ತಮ್ಮ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಬರೆದುಕೊಂಡ ನಟಿ ಸಪ್ನಾ ಪಬ್ಬಿ

ನಟಿ ತನುಶ್ರೀ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಯುವನಟಿ ಸಪ್ನಾ ಪಬ್ಬಿ ಪ್ರತಿಕ್ರಿಯಿಸಿದ್ದಾರೆ. ಹಿಂದೊಮ್ಮೆ ಚಿತ್ರೀಕರಣವೊಂದರ ವೇಳೆ ತಾವೂ ಲೈಂಗಿಕ ದೌರ್ಜನ್ಯ ಎದುರಿಸಿದ್ದಾಗಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಚಿತ್ರದ ನಿರ್ಮಾಪಕರು, ನಿರ್ದೇಶಕರ ಹೆಸರು ಬಹಿರಂಗಪಡಿಸಿಲ್ಲ

ನಟಿ ತನುಶ್ರೀ ದತ್ತಾ ಅವರ ಲೈಂಗಿಕ ಶೋಷಣೆ ಕುರಿತ ಹೇಳಿಕೆ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಬಾಲಿವುಡ್‌ನಲ್ಲಿ ಪ್ರಕರಣದ ಬಗ್ಗೆ ಪರ-ವಿರೋಧದ ಚರ್ಚೆ ನಡೆದಿದ್ದು, ಹಲವರು ನಟಿಯನ್ನು ಬೆಂಬಲಿಸಿ ಮಾತನಾಡುತ್ತಿದ್ದಾರೆ. ಇದೀಗ ಬಾಲಿವುಡ್ ಯುವನಟಿ ಸಪ್ನಾ ಪಬ್ಬಿ, ತನುಶ್ರೀ ದತ್ತಾರ ನಡೆಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ, ಸಿನಿಮಾವೊಂದರ ಚಿತ್ರೀಕರಣದ ವೇಳೆ ತಮ್ಮ ಮೇಲೂ ಲೈಂಗಿಕ ಶೋಷಣೆ ನಡೆದಿತ್ತು ಎಂದು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಮಗೆ ಕೆಟ್ಟ ಅನುಭವವಾದ ಸಂದರ್ಭ, ಸಿನಿಮಾ, ಸಹ ಕಲಾವಿದರು, ನಿರ್ದೇಶಕ, ನಿರ್ಮಾಪಕರ ಹೆಸರುಗಳನ್ನು ಸಪ್ನಾ ಬಹಿರಂಗಗೊಳಿಸಿಲ್ಲ. “ಸಿನಿಮಾ ಚಿತ್ರೀಕರಣದಲ್ಲಿ ತಮಗೆ ಅನ್‌ಕಂಫರ್ಟಬಲ್‌ ಫೀಲ್ ಆಗುವ ಬಿಕನಿ ಧರಿಸಿ ಹಾಡಿಗೆ ಹೆಜ್ಜೆ ಹಾಕಲು ಒತ್ತಾಯ ಮಾಡಲಾಗಿತ್ತು. ನಾನು ಇದರ ಬಗೆಗೆ ನಿರ್ಮಾಪಕರಲ್ಲಿ ಹೇಳಿಕೊಂಡಿದ್ದೆ. ಆಗ ಅವರು ನನ್ನೊಂದಿಗೆ ಕೆಲಸ ತಮಗೆ ಇಷ್ಟವಿಲ್ಲವೆಂದು ನನ್ನತ್ತ ಬ್ರಾ ಎಸೆದಿದ್ದರು. ಆ ಕ್ಷಣ ಸ್ಥಳದಲ್ಲಿದ್ದ ಸಹನಟಿಯೊಬ್ಬರು ನನಗೆ ಅವಮಾನವಾಗುವಂತೆ ಗಹಗಹಿಸಿ ನಕ್ಕಿದ್ದರು. ಇದರಿಂದ ನಾನು ತುಂಬಾ ನೋವುಂಡಿದ್ದೆ,’’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ವಿಡಿಯೋ | ಚಿತ್ರೀಕರಣದ ವೇಳೆ ನಟಿ ತನುಶ್ರೀ ಕಾರು ಜಖಂಗೊಳಿಸಿದ ದೃಶ್ಯಾವಳಿ

ಅಮೆರಿಕದಲ್ಲಿ ನೆಲೆಸಿದ್ದ ತನುಶ್ರೀ ಇತ್ತೀಚೆಗೆ ಬಾಲಿವುಡ್‌ಗೆ ಮರಳಿದ್ದರು. ಖಾಸಗಿ ವಾಹಿನಿ ಸಂದರ್ಶನದಲ್ಲಿ, “ಹತ್ತು ವರ್ಷದ ಹಿಂದೆ ‘ಓಕೆ ಹಾರ್ನ್ ಪ್ಲೀಸ್‌’ ಹಿಂದಿ ಚಿತ್ರೀಕರಣದ ವೇಳೆ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಚಿತ್ರದ ನಟ ನಾನಾ ಪಾಟೇಕರ್‌ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಆ ಘಟನೆಯ ಬಗ್ಗೆ ಅಳಲು ತೋಡಿಕೊಂಡಾಗ ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ. ನಟ ನಾನಾ ಪಾಟೇಕರ್, ನೃತ್ಯ ನಿರ್ದೇಶಕ ಆಚಾರ್ಯರಂತಹ ವ್ಯಕ್ತಿಗಳೊಂದಿಗೆ ಬಾಲಿವುಡ್‌ನ ದಿಗ್ಗಜ ನಟರು ಕೆಲಸ ಮಾಡುತ್ತಿದ್ದಾರೆ. ಅಮೆರಿಕದಂತಹ ದೇಶಗಳಲ್ಲಿ ನಡೆಯುವ #MeToo ಅಭಿಯಾನಗಳು ಇಲ್ಲಿ ಸಾಧ್ಯವಿಲ್ಲ,” ಎಂದಿದ್ದರು. ಈ ಆರೋಪದ ನಂತರ ಬಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More