ಜನುಮದಿನ | ಅದೃಷ್ಟ, ಆತ್ಮವಿಶ್ವಾಸ ತಮ್ಮ ಗೆಲುವಿನ ಗುಟ್ಟು ಎನ್ನುವ ರಚಿತಾ

ಕಿರುತೆರೆಯಲ್ಲಿ ಕ್ಯಾಮೆರಾ ಎದುರಿಸಿ ನಂತರ ಬೆಳ್ಳಿತೆರೆಗೆ ಪರಿಚಯವಾದವರು ರಚಿತಾ ರಾಮ್‌. ಪ್ರಸ್ತುತ ಸ್ಯಾಂಡಲ್‌ವುಡ್‌ನ ಜನಪ್ರಿಯ ಹಿರೋಯಿನ್‌. ಇಂದು ರಚಿತಾ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಯಶಸ್ಸಿನ ಅಲೆಯಲ್ಲಿರುವ ಅವರು ಅದೃಷ್ಟವಂತ ನಟಿ. ಆತ್ಮವಿಶ್ವಾಸ ಗೆಲುವಿನ ಗುಟ್ಟು ಎನ್ನುತ್ತಾರವರು.

ಆರು ವರ್ಷಗಳ ಹಿಂದೆ ಕನ್ನಡ ಟೀವಿ ವಾಹಿನಿಯೊಂದರಲ್ಲಿ ‘ಅರಸಿ’ ಧಾರಾವಾಹಿ ಮೂಡಿಬಂದಿತ್ತು. ಈ ಕತೆಯಲ್ಲಿ ಬಿಂದಿಯಾ ರಾಮ್‌ ನೆಗೆಟಿವ್ ಶೇಡ್‌ನ ಪಾತ್ರ ಮಾಡಿದ್ದರು. ಇದಾಗಿ ಒಂದೆರೆಡು ತಿಂಗಳಿನಲ್ಲೇ ಅವರಿಗೆ ಸಿನಿಮಾ ಅವಕಾಶ ಒದಗಿಬಂದಿತು. ದರ್ಶನ್‌ ಅಭಿನಯದ ‘ಬುಲ್‌ ಬುಲ್‌‌’ ಸಿನಿಮಾಗೆ ಅವರು ನಾಯಕಿಯಾದರು. ಸಿನಿಮಾ ನಟಿಯಾಗುವ ಯಾವ ಉದ್ದೇಶವೂ ಇರದ ಬಿಂದಿಯಾರನ್ನು ಅದೃಷ್ಟ ಕೈಹಿಡಿಯಿತು. ರಚಿತಾ ರಾಮ್ ಹೆಸರಿನೊಂದಿಗೆ ಅವರು ಸಿನಿಮಾ ನಾಯಕಿಯಾದರು. ಪ್ರತಿಭೆ ಅವರ ನೆರವಿಗೆ ಬಂದಿತು. ಮುಂದೆ ಸಾಲು, ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಯಶಸ್ವಿಯಾದರು. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಯ ಜೊತೆಗಿನ ಮಾತುಕತೆ ಇಲ್ಲಿದೆ.

ನೀವು ನಟಿಸಿರುವ ‘ಅಯೋಗ್ಯ’ ಯಶಸ್ಸು ಕಂಡಿದೆ. ಮುಂದಿನ ಮೂರು ತಿಂಗಳಲ್ಲಿ ನಿಮ್ಮ ನಾಲ್ಕು ಸಿನಿಮಾಗಳು ತೆರೆಕಾಣಲಿವೆ..

