ಲೈಂಗಿಕ ಶೋಷಣೆ ಬಗ್ಗೆ ದನಿ ಎತ್ತಿದ ಗಾಯಕಿ ಚಿನ್ಮಯಿ; ದಕ್ಷಿಣಕ್ಕೂ ವ್ಯಾಪಿಸಿದ #MeToo

ದಕ್ಷಿಣ ಭಾರತದ ಹಿನ್ನೆಲೆ ಗಾಯಕಿ ಚಿನ್ಮಯಿ ತಮ್ಮ ಮೇಲೆ ನಡೆದ ಲೈಂಗಿಕ ಶೋಷಣೆ ಕುರಿತಂತೆ ಸರಣಿ ಟ್ವೀಟ್ ಮಾಡಿದ್ದಾರೆ. ದಕ್ಷಿಣದ ಹಿರಿಯ ಸಂಗೀತ ಸಂಯೋಜಕರೊಬ್ಬರು ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದಿದ್ದಾರವರು. #MeToo ಅಭಿಯಾನ ದಕ್ಷಿಣ ಭಾರತಕ್ಕೂ ವ್ಯಾಪಿಸುತ್ತಿದೆ

ದಕ್ಷಿಣ ಭಾರತದ ಚಿತ್ರರಂಗದ ಹಿನ್ನೆಲೆ ಗಾಯಕಿ ಚಿನ್ಮಯಿ ತಮ್ಮ ಮೇಲೆ ನಡೆದಿದ್ದ ಲೈಂಗಿಕ ಶೋಷಣೆ ಕುರಿತಾಗಿ ಮಾತನಾಡಿದ್ದಾರೆ. ಎಂಟು-ಒಂಬತ್ತರ ಹರೆಯದಲ್ಲಿ ಪರಿಚಯದ ವ್ಯಕ್ತಿಯೊಬ್ಬರಿಂದ ಮೊದಲ ಬಾರಿಗೆ ಕೆಟ್ಟ ಅನುಭವವಾಗಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ. “ನನಗಾಗ 8-9 ವರ್ಷ. ಸಾಂಗ್ ರೆಕಾರ್ಡಿಂಗ್‌ಗೆ ಅಮ್ಮನೊಂದಿಗೆ ಸ್ಟುಡಿಯೋಗೆ ತೆರಳಿದ್ದೆ. ನಾನು ಮಲಗಿದ್ದಾಗ, ವ್ಯಕ್ತಿಯೊಬ್ಬ ನನ್ನ ಮೈಮೇಲೆ ಕೈಯಾಡಿಸಿದ್ದ. ಅವರು ಕೆಟ್ಟ ಅಂಕಲ್‌ ಎಂದು ಅಮ್ಮನಿಗೆ ಹೇಳಿದ್ದೆ,” ಎಂದು ಟ್ವೀಟಿಸಿದ್ದಾರೆ ಚಿನ್ಮಯಿ.

ಮುಂದೆ 10, 11ರ ಹರೆಯದಲ್ಲೂ ಇಂತಹ ಅನುಭವವಾಗಿತ್ತು ಎನ್ನುವ ಅವರು, ಮಕ್ಕಳ ಸುರಕ್ಷತೆ ಬಗ್ಗೆ ಅಂಜಿಕೆಯಿಂದ ಮಾತನಾಡುತ್ತಾರೆ. ಮತ್ತೊಮ್ಮೆ ‘ಗೌರವಯುತ ವ್ಯಕ್ತಿ’ಯೊಬ್ಬರಿಂದ ಎದುರಿಸಿದ ಕಿರುಕುಳ ಪ್ರಸ್ತಾಪಿಸಿದ್ದಾರೆ. “ಮಹಿಳೆಯ ಆ ಬಗ್ಗೆ ಮಾತನಾಡುವುದಕ್ಕೆ ಸಂಕೋಚ ಪಡುತ್ತಾಳೆ. ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಒಂದೊಮ್ಮೆ ಮಾತನಾಡಿದರೆ, ವೃತ್ತಿಪರತೆ ಇಲ್ಲವೆಂದು ಹಂಗಿಸುವುದೂ ನಡೆಯುತ್ತದೆ. ಕೆಲಸ ಕಳೆದುಕೊಳ್ಳಬೇಕಾದ ಪರಿಸ್ಥತಿಯೂ ಬರುತ್ತದೆ. ಈ ಕಾರಣಕ್ಕಾಗಿಯೂ ಮಹಿಳೆಯರು ಕೆಟ್ಟ ಪ್ರಕರಣಗಳನ್ನು ಬಹಿರಂಗಪಡಿಸುವ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ,” ಎನ್ನುತ್ತಾರೆ.

