ಮದಕರಿನಾಯಕ ಐತಿಹಾಸಿಕ ಸಿನಿಮಾ; ಅಚ್ಚರಿ ಮೂಡಿಸಿದ ನಟ ಸುದೀಪ್‌ ಪತ್ರ

ಚಿತ್ರದುರ್ಗದ ಪಾಳೇಗಾರ ಮದಕರಿನಾಯಕನ ಕುರಿತ ಸಿನಿಮಾ ಮಾಡುವುದಾಗಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಇತ್ತೀಚೆಗೆ ಘೋಷಿಸಿದ್ದರು. ಇದೀಗ ಸುದೀಪ್‌, ತಮ್ಮ ತಂಡ ಇದೇ ಕಥಾನಕದ ಮೇಲೆ ಚಿತ್ರಕಥೆ ವಿಭಾಗದಲ್ಲಿ ವರ್ಷದಿಂದ ಕೆಲಸ ಮಾಡುತ್ತಿದೆ ಎಂದಿದ್ದಾರೆ‌.

ಕನ್ನಡ ನಾಡು ಕಂಡ ಧೀರ ಪಾಳೇಗಾರ ‘ಮದಕರಿನಾಯಕ’ ಐತಿಹಾಸಿಕ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಮದಕರಿನಾಯಕನ ಕುರಿತ ಸಿನಿಮಾ ಮಾಡುವುದಾಗಿ ನಿರ್ಮಾಪಕ ರಾಕ್‌ಲೈನ್‌ ವೆಂಟಕೇಶ್ ಇತ್ತೀಚೆಗೆ ಘೋಷಿಸಿದ್ದರು. ಸಾಹಿತಿ ಬಿ ಎಲ್‌ ವೇಣು ಚಿತ್ರಕಥೆ-ಸಂಭಾಷಣೆ ರಚಿಸಲಿದ್ದು, ಎಸ್ ವಿ ರಾಜೇಂದ್ರಸಿಂಗ್ ಬಾಬು ಚಿತ್ರ ನಿರ್ದೇಶಿಸಲಿದ್ದಾರೆ ಎನ್ನುವ ಸುದ್ದಿಯಿತ್ತು. ಈ ಹಿಂದೆ ‘ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ನಟಿಸಿದ್ದ ನಟ ದರ್ಶನ್ ಈ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು.

ಈ ಬೆಳವಣಿಗೆಗಳ ಬೆನ್ನಲ್ಲೇ ನಟ ಸುದೀಪ್‌ರ ಒಂದು ಟ್ವೀಟ್‌ ಅಚ್ಚರಿ ಮೂಡಿಸಿದೆ. ‘ವೀರ ಮದಕರಿನಾಯಕ’ ಸಿನಿಮಾ ನಿರ್ಮಾಣದ ಕುರಿತಂತೆ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ತಾವು ಮತ್ತು ಕೆಲ ಲೇಖಕರನ್ನೊಳಗೊಂಡ ತಮ್ಮ ತಂಡ ಕಳೆದ ಒಂದೂವರೆ ವರ್ಷದಿಂದ ‘ವೀರ ಮದಕರಿನಾಯಕ’ ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಮೂಲಗಳ ಪ್ರಕಾರ ಅವರ ನಿರ್ಮಾಣದಲ್ಲೇ ನೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರ ತಯಾರಾಗಲಿದೆ ಎನ್ನಲಾಗುತ್ತಿದೆ.

“ವೀರ ಮದಕರಿ ಸಿನಿಮಾ ಮಾಡುವ ಆಲೋಚನೆ ವರ್ಷಗಳ ಹಿಂದಿನದ್ದು. ಈ ಕತೆಗಾಗಿ ಕೆಲಸ ಮಾಡಲು ಒಂದಷ್ಟು ಸಮಯ ಬೇಕಾಯಿತು. ನಟನೆಯ ಜೊತೆಗೆ ಮತ್ತೆ ನಿರ್ದೇಶನಕ್ಕೆ ಮರಳುವಂತೆಯೂ ಈ ಕತೆ ನನ್ನನ್ನು ಪ್ರೇರೇಪಿಸಿದೆ. ಆದರೆ ಇತ್ತೀಚೆಗೆ ಮದಕರಿ ನಾಯಕನ ಬದುಕು, ಸಾಧನೆ ಕುರಿತ ಮತ್ತೊಂದು ಸಿನಿಮಾ ನಿರ್ಮಾಣವಾಗುತ್ತದೆಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟುಮಾಡಿದೆ. ಆ ಕತೆಯಲ್ಲಿ ಏನಿರಲಿದೆ ಎಂಬ ಕುತೂಹಲವೂ ಇದೆ. ಇತಿಹಾಸದ ಕುರಿತಾದ ಚಿತ್ರಗಳನ್ನು ನಿರ್ಮಿಸಲು ಎಲ್ಲರೂ ಅರ್ಹರೇ. ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆಕಂಡ ಉದಾಹರಣೆಗಳು ನಮ್ಮಲ್ಲಿವೆ. ನಾನೊಬ್ಬನೇ ಮದಕರಿ ನಾಯಕನ ಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ? ಮದಕರಿ ನಾಯಕ ಕರ್ನಾಟಕದ ವೀರಪುತ್ರ. ಅವರ ಕುರಿತ ಚಿತ್ರವನ್ನು ಯಾರಾದರೂ ಮಾಡಬಹುದು” ಎಂದಿದ್ದಾರೆ ಸುದೀಪ್‌.

