ಜನುಮದಿನ | ಬಾಲಿವುಡ್‌ನಲ್ಲಿ ಮಿಂಚಿದ ದಕ್ಷಿಣದ ಪ್ರತಿಭೆ ರೇಖಾ ಅವರಿಗೀಗ 64

ಬಹುಭಾಷಾ ತಾರೆ ರೇಖಾ ಚಿರಯೌವ್ವನೆ ಎಂದೇ ಕರೆಸಿಕೊಳ್ಳುತ್ತಾರೆ. ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಅವರು ಹಿಂದಿ ಚಿತ್ರರಂಗದ ಪ್ರಮುಖ ನಾಯಕನಟಿಯಾಗಿ ಬೆಳೆದರು. ಇಂದು (ಅ.‌ 10) ಅವರ 64ನೇ ಜನ್ಮದಿನ. ರೇಖಾ ಕುರಿತ ಬರಹ, ಸಿನಿಮಾ ವಿಡಿಯೋ ಹಾಡುಗಳು ಇಲ್ಲಿವೆ.

ಹಿಂದಿ ಚಿತ್ರರಂಗದಲ್ಲಿ ಮಿಂಚಿದ ದಕ್ಷಿಣದ ನಟಿಯರಲ್ಲಿ ರೇಖಾ ಪ್ರಮುಖರು. ಅವರು ನಟಿಯಾಗಿ ಪರಿಚಯವಾಗಿದ್ದು ‘ಗೋವಾದಲ್ಲಿ ಸಿಐಡಿ 999’ (1969) ಕನ್ನಡ ಚಿತ್ರದಲ್ಲಿ. ರಾಜಕುಮಾರ್ ನಾಯಕರಾಗಿ ನಟಿಸಿದ್ದ ಈ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ತಮಿಳುನಾಡಿನ ಜನಪ್ರಿಯ ನಟ ಜೆಮಿನಿ ಗಣೇಶನ್ ಮತ್ತು ಪುಷ್ಪವಲ್ಲಿ ಪುತ್ರಿ ರೇಖಾ. ಹುಟ್ಟಿದ್ದು ಅಕ್ಟೋಬರ್ 10, 1954ರಲ್ಲಿ. ರೇಖಾರ ಬಾಲ್ಯದ ಹೆಸರು ಭಾನುರೇಖಾ. ‘ರಂಗುಲ ರತ್ನಂ’ (1966) ತೆಲುಗು ಚಿತ್ರದೊಂದಿಗೆ ರೇಖಾ ಬಾಲನಟಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು.

ಘರ್‌ (1978)

ರೇಖಾ ಹಿಂದಿ ಚಿತ್ರರಂಗಕ್ಕೆ ಪರಿಚಯವಾಗಿದ್ದು ‘ಅಂಜಾನಾ ಸಫರ್’ (1969) ಚಿತ್ರದ ಮೂಲಕ. ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಚಿತ್ರ ತೆರೆಕಾಣಲಿಲ್ಲ. ಮುಂದೆ 1970ರಲ್ಲಿ ತೆರೆಕಂಡ ‘ಸಾವನ್ ಬಾದನ್’ ಅವರ ಅಧಿಕೃತ ಚೊಚ್ಚಲ ಹಿಂದಿ ಚಿತ್ರವಾಯ್ತು. ‘ಸಾವನ್ ಬಾದೋ’ ಯಶಸ್ವಿಯಾಗುತ್ತಿದ್ದಂತೆ ರೇಖಾ ಒಮ್ಮೆಗೇ ಜನಪ್ರಿಯತೆ ಪಡೆದರು. ನಂತರದ ದಿನಗಳಲ್ಲಿ ರೇಖಾ ನಟಿಸಿದ್ದ ‘ಕಹಾನಿ ಕಿಸ್ಮತ್ ಕಿ’, ‘ರಾಂಪುರ್ ಕ ಲಕ್ಷ್ಮಣ್’ ಮತ್ತು ‘ಪ್ರಾಣ್‌ ಜಾಯೇ ಪರ್ ವಚನ್ ನಾ ಜಾಯೇ’ ಹಿಂದಿ ಚಿತ್ರಗಳು ತೆರೆಕಂಡವು.

ಕಾಲಿ ಘಟಾ (1979)

ರೇಖಾಗೆ ಹಿಂದಿ ಚಿತ್ರರಂಗದಲ್ಲಿ ಮಹತ್ವದ ಸ್ಥಾನ ಕಲ್ಪಿಸಿದ್ದು ‘ದೋ ಅಂಜಾನೆ’ ಸಿನಿಮಾ. ಅಮಿತಾಭ್ ಬಚ್ಚನ್ ನಟಿಸಿದ್ದ ಚಿತ್ರದಲ್ಲಿ ರೇಖಾಗೆ ಅಭಿನಯಕ್ಕೆ ಹೆಚ್ಚಿನ ಸ್ಕೋಪ್ ಇತ್ತು. 1978ರಲ್ಲಿ ತೆರೆಕಂಡ ‘ಘರ್’ ಚಿತ್ರದ ಉತ್ತಮ ಅಭಿನಯಕ್ಕಾಗಿ ರೇಖಾಗೆ ಫಿಲ್ಮ್‌ಫೇರ್‌ ಪುರಸ್ಕಾರ ಸಿಕ್ಕಿತು. ಮುಂದೆ ಅಮಿತಾಭ್ ಬಚ್ಚನ್ - ರೇಖಾ ಅಭಿನಯದ ಚಿತ್ರಗಳು ಸಾಲಾಗಿ ಯಶಸ್ವಿಯಾದವು. ಇದು ಸ್ಟಾರ್ ಜೋಡಿಯೆಂದು ಗುರುತಿಸಲ್ಪಿಟ್ಟಿತು. ಇದೇ ವೇಳೆ ಇವರಿಬ್ಬರೂ ಸತಿ - ಪತಿಯಾಗುತ್ತಾರೆ ಎನ್ನುವ ವದಂತಿಯೂ ಹರಡಿತ್ತು. ‘ಸಿಲ್ಸಿಲಾ’ ಇವರು ಒಟ್ಟಿಗೇ ಕಾಣಿಸಿಕೊಂಡ ಕೊನೆಯ ಚಿತ್ರವಾಯ್ತು.