ಇದನ್ನೂ ಓದಿ : ವಿಡಿಯೋ | ಹತ್ತು ವರ್ಷದ ನಂತರವೂ ಸತ್ಯ ಸತ್ಯವಾಗಿಯೇ ಇರುತ್ತದೆ ಎಂದ ನಾನಾ

ಜನಪ್ರಿಯ ಯೂಟ್ಯೂಬ್‌ ವಿಶ್ಲೇಷಕ ಪ್ರಶಾಂತ್‌ ಅವರು ತಮ್ಮ ಕುರಿತಾಗಿ ನಡೆಸಿದ ಹೇಟ್‌ ಕ್ಯಾಂಪೇನ್‌ ಕುರಿತೂ ಅವರು ಹೇಳಿಕೊಂಡಿದ್ದಾರೆ. “ಯಶಸ್ವಿ ಯೂಟ್ಯೂಬ್‌ ವಿಶ್ಲೇಷಕರಲ್ಲೊಬ್ಬರಾದ ಪ್ರಶಾಂತ್‌ ನನ್ನನ್ನು ಬೆಂಬಲಿಸುವುದಾಗಿ ಹೇಳಿದ್ದರು. ಸ್ವೀಟ್‌ಹಾರ್ಟ್‌, ಡಾರ್ಲಿಂಗ್‌ ಎಂದು ಕರೆದಿದ್ದ ಅವರಿಗೆ ನಾನು ಎಚ್ಚರಿಕೆ ನೀಡಿದ್ದೆ. ಅಂದಿನಿಂದ ನನ್ನ ವಿರುದ್ಧ ಹೇಟ್ ಕ್ಯಾಂಪೇನ್ ಶುರುಮಾಡಿದ್ದರು,” ಎನ್ನುತ್ತಾರೆ ಚಿನ್ಮಯಿ. ನಟರೊಬ್ಬರ ಪಿಆರ್‌ಒ ಪತ್ನಿ, ಚಿನ್ಮಯಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬೆದರಿಕೆಯನ್ನೊಡ್ಡಿದ್ದರಂತೆ. “ಹಿರಿಯ, ಪ್ರತಿಷ್ಠಿತ ಸಂಗೀತ ಸಂಯೋಜಕರೊಬ್ಬರು ತಮ್ಮನ್ನು ತಬ್ಬಿಕೊಳ್ಳಲು ಯತ್ನಿಸಿದ್ದರು,” ಎನ್ನುವ ಚಿನ್ಮಯಿ, ಅವರ ಹೆಸರು ಬಹಿರಂಗಪಡಿಸಿಲ್ಲ.

ಚಿನ್ಮಯಿ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಯೂಟ್ಯೂಬ್‌ ವಿಶ್ಲೇಷಕ ಪ್ರಶಾಂತ್‌, “ನಾನು ತಪ್ಪಾಗಿ ನಡೆದುಕೊಂಡಿದ್ದರೆ ನೀವು ಪೊಲೀಸರಿಗೆ ದೂರು ನೀಡಿ. ನನ್ನನ್ನು ಅವರು ಬಂಧಿಸಲಿ. ನಿಮ್ಮ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ,” ಎಂದು ಟ್ವೀಟಿಸಿದ್ದಾರೆ. ಚಿನ್ಮಯಿ ಅವರ ಸರಣಿ ಟ್ವೀಟ್‌ಗಳಿಗೆ ನೂರಾರು ಜನರು ಪ್ರತಿಕ್ರಿಯಿಸಿದ್ದು, ತಮಗಾದ ಕಹಿ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. “ನನ್ನ ಬಗ್ಗೆ ಕಾಳಜಿಯಿಂದ ಪ್ರತಿಕ್ರಿಯಿಸಿರುವ ಎಲ್ಲರಿಗೂ ಧನ್ಯವಾದ. ನಿಮ್ಮ ಅನುಭವಗಳನ್ನೂ ಇಲ್ಲಿ ಹಂಚಿಕೊಂಡಿದ್ದೀರಿ. ಇವು ಸಮಾಜದ ಕಣ್ತೆರೆಸಲಿ. ನಾವೆಲ್ಲರೂ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡೋಣ,” ಎಂದಿದ್ದಾರೆ ಚಿನ್ಮಯಿ.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More