಿಂದೆ ಚಿತ್ರೀಕರಣದ ವೇಳೆ ನಟ ನಾನಾ ಪಾಟೇಕರ್‌ ಬೆಂಬಲಿಗರು ತನುಶ್ರೀ ಕಾರು ಜಖಂಗೊಳಿಸುವ ವಿಡಿಯೋ ವೈರಲ್ ಅಗಿದೆ

ಹತ್ತು ವರ್ಷಗಳ ಹಿಂದೆ ಚಿತ್ರೀಕರಣದ ವೇಳೆ ನಟಿ ತನುಶ್ರೀ ಕಾರು ಜಖಂಗೊಳಿಸಿದ ವಿಡಿಯೋ ವೈರಲ್ ಆಗಿದೆ. ‘ಹಾರ್ನ್ ಓಕೆ ಪ್ಲೀಸ್‌’ ಹಿಂದಿ ಚಿತ್ರೀಕರಣದ ಸಂದರ್ಭವದು. ನೃತ್ಯದ ರಿಹರ್ಸಲ್‌ ಸಂದರ್ಭದಲ್ಲಿ ನಟ ನಾನಾ ಪಾಟೇಕರ್‌ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತನುಶ್ರೀ ಆರೋಪಿಸಿದ್ದರು. ಹಾಗೆಂದು ಸೆಟ್‌ನಿಂದ ಹೊರನಡೆಯುವ ಸಂದರ್ಭದಲ್ಲಿ, ಪಾಟೇಕರ್ ಬೆಂಬಲಿಗರು ಗಲಭೆ ನಡೆಸಿದ್ದರು. ಕಾರನ್ನು ಜಖಂಗೊಳಿಸಿದ ವಿಡಿಯೋ ಈಗ ಹೊರಬಿದ್ದಿದೆ.

ತನುಶ್ರೀ ದತ್ತಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾರೆ. ಡ್ರೈವರ್ ಹಾಗೂ ಮುಂದಿನ ಸೀಟ್‌ನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದಾರೆ. ಆ ವ್ಯಕ್ತಿ ತನುಶ್ರೀ ಬಾಡಿಗಾರ್ಡ್‌ ಇಲ್ಲವೇ ಆಪ್ತರಂತೆ ತೋರುತ್ತದೆ. ಸ್ಟುಡಿಯೋದಿಂದ ಹೊರಡುತ್ತಿದ್ದಂತೆ ಹದಿನೈದಕ್ಕೂ ಹೆಚ್ಚು ಜನರು ಕಾರನ್ನು ಸುತ್ತುವರಿದು ಗಲಾಟೆ ನಡೆಸುತ್ತಾರೆ. ಕಾರಿನ ಕಿಟಕಿ ಗಾಜು, ಮುಂಬದಿಯ ಗಾಜಿಗೆ ಹಾನಿ ಮಾಡುತ್ತಾರೆ. ವ್ಯಕ್ತಿಯೊಬ್ಬ ಕಾರಿನ ಮೇಲೆ ಹತ್ತಿದರೆ, ಮತ್ತೊಬ್ಬ ಟೈರ್‌ನ ಗಾಳಿ ತೆಗೆಯುತ್ತಾನೆ.

ಎಲ್ಲರೂ ಗಲಾಟೆ ನಡೆಸುತ್ತಿದ್ದರೆ, ನಟಿ ಕಾರಿನೊಳಗೆ ನಿರ್ಲಿಪ್ತವಾಗಿ ಕುಳಿತಿರುತ್ತಾರೆ. ಕೆಲ ಹೊತ್ತಿನಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಗಲಾಟೆ ತಣ್ಣಗಾಗುತ್ತದೆ. ನಟಿಯ ಕಾರಿಗೆ ಮುತ್ತಿಗೆ ಹಾಕಿ ಗಲಾಟೆ ನಡೆಸಿದ್ದವರನ್ನು ಪೊಲೀಸರು ಕರೆದೊಯ್ಯುತ್ತಾರೆ. ಇವೆಲ್ಲವೂ ದೃಶ್ಯಗಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಂತರ ತನುಶ್ರೀ, ತಮ್ಮ ಗೌರವ ಮತ್ತು ಕಾರಿಗೆ ಹಾನಿಯಾಗಿದೆ ಎಂದು ಸಿನಿ ಅಂಡ್ ಟೆಲಿವಿಷನ್‌ ಆರ್ಟಿಸ್ಟ್ಸ್‌ ಅಸೋಸಿಯೇಷನ್‌ಗೆ (CINTAA) ದೂರು ನೀಡಿದ್ದರು.

ತನುಶ್ರೀ ಚಿತ್ರತಂಡದಿಂದ ಹೊರನಡೆದ ನಂತರ ಅವರ ಜಾಗಕ್ಕೆ ರಾಖಿ ಸಾವಂತ್ ಬಂದಿದ್ದರು. ಇದೀಗ ಪ್ರಕರಣದ ಬಗ್ಗೆ ರಾಖಿ ಪ್ರತಿಕ್ರಿಯಿಸಿದ್ದು, “ತನುಶ್ರೀ ಪ್ರಚಾರಕ್ಕಾಗಿ, ವೈಯಕ್ತಿಕ ಲಾಭಕ್ಕಾಗಿ ಇಂತಹ ಆರೋಪ ಮಾಡಿದ್ದಾರೆ,” ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ, ಬಾಲಿವುಡ್‌ ನಟ-ನಟಿಯರು ಹಾಗೂ ತಂತ್ರಜ್ಞರಿಂದ ತನುಶ್ರೀಗೆ ಬೆಂಬಲ ವ್ಯಕ್ತವಾಗುತ್ತಿದೆ. ನಟಿ ಪೂಜಾ ಭಟ್‌ ಅವರನ್ನು ಸಮರ್ಥಿಸಿಕೊಂಡಿದ್ದು, “ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ಬೇಡ,” ಎಂದಿದ್ದಾರೆ. ಈ ಮಧ್ಯೆ, ನಟ ನಾನಾ ಪಾಟೇಕರ್‌ ವಕೀಲ ರಾಜೇಂದ್ರ ಶಿರೋಡ್ಕರ್‌ ನಟಿ ತನುಶ್ರೀಗೆ ಅಧಿಕೃತ ನೋಟಿಸ್ ಕಳುಹಿಸಿದ್ದಾರೆ. “ಇದು ಸುಳ್ಳು ಆರೋಪ. ನಟಿ ಕ್ಷಮೆ ಕೇಳಬೇಕೆಂದು ನೋಟಿಸ್ ಕಳುಹಿಸಿದ್ದು, ಸದ್ಯದಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನಾ ಸುದ್ದಿಗೋಷ್ಠಿ ನಡೆಸಲಿದ್ದಾರೆ,” ಎಂದಿದ್ದಾರೆ ಶಿರೋಡ್ಕರ್‌.

ಸ್ಮಿತಾ ನೆನಪು | ‘ಅನ್ವೇಷಣೆ’ ಗಾಗಿ ತಾನೇ ಹಣ ಹಾಕಿಕೊಂಡು ಬಂದು ನಟಿಸಿದ್ದರು
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ವಿಡಿಯೋ | ‘ಥಗ್ಸ್‌ ಆಫ್‌ ಹಿಂದೋಸ್ಥಾನ್’ ಚಿತ್ರದ ‘ವಶಮಲ್ಲೆ’ ಹಾಡು ರಿಲೀಸ್‌
Editor’s Pick More