ವಿಡಿಯೋ | ರಜನಿ, ಅಕ್ಷಯ್‌ ಕುಮಾರ್‌ ಸಿನಿಮಾ ‘2.0’ ಮೇಕಿಂಗ್‌ ದೃಶ್ಯಾವಳಿ

ಬಹುನಿರೀಕ್ಷಿತ ಸೈಂಟಿಫಿಕ್ ಫಿಕ್ಷನ್‌ ಸಿನಿಮಾ ‘2.0’ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರಕ್ಕೆ ಮೂರು ಸಾವಿರಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ್ದು, ಮೇಕಿಂಗ್‌ ವಿಡಿಯೋ ಹಲವು ಅಚ್ಚರಿಗಳನ್ನು ತೆರೆದಿಡುತ್ತದೆ. ಶಂಕರ್ ನಿರ್ದೇಶನದ ಈ ಸಿನಿಮಾ ನವೆಂಬರ್‌ 29ರಂದು ಬಿಡುಗಡೆಯಾಗಲಿದೆ

ನಿರ್ದೇಶಕ ಶಂಕರ್‌ ತಮ್ಮ ಮಹತ್ವಾಕಾಂಕ್ಷೆಯ ‘2.0’ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ರಜನೀಕಾಂತ್‌ ಮತ್ತು ಅಕ್ಷಯ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರದ ಮೇಕಿಂಗ್ ವಿಡಿಯೋ ತಂತ್ರಜ್ಞರು ಹಾಗೂ ಕಲಾವಿದರ ಅಗಾಧ ಪರಿಶ್ರಮಕ್ಕೆ ಸಾಕ್ಷ್ಯ ನುಡಿಯುತ್ತದೆ. ವಿಡಿಯೋ ಹೇಳುವಂತೆ 1000 ವಿಎಫ್‌ಎಕ್ಸ್‌ ಕಲಾವಿದರು ಸೇರಿದಂತೆ ಜಗತ್ತಿನ ವಿವಿಧೆಡೆಯ 3,000ಕ್ಕೂ ಹೆಚ್ಚು ತಂತ್ರಜ್ಞರು ‘2.0’ಗೆ ಕಾರ್ಯನಿರ್ವಹಿಸಿದ್ದಾರೆ.

ಸೈಂಟಿಫಿಕ್ ಫಿಕ್ಷನ್‌ ‘2.0’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿನ ತಂತ್ರಜ್ಞರ ಕಾರ್ಯವೈಖರಿ, ಸ್ಪೆಷಲ್ ಎಫೆಕ್ಟ್‌ಗಾಗಿ ತಂತ್ರಜ್ಞಾನದ ಬಳಕೆ, ಶ್ರೀಮಂತ ಸೆಟ್‌ಗಳು, ಅಕ್ಷಯ್ ಕುಮಾರ್‌ ಅವರ ವಿಶಿಷ್ಟ ಪಾತ್ರದ ಮೇಕಪ್‌... ಹೀಗೆ ವಿಡಿಯೋದಲ್ಲಿ ಅಪರೂಪದ ದೃಶ್ಯಗಳಿವೆ. ಟೀಸರ್ ಬಿಡುಗಡೆಯಾದ ತಿಂಗಳ ನಂತರ ಮೇಕಿಂಗ್ ವಿಡಿಯೋ ಬಂದಿದೆ. ಬಿಡುಗಡೆಗೆ ಮುನ್ನವೇ ಟೀಸರ್‌ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. 2ಡಿ ಮತ್ತು 3ಡಿ ಎರಡೂ ಫಾರ್ಮ್ಯಾಟ್‌ಗಳಲ್ಲಿ ತೆರೆಕಂಡಿದ್ದ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.

540 ಕೋಟಿ ರುಪಾಯಿ ಬಜೆಟ್‌ನಲ್ಲಿ ತಯಾರಾಗಿರುವ ‘2.0’ ಇದುವರೆಗಿನ ಭಾರತದ ಅತಿ ದುಬಾರಿ ವೆಚ್ಚದ ಸಿನಿಮಾ. ಏಷ್ಯಾದ ಎರಡನೇ ಅತಿ ದೊಡ್ಡ ಬಜೆಟ್‌ನ ಸಿನಿಮಾ. ಆರಂಭದಲ್ಲಿ 350 ಕೋಟಿ ರುಪಾಯಿ ಬಜೆಟ್‌ ಎಂದು ನಿಗದಿಯಾಗಿತ್ತು. ಅಂತಿಮವಾಗಿ ಬಜೆಟ್‌ 540 ಕೋಟಿ ರೂಪಾಯಿ ದಾಟಿದೆ. ಸಾಮಾನ್ಯವಾಗಿ 2ಡಿಯಲ್ಲಿ ಚಿತ್ರಿಸಿ ಅದನ್ನು 3ಡಿಗೆ ಬದಲಾಯಿಸಲಾಗುತ್ತಿತ್ತು. ಆದರೆ ಈ ಚಿತ್ರವನ್ನು ನೇರವಾಗಿ 3ಡಿ ಕ್ಯಾಮೆರಾದಲ್ಲಿ ಚಿತ್ರಿಸಲಾಗಿದೆ. ನವೆಂಬರ್‌ 29ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More