ಹೌದು, ಈ ವರ್ಷದಲ್ಲಿ ನನ್ನ ‘ಜಾನಿ ಜಾನಿ ಯಸ್ ಪಪ್ಪ’ ಮತ್ತು ‘ಅಯೋಗ್ಯ’ ಚಿತ್ರಗಳು ತೆರೆಕಂಡಿವೆ. ಇನ್ನೂ ನಾಲ್ಕು ಸಿನಿಮಾಗಳು ತೆರೆಗೆ ಸಿದ್ಧವಾಗುತ್ತಿವೆ. ಬಂದ ಹೊಸದರಲ್ಲಿ ವರ್ಷಕ್ಕೊಂದೇ ಸಿನಿಮಾ ಮಾಡುತ್ತಿದ್ದೆ. ಹೊಸದರಲ್ಲಿ ಚಿತ್ರತಂಡಕ್ಕೆ ಡೇಟ್ಸ್ ಸಮಸ್ಯೆ ಎದುರಾಗುತ್ತದೇನೋ ಎಂದು ನಾನೇ ಭಯಪಡುತ್ತಿದ್ದೆ. ಈಗ ಉದ್ಯಮ ಪರಿಚಯವಾಗಿದೆ. ಇತರೆ ಸಿನಿಮಾಗಳ ಬಗ್ಗೆ ಮೊದಲೇ ಮಾತನಾಡಿ, ಡೇಟ್ಸ್ ಹೊಂದಿಸಿಕೊಳ್ಳುವಂತೆ ರಿಕ್ವೆಸ್ಟ್‌ ಮಾಡುತ್ತೇನೆ. ಹಾಗಾಗಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಸಾಧ್ಯವಾಗಿದೆ. ಆರಾಮವಾಗಿ ಶೂಟಿಂಗ್ ಮಾಡಿಕೊಂಡು ಹೋಗುತ್ತಿದ್ದೇನೆ.

ಈ ವರ್ಷದ ನಿಮ್ಮ ಸಿನಿಮಾಗಳಲ್ಲಿ ಪಾತ್ರಗಳೂ ಭಿನ್ನವಾಗಿವೆ…

ಅದೃಷ್ಟಕ್ಕೆ ಭಿನ್ನ ಪಾತ್ರಗಳೇ ಸಿಕ್ಕಿವೆ. ‘ಜಾನಿ ಜಾನಿ ಯಸ್‌ ಪಪ್ಪ’ ಸಿನಿಮಾದಲ್ಲಿ ಔಟ್‌ ಅಂಡ್ ಔಟ್‌ ಗ್ಲಾಮರ್ ಪಾತ್ರವಿತ್ತು . ಭಾಷೆ, ನಡಾವಳಿ ಎಲ್ಲವೂ ಸ್ಟೈಲಿಶ್. ‘ಅಯೋಗ್ಯ’ ಚಿತ್ರದಲ್ಲಿ ಪಕ್ಕಾ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೆ. ಪಾತ್ರವನ್ನು ಜನರು ಮೆಚ್ಚಿದರು. ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ಲಂಗ-ಧಾವಣಿ ಹಾಕಿದ್ದೇನೆ. ಪಕ್ಕದಲ್ಲಿ ಹುಡುಗ ನಿಂತಿದ್ರೆ ಅವನಿಂದ ದೂರ ನಿಲ್ಲೋದು, ಮುಖ ನೋಡದೆ ಮಾತನಾಡೋ ಸಂಕೋಚ ಸ್ವಭಾವದ ಹುಡುಗಿ ಪಾತ್ರ. ಪುನೀತ್ ರಾಜಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದಲ್ಲಿ ದೊಡ್ಡ ಕಂಪನಿ ಮ್ಯಾನೇಜರ್ ಪಾತ್ರವಿದ್ದು, ಕಾರ್ಪೋರೆಟ್‌ ಲೇಡಿ. ಉಪೇಂದ್ರರ ‘ಐ ಲವ್‌ ಯೂ’ ಪಾತ್ರ ಇವೆಲ್ಲಕ್ಕಿಂತ ಭಿನ್ನವಾಗಿದೆ.

ದೊಡ್ಡ ಬ್ಯಾನರ್‌, ಸ್ಟಾರ್ ಹೀರೋಗಳ ಚಿತ್ರಗಳಿಗೆ ನಾಯಕಿಯಾದ ಅದೃಷ್ಟ ನಿಮ್ಮದಾಯ್ತು..