ಘಜಬ್‌ (1982)

1981ರಲ್ಲಿ ತೆರೆಕಂಡ ‘ಉಮ್ರಾವ್‌ ಜಾನ್’, ರೇಖಾ ಸಿನಿಮಾ ಜೀವನದ ಅತ್ಯಂತ ಮಹತ್ವದ ಸಿನಿಮಾ. ಈ ಚಿತ್ರದ ಉತ್ತಮ ನಟನೆಗೆ ಅವರು ರಾಷ್ಟ್ರ ಪ್ರಶಸ್ತಿಗೆ ಭಾಜನರಾದರು. ಆನಂತರದ ದಿನಗಳಲ್ಲಿ ರೇಖಾ ಹೆಚ್ಚು ಕಥಾ ಪ್ರಧಾನ, ರಿಯಲಿಸ್ಟಿಕ್ ಸಿನಿಮಾಗಳೆಡೆ ಹೊರಳಿದರು. ಈ ಅವಧಿಯಲ್ಲಿ ಅವರು ನಟಿಸಿದ ‘ಕಲಿಯುಗ್’, ‘ಬಸೇರಾ’, ‘ಏಕ್ ಹಿ ಭೂಲ್’, ‘ಜೀವನ್ ಧಾರಾ’, ‘ಉತ್ಸವ್’, ‘ಇಜ್ಜತ್’ ಚಿತ್ರಗಳನ್ನು ವಿಮರ್ಶಕರು ವಿಶೇಷವಾಗಿ ಗುರುತಿಸುತ್ತಾರೆ. ‘ಖೂಬ್‌ಸೂರತ್’ (1980) ಮತ್ತು ‘ಖೂನ್ ಭರೀ ಮಾಂಗ್’ (1988) ಚಿತ್ರಗಳ ಉತ್ತಮ ನಟನೆಗೆ ರೇಖಾ ಮತ್ತೆ ಫಿಲ್ಮ್‌ಫೇರ್‌ ಪುರಸ್ಕಾರ ಪಡೆದರು. 2010ರಲ್ಲಿ ರೇಖಾಗೆ ಭಾರತ ಸರ್ಕಾರದ ಪ್ರತಿಷ್ಠಿತ ‘ಪದ್ಮಶ್ರೀ’ ಪುರಸ್ಕಾರ ಸಂದಿತು.

ಸಿಲ್ಸಿಲಾ (1981)

1990ರ ನಂತರ ರೇಖಾ ಅವರ ಜನಪ್ರಿಯತೆ ಕಡಿಮೆಯಾಗತೊಡಗಿತು. ಅವರು ಪೋಷಕ ಪಾತ್ರಗಳತ್ತ ಹೊರಳಿದರು. 2003ರಲ್ಲಿ ತೆರೆಕಂಡ ಹೃತಿಕ್ ರೋಷನ್‌ರ ‘ಕೋಯಿ ಮಿಲ್ ಗಯಾ’ ಚಿತ್ರದಲ್ಲಿ ರೇಖಾ, ಹೃತಿಕ್ ತಾಯಿಯಾಗಿ ನಟಿಸಿದ್ದರು. ತಿಂಗಳ ಹಿಂದೆ ಅವರು ಅಮ್ಮನ ಪಾತ್ರದಲ್ಲಿ ನಟಿಸಿದ್ದ ‘ಪ್ಯಾರ್ ಪ್ರೇಮ ಕಾದಲ್‌’ ತಮಿಳು ಸಿನಿಮಾ ತೆರೆಕಂಡಿತ್ತು. ಈ ಹೊತ್ತಿಗೂ ಸಿನಿಮಾ ನಟನೆ, ರಿಯಾಲಿಟಿ ಶೋಗಳಲ್ಲಿ ಅವರು ಉತ್ಸಾಹದಿಂದ ಕಾಣಿಸಿಕೊಳ್ಳುತ್ತಿದ್ದಾರೆ.

ಸಿಲ್ಸಿಲಾ (1981)

ವಿಡಿಯೋ | ವಿನೋದ್‌ ಕಾಪ್ರಿ ನಿರ್ದೇಶನದ ‘ಪಿಹೂ’ ಚಿತ್ರದ ಬೆಚ್ಚಿಬೀಳಿಸುವ ಟ್ರೇಲರ್
#MeTOO ಆರೋಪ; ಶ್ರುತಿ ವಿರುದ್ಧ ಸರ್ಜಾ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ
#MeToo | ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಶ್ರುತಿ ಹರಿಹರನ್
Editor’s Pick More