ಅಲೋಕ್‌ ವಿರುದ್ಧ ವಿಂತಾ ಲೈಂಗಿಕ ಶೋಷಣೆ ಆರೋಪ; ಬೆಂಬಲಕ್ಕೆ ನಟಿ ನವ್‌ನೀತ್

ಹಿಂದಿ ನಟ ಅಲೋಕ್‌ ನಾಥ್‌ ವಿರುದ್ಧ ಕಿರುತೆರೆ ಚಿತ್ರಕತೆಗಾರ್ತಿ ವಿಂತಾ ನಂದಾ ಲೈಂಗಿಕ ಶೋಷಣೆಯ ಆರೋಪ ಮಾಡಿದ್ದಾರೆ. ಅಲೋಕ್‌ ಇದನ್ನು ಅಲ್ಲಗಳೆದಿದ್ದರೆ, ಟೀವಿ ಅಸೋಸಿಯೇಷನ್ ನಟನಿಗೆ ಶೋಕಾಸ್‌ ನೋಟಿಸ್ ಕಳುಹಿಸಿದೆ. ನಟಿ ನವನೀತ್‌ ಅವರು ವಿಂತಾ ಬೆಂಬಲಕ್ಕೆ ನಿಂತಿದ್ದಾರೆ

ಹಿಂದಿ ಕಿರುತೆರೆ ಚಿತ್ರಕತೆಗಾರ್ತಿ, ನಿರ್ಮಾಪಕಿ ವಿಂತಾ ನಂದಾ ಅವರು ನಟ ಅಲೋಕ್‌ ನಾಥ್‌ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. 20 ವರ್ಷಗಳ ಹಿಂದೆ ತಮ್ಮ ಮೇಲೆ ನಟ ಅತ್ಯಾಚಾರ ಎಸಗಿದ್ದರು ಎನ್ನುವುದು ಅವರ ಆರೋಪ. ಈ ಹಿನ್ನೆಲೆಯಲ್ಲಿ, ಸಿನಿಮಾ ಮತ್ತು ಟೀವಿ ಆರ್ಟಿಸ್ಟ್ಸ್‌ ಅಸೋಸಿಯೇಷನ್‌ (CINTAA) ಅಲೋಕ್‌ ನಾಥ್‌ ಅವರಿಗೆ ಶೋಕಾಸ್ ನೋಟಿಸ್‌ ಕಳುಹಿಸಿದೆ.

“ಈ ಸಂದರ್ಭಕ್ಕಾಗಿ ನಾನು ಹತ್ತೊಂಬತ್ತು ವರ್ಷ ಕಾದಿದ್ದೇನೆ,” ಎಂದು ವಿಂತಾ ನಂದಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. “ಈ ವ್ಯಕ್ತಿ ಟೀವಿ, ಸಿನಿಮಾಗಳಲ್ಲಿ ‘ಸಂಸ್ಕಾರಿ’ ವ್ಯಕ್ತಿತ್ವದ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಾರೆ,” ಎಂದಿದ್ದಾರೆ. ಅಲೋಕ್‌ನಾಥ್‌ ಸಿನಿಮಾ, ಕಿರುತೆರೆ ಧಾರಾವಾಹಿಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಆದರ್ಶ ತಂದೆ ಪಾತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದಾರೆ. #MeToo ಅಭಿಯಾನದ ಹಿನ್ನೆಲೆಯಲ್ಲಿ ನಿರ್ಮಾಪಕಿ ವಿಂತಾ ನಂದಾ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ವಿಡಿಯೋ | ಚಿತ್ರೀಕರಣದ ವೇಳೆ ನಟಿ ತನುಶ್ರೀ ಕಾರು ಜಖಂಗೊಳಿಸಿದ ದೃಶ್ಯಾವಳಿ

