ತನುಶ್ರೀಗೆ ಲೀಗಲ್ ನೋಟಿಸ್‌; ನಟಿಯ ಬೆಂಬಲಕ್ಕೆ ನಿಂತ ಫ್ರೀಡಾ ಪಿಂಟೋ

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ತನುಶ್ರೀಗೆ ಎರಡು ಲೀಗಲ್ ನೋಟಿಸ್‌ ಹೋಗಿವೆ. ನಟ ನಾನಾ‌, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆರೋಪ ಅಲ್ಲಗಳೆದು ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ. ಮತ್ತೊಂದೆಡೆ ಹಾಲಿವುಡ್ ನಟಿ ಫ್ರೀಡಾ ಪಿಂಟೋ ಅವರು ತನುಶ್ರೀ ಬೆಂಬಲಕ್ಕೆ ನಿಂತಿದ್ದಾರೆ

ನಟ ನಾನಾ ಪಾಟೇಕರ್ ಮತ್ತು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರಿಂದ ಎರಡು ಲೀಗಲ್ ನೋಟಿಸ್ ಬಂದಿವೆಯೆಂದು ನಟಿ ತನುಶ್ರೀ ದತ್ತಾ ಹೇಳಿದ್ದಾರೆ. ಇವರಿಬ್ಬರ ವಿರುದ್ಧ ನಟಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. “ನನಗೀಗ ಎರಡು ಲೀಗಲ್ ನೋಟಿಸ್ ಬಂದಿವೆ. ಕಿರುಕುಳ, ಅವಮಾನ, ಅನ್ಯಾಯದ ವಿರುದ್ಧ ಮಾತನಾಡಿದರೆ ನನಗೆ ಸಿಕ್ಕ ಬೆಲೆಯಿದು. ನಾನಾ ಪಾಟೇಕರ್, ವಿವೇಕ್ ಅಗ್ನಿಹೋತ್ರಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ನನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ” ಎಂದು ಅರೋಪಿಸುತ್ತಾರೆ ನಟಿ.

‘ಓಕೆ ಹಾರ್ನ್‌ ಪ್ಲೀಸ್‌’ (2008) ಹಿಂದಿ ಸಿನಿಮಾ ಚಿತ್ರಿಕರಣದ ವೇಳೆ ನಟ ನಾನಾ ಪಾಟೇಕರ್‌ ಅವರಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ನಟಿ ತನುಶ್ರೀ ಇತ್ತೀಚೆಗೆ ಆರೋಪಿಸಿದ್ದರು. ‘ಚಾಕೋಲೆಟ್‌’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಂದಲೂ ಇಂತಹ ಅನುಭವವಾಗಿತ್ತು ಎಂದು ನಟಿ ಹೇಳಿಕೊಂಡಿದ್ದರು. ಅವರ ಆರೋಪಗಳು ಬಾಲಿವುಡ್‌ನಲ್ಲಿ ಚರ್ಚೆಗೀಡಾಗಿವೆ. ಪರ-ವಿರೋಧದ ಮಧ್ಯೆ ನಿಧಾನವಾಗಿ ತನುಶ್ರೀಗೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಇದೀಗ ನಟಿಗೆ ಎರಡು ಲೀಗಲ್ ನೋಟಿಸ್‌ ಬಂದಿದ್ದು, ನಟಿ ತಮ್ಮ ವಿರುದ್ಧದ ಚಿತಾವಣೆ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ : ವಿಡಿಯೋ | ಚಿತ್ರೀಕರಣದ ವೇಳೆ ನಟಿ ತನುಶ್ರೀ ಕಾರು ಜಖಂಗೊಳಿಸಿದ ದೃಶ್ಯಾವಳಿ