ಹಾಗೆ ನೋಡಿದರೆ ನನಗೆ ಸಿನಿಮಾಗೆ ಬರುವ ಉದ್ದೇಶವೇ ಇರಲಿಲ್ಲ. ಮೇಕಪ್ ಹಚ್ಚೋ ಪ್ರೊಫೆಷನ್‌ ಬೇಡ ಎಂದೇ ಅಂದುಕೊಂಡಿದ್ದೆ. ದೇವರು ಅದನ್ನೇ ನನ್ನ ಹೆಣೆಬರಹದಲ್ಲಿ ಬರೆದಿದ್ದಾನೆ. ಈಗ ನಾನು ನನ್ನ ವೃತ್ತಿಯನ್ನು ಪ್ರೀತಿಸುತ್ತಿದ್ದೇನೆ. ಸೀರಿಯಲ್‌ನಲ್ಲಿ ನಾನು ಮಾಡಿದ್ದು ವಿಲನ್ ರೋಲ್‌. ಅದೇ ಸೀರಿಯಲ್ ನನಗೆ ಸಿನಿಮಾ ನಾಯಕಿಯಾಗುವ ಅವಕಾಶ ತಂದುಕೊಟ್ಟಿತು. ಬ್ಯಾಕ್‌ ಬ್ಯಾಕ್‌ ಟು ದೊಡ್ಡ ಹೀರೋಗಳ ಸಿನಿಮಾಗಳು ಸಿಕ್ಕವು. ಒಳ್ಳೆಯ ಬ್ಯಾನರ್‌, ದೊಡ್ಡ ತಂತ್ರಜ್ಞರೊಂದಿಗೆ ಕೆಲಸ ಮಾಡಿದ್ದೇನೆ ಎನ್ನುವ ಹೆಮ್ಮೆಯಿದೆ. ದೇವರು ಹೀಗೇ ಇಟ್ಟಿರಲಿ ಎಂದು ಆಶಿಸುತ್ತೇನೆ.

‘ಕಾಮಿಡಿ ಟಾಕೀಸ್‌’ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿ ನಿಮ್ಮ ಅನುಭವ?

ನನಗೆ ಈ ಕಾಮಿಡಿ ಜಾನರ್ ಇಷ್ಟ. ನನ್ನ ಸುತ್ತಮುತ್ತ ಯಾವಾಗಲೂ ಪಾಸಿಟೀವ್‌ ಮನಸ್ಥಿತಿಯ ವ್ಯಕ್ತಿಗಳು ಇರಬೇಕೆಂದು ನಾನು ಇಷ್ಟಪಡುತ್ತೇನೆ. ಈ ಕಾಮಿಡಿ ಶೋನಲ್ಲಿ ನಾನು ತೀರ್ಪುಗಾರ್ತಿಯಾದಾಗ ಕೆಲವರು, “ರಚಿತಾರನ್ನು ಯಾಕೆ ಅಲ್ಲಿ ಕೂರಿಸಿದ್ದೀರಿ? ಅವರಿಗೇನು ಗೊತ್ತಿದೆ?” ಎಂದೆಲ್ಲಾ ಕೇಳಿದ್ದರಂತೆ. ನಾನಿಲ್ಲಿ ದೊಡ್ಡ ತೀರ್ಪುಗಾರ್ತಿಯಾಗಿ ಕುಳಿತುಕೊಳ್ಳುವುದಿಲ್ಲ. ನಾನು ಅವರ ಆಕ್ಟ್‌ಗಳಿಗೆ ರಿಯಾಕ್ಟ್‌ ಮಾಡುತ್ತೇನಷ್ಟೆ. ಕನ್ನಡ ಸಿನಿಮಾರಂಗದ ಖ್ಯಾತ ಹಾಸ್ಯನಟ ನರಸಿಂಹರಾಜು ಅವರ ಅಭಿಮಾನಿ ನಾನು. ಈಗ ಸಾಧು ಕೋಕಿಲ, ಚಿಕ್ಕಣ್ಣ, ಶಿವರಾಜ್‌ ಕೆ ಆರ್ ಪೇಟೆ ಅವರ ಟೈಮಿಂಗ್‌ ಇಷ್ಟವಾಗುತ್ತದೆ. ನಮ್ಮ ಕಾಮಿಡಿ ಶೋನಲ್ಲಿ ಪ್ರತಿಭಾವಂತ ಸ್ಪರ್ಧಿಗಳಿದ್ದಾರೆ. ಖಂಡಿತವಾಗಿ ಅವರು ಮುಂದಿನ ದಿನಗಳಲ್ಲಿ ಒಳ್ಳೆಯ ಸಾಧನೆ ಮಾಡಲಿದ್ದಾರೆ.

