ಟೀಸರ್ | ‘ಮಣಿಕರ್ಣಿಕಾ’ ಝಾನ್ಸಿ ರಾಣಿಯಾಗಿ ಕಂಗನಾ ರನೌತ್‌ ವೀರಾವೇಷ

ಕ್ರಿಷ್ ನಿರ್ದೇಶನದಲ್ಲಿ ಕಂಗನಾ ನಟಿಸಿರುವ ಝಾನ್ಸಿ ರಾಣಿ ಬಯೋಪಿಕ್‌ ‘ಮಣಿಕರ್ಣಿಕಾ’ ಟೀಸರ್ ಬಿಡುಗಡೆಯಾಗಿದೆ. ಐತಿಹಾಸಿಕ ಚಿತ್ರದ ಟೀಸರ್‌ ಅದ್ಧೂರಿತನ, ಮೇಕಿಂಗ್‌ನಿಂದ ಗಮನ ಸೆಳೆಯುತ್ತದೆ. ಕಂಗನಾ ವೃತ್ತಿಬದುಕಿನ ಮಹತ್ವದ ಚಿತ್ರ ‘ಮಣಿಕರ್ಣಿಕಾ’ 2019ರ ಜ.25ರಂದು ತೆರೆಕಾಣಲಿದೆ

ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಸಿನಿಮಾ ‘ಮಣಿಕರ್ಣಿಕಾ.’ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕುರಿತ ಐತಿಹಾಸಿಕ ಚಿತ್ರದಲ್ಲಿ ಝಾನ್ಸಿ ರಾಣಿಯಾಗಿ ಕಂಗನಾ ರನೌತ್‌ ನಟಿಸಿದ್ದಾರೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕಂಗನಾ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಹಿರಿಯ ನಟ ಅಮಿತಾಭ್‌ ಬಚ್ಚನ್ ವಾಯ್ಸ್‌ಓವರ್‌ನೊಂದಿಗೆ ಟೀಸರ್ ಶುರುವಾಗುತ್ತದೆ. ಸಮೃದ್ಧವಾಗಿದ್ದ ಭಾರತಕ್ಕೆ ಬ್ರಿಟಿಷರ ಆಗಮನ, ತಾಯ್ನಾಡಿನ ರಕ್ಷಣೆಗೆ ನಿಲ್ಲುವ ಮಣಿಕರ್ಣಿಕಾ ಕುರಿತ ಪರಿಚಯ ಸಿಗುತ್ತದೆ.

ಬಚ್ಚನ್ ವಾಯ್ಸ್‌ಓವರ್‌ನಲ್ಲಿ ಝಾನ್ಸಿ ರಾಣಿಯ ಪ್ರಸ್ತಾಪವಾಗುತ್ತಿದ್ದಂತೆ ಅರಮನೆ ಪ್ರವೇಶಿಸುವ ಮಣಿಕರ್ಣಿಕಾಳ ಶ್ರೀಮಂತ ದೃಶ್ಯವಿದೆ. ಕಂಗನಾ ಕುದುರೆ ಸವಾರಿ, ಸಿಂಹಾಸನ ಮೇಲೆ ಕುಳಿತ ಆಕೆಯ ಕಂಕುಳಲ್ಲಿ ಮಗು, ಕತ್ತಿವರಸೆಯ ವೈಭವೋಪೇತ ದೃಶ್ಯಗಳಿವೆ. ನಟ ಸೋನು ಸೂದ್‌ ಮುನಿಸಿಕೊಂಡು ಚಿತ್ರದಿಂದ ಹೊರನಡೆದಿದ್ದರು. ಈ ಪ್ರಕರಣದ ನಂತರ ನಟಿ ಕಂಗನಾ ಚಿತ್ರದ ನಿರ್ದೇಶನದ ವಿಭಾಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಟೀಸರ್‌ನ ಟೈಟಲ್ ಕಾರ್ಡ್‌ನಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಂಗನಾ ಹೆಸರು ಕಾಣಿಸುವುದಿಲ್ಲ.

ಇದನ್ನೂ ಓದಿ : ‘ಮಣಿಕರ್ಣಿಕಾ’ ಹಿಂದಿ ಸಿನಿಮಾ ವಿವಾದ; ಮರುಚಿತ್ರೀಕರಣಕ್ಕೆ ನಿರ್ಧಾರ

“ಸ್ಫೂರ್ತಿದಾಯಕವಾದ ಈ ಚಿತ್ರ, ಪಾತ್ರದ ಬಗ್ಗೆ ನನಗೆ ಹೆಮ್ಮೆಯಿದೆ. ಚಿತ್ರಕ್ಕಾಗಿ ಇಡೀ ತಂಡ ಶ್ರಮವಹಿಸಿ ಶ್ರದ್ಧೆಯಿಂದ ದುಡಿದಿದೆ. ಮಣಿಕರ್ಣಿಕಾ ಪ್ರತಿಯೊಬ್ಬ ಭಾರತೀಯರಲ್ಲೂ ಹೆಮ್ಮೆ ಮೂಡಿಸಲಿದ್ದಾಳೆ,” ಎನ್ನುತ್ತಾರೆ ನಟಿ ಕಂಗನಾ. ಕ್ರಿಷ್‌ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಜಿಷು ಸೇನ್‌ಗುಪ್ತ, ಸುರೇಶ್ ಒಬೆರಾಯ್‌, ಡ್ಯಾನಿ ಡೆನ್ಝೊಂಗ್‌ಪಾ, ಅತುಲ್ ಕುಲಕರ್ಣಿ, ಅಂಕಿತಾ ಲೊಖಂಡೆ, ಜೀಶನ್‌ ಆಯುಬ್‌ ಇದ್ದಾರೆ. ‘ಬಾಹುಬಲಿ’ ಮತ್ತು ‘ಭಾಗ್‌ ಮಿಲ್ಕಾ ಭಾಗ್‌’ ಸಿನಿಮಾಗೆ ಚಿತ್ರಕಥೆ ರಚಿಸಿದ್ದ ತಂಡ ‘ಮಣಿಕರ್ಣಿಕಾ’ಗೆ ಚಿತ್ರಕತೆ ರಚಿಸಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More