“ಎಂಎನ್‌ಎಸ್ ಪಕ್ಷದವರಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮಾತನಾಡುವ ಅವರು ಬೇರೆ ರೀತಿಯಲ್ಲಿ ತೊಂದರೆ ಕೊಡುವುದಾಗಿಯೂ ಹೇಳುತ್ತಿದ್ದಾರೆ. ವ್ಯವಸ್ಥೆಯ ವಿರುದ್ಧ ಹೋರಾಡುವ ಮಹಿಳೆ ಹಾಗೂ ಆಕೆಯ ಬೆಂಬಲಿಗರ ಧ್ವನಿಯನ್ನು ಅಡಗಿಸುವ ಪರಿಪಾಠ ಹಿಂದಿನಿಂದಲೂ ಬೆಳೆದುಕೊಂಡುಬಂದಿದೆ. ಹತ್ತು ವರ್ಷಗಳ ಹಿಂದೆಯೂ ಇದೇ ರೀತಿಯ ವ್ಯವಸ್ಥೆಯಿತ್ತು. ಈಗಲೂ ಅದು ಬದಲಾಗಿಲ್ಲ. ಹಾಗಾಗಿಯೇ ಭಾರತದಲ್ಲಿ #MeToo ಮೂವ್‌ಮೆಂಟ್‌ಗೆ ಬೆಲೆ ಇಲ್ಲದಂತಾಗಿದೆ” ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ತನುಶ್ರೀ.

ಫ್ರೀಡಾ ಪಿಂಟೋ ಬೆಂಬಲ

ಭಾರತ ಮೂಲದ ಹಾಲಿವುಡ್‌ ನಟಿ ಫ್ರೀಡಾ ಪಿಂಟೋ, “ಐ ಬಿಲೀವ್‌ ತನುಶ್ರೀ ದತ್ತಾ!” ಎಂದು ಟ್ವೀಟ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಮಾತನಾಡದ ದೊಡ್ಡ ನಟ-ನಟಿಯರನ್ನೂ ಅವರು ಕುಟುಕಿದ್ದಾರೆ. “ವೈಯಕ್ತಿಕವಾಗಿ ತನುಶ್ರೀ ನನಗೆ ಗೊತ್ತಿಲ್ಲ. ಆದರೆ ಆಕೆ ಅನುಭವಿಸಿರಬಹುದಾದ ನೋವು ಎಂಥದ್ದು ಎನ್ನುವುದನ್ನು ನಾನು ಅರಿಯಬಲ್ಲೆ. ಸೂಪರ್‌ಸ್ಟಾರ್‌ಗಳು ಏನು ಹೇಳುತ್ತಾರೆ ಎನ್ನುವುದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಆತ್ಮಸಾಕ್ಷಿ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳಿ” ಎಂದಿದ್ದಾರೆ ಫ್ರೀಡಾ.

ನಟಿ, ನಿರ್ದೇಶಕಿ ನಂದಿತಾ ದಾಸ್‌ ಅವರೂ ತನುಶ್ರೀಗೆ ತಮ್ಮ ಬೆಂಬಲ ಸೂಚಸಿದ್ದಾರೆ. “ಮಹಿಳೆಯರು ಹೆಚ್ಚೆಚ್ಚು ಮಾತನಾಡಬೇಕು. ಇದು ಇತರರಿಗೂ ಆತ್ಮವಿಶ್ವಾಸ ಮೂಡಿಸುತ್ತದೆ. ಪಶ್ಚಿಮದ ದೇಶಗಳಲ್ಲಿ #MeToo ಮತ್ತು #AfterMeToo ಅಭಿಯಾನಗಳು ಜಾಗೃತಿ ಮೂಡಿಸುತ್ತಿವೆ. ಇಂತಹ ಅಭಿಯಾನಗಳು ಸ್ತ್ರೀ, ಪುರುಷರಲ್ಲಿ ಜವಾಬ್ದಾರಿ ತರುತ್ತವೆ” ಎನ್ನುತ್ತಾರೆ ನಂದಿತಾ. ಈ ಮಧ್ಯೆ ‘ಚಾಕೊಲೇಟ್‌’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸತ್ಯಜಿತ್ ಗಾಜ್ಮರ್‌ ಅವರು ತನುಶ್ರೀ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಚಿತ್ರೀಕರಣದ ಸೆಟ್‌ನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎನ್ನುವುದು ಪ್ರತ್ಯಕ್ಷದರ್ಶಿಯಾಗಿದ್ದ ಅವರ ವಾದ. ತನುಶ್ರೀ ಪ್ರಕರಣ ಕ್ರಮೇಣ ಗಂಭೀರ ಸ್ಪರೂಪ ಪಡೆಯುತ್ತಿದ್ದು, ಬಾಲಿವುಡ್‌ ಮಂದಿ ಕುತೂಹಲದಿಂದ ಗಮನಿಸುತ್ತಿದ್ದಾರೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More