ಸ್ಟಾರ್‌ವಾರ್‌ಗೆ ಅವಕಾಶ ಮಾಡಿಕೊಡಬೇಡಿ; ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಮನವಿ

‘ದಿ ವಿಲನ್‌’ ಚಿತ್ರದ ರಿಲೀಸಿಂಗ್ ಟೀಸರ್ ಬಿಡುಗಡೆಯಾಗಿದೆ. ಸುದೀಪ್‌ ಮತ್ತು ತಾವು ನಟಿಸಿರುವ ಸಿನಿಮಾ ಸ್ಟಾರ್‌ವಾರ್‌ಗೆ ಅವಕಾಶ ಮಾಡಿಕೊಡದಿರಲಿ ಎನ್ನುವುದು ನಟ ಶಿವ ರಾಜಕುಮಾರ್ ಆಶಯ. ಹಾಗಾಗದಿರಲಿ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ವಿಡಿಯೋ ಇಲ್ಲಿದೆ

ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘ದಿ ವಿಲನ್’ ಚಿತ್ರದ ರಿಲೀಸಿಂಗ್ ಟೀಸರ್ ಬಿಡುಗಡೆಯಾಗಿದೆ. ನಟರಾದ ಶಿವ ರಾಜಕುಮಾರ್‌ ಮತ್ತು ಸುದೀಪ್ ವಿಭಿನ್ನ ಗೆಟಪ್‌ನಲ್ಲಿದ್ದು, ಚಿತ್ರದ ಬಗೆಗಿನ ಕುತೂಹಲ ಹೆಚ್ಚಾಗಿದೆ. “ಜಗತ್ತಿನ ಯಾವುದೇ ಮೂಲೇಲಿದ್ರೂ ಆ ಬೇಟೆ ನಂದು,” ಎನ್ನುತ್ತ ಶಿವರಾಜ್‌ ಅಬ್ಬರಿಸುತ್ತಾರೆ. ಮತ್ತೊಂದೆಡೆ, “ಹೋ... ಭ್ರಮೆ,” ಎಂದು ತೀರಾ ಸಹಜವಾಗಿ ಪ್ರತಿಕ್ರಿಯಿಸುತ್ತಾರೆ ಸುದೀಪ್‌. ಆಕರ್ಷಕ ಆಕ್ಷನ್ ದೃಶ್ಯಗಳಿರುವ ಟೀಸರ್ ಸಿನಿಮಾ ನಿರೀಕ್ಷೆಯನ್ನು ಇಮ್ಮಡಿಗೊಳಿಸುತ್ತದೆ.

ಟೀಸರ್ ಬಿಡುಗಡೆ ನಂತರ ಸಿನಿಮಾ ಕುರಿತು ಮಾತನಾಡಿದ ನಟ ಶಿವರಾಜ್, “ದಿ ವಿಲನ್’ ಚಿತ್ರದ ನಿಜವಾದ ನಾಯಕ ನಮ್ಮ ನಿರ್ಮಾಪಕ ಮನೋಹರ್. ಪ್ರೇಮ್ ನಿರ್ದೇಶನಕ್ಕೆ ಹಣ ಹೂಡುವುದು ತಮಾಶೆಯ ಮಾತಲ್ಲ. ಯಾಕೆಂದರೆ, ಪ್ರೇಮ್ ಕಾರ್ಯವೈಖರಿಯೇ ಹಾಗೆ. ಸಿನಿಮಾ ತಮ್ಮ ಕಲ್ಪನೆಯಂತೆ ಮೂಡಿಬರುವವರೆಗೂ ಎಡಬಿಡದೆ ದುಡಿಯುತ್ತಾರೆ. ದೊಡ್ಡ ಮಟ್ಟದ ಚಿತ್ರವೊಂದನ್ನು ಕನ್ನಡಿಗರಿಗೆ ನೀಡುತ್ತಿದ್ದೇವೆಂಬ ನಂಬಿಕೆ ನಮಗಿದೆ,” ಎಂದರು.

ಇಬ್ಬರು ಹೀರೋಗಳ ಕಾಂಬಿನೇಷನ್‌ ಚಿತ್ರದ ಬಗ್ಗೆ ನಿರೀಕ್ಷೆ ಇರುವಂತೆ, ಅಭಿಮಾನಿಗಳಲ್ಲಿ ಕೊಂಚ ಅಸಮಾಧಾನವೂ ಇದ್ದಂತಿದೆ. ಟೀಸರ್‌ಗಳು ಬಿಡುಗಡೆಯಾದಾಗಲೇ ಅಸಮಾಧಾನ ಹೊಗೆಯಾಡಿತ್ತು. ಆ ಬಗ್ಗೆ ಮಾತನಾಡಿದ ಶಿವ ರಾಜ್‌, “ಅಭಿಮಾನಿಗಳೆಲ್ಲರಲ್ಲೂ ನನ್ನದೊಂದು ಮನವಿ. ‘ದಿ ವಿಲನ್’ ಚಿತ್ರವನ್ನು, ಚಿತ್ರವನ್ನಾಗಿ ಮಾತ್ರ ನೋಡಿ. ಸುದೀಪ್ ಹೆಚ್ಚು, ಶಿವಣ್ಣ ಹೆಚ್ಚು ಅನ್ನೋ ಹಾಗೆ ಬಿಂಬಿಸಿ ಬೇಧಬಾವದಿಂದ ಕಾಣಬೇಡಿ. ಎಲ್ಲರಿಗಿಂತ, ಎಲ್ಲಕ್ಕಿಂತ ಸಿನಿಮಾ ಹೆಚ್ಚು. ಈವರೆಗೂ ಪ್ರತಿಯೊಂದು ಚಿತ್ರಗಳನ್ನು ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಯಲ್ಲೇ ಕುಳಿತು ವೀಕ್ಷಿಸಿದ್ದೇನೆ. ಈ ಬಾರಿ ಸಿನಿಮಾ ಬಿಡುಗಡೆಯ ನಂತರ ಅಭಿಮಾನಿಗಳಿಂದ ಯಾವುದೇ ಸಮಸ್ಯೆ ಉಂಟಾದರೆ, ನಾನು ಥೀಯೆಟರ್‌ಗೆ ಕಾಲಿಡುವುದಿಲ್ಲ,” ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದರು.

ನಿರ್ದೇಶಕ ಪ್ರೇಮ್ ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತ, “ಪ್ರೇಮ್ ಗಿಮಿಕ್ ಮಾಡ್ತಾರೆ. ಜೋರಾಗೇ ಸಿನಿಮಾದ ಪ್ರಮೋಶನ್ ಮಾಡ್ತಾರೆ ಅಂತ ಜನ ಮಾತಾಡ್ಕೋತಾರೆ. ಆದರೆ, ನೀವು ಗಮನಿಸಿದ ಹಾಗೆ ‘ದಿ ವಿಲನ್’ ಸಿನಿಮಾದ ಮೊದಲ ಪ್ರೆಸ್ ಮೀಟ್ ಇದು. ಆಡಿಯೋ ಲಾಂಚ್ ಬಿಟ್ಟರೆ ಸಿನಿಮಾಗೆ ಯಾವುದೇ ರೀತಿಯ ಪ್ರಚಾರವನ್ನು ನಾನು ನೀಡಿಲ್ಲ. ಯಾವುದೇ ಪ್ರಚಾರವಿಲ್ಲದೆ ನಮ್ಮ ಸಿನಿಮಾ ಸುದ್ದಿಯಾಗುತ್ತದೆ ಎನ್ನುವುದಾದರೆ ನಮ್ಮ ಪ್ರಯತ್ನ, ನಮ್ಮ ಕೆಲಸ ಜನರಲ್ಲಿ ಕುತೂಹಲ, ಭರವಸೆ ಸೃಷ್ಟಿಸುತ್ತಿದೆ ಎಂದರ್ಥ. ಪ್ರಚಾರ ಮಾಡುವದರಲ್ಲಿ ತಪ್ಪಾದರೂ ಏನಿದೆ? ಸಿನಿಮಾ ತಯಾರಿಸುವುದು ಒಂದು ಕಲೆಯಾದರೆ ಥೀಯೆಟರ್‌ನತ್ತ ಜನರನ್ನು ಸೆಳೆಯುವುದೂ ಕಲೆಯೇ. ನೀವು ಎಷ್ಟೇ ಸುಂದರವಾದ ಚಿತ್ರ ತಯಾರಿಸಿ, ಕೊನೆಗದನ್ನು ನೋಡಲು ಜನ ಥೀಯೆಟರ್‌ಗೆ ಬರದಿದ್ದರೇ ಉಪಯೋಗವೇನು?” ಎಂದು ಪ್ರೇಮ್‌ ತಮ್ಮನ್ನು ಸಮರ್ಥಿಸಿಕೊಂಡರು.

ಇದೇ ವೇಳೆ, ತಮ್ಮ ಮುಂದಿನ ಚಿತ್ರಗಳ ಬಗ್ಗೆ ಪ್ರೇಮ್‌ ಸುಳಿವು ನೀಡಿದರು. ಮನೋಹರ್ ನಿರ್ಮಾಣದಲ್ಲೇ ಅವರ ಮುಂದಿನ ನಿರ್ದೇಶನದ ಚಿತ್ರ ಸೆಟ್ಟೇರಲಿದೆ. ಭಾರತ ಚಿತ್ರರಂಗದ ದಿಗ್ಗಜ ನಟರುಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಚಿತ್ರದ ಕುರಿತಾದ ಮಾತುಕತೆಗಳು ನಡೆಯುತ್ತಿವೆ. ಈಗಾಗಲೇ ಇಬ್ಬರು ದೊಡ್ಡ ನಟರು ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ‘ದಿ ವಿಲನ್’ ಚಿತ್ರದ ಬಿಡುಗಡೆಯ ದಿನವೇ ಅಧಿಕೃತವಾಗಿ ನನ್ನ ಮುಂದಿನ ಸಿನಿಮಾ ಬಗ್ಗೆ ತಿಳಿಸುತ್ತೇನೆ,” ಎಂದರು ಪ್ರೇಮ್‌. ಇದೇ ತಿಂಗಳ 18ರಂದು ಸಿನಿಮಾ ತೆರೆಕಾಣಲಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More