ರಾಕ್‌ಲೈನ್‌ ವೆಂಕಟೇಶ್ ನಿರ್ಮಿಸಲಿರುವ ಚಿತ್ರದ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ರಾಕ್‌ಲೈನ್‌ ವೆಂಕಟೇಶ್‌ ಅವರ ಸಿನಿಮಾ ಆಸಕ್ತಿ ಅದ್ವಿತೀಯವಾದದ್ದು. ಅವರು ಇದನ್ನೊಂದು ಅತ್ಯುತ್ತಮ ಚಿತ್ರವಾಗಿ ತೆರೆಯ ಮೇಲೆ ತರುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ರಾಜೇಂದ್ರ ಸಿಂಗ್‌ ಬಾಬು ಅವರ ಅನುಭವ ಕೂಡ ಇದರಲ್ಲಿ ಸಮ್ಮಿಲನವಾಗಿದೆ. ರಾಕ್‌ಲೈನ್‌ ಅವರ ತಂಡಕ್ಕೆ ಇಂತಹ ಒಳ್ಳೆಯ ಮತ್ತು ನಮ್ಮ ನೆಲದ ಕಥೆಯನ್ನು ಆಯ್ಕೆ ಮಾಡಿರುವುದಕ್ಕಾಗಿ ಅಭಿನಂದಿಸುತ್ತೇನೆ. ಅವರಿಗೆ ನನ್ನ ಶುಭಾಶಯಗಳು. ಆದರೆ ನಮ್ಮ ಯೋಜನೆಗೆ ಈ ಚಿತ್ರದಿಂದ ಯಾವ ತೊಂದರೆಯೂ ಆಗುವುದಿಲ್ಲ. ವೀರಮದಕರಿ ನಾಯಕ ಚಿತ್ರ ನನ್ನೊಬ್ಬನ ಕನಸಲ್ಲ, ನಮ್ಮ ಇಡೀ ತಂಡದ ಕನಸು. ಈ ಕನಸನ್ನು ಭಗ್ನಗೊಳಿಸಲು ನನಗೆ ಇಷ್ಟವಿಲ್ಲ’ ಕೈಬಿಡುವ ಬದಲಿಗೆ ಮಾಡಿ ಮಡಿಯುವೆ. ನಾನೂ ಒಬ್ಬ ಮದಕರಿ” ಎಂದು ಸುದೀಪ್ ಸುದೀರ್ಘ ಪತ್ರ ಬರೆದಿದ್ದಾರೆ. ಈ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದರ ಜೊತೆಗೆ ಚಿತ್ರದ ಕುರಿತಾದ ತಮ್ಮ ನಿಲುವನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಸ್ಟಾರ್‌ವಾರ್‌ಗೆ ಅವಕಾಶ ಮಾಡಿಕೊಡಬೇಡಿ; ಅಭಿಮಾನಿಗಳಿಗೆ ಶಿವರಾಜ್‌ಕುಮಾರ್ ಮನವಿ

ರಾಕ್‌ಲೈನ್‌ ವೆಂಕಟೇಶ್‌ ‘ಮದಕರಿನಾಯಕ’ ಸಿನಿಮಾ ಘೋಷಿಸಿದಾಗ ಕೆಲವರು ಆಕ್ಷೇಪ ಎತ್ತಿದ್ದರು. ನಾಯಕ ಸಮುದಾಯದ ಮುಖಂಡರು ಈ ಬಗ್ಗೆ ಮಾತನಾಡಿ, “ಈ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಮ್ಮ ಸಮುದಾಯದ ನಟ ಸುದೀಪ್ ನಟಿಸಬೇಕು” ಎಂದಿದ್ದರು. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಸುದೀಪ್‌ ಪತ್ರ ಅಚ್ಚರಿಗೆ ಕಾರಣವಾಗಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಸುದೀಪ್ ಈಗ ಇದ್ದಕ್ಕಿದ್ದಂತೆ ಚಿತ್ರದ ಬಗ್ಗೆ ಪ್ರಸ್ತಾಪ ಮಾಡುತ್ತಿರುವುದೇಕೆ ಎನ್ನುವುದು ಕೆಲವರ ಪ್ರಶ್ನೆ. ರಾಜಕೀಯ ಲಾಭ ಪಡೆಯುವ ಉದ್ದೇಶಗಳೂ ಇಲ್ಲದಿಲ್ಲ. ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಸುದೀಪ್ ಮತ್ತು ದರ್ಶನ್‌ ಮಧ್ಯೆ ಈಗ ಒಳ್ಳೆಯ ಸಂಬಂಧ ಉಳಿದಿಲ್ಲ. ಈಗ ‘ಮದಕರಿನಾಯಕ’ ಸಿನಿಮಾ ವಿಚಾರವಾಗಿ ಇಬ್ಬರ ಮಧ್ಯೆಯ ಬಿರುಕು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಕುರಿತು ಮುಂದಿನ ಬೆಳವಣಿಗೆಗಳಿಗಾಗಿ ಚಿತ್ರರಂಗ ಕುತೂಹಲದಿಂದ ಎದುರುನೋಡುತ್ತಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More