“ಅವರು ಮಧ್ಯಪಾನಿ, ನಾಚಿಕೆ ಇಲ್ಲದ ವ್ಯಕ್ತಿ. ಆಗ ಅವರು ಕಿರುತೆರೆಯ ಸ್ಟಾರ್ ನಟ. ಅವರ ಕೆಟ್ಟ ನಡವಳಿಕೆಗೆ ಹಲವರು ಬಲಿಯಾಗಿದ್ದಾರೆ. ಅದೊಂದು ದಿನ ಅಲೋಕ್‌ ಮನೆಯಲ್ಲಿ ಔತಣಕೂಟವಿತ್ತು. ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ನಾನು ಮನೆಗೆ ಹೊರಟಿದ್ದೆ. ದಾರಿಮಧ್ಯೆ ಅಲೋಕ್ ತಮ್ಮ ಕಾರಿನಲ್ಲಿ ಬಂದು, ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದರು. ಕಾರು ಹತ್ತಿದ ನನಗೆ ಮಧ್ಯ ಬೆರೆಸಿದ ಪಾನೀಯ ಕುಡಿಸಿದರು. ಮರುದಿನ ಮಧ್ಯಾಹ್ನದ ಹೊತ್ತಿನಲ್ಲಿ ಎಚ್ಚರಗೊಂಡಾಗ ನಾನು ನಿತ್ರಾಣವಾಗಿದ್ದೆ. ಅಲೋಕ್‌ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು,” ಎಂದು ಬರೆದುಕೊಂಡಿದ್ದಾರೆ ವಿಂತಾ.

ಘಟನೆಯನ್ನು ಮರೆತುಬಿಡುವಂತೆ ವಿಂತಾ ಸ್ನೇಹಿತೆಯರು ಹೇಳಿದ್ದರಂತೆ. ಈ ಬಗ್ಗೆ ಹೇಳುವ ಅವರು, “ಮುಂದೆ ಮತ್ತೊಂದು ಧಾರಾವಾಹಿಗೆ ನಾನು ಚಿತ್ರಕತೆ ರಚಿಸುವ ಸಂದರ್ಭದಲ್ಲಿ ಅಲೋಕ್‌ ಆ ಶೋ ನಟನಾಗಿದ್ದರು. ಅಲ್ಲಿಂದ ನಿರ್ಗಮಿಸುವ ಯೋಚನೆ ಮಾಡಿದೆ. ಆದರೆ, ಹಣದ ಅನಿವಾರ್ಯತೆ ಇದ್ದುದರಿಂದ ಶೋನಲ್ಲಿ ಮುಂದುವರಿದೆ,” ಎಂದಿದ್ದಾರೆ. ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಲೋಕ್, “ಅವರು ಹೇಳಿಕೊಂಡಿರುವುದರಲ್ಲಿ ಸತ್ಯವಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಆಕೆಯ ಮೇಲೆ ಬೇರೆ ಯಾರೋ ಅತ್ಯಾಚಾರ ಎಸಗಿರಬಹುದು,” ಎಂದಿದ್ದಾರೆ. ವಿಂತಾ ಆರೋಪದ ಹಿನ್ನೆಲೆಯಲ್ಲಿ ಹಿಂದಿ ಕಿರುತೆರೆ ನಟಿ ನವನೀತ್ ನಿಶಾನ್‌ ಕೂಡ ದನಿ ಎತ್ತಿದ್ದಾರೆ. ನಟ ಅಲೋಕ್‌ ಅವರ ವಿರುದ್ಧ ನವನೀತ್ ಮಾತನಾಡಿದ್ದು, “ಆ ವ್ಯಕ್ತಿಯಿಂದ ನಾನು ಕೂಡ ಸಂಕಷ್ಟಕ್ಕೀಡಾಗಿದ್ದೇನೆ. ಶೋಷಣೆಯ ವಿರುದ್ಧ ದನಿ ಎತ್ತುವ ಮಹಿಳೆಯರಿಗೆ ನನ್ನ ಸಂಪೂರ್ಣ ಬೆಂಬಲಿವಿದೆ,” ಎಂದಿದ್ದಾರೆ ನವನೀತ್‌.

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More