ಇದನ್ನೂ ಓದಿ : ಸ್ಟಾರ್‌ವಾರ್‌ಗೆ ಅವಕಾಶ ಮಾಡಿಕೊಡಬೇಡಿ; ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಮನವಿ

ಹಿಂದಿ, ಪ್ರಾದೇಶಿಕ ಸಿನಿಮಾರಂಗಗಳಲ್ಲಿ ನಾಯಕಿ ಪ್ರಧಾನ ಸಿನಿಮಾಗಳು ಬರುತ್ತಿವೆ. ನಿಮಗೆ ಅಂತಹ ಸಿನಿಮಾಗಳೆಡೆ ಒಲವಿಲ್ಲವೇ?

ಅಂತಹ ಒಂದು ಸಬ್ಜೆಕ್ಟ್‌ ನನಗೆ ಬಂದಿದೆ. ಕಳೆದ ವರ್ಷ ನಾನು ನಟಿಸಿದ್ದ ‘ಪುಷ್ಪಕ ವಿಮಾನ’ ಒಂದು ರೀತಿ ಆಫ್‌ಬೀಟ್‌ ಸಿನಿಮಾ. ಅದೇ ರೀತಿಯ ಒಂದು ಸಬ್ಜೆಕ್ಟ್‌ ‘ಏಪ್ರಿಲ್‌’ ಸಿದ್ಧವಾಗಲಿದೆ. ತಾಂತ್ರಿಕ ಕಾರಣಗಳಿಗಾಗಿ ಚಿತ್ರದ ಬಗ್ಗೆ ಈಗಲೇ ಹೆಚ್ಚು ಹೇಳುವಂತಿಲ್ಲ.

ಪಕ್ಕದ ತಮಿಳು, ತೆಲುಗು ಚಿತ್ರರಂಗಗಳಿಂದ ಕರೆ ಬಂದಿತ್ತೇ?

ಸದ್ಯ ಕನ್ನಡದಲ್ಲೇ ಕೈತುಂಬಾ ಅವಕಾಶಗಳಿವೆ. ಕಲಾವಿದರಿಗೆ ಭಾಷೆಯ ಹಂಗು ಇರಕೂಡದು ಎನ್ನುವ ಹೇಳಿಕೆಗೆ ನಾನು ಕೂಡ ಬದ್ಧಳಾಗಿದ್ದೇನೆ. ಪರಭಾಷೆಗಳಿಂದ ಉತ್ತಮ ಅವಕಾಶ ಬಂದರೆ ಖಂಡಿತ ಅಲ್ಲಿನ ಸಿನಿಮಾಗಳಲ್ಲಿ ನಟಿಸುತ್ತೇನೆ. ಚೆನ್ನಾಗಿ ಅಭಿನಯಿಸಿ ಕನ್ನಡಕ್ಕೆ ಒಳ್ಳೆಯ ಹೆಸರು ತರುತ್ತೇನೆ.

ನಟಿಯಾಗಿ ನಿಮ್ಮ ಸಾಮರ್ಥ್ಯ ಏನೆಂದು ಗುರುತಿಸುತ್ತೀರಿ?

ಆತ್ಮವಿಶ್ವಾಸ ನನ್ನ ಸಾಮರ್ಥ್ಯ. ಯಾವುದೇ ಒಂದು ವಿಷಯದ ಬಗ್ಗೆ ಗೊತ್ತಿಲ್ಲ, ಮಾತನಾಡೋಕೆ ಬರೋಲ್ಲ ಎಂದರೆ ನನಗೆ ಗೊತ್ತಿಲ್ಲ ಅಂತ ಕಾನ್ಫಿಡೆಂಟ್‌ನಿಂದ ಹೇಳ್ತೀನಿ. ಗೊತ್ತಿಲ್ಲದಿರೋದನ್ನು ಇತರರಿಂದ ತಿಳಿದುಕೊಳ್ಳುತ್ತೇನೆ. ತಪ್ಪು ಮಾಡಿದರೂ, ಸುಳ್ಳು ಹೇಳಿದರೂ ಕಾನ್ಫಿಡೆಂಟ್‌ನಿಂದ ಮಾಡ್ತೀನಿ. ತಪ್ಪು ಮಾಡೋದು ಸಹಜ, ಅದನ್ನು ತಿದ್ದಿಕೊಂಡು ನಡೆಯೋದು ನನ್ನ ಪಾಲಿಸಿ. ಲೈಫ್ ಬಗ್ಗೆ ಅದೇ ನನ್ನ ಅಪ್ರೋಚ್